ಕಾರಾಗೃಹಗಳು ಮನಃ ಪರಿವರ್ತನೆ ಕೇಂದ್ರಗಳು: ಸಿ.ಎಮ್ ಪುಷ್ಪಲತ

0
114

ಧಾರವಾಡ: ಡಿ.01: ಕಾರಾಗೃಹಕ್ಕೆ ಬಂದಿರುವುದು ನೆಪವಾಗಿದ್ದರೂ, ಹೊರಗೆ ಹೋಗುವ ವೇಳೆಗೆ ಪಕ್ವವಾದ ಅನುಭವದೊಂದಿಗೆ ನಿಮ್ಮ ಜೀವನ ರೂಪಿಸಿಕೊಳ್ಳಿ. ಜೈಲುಗಳು ತಮ್ಮದೇ ಆದ ಪಾವಿತ್ರ್ಯತೆ ಹೊಂದಿವೆ. ಇಲ್ಲಿ ಬಂದಿರುವುದು ತಪ್ಪು ಎಂದು ಭಾವಿಸದೇ ಜೀವನ ರೂಪಿಸಿಕೊಳ್ಳಲು ಸಿಕ್ಕ ಅವಕಾಶ ಎಂದು ತಿಳಿಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪುಷ್ಪಲತ ಸಿ.ಎಮ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ, ರುಡ್ ಸೆಟ್ ಸಂಸ್ಥೆ, ಆರ್ಟ್ ಆಫ್ ಲಿವಿಂಗ್ ಮತ್ತು ಕೇಂದ್ರ ಕಾರಾಗೃಹ ಇವರ ಸಂಯುಕ್ತಾಶ್ರಯದಲ್ಲಿ ಕೇಂದ್ರ ಕಾರಾಗೃಹದಲ್ಲಿ ಇಂದು ಜರುಗಿದ ಬಂಧಿಗಳಿಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ತರಬೇತಿ, ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ, ವಿಶ್ವ ಏಡ್ಸ್ ದಿನಾಚರಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರಾಗೃಹದಲ್ಲಿ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳ ತರಬೇತಿ, ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುತ್ತಿರುವುದು ನಿಮ್ಮ ಮುಂದಿನ ಜೀವನಕ್ಕೆ ಸಹಾಯವಾಗುತ್ತದೆ. ಅರೋಗ್ಯ ಅತ್ಯಂತ ಮಹತ್ವವಾದದ್ದು. ಯೋಗ, ಧ್ಯಾನ ಮಾಡುವ ಮೂಲಕ ಆರೋಗ್ಯವನ್ನು ಸಮತೋಲನದಲ್ಲಿರಿಸಿಕೊಳ್ಳಬೇಕು. ಎಲ್ಲರಿಂದ ಯೋಗ ಮಾಡಲು ಸಾಧ್ಯವಾಗದಿದ್ದರೂ ಧ್ಯಾನ ಮಾಡಬಹುದು. ಇದು ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ನೆಮ್ಮದಿಯನ್ನು ನೀಡುತ್ತದೆ ಎಂದರು.

ಭಾರತೀಯ ಕುಟುಂಬ ಕಲ್ಯಾಣ ಯೋಜನೆಯ ಶಾಖಾ ವ್ಯವಸ್ಥಾಪಕಿ ಸುಜಾತಾ ಆನಿಶೆಟ್ಟರ್ ಮಾತನಾಡಿ, ಅಸಮಾನತೆಯನ್ನು ಕೊನೆಗೊಳಿಸೊಣ ಅದರಿಂದ ಏಡ್ಸ್ ಕೊನೆಗೊಳಿಸಬಹುದು ಎಂಬ ಘೋಷವಾಕ್ಯದೊಂದಿಗೆ 2030ನೇ ಇಸವಿ ಒಳಗೆ ಭಾರತವನ್ನು ಏಡ್ಸ್ ಮುಕ್ತ ರಾಷ್ಟ್ರವಾಗಿಸಲು ತೀರ್ಮಾನಿಸಿದೆ. ಏಡ್ಸ್ ರೋಗಿಗಳನ್ನು ತಿರಸ್ಕಾರ ಭಾವದಿಂದ ನೋಡದೇ ಅವರ ಆರೋಗ್ಯ ಕಾಳಜಿ ಮಾಡಿ, ಸಲಹೆ ನೀಡಬೇಕು. ಈ ರೋಗಕ್ಕೆ ಸಿಗುವ ಚಿಕಿತ್ಸೆಯಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯ ಮಾಡದೇ ಎಲ್ಲರಿಗೂ ಸಮಾನತೆಯಿಂದ ಚಿಕಿತ್ಸೆ ನೀಡಿ ಕಾಳಜಿವಹಿಸಬೇಕು. ಏಡ್ಸ್ ರೋಗಿಗಳ ಕುರಿತು ಜನರಲ್ಲಿರುವ ಕೆಟ್ಟ ಅಭಿಪ್ರಾಯಗಳನ್ನು ಹೋಗಲಾಡಿಸಿ ಅರಿವು ಮೂಡಿಸಬೇಕು ಎಂದರು.

ಕೆನರಾ ಬ್ಯಾಂಕ್ ಸರ್ಕಲ್ ಮುಖ್ಯಸ್ಥ ಜಿ.ಎಸ್ ರವಿಸುಧಾಕರ ಮಾತನಾಡಿ, ರುಡ್ ಸೆಟ್ ಸಂಸ್ಥೆ ಉತ್ತಮವಾದ ಕೌಶಲ್ಯ ತರಬೇತಿಯನ್ನು ನೀಡುತ್ತಿದೆ. ನೀವು ಅದರ ಸದುಪಯೋಗ ಪಡೆದುಕೊಂಡು ಶಿಕ್ಷೆಯ ಅವಧಿಯ ನಂತರ ಉತ್ತಮ ಬದುಕು ನಿಮ್ಮದಾಗಿಸಿಕೊಳ್ಳಬಹುದು. ಕೆನರಾ ಬ್ಯಾಂಕ್ ಕೂಡ ಸಾಲಸೌಲಭ್ಯ ನೀಡುತ್ತದೆ. ಅದರ ಲಾಭ ಪಡೆದು ವಿವಿಧ ಉದ್ಯೋಗ ಮಾಡಬಹುದು ಎಂದರು.

ಕೇಂದ್ರ ಕಾರಾಗೃಹದ ಅಧೀಕ್ಷಕ ಎಂ.ಎ ಮರಿಗೌಡ ಮಾತನಾಡಿ, ಕೈದಿಗಳಿಗೆ ಕೆಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತರಬೇತಿ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.

ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಗವಿಸಿದ್ದಪ್ಪ ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಹಿರಿಯ ಶಿಕ್ಷಕಿ ಗಾಯತ್ರಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೆನರಾ ಬ್ಯಾಂಕ ಜನರಲ್ ಮ್ಯಾನೇಜರ್ ಆರ್.ಕೆ ದೊರಾ, ಕೇಂದ್ರ ಕಾರಾಗೃಹದ ಮುಖ್ಯ ವೈದ್ಯಾಧಿಕಾರಿ ಡಾ. ಸಿದ್ಧಾಂತಿ, ಸಹಾಯಕ ಅಧೀಕ್ಷಕ ಸುನೀಲ ಗಲ್ಲೆ ಉಪಸ್ಥಿತರಿದ್ದರು.

ಜ್ಯೋತಿ ಕೆ. ಪ್ರಾರ್ಥಿಸಿದರು. ವೀರಪ್ಪ ತಿರಗೂರ ಸ್ವಾಗತಿಸಿದರು. ಆರ್.ಬಿ ಕುರಬೆಟ್ಟ ನಿರೂಪಿಸಿದರು. ನಿಂಗಪ್ಪ ಮಾಡಿವಾಳರ ವಂದಿಸಿದರು.

LEAVE A REPLY

Please enter your comment!
Please enter your name here