ಬಳ್ಳಾರಿಯಲ್ಲಿ ವಿಶ್ವ ಏಡ್ಸ್ ದಿನ ಆಚರಣೆ,ಗಮನಸೆಳೆದ ಜಾಗೃತಿ ಜಾಥಾ, ಏಡ್ಸ್ ಜಾಗೃತಿ ಸಂದೇಶ ಸಾರಿದ ಜಾಥಾ

0
85

ಬಳ್ಳಾರಿ,ಡಿ.1: ಬಳ್ಳಾರಿಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಬುಧವಾರ ನಡೆದ ಜಾಗೃತಿ ಜಾಥಾ ಗಮನಸೆಳೆಯಿತು ಮತ್ತು ಏಡ್ಸ್ ಜಾಗೃತಿಯ ಸಂದೇಶವನ್ನು ಸಾರುವಲ್ಲಿಯೂ ಯಶಸ್ವಿಯಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಆರಂಭವಾದ ಮೆರವಣಿಗೆಗೆ ಡಿಎಚ್‍ಒ ಡಾ.ಜನಾರ್ಧನ್ ಅವರು ಚಾಲನೆ ನೀಡಿದರು. ಮೆರವಣಿಗೆಯು ಸಂಗಮ್ ಸರ್ಕಲ್,ಕೆ.ಸಿ.ರೋಡ್,ಮೀನಾಕ್ಷಿ ಸರ್ಕಲ್ ಮುಖಾಂತರ ಬಿಎಸ್‍ಎನ್‍ಎಲ್ ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಮುಖಾಂತರ ರಾಯಲ್ ಸರ್ಕಲ್ ಮಾರ್ಗವಾಗಿ ಜಿಲ್ಲಾಸ್ಪತ್ರೆಗೆ ಮರಳಿತು. ರಾಯಲ್ ಸರ್ಕಲ್‍ನಲ್ಲಿ ಮಾನವ ಸರಪಳಿ ಮಾಡಿ ಎಚ್‍ಐವಿ ಜಾಗೃತಿ ಕುರಿತು ಘೋಷಣೆಗಳನ್ನು ಕೂಗಲಾಯಿತು.
ಮೆರವಣಿಗೆಯುದ್ದಕ್ಕೂ ಎಚ್‍ಐವಿ ಜಾಗೃತಿಗೆ ಸಂಬಂಧಿಸಿದ ಘೋಷಣಾ ಫಲಕಗಳು,ಭಿತ್ತಿಪತ್ರಗಳ ಪ್ರದರ್ಶನ ಗಮನಸೆಳೆದವು.
ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಜಿಲ್ಲೆಯಲ್ಲಿ ಎಚ್‍ಐವಿ ಪೀಡಿತರಿಗೊಸ್ಕರ ಶ್ರಮಿಸುತ್ತಿರುವ ವಿಮುಕ್ತಿ, ಸೌಖ್ಯಬೆಳಕು, ನಿತ್ಯಜೀವನ ಸ್ವಯಂಸೇವಾ ಸಂಸ್ಥೆಗಳು, ಫ್ಯಾಮಿಲಿ ಪ್ಲಾನಿಂಗ್ ಅಸೊಸಿಯೇಶನ್ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನಸೆಳೆದವು.
ಡಿಎಚ್‍ಒ ಡಾ.ಎಚ್.ಎಲ್.ಜನಾರ್ಧನ್ ಅವರು ಮಾತನಾಡಿ, ಅಸಮಾನತೆಗಳನ್ನು ಕೊನೆಗೊಳಿಸಿ ಏಡ್ಸ್ ಅನ್ನು ಕೊನೆಗೊಳಿಸಿ ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ ಎಂಬದು ಈ ವರ್ಷದ ಘೋಷವಾಕ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು 1988 ರಿಂದ ಡಿಸೆಂಬರ್ 1 ಅನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಯೋಜಿಸುತ್ತಾ ಬಂದಿದೆ. ಹೆಚ್‍ಐವಿ/ಏಡ್ಸ್ ಸೊಂಕನ್ನು ಸೊನ್ನೆಗೆ ತರಲು ಸರಕಾರ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಸೋಂಕಿನ ತಡೆಗೆ ಸಾಕಷ್ಟು ಕೆಲಸಗಳಾಗುತ್ತಿವೆ ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ 2017ರ ಅಕ್ಟೋಬರ್‍ನಿಂದ 2021 ರವರೆಗೆ ಒಟ್ಟಾರೆ 459034 ಜನರು ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಆಪ್ತಸಮಾಲೋಚನೆ ಪಡೆದು ರಕ್ತ ಪರೀಕ್ಷೆಗೆ ಒಳಪಟ್ಟಿದ್ದು,ಅವರಲ್ಲಿ 1782 ಜನರಿಗೆ ಹೆಚ್.ಐ.ವಿ ಸೊಂಕು ಇರುವುದು ದೃಡಪಟ್ಟಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಆಗಿರುವ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಡಾ.ಇಂದ್ರಾಣಿ ಅನಿಲಕುಮಾರ್ ಅವರು ಸೊಂಕು ತಗುಲಿದವರಿಗೆ ನೈತಿಕ ಸ್ಥೈರ್ಯ ತುಂಬುವ ಮತ್ತು ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಥಾ ಹಮ್ಮಿಕೊಳ್ಳಲಾಗಿದೆ. ಬಳ್ಳಾರಿ ಜಿಲ್ಲೆಯು ಎಚ್‍ಐವಿ ಸೊಂಕಿತರ ಸಾಮಾನ್ಯ ಪ್ರಮಾಣದಲ್ಲಿ ಬಳ್ಳಾರಿ ಜಿಲ್ಲೆಯು ಇಡೀ ರಾಜ್ಯದಲ್ಲಿ 07ನೇ ಸ್ಥಾನದಲ್ಲಿದೆ. ಗರ್ಭೀಣಿ ಸ್ತ್ರೀಯರಲ್ಲಿ ಸೊಂಕು ಕಂಡುಬಂದಿರುವುದರಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದರು.
ಬಳ್ಳಾರಿ ಜಿಲ್ಲೆ ಹೆಚ್.ಐ.ವಿ/ಏಡ್ಸ್ ನಿಯಂತ್ರಣಾ ಮತ್ತು ನಿರ್ವಾಹಕ ಘಟಕ ರಾಜ್ಯದಲ್ಲಿಯೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 2012ರಿಂದ ಇಲ್ಲಿಯವರೆಗೆ ಅತ್ಯುತ್ತಮ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಜನಸಾಮಾನ್ಯರಲ್ಲಿ ಈ ಕಾಯಿಲೆ ಹರಡುತ್ತಿರುವುದನ್ನು ಪತ್ತೆ ಹಚ್ಚಿ ಸೊಂಕು ತಡೆಗಟ್ಟುವ ಉದ್ದೇಶ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ,ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಆಗಿರುವ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಡಾ.ಇಂದ್ರಾಣಿ ಅನಿಲಕುಮಾರ್, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಆರ್.ಅನಿಲಕುಮಾರ್, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಗುರುನಾಥ ಚವ್ಹಾಣ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಆರ್‍ಎಂಒ ಡಾ.ವಿಶ್ವನಾಥ,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಈಶ್ವರ ದಾಸಪ್ಪನವರ್, ಟಿಎಚ್‍ಒ ಡಾ.ಮೋಹನಕುಮಾರಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕ ಗಿರೀಶ್, ಎಆರ್‍ಟಿ ವೈದ್ಯ ಡಾ.ದಿನೇಶ ಗುಡಿ,ಫ್ಯಾಮಿಲಿ ಪ್ಲಾನಿಂಗ್ ಅಸೊಸಿಯೇಶನ್‍ನ ಡಾ.ವಿಜಯಲಕ್ಷ್ಮೀ, ,ನಿತ್ಯಜೀವನ ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಮತ್ತಿತರರು ಇದ್ದರು.
ನಂತರ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
ಎಚ್‍ಐವಿ/ಏಡ್ಸ್ ನಿಯಂತ್ರಣ ಕಾರ್ಯದಲ್ಲಿ ಗಣನೀಯವಾಗಿ ತೊಡಗಿಸಿಕೊಂಡ ಬಳ್ಳಾರಿಯ ನಿತ್ಯಜೀವನ ಸಂಸ್ಥೆ, ವಿಮುಕ್ತಿ ಮೈಗ್ರಂಟ್, ಎಫ್.ಪಿ.ಎ.ಐ ಐಸಿಟಿಸಿ ಸಿಬ್ಬಂದಿವರ್ಗ, ತೆಕ್ಕಲಕೋಟೆಯ ಐಸಿಟಿಸಿ ಆಪ್ತಸಮಾಲೋಚಕರು, ವಿಮ್ಸ್‍ನ ಏ.ಆರ್.ಟಿ ಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿವರ್ಗ, ಬಳ್ಳಾರಿಯ ಡಿ.ಎಸ್.ಆರ್.ಸಿ.ಯ ಆಪ್ತಸಮಾಲೋಚಕರು, ಬಳ್ಳಾರಿ ರಕ್ತ ಕೇಂದ್ರದ ಮಂಜುನಾಥ ಅಂಗಡಿ,ಆರ್‍ಆರ್‍ಸಿ ಕಾಲೇಜು,ಪೊಲೀಸ್ ಇಲಾಖೆ, ಲೀಗಲ್ ಸೇಲ್ಸ್, ಸ್ವಾಮಿ ವಿವೇಕಾನಂದ ಯುತ್ ಮೂಮೆಂಟ್‍ನ ಕಾರ್ಯಕ್ರಮ ಅಧಿಕಾರಿಗಳು, ಕುರುಗೋಡಿನ ಐಸಿಟಿಸಿ ಆಪ್ತಸಮಾಲೋಚಕರನ್ನು ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here