ಹೊಸಪೇಟೆಯ ಉಪ ಕಾರಾಗೃಹದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಯೋಗ ತರಬೇತಿ, ಕೌಶಲ್ಯಾಭಿವೃದ್ಧಿ ತರಬೇತಿ ಸದುಪಯೋಗಕ್ಕೆ ಬಂದಿಗಳಿಗೆ ನ್ಯಾ.ಶುಭವೀರ್ ಜೈನ್ ಕರೆ

0
242

ವಿಜಯನಗರ(ಹೊಸಪೇಟೆ)ಡಿ.02: ಬಂದಿಗಳು ಕಾರಾಗೃಹದಿಂದ ಹೊರಹೊಂದ ನಂತರ ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಿವಿಧ ರೀತಿಯ ವೃತ್ತಿಪರ ಕೌಶಲ್ಯಗಳು ಸಹಕಾರಿಯಾಗಿದ್ದು,ಅವುಗಳ ತರಬೇತಿಯನ್ನು ಸಮರ್ಪಕವಾಗಿ ಪಡೆದುಕೊಂಡು ಸುಂದರ ಜೀವನ ರೂಪಿಸಿಕೊಳ್ಳುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶುಭವೀರ್ ಜೈನ್.ಬಿ ಅವರು ಹೇಳಿದರು.
ಕಾರಾಗೃಹ ಮತ್ತು ಸುಧಾರಣಾ ಇಲಾಖೆ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕೌಶಲ್ಯ ಅಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ಆರ್ಟ್ ಆಫ್ ಲಿವಿಂಗ್ ಸಂಯುಕ್ತ ಆಶ್ರಯದಲ್ಲಿ ಹೊಸಪೇಟೆಯ ಕಾರಾಗೃಹದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಂದಿಗಳಿಗೆ ಕೌಶಲ್ಯಾಭಿವೃದ್ಧಿ ಮತ್ತು ಯೋಗ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾವುದೋ ಕ್ಷಣೀಕ ಆವೇಶಕ್ಕೊಳಗಾಗಿ ತಪ್ಪು ಮಾಡಿ ಇಲ್ಲಿಗೆ ಬಂದಿರುತ್ತೀರಿ;ಇಲ್ಲಿ ಚಿಂತೆ ಮಾಡಿಕೊಳ್ಳುತ್ತಾ ಕುಳಿತುಕೊಳ್ಳದೇ ಕಾರಾಗೃಹ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿರುವ ವಿವಿಧ ಕೌಶಲ್ಯಗಳ ತರಬೇತಿ ಹಾಗೂ ಯೋಗ, ಧ್ಯಾನ, ಪ್ರಾಣಾಯಾಮ ತರಬೇತಿ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.
ಹೊಸಪೇಟೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷಕರಾದ ಕಿಶನ್.ಬಿ.ಮಾಡಲಗಿ ಅವರು ಮಾತನಾಡಿ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳನ್ನು ದಿನನಿತ್ಯ ಮಾಡಿ, ಕೋಪವನ್ನು ಹಿಡಿತದಲ್ಲಿಟ್ಟುಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಅಧೀಕ್ಷಕರಾದ ಎಂ.ಹೆಚ್.ಕಲಾದಗಿ ಅವರು ಜೈಲಿನಲ್ಲಿರುವಂತಹ ಬಂದಿಗಳು ಬಿಡುಗಡೆಯಾಗಿ ಹೊರಗಿನ ಸಮಾಜಕ್ಕೆ ಹೋದ ನಂತರ ತಮ್ಮ ಸ್ವಂತ ನೆಲೆಯನ್ನು ಕಂಡುಕೊಳ್ಳಲು ಕರ್ನಾಟಕ ಸರ್ಕಾರ ಮತ್ತು ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸುವಂತಹ ಎಲ್ಲಾ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೊಸಪೇಟೆಯ ವಕೀಲರ ಸಂಘದ ಅಧ್ಯಕ್ಷರಾದ ಕೆ.ವಿ ಬಸವರಾಜ, ಆರ್ಟ್ ಆಫ್ ಲಿವಿಂಗ್ ನ ದೀಪಕ ಕೊಳಗದ, ಹೊಸಪೇಟೆಯ ಶ್ರೀ ಕೃಷ್ಣ ಸಾಯಿ ಕೋ-ಆಪರೇಟಿವ್ ಸೊಸೈಟಿ ಮತ್ತು ಓಂ ಶ್ರೀ ಸಿಂಧು ಸೃಷ್ಟಿ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಎಲ್.ಬಿ.ನಾಯಕ, ರುಕ್ಮಿಣಿ ಎಲ್.ಬಿ.ನಾಯಕ ಮತ್ತು ಪಿ.ಸಿ ಶಾಂತಾ, ವೈದ್ಯಾಧಿಕಾರಿಯಾದ ಸಂತೋಷ, ತಾಲೂಕು ಲೋಕಶಿಕ್ಷಣ ಸಂಯೋಜಕರರಾದ ಮಧುಸೂದನ್, ಸಹಾಯಕ ಜೈಲರ್ ಎಸ್.ಹೆಚ್. ಕಾಳಿ ಮತ್ತು ಜಯಶ್ರೀ ಪೋಳ್ ಅವರು ಸೇರಿದಂತೆ ಜೈಲು ಸಿಬ್ಬಂದಿಗಳು ಇದ್ದರು.
ಪ್ರಕಾಶ್ ನಿರೂಪಿಸಿದರು. ಸಂತೋಷ ಸಂತಾಗೋಳ ಸ್ವಾಗತಿಸಿದರು.ರೂಪಾ ಎಫ್.ಕೆ ವಂದಿಸಿದರು.

LEAVE A REPLY

Please enter your comment!
Please enter your name here