ಬಳಘಟ್ಟ ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಿದ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ.

0
93

ಮಂಡ್ಯ,ಸೆ 29 ;- ಪಾಂಡವಪುರ ತಾಲ್ಲೂಕು ಬಳಘಟ್ಟ ಗ್ರಾಪಂ ವ್ಯಾಪ್ತಿಯ 51 ಕೆರೆಗಳಿಗೆ ನೀರು ತುಂಬಿಸುವ ಮೊದಲ ಹಂತ ಉದ್ಘಾಟನೆಯನ್ನು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ನೆರವೇರಿಸಿದರು.

ಸಣಬ ಬಡಾವಣೆಯ ಗ್ರಾಮದ ಬಳಿ ಇರುವಂತ ಬಳಘಟ್ಟ ಏತ ನೀರಾವರಿ ಎರಡನೇ ಹಂತದ ಪಂಪ್ ಬಳಿಯ ವೇದಿಕೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಬಳಘಟ್ಟ ಏತ ನೀರಾವರಿ ಯೋಜನೆಯಡಿ ಬಳಘಟ್ಟ ಗ್ರಾಪಂ ವ್ಯಾಪ್ತಿಯ 51 ಕರೆಗಳಿಗೆ ನೀರು ತುಂಬಿಸುವ ಹಾಗೂ ಸೂಕ್ಷ್ಮ ನೀರಾವರಿ ಕಲ್ಪಿಸುವ ಯೋಜನೆಯ ಮೊದಲ ಹಂತದ ಉದ್ಘಾಟನೆ ಹಾಗೂ ಯೋಜನೆಯ ಲೋಕಾರ್ಪಣೆ ನಂತರ ಮಾತನಾಡಿದ ಅವರು, ಪ್ರಪಂಚಕ್ಕೆ ನೀರು ಬಹಳ ಶ್ರೇಷ್ಠವಾದದ್ದು, ನೀರಿನ್ನು ಸಂರಕ್ಷಣೆ ಮಾಡುವುದರ ಮೂಲಕ ಗ್ರಾಮೀಣ ಜನತೆಯನ್ನು ಬೆಳೆಸಬಹುದು ಎಂದರು.

ನೀರಿನ ಮರುಪೂರಣವಾಗಬೇಕಾಗಿದೆ. ನೀರಿನ್ನು ಮಿತವಾಗಿ ಬಳಸಿ, ನೀರಿನ ದುರ್ಬಳಕೆ ಮಾಡಬೇಡಿ, ಅವಶ್ಯಕವಾಗಿರುವಷ್ಟೇ ನೀರನ್ನು ಬಳಸಿ ಈ ನಿಟ್ಟಿನಲ್ಲಿ ನೀರಿನ ಮಿತಬಳಕೆ ಬಗ್ಗೆ ರೈತರು ಮನಗಾಣಿ ಎಂದರು.

ನೀರಿನ ಮಿತಬಳಕೆ ಮೂಲಕ ಎಲ್ಲರ ಪ್ರಗತಿ ಸಾಧ್ಯ ,ನಾವು ಸಬಲರಾಗಿ ಬದುಕಬೇಕಾದರೇ ಆರ್ಥಿಕವಾಗಿ ಸಬಲರಾಗಬೇಕು ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಲ್ಲ ರೈತರ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದರು.

ಯಾವ ಕಾಲದಲ್ಲಿ, ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುವುದನ್ನು ಅರಿತು ರೈತರು ನೀರಿನ ಸಂರಕ್ಷಣೆ ಮಾಡಿ ಎಂದರು.

ಮುಂದಿನ ದಿನಗಳಲ್ಲಿ ಜಿಲ್ಲೆಯ ಕೆ.ಆರ್ ಪೇಟೆ ಹಾಗೂ ಇನ್ನಿತರ ತಾಲ್ಲೂಕುಗಳಲ್ಲೂ ಕೆರೆ ತುಂಬಿಸುವ ಕೆಲಸವಾಗಲಿದೆ ಎಂದರು.

ತಡೆಗೋಡೆ, ಇಂಗುಗುಂಡಿ ನಿರ್ಮಾಣ ಮಾಡುವುದರ ಮೂಲಕ ಅಂತರ್ಜಲ ವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಸಣ್ಣ ನೀರಾವರಿ ಮೂಲಕ ಭೂಮಿಗೆ ಇಂದು ನೀರುಣಿಸುವ ಮಹತ್ತರ ಕೆಲಸವನ್ನು ನಿರ್ವಹಿಸಿದ್ದಕ್ಕೆ ಸಂತಸ ತಂದಿದೆ ಎಂದರು.

ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ ಮೇಲುಕೋಟೆ ಸರ್ವಾಂಗೀಣ ಬೆಳೆವಣಿಗೆಗೆ ಶ್ರಮಿಸುತ್ತಿರುವ ಶಾಸಕ ಪುಟ್ಟರಾಜುರವರ ಕಾರ್ಯವೈಖರಿಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ತಾಲ್ಲೂಕಿನ ಜನತೆಗೆ ನೀರನ್ನು ಒದಗಿಸುವ ಕೆಲಸ ಬಹಳ ಪುಣ್ಯದ ಕೆಲಸ ಎಂದು ಹೇಳಬಹುದು ಈ ನಿಟ್ಟಿನಲ್ಲಿ ಶಾಸಕರು ಬಳಘಟ್ಟ ಏತ ನೀರಾವರಿ ಮೂಲಕ 51 ಕೆರೆಗಳಿಗೆ ನೀರು ತುಂಬಿಸಿ ತಾಲ್ಲೂಕಿನ ಪ್ರಗತಿಗೆ ಸಹಕರಿಸಿದ್ದಾರೆ ಎಂದರು‌.

ಕಾರ್ಯಕ್ರಮದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಶಾಸಕರಾದ ಕೆ.ಟಿ ಶ್ರೀಕಂಠೇಗೌಡ, ಅಪ್ಪಾಜೀಗೌಡ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ ಸಿಇಒ ದಿವ್ಯಪ್ರಭು, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರರಾದ ಪ್ರಮೋದ್ ಪಾಟೀಲ್,
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸಿ. ಮೃತ್ಯುಂಜಯಸ್ವಾಮಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here