ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ;ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯಲಿ: ಆರ್.ಅಶೋಕ್.

0
124

ಮಂಡ್ಯ:- ಕೋವಿಡ್-19 ಸಾಂಕ್ರಮಿಕ ರೋಗ ತಡೆಗಟ್ಟುವಿಕೆ ಹಾಗೂ ನಿಯಂತ್ರಣದ ಜೊತೆ ಜೊತೆಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಕಂದಾಯ ಇಲಾಖೆ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ -19 ನಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ರಾಜ್ಯ ಸರ್ಕಾರದಿಂದ 1 ಲಕ್ಷ ಪರಿಹಾರವನ್ನು ನೀಡುತ್ತಿದ್ದು, ಕೇಂದ್ರ ಸರ್ಕಾರದಿಂದ 50 ಸಾವಿರ ಪರಿಹಾರಧನವನ್ನು ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 648 ಜನ ಕೋವಿಡ್ ನಿಂದ ಮೃತಪಟ್ಟಿದ್ದು, 411 ಜನ ಅರ್ಜಿ ಕೊಟ್ಟಿದ್ದಾರೆ ಈ ಮೂಲಕ ಪರಿಶೀಲಿಸಿ ಪರಿಹಾರಧನವನ್ನು ನೀಡಲು ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆಧಾರ್ ಸೀಡಿಂಗ್ ಪ್ರಕ್ರಿಯೆಗಳನ್ನು ತ್ವರಿತವಾಗಿ ಕೈಗೊಂಡು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಎಂದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಅಂಚೆ ಹಾಗೂ ಬ್ಯಾಂಕ್ ಉಳಿತಾಯ ಖಾತೆ ಮೂಲಕ ಪಿಂಚಣಿ ನೀಡಲು ಕ್ರಮವಹಿಸಲಾಗುತ್ತಿದ್ದು ಇನ್ನು ಮುಂದೆ ಪೋಸ್ಟ್ ಆಫೀಸ್ ನಲ್ಲಿ ಪಿಂಚಣಿ ನೀಡಲ್ಲ, ಇನ್ನು ಬ್ಯಾಂಕ್ ಖಾತೆಗೆ ಹಣ ಜಮಾವಣೆ ಆಗಲಿದೆ ಎಂದರು‌.

60 ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯವನ್ನು ಒದಗಿಸಿ, ಯಾರನ್ನು ಅಲೆಸಬೇಡಿ ಈ ಸಂಬಂಧ ಪಿಂಚಣಿ ಸೌಲಭ್ಯ ಪಡೆಯಲು ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು ಹಾಗೂ ಬೋಗಸ್ ಪಿಂಚಣಿದಾರರನ್ನು ತೆರವುಗೊಳಿಸಲು
ಕ್ರಮವಹಿಸಿ ಎಂದರು.

ತಾಲ್ಲೂಕುಗಳಲ್ಲಿ ಕಂದಾಯ ಅದಾಲತ್ ನಡೆಸಿ ಹಾಗೂ ಶಾಲೆ, ಸ್ಮಶಾನ, ಘನತ್ಯಾಜ್ಯ ಉದ್ದೇಶಕ್ಕಾಗಿ, ಗ್ರಾಮೀಣ ವಸತಿ ಯೋಜನೆಯ ಆಶ್ರಯ ನಿವೇಶನ ಉದ್ದೇಶಕ್ಕಾಗಿ ಜಮೀನುಗಳನ್ನು ಕಾಯ್ದಿರಿಸಿ ಎಂದರು.

ಸರ್ಕಾರಿ ಭೂಮಿ ಮತ್ತು ಕೆರೆಗಳ ಒತ್ತುವರಿ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಾಡಿ ಎಂದು ನಿರ್ದೇಶನ ನೀಡಿದರು.

ಕಂದಾಯ ಗ್ರಾಮ ಘೋಷಣೆ ಸಂಬಂಧ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು ಈ ಸಂಬಂಧ ಕಂದಾಯ ಅಧಿಕಾರಿಗಳು ಕ್ರಮವಹಿಸಿ ಎಂದರು.

50 ಮನೆಗಳಿಕ್ಕಿಂತ ಹೆಚ್ಚು ಮನೆಗಳಿರುವ ಜನಪ್ರದೇಶಗಳನ್ನು ಹೊಸ ಗ್ರಾಮಗಳೆಂದು ಗುರುತಿಸಿ,ಹೊಸ ಗ್ರಾಮಗಳೆಂದು ಘೋಷಣೆ ಮಾಡಲಾಗುವುದು ಎಂದರು‌.

ಪೋಡಿ ಮುಕ್ತ ಜಿಲ್ಲೆಯನ್ನಾಗಿಸಲು ಸರ್ಕಾರಿ ಭೂಮಾಪಕರಿಂದ ಪೋಡಿ ಪ್ರಕರಣಗಳ ವಿಲೇವಾರಿ ಮಾಡಲು ಕ್ರಮವಹಿಸಿ ಎಂದರು.

ರಾಜ್ಯದಲ್ಲಿ ಸಕಾಲದಲ್ಲಿ ಮಂಡ್ಯ ಪ್ರಥಮ ಸ್ಥಾನದಲ್ಲಿ ಮತ್ತು ಭೂಮಿ ಶ್ರೇಣಿಯಲ್ಲಿ ಮೂರನೇ ಸ್ಥಾನದಲ್ಲಿದೆ , ಈ ಸ್ಥಾನಗಳನ್ನು ಉಳಿಸಿಕೊಂಡು ಹೋಗುವುದು ನಮ್ಮ ಎಲ್ಲಾ ಇಲಾಖಾಧಿಕಾರಿಗಳ ಕರ್ತವ್ಯವಾಗಿದೆ ಆದ್ದರಿಂದ ಅಧಿಕಾರಿಗಳು ಜಿಲ್ಲೆಯ ಸಮರ್ಪಕ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದರು.

ಕೋವಿಡ್ ಸದ್ಯದ ಪರಿಸ್ಥಿತಿಯಲ್ಲಿ ನಿಯಂತ್ರಣದಲ್ಲಿದ್ದು ಗ್ರಾಮ ವಾಸ್ತವ್ಯವನ್ನು ಪುನರ್ ಆರಂಭಿಸಿ , ಜನರಿಗೆ ಎಲ್ಲಾ ರೀತಿಯ ಅನುಕೂಲವಾಗುವಂತೆ ಕ್ರಮವಹಿಸಿ ಎಂದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ ನಾರಾಯಣಗೌಡ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜಾ , ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ, ಉಪವಿಭಾಗಾಧಿಕಾರಿಗಳಾದ ಶಿವಾನಂದಮೂರ್ತಿ , ಐಶ್ವರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here