ಯಶಸ್ಸಿನ ಹಿಂದೆ ನಿಮ್ಮ ಶ್ರಮ ಮಾತ್ರವಲ್ಲ ಹಲವರ ಪ್ರೇರಣೆ, ಬೆಂಬಲವೂ ಇರುತ್ತದೆ

0
123

-ಆರ್.ಟಿ.ವಿಠ್ಠಲಮೂರ್ತಿ

ಯಾಕೋ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಮೇಲಿಂದ ಮೇಲೆ ಮಳೆ ಸುರಿದು, ಸುರಿದು ರಸ್ತೆಯೆಲ್ಲ ಗಪ್ಪ ಗಾರಾದರೂ ಸೆಕೆ ಎಂಬುದು ಇನ್ನೂ ಮೈ, ಮನಗಳನ್ನು ಆವರಿಸಿರುವುದಕ್ಕೋ ಏನೋ? ಇತ್ತೀಚೆಗೆ ಒಂದೆರಡು ಸಲ ಆ ತರ ಎಚ್ಚರವಾಗಿ ಬಿಡುತ್ತದೆ.
ಹೀಗೆ ಎಚ್ಚರವಾಗುತ್ತಿದ್ದಂತೆ ಬಾಲ್ಕನಿಗೆ ಬಂದು.ಅಪೂಟು ಖಾಲಿ ಎಂದರೆ ಖಾಲಿ ಎಂಬಂತಿರುವ ರಸ್ತೆಯನ್ನು ನೋಡುತ್ತಾ ಕೂರುವುದು, ಆದಷ್ಟೂ ಒಳ್ಳೆಯ ನೆನಪುಗಳನ್ನು ಮನಸ್ಸಿನಲ್ಲಿ ಕೆದರಿಕೊಳ್ಳುವುದು ಇತ್ತೀಚಿನ ನನ್ನ ಅಭ್ಯಾಸ.ಯಾಕೆಂದರೆ ಸಂಕಷ್ಟಗಳು, ಸಮುದ್ರದ ತೆರೆಗಳಂತೆ, ಮೇಲಿಂದ ಮೇಲೆ ದಡವೆಂಬ ಮನಸ್ಸಿಗೆ ಬಂದು ಅಪ್ಪಳಿಸುತ್ತಲೇ ಇವೆ.
ಹೀಗಾಗಿ ಬಾವಕೋಶದಲ್ಲಿ ಸೆರೆಯಾಗಿರುವ ಸ್ಮರಣೀಯ ಚಿತ್ರಗಳನ್ನು ಕೆದಕಿ ನೋಡಿಕೊಂಡು ನೋವು ಮರೆಯುವುದು ಅಭ್ಯಾಸವಾಗಿ ಹೋಗಿದೆ. ನೆನ್ನೆ ರಾತ್ರಿಯೂ ಅದೇ ರೀತಿ ಹೊರಬಂದು ಕುಳಿತೆ. ಹೊರಗೆ ಯಾರೆಂದರೆ ಯಾರೂ ಇಲ್ಲ. ಮನಸ್ಸಿನೊಳಗೆ ಜಗಮಗ ಎಂದು ಕಂಗೊಳಿಸುವ ದಸರಾ ಉತ್ಸವ.
ಅಂದ ಹಾಗೆ, ಬದುಕಿನ ಒಂದೊಂದು ಕಾಲಘಟ್ಟದಲ್ಲಿ ತಮಗರಿವಿಲ್ಲದಂತೆಯೇ ನಮ್ಮಂತವರಿಗೆ ಖುಷಿ ನೀಡಿದ,ಮರೆಯಲಾಗದ ಪಾಠಗಳನ್ನು ಕಲಿಸಿದ ನೂರಾರು ಜನ ಇರುತ್ತಾರೆ. ಬೇಕಿದ್ದರೆ ಮನಸ್ಸನ್ನು ಕಲಕಿ ನೋಡಿ,ಇಂತವರು ಮನಸ್ಸಿನ ದಂಡೆಗೆ ತೆರೆ ತೆರೆಯಾಗಿ ಬಂದು ಹಿತವಾಗಿ ಅಪ್ಪಳಿಸುತ್ತಾರೆ. ಹೀಗೆ ಪದೇ ಪದೇ ನನ್ನ ನೆನಪಿಗೆ ಬರುವುದೆಂದರೆ ನನ್ನೂರು ಸಾಗರದ ಕ್ರಿಕೆಟ್ ಪ್ಲೇಯರುಗಳು.
ಗ್ಯಾರೇಜ್ ಭಾಸ್ಕರಣ್ಣ, ಚಿತ್ರನಟ ಸುಧೀರ್ (ಕಿಟ್ಟಿ) ಅವರ ಸಹೋದರ ಅಚ್ಚು, ಅಪ್ಪು, ಲಕ್ಷ್ಮಣ ಪಂಡಿತ್, ರಾಮಣ್ಣ ಪಂಡಿತ್, ನಾಗೇಂದ್ರ ಪಂಡಿತ್ (ಪಿಣ್ಣ) ನಾರಾಯಣಪ್ಪ, ಸತ್ಯನಾರಾಯಣ ಭವನದ ಗುರು, ಸಾಗರ ಹೋಟೆಲ್ ನ ಶ್ರೀಧರಣ್ಣ, ಪುರುಷೋತ್ತಮ್ ಹೀಗೆ ನಮ್ಮೂರಿನಲ್ಲಿ ಲಗಾನ್ ಪಿಕ್ಚರಿನ ತರ ಒಂದು ಕ್ರಿಕೆಟ್ ಟೀಮಿತ್ತು. ಲಗಾನ್ ಎಂದರೆ ತೆರಿಗೆ. ಈ ಕ್ರಿಕೆಟ್ ಟೀಮೂ ಒಂದರ್ಥದಲ್ಲಿ ನಮಗೆ ಖುಷಿ ಎಂಬ ತೆರಿಗೆಯನ್ನು ಲಮ್ ಸಮ್ಮಾಗಿ ನೀಡುತ್ತಿತ್ತು.
ಕಾಲ ಕಾಲಕ್ಕೆ ಈ ಟೀಮಿಗೆ ನುಗ್ಗುತ್ತಿದ್ದ ರೊಡ್ಡ ಗೋಪಾಲಣ್ಣ,ವಿನೋದಣ್ಣ (ವಿನೋದ್ ಶೆಟ್ಟಿ) ಹೀಗೆ ನೆನಪಿಸಿಕೊಳ್ಳುತ್ತಾ ಹೋದರೆ ಇವರೆಲ್ಲ ಯಾವತ್ತೂ ಅಚ್ಚಳಿಯದೆ ಮನಸ್ಸಿನಲ್ಲುಳಿದವರು. ಬಾಲ್ಯದಲ್ಲಿ ನೀವು ಏನು ಅನುಭವಿಸುತ್ತೀರೋ? ಮುಂದೆಯೂ ಅದು ನೆನಪಿನ ಪಾತ್ರೆಯಲ್ಲಿ ಬೇಯುತ್ತಲೇ ಇರುತ್ತದೆ. ಅಂದ ಹಾಗೆ ಆಗ ಸಾಗರದ ಕ್ರಿಕೆಟ್ ತಂಡ ಎಂದರೆ ನಮಗೆಲ್ಲ ಅಚ್ಚು ಮೆಚ್ಚು. ಬೆಂಗಳೂರಿನಿಂದ ಹಿಡಿದು, ಶಿವಮೊಗ್ಗದ ತನಕ ಹಲ ತಂಡಗಳು ಆಗ ಸಾಗರಕ್ಕೆ ಆಡಲು ಬರುತ್ತಿದ್ದವು. ನಮ್ಮವರೂ ಹೋಗುತ್ತಿದ್ದರು.
ಈ ಕ್ರಿಕೆಟ್ ಪ್ಲೇಯರುಗಳು ಎಂದರೆ ನನ್ನಂತವರಿಗೆಲ್ಲ ದೇವರಿದ್ದಂತೆ. ಗ್ಯಾರೇಜ್ ಭಾಸ್ಕರಣ್ಣ್ಣ ಎಂದರೆ ನಮಗೆ ಸುನೀಲ್ ಗಾವಸ್ಕರ್ ಇದ್ದಂತೆ. ಅಚ್ಚು ಎಂದರೆ ಚೇತನ್ ಚೌಹಾಣ್ ಇದ್ದಂತೆ. ವಿಕೆಟ್ ಕೀಪಿಂಗೂ ಮಾಡುತ್ತಿದ್ದ ಅಚ್ಚು ಅದ್ಭುತ ಬ್ಯಾಟ್ಸ್ ಮನ್. ಎದುರಾಳಿ ತಂಡಕ್ಕೆ ತನ್ನ ಅಜಾನುಬಾಹುವಿನಂತ ಗಾತ್ರದಿಂದಲೇ ಸುಸ್ತು ಮಾಡುತ್ತಿದ್ದ ಅಚ್ಚು, ಕ್ರೀಸಿನಲ್ಲಿದ್ದರೆ ರನ್ ಹೊಳೆ ಗ್ಯಾರಂಟಿ.
ಅಚ್ಚು ಒಂದು ದಿನ ಎದುರಾಳಿ ತಂಡದ ವಿರುದ್ಧ ತೊಂಭತ್ತೆಂಟು ರನ್ ಗಳಿಸಿದ್ದಾರೆ. ನಾವೆಲ್ಲ ಸ್ಟೇಡಿಯಂನಲ್ಲಿ ಬಿಟ್ಟ ಬಾಯಿ ಬಿಟ್ಟಂತೆ ನೋಡುತ್ತಿದ್ದೇವೆ. ದೇವರೇ! ಅಚ್ಚು ಸೆಂಚುರಿ ಹೊಡೆದು ಬಿಡಲಿ, ಆಮೇಲೆ ಏನು ಬೇಕಾದರೂ ಆಗಲಿ ಎಂಬಂತೆ.ಈಗ ನಮ್ಮ ಹುಡುಗರು ಹೇಳುತ್ತಾರಲ್ಲ? ಅಯ್ಯೋ, ನಮ್ಮವರು ವರ್ರ್ಲ್ ಕಪ್ ಗೆಲ್ಲುತ್ತಾರೋ? ತೆಂಗಿನ ಕಾಯಿ ಚಿಪ್ಪೇ ತೆಗೆದುಕೊಂಡು ಬರುತ್ತಾರೋ? ಗೊತ್ತಿಲ್ಲ.ಆದರೆ ಪಾಕಿಸ್ತಾನದ ಮೇಲೆ ಗೆದ್ದರೆ ಸಾಕು ಎಂದಂತೆ.
ಆದರೆ, ಅದೇನು ಗ್ರಹಚಾರವೋ? ಅಪೂರ್ವವಾಗಿ ಆಡುತ್ತಿದ್ದ ಅಚ್ಚು ಔಟಾಗಿ ಬಿಟ್ಟರು. ನನ್ನಂತಹ ಪುಟ್ಟ ಕ್ರಿಕೆಟ್ ಅಭಿಮಾನಿಗಳಿಗೆ ಕಣ್ಣೀರೋ ಕಣ್ಣೀರು. ಆಡುತ್ತಾ,ಆಡುತ್ತಾ ಕೈ ಬೆರಳಿಗೆ ಗಾಯ ಮಾಡಿಕೊಂಡು ಬ್ಯಾಂಡೇಜ್ ಸುತ್ತಿಕೊಂಡಿದ್ದ ಅಚ್ಚು ತೊಂಭತ್ತೆಂಟು ರನ್ ಮಾಡಿ ಔಟಾಗಿದ್ದು ನಮಗೆ ತಡೆಯಲು ಸಾಧ್ಯವೇ ಆಗಿರಲಿಲ್ಲ.
ಆದರೆ ಅಂತಹ ಸುಸ್ತಿನಲ್ಲೂ ಅಚ್ಚು ತನ್ನ ಬ್ಯಾಂಡೇಜು ಸುತ್ತಿದ ಬೆರಳುಗಳಿಂದ ಸ್ಟೇಡಿಯಂ ಬಳಿ ಧಿರೋದಾತ್ತ ಯೋಧನಂತೆ, ನಮಗೆಲ್ಲ ಹಸ್ತಲಾಘವ ಮಾಡುತ್ತಾ ಕೊಂಚವೂ ಬೇಸರ ಮಾಡಿಕೊಳ್ಳದೆ ಒಳಗೆ ಹೋದರು. ನನಗೆ ಅಚ್ಚರಿ. ನಮಗೆ ಅಚ್ಚು ತೊಂಭತ್ತೆಂಟು ರನ್ನಿಗೆ ಔಟಾಗಿದ್ದನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಆದರೆ ಅಚ್ಚುವಿನದು ರಾಜಗಾಂಭೀರ್ಯ.
ಇದೇ ರೀತಿ ರಾಮಣ್ಣ ಪಂಡಿತ್! ಮುಂದೆ ನಾನು ರಾಹುಲ್ ದ್ರಾವಿಡ್ ಆಟ ನೋಡಿದಾಗಲೆಲ್ಲ ನನಗೆ ಪದೇ ಪದೇ ನೆನಪಿಗೆ ಬರುತ್ತಿದ್ದುದು ರಾಮಣ್ಣ. ಬೌಲಿಂಗ್ ಇರಲಿ, ಬ್ಯಾಟಿಂಗ್ ಇರಲಿ, ಎದುರಾಳಿ ತಂಡಕ್ಕೆ ಮಂಕು ಕವಿಸಿಬಿಡುತ್ತಿದ್ದ ರಾಮಣ್ಣ ತಾವು ಬ್ಯಾಟಿಂಗ್ ಮಾಡುವಾಗ ಸಿಕ್ಸರು, ಫೋರು ಬಾರಿಸಿದರೂ ಅದಕ್ಕಾಗಿ ಕುಣಿದು ಕುಪ್ಪಳಿಸುವುದು ಕಾಣುತ್ತಿರಲಿಲ್ಲ. ಅದೇ ರೀತಿ ಎದುರಾಳಿ ತಂಡದ ವಿಕೇಟುಗಳನ್ನು ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಪತ ಪತನೆ ಉದುರಿಸಿದರೂ ಅದಕ್ಕಾಗಿ ತುಂಬ ಸಡಗರದಿಂದ ಮೈದಾನದ ತುಂಬೆಲ್ಲ ಥಕ ಥಕ ಕುಣಿಯುತ್ತಿರಲಿಲ್ಲ.
ಮುಂದೆ ಬೆಂಗಳೂರಿಗೆ ಬಂದ ಮೇಲೆ ಒಂದು ಸಲ ಪಾಕಿಸ್ತಾನ ಕ್ರಿಕೆಟ್ ತಂಡದ ಆಟ ನೋಡುತ್ತಿದ್ದೆ. ಆಗ ಆ ತಂಡದಲ್ಲಿ ಅಬ್ದುಲ್ ಖಾದಿರ್ ಅಂತ ಅಮೋಘ ಸ್ಪಿನ್ ಬೌಲರ್ ಇದ್ದ. ಆದರೆ ತನ್ನ ಎದುರಾಳಿ ತಂಡದ ಒಂದೊಂದು ವಿಕೆಟ್ ಕಿತ್ತಾಗಲೂ ಆತ. ನೆಲದ ಮೇಲೆ ಬಿದ್ದು ಹೊರಳಾಡಿ, ಹೊರಳಾಡಿ ನಗುತ್ತಿದ್ದ. ಎದುರಾಳಿಯ ನೋವಿನಲ್ಲಿ ಸಂಭ್ರಮವನ್ನು ಆ ತರ ಆಚರಿಸುವುದು? ಅವನ ಆ ನಡವಳಿಕೆಯ ಮುಂದೆ ನನಗೆ ನಮ್ಮ ರಾಮಣ್ಣ ಪಂಡಿತ್, ದೇವರಂತೆ ಕಾಣತೊಡಗಿದರು. ನಿಜ, ಆಟವನ್ನು ಗೆಲ್ಲಲೆಂದೇ ಆಡಬೇಕು. ಆದರೆ ಯಶಸ್ಸು ಸಿಕ್ಕ ಕೂಡಲೇ ಈ ತರ ಸಂಭ್ರಮಿಸುವುದು ಮಾನವೀಯತೆ ಅಲ್ಲ.
ಇನ್ನು ಅಪ್ಪು ಕೂಡಾ ಸಾಗರ ಕಂಡ ಅಪೂರ್ವ ಕ್ರಿಕೆಟ್ ಪ್ಲೇಯರು. ಅಪ್ಪುವಿನ ಬ್ಯಾಟಿಂಗು ಎಂದರೆ ಈಗ ವೀರೇಂದ್ರ ಸೆಹ್ವಾಗ್ ಇದ್ದನಲ್ಲ? ಆ ತರ.ಅಪ್ಪು ಫೀಲ್ಡಿಗಿಳಿದ ಬಹುತೇಕ ಟೈಮುಗಳಲ್ಲಿ ಸೆಂಚುರಿಗಳು ಸಿಡಿಯುತ್ತಿದ್ದವು. ಹೀಗಾಗಿ ಅಪ್ಪು ತನ್ನ ಬ್ಯಾಟಿನಿಂದ ಸೆಂಚುರಿ ಸಿಡಿಸಿ ವಾಪಸ್ ಪೆವಿಲಿಯನ್ ಗೆ ಬರುವ ಕಾಲಕ್ಕೆ ಸರಿಯಾಗಿ ನಾವು ಐಸ್ ಕ್ಯಾಂಡಿಯನ್ನೋ, ಐಸ್ ಕ್ರೀಮನ್ನೋ ಹಿಡಿದುಕೊಂಡು ನಿಲ್ಲುತ್ತಿದ್ದೆವು. ಅಪ್ಪು ನನ್ನಂತಹ ಅಪಾರ ಅಭಿಮಾನಿ ಬಳಗಕ್ಕೆ ನಿರಾಸೆ ಮಾಡುತ್ತಿರಲಿಲ್ಲ. ನಾವು ಕೈಲಿ ಹಿಡಿದುಕೊಂಡಿರುತ್ತಿದ್ದ ಐಸ್ ಕ್ಯಾಂಡಿಯನ್ನೋ, ಐಸ್ ಕ್ರೀಮನ್ನೋ ಬಾಯಿಗೆ ತಗಲಿಸಿದಂತೆ ಮಾಡಿ ವಾಪಸ್ಸು ಕೊಟ್ಟು ಬಿಡುತ್ತಿದ್ದರು. ನಾವು ಅದನ್ನು ಸಂತೋಷದಿಂದ ತಿನ್ನುತ್ತಿದ್ದೆವು.
ಒಂದು ಸಲ ನೋಡುತ್ತೇವೆ. ಅಪ್ಪು ಗಡ್ಡ ಬಿಟ್ಟು ಬಿಟ್ಟಿದ್ದಾರೆ. ಅರೇ,ಅಪ್ಪು ಯಾಕೆ ಗಡ್ಡ ಬಿಟ್ಟಿದ್ದು? ಅಂತ ನಮಗೆಲ್ಲ ಆಶ್ಚರ್ಯ, ನಮಗೆಲ್ಲ ಅದು ನ್ಯಾಷನಲ್ ಇಷ್ಯೂ.ಹಾಗಂತ ಕುತೂಹಲದಿಂದ ನನ್ನ ಗೆಳೆಯನೊಬ್ಬನಿಗೆ ಕೇಳಿದರೆ: ಓ, ಅದಾ? ಬೇರೆ ಊರಿಗೆ ಆಡಲು ಹೋದಾಗ ನಮ್ಮ ಕ್ರಿಕೆಟ್ ಟೀಮು ಸೋತು ಹೋಯಿತಂತೆ. ಈಗ ಆ ಟೀಮನ್ನು ಸೋಲಿಸುವ ತನಕ ಗಡ್ಡ ಬೋಳಿಸುವುದಿಲ್ಲ ಎಂದು ಅಪ್ಪು ಶಪಥ ಮಾಡಿದ್ದಾರೆ ಎಂದ. ಅದೇನು ನಿಜವೋ? ದಂತಕತೆಯೋ?ಗೊತ್ತಿಲ್ಲ. ಆದರೆ ಅಪ್ಪುವಿನಂತಹ ಅಪ್ಪು ಗಡ್ಡ ಬಿಡುವ ಸ್ಥಿತಿ ಬಂತಲ್ಲ? ಆ ಗಡ್ಡವನ್ನು ಬೋಳಿಸುವ ತನಕ ನಮಗೆ ನೆಮ್ಮದಿಯಿಲ್ಲ.ಮುಂದೊಂದು ದಿನ ಅಪ್ಪುವನ್ನು ನೋಡಿದಾಗ ಗಡ್ಡ ಮರೆಯಾಗಿತ್ತು. ನಮಗೆಲ್ಲ ಜೀವ ಬಂದಂತಾಯಿತು.
ಅಂದ ಹಾಗೆ ಸಾಗರದ ಕ್ರಿಕೆಟ್ ಟೀಮಿಗೆ ಆಗ ಸಚಿನ್ ತೆಂಡೂಲ್ಕರ್ ತರ ಸಿಕ್ಕವರೆಂದರೆ ನಾಗೇಂದ್ರ ಪಂಡಿತ್. (ಆಗಿನ್ನೂ ಸಚಿನ್ ತೆಂಡೂಲ್ಕರ್ ಬಂದಿರಲಿಲ್ಲ) ನಾವವರನ್ನು ಪಿಣ್ಣ ಅಂತ ಕರೆಯುತ್ತಿದ್ದೆವು. ಕ್ರಿಕೆಟ್ ಆಟವನ್ನು ಶಾಸ್ತ್ರ ಬದ್ಧವಾಗಿ ಆಡುತ್ತಿದ್ದ, ಪ್ರತಿಯೊಂದು ಚೆಂಡನ್ನೂ ತನ್ನದೇ ಶೈಲಿಯಲ್ಲಿ ಲಾಂಗ್ ಆನ್, ಸ್ಕ್ವೇರ್ ಕಟ್ ಅಂತೆಲ್ಲ ನೀಟಾಗಿ ಬಾಲನ್ನು ಬೌಂಡರಿ ಗೆರೆ ದಾಟಿಸುತ್ತಿದ್ದ ಪಿಣ್ಣ, ಮುಂದೊಂದು ದಿನ ಬ್ಯಾಂಕ್ ಕೆಲಸಕ್ಕೆ ಸೇರಿದರು. ಅವರು ರಣಜಿ ತಂಡಕ್ಕೆ ಆಯ್ಕೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಡಿತು.
ಹೀಗೆ ಒಂದು ಸಲ‌ ನಾಡಿನ ಖ್ಯಾತ ಕ್ರಿಕೆಟಿಗ ವಿಜಯಕೃಷ್ಣವಿಜಯಕೃಷ್ಣ ಸಾಗರಕ್ಕೆ ಬಂದಿದ್ದರು. ನಾವೆಲ್ಲ ಅದೇ ಮೊಟ್ಟ ಮೊದಲ ಬಾರಿ ಅವರನ್ನು ನೋಡಿದ್ದು. ಆಗೆಲ್ಲ ನಮಗೆ ಹೆದರಿಕೆ. ಅವರ ಬೌಲಿಂಗ್ ಮುಂದೆ, ನಮ್ಮವರು ಏನು ಮಾಡುತ್ತಾರೋ? ಅಂತ. ಆದರೆ ನೋಡ ನೋಡುತ್ತಿದ್ದಂತೆಯೇ ನಮ್ಮ ಸಾಗರ ಹೋಟೆಲ್ ನ ಶ್ರೀಧರಣ್ಣ ಮೈ ಮೇಲೆ ದೇವರು ಬಂದಂತೆ ಯರ್ರಾ ಮರ್ರಾ ಬ್ಯಾಟ್ ಬೀಸತೊಡಗಿದರು. ವಿಜಯಕೃಷ್ಣ ಬೌಲಿಂಗಿನಲ್ಲಿ ನಿರಂತರವಾಗಿ ಬೌಂಡರಿಗಳ ಸುರಿಮಳೆ.ವಿಜಯಕೃಷ್ಣ ಅವರಂತಹ ವಿಜಯಕೃಷ್ಣ ಅವರಂತವರಿಗೇ ಅವತ್ತು ಶ್ರೀಧರಣ್ಣ ಸಿಂಹಸ್ವಪ್ನದ ತರ ಆಗಿಬಿಟ್ಟಿದ್ದರು.
ಆಟ ಮುಗಿದು ಅವರು ಸ್ಟೇಡಿಯಂಗೆ ವಾಪಸ್ಸು ಆಗುವ ಹೊತ್ತಿಗಾಗಲೇ ಅವರು ನಮ್ಮ ಅವತ್ತಿನ ಹೀರೋ.ಇದೇನು ಶ್ರೀಧರಣ್ಣ? ಅಂತಹ ಸ್ಪಿನ್ ಮಾಂತ್ರಿಕನ ಬೌಲಿಂಗಿಗೇ ಕೇರು ಮಾಡದೆ ಬೌಂಡರಿಗಳ ಮೇಲೆ ಬೌಂಡರಿ ಹೊಡೆದುಬಿಟ್ಟರಲ್ಲ? ಅಂತ ಕೇಳಿದರೆ: ಅಯ್ಯೋ,ಆಟದಲ್ಲಿ ಒಂದೊಂದು ಸಲ ಪ್ಲೇಯರ್ ಗಳಿಗೆ ಆ ತರ ಜೋಷ್ ಬಂದು ಬಿಡತ್ತೆ ಕಣ್ರೋ. ಅದರಲ್ಲೇನಿದೆ ವಿಶೇಷ? ಇವತ್ತು ನನಗೆ ಬರಬಹುದು? ನಾಳೆ ನಿಮಗೆ ಬರಬಹುದು? ಅಂದು ಬಿಟ್ಟರು ಶ್ರೀಧರಣ್ಣ. ನಮಗೆಲ್ಲ ಅಚ್ಚರಿ.
ಇದೇ ರೀತಿ ಸತ್ಯನಾರಾಯಣ ಭವನದ ಗುರು, ತುಂಬ ಸಲ ಗುರು, ಆಟಕ್ಕಿಳಿದ ಸ್ವಲ್ಪ ಹೊತ್ತಿನಲ್ಲೇ ಸ್ಕೋರ್ ಬೋರ್ಡು ಬಂಪರ್ ಷೇರ್ ಮಾರ್ಕೆಟ್ಟಿನ ತರ ಮೇಲೇರಿಬಿಡುತ್ತಿತ್ತು. ಬೌಲಿಂಗ್ ಮಾಡುತ್ತಿರುವವರು ಯಾರು? ಏನು? ಅಂತ ತಲೆಯನ್ನೇ ಕೆಡಿಸಿಕೊಳ್ಳದೇ ಮೈದಾನದ ತುಂಬೆಲ್ಲ ಬೌಂಡರಿ,ಸಿಕ್ಸರುಗಳ ಸುರಿಮಳೆ. ಯೋ, ಅವನನ್ನು ಹೇಗಾದರೂ ಮಾಡಿ ಮೊದಲು ಔಟ್ ಮಾಡ್ರಪ್ಪ, ಇಲ್ಲ ಅಂದರೆ ನಮ್ಮನ್ನೆಲ್ಲ ತಿಂದೇ ಹಾಕಿ ಬಿಡುತ್ತಾನೆ. ದೈತ್ಯ ಅಂತ ಎದುರಾಳಿ ತಂಡದ ಆಟಗಾರರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು.
ಹೀಗೇ ಹೇಳುತ್ತಾ ಹೋದರೆ ಸ್ಪಿನ್ ಬೌಲರ್ ನಾರಾಯಣಪ್ಪ, ಲಕ್ಷ್ನಣ್ ಪಂಡಿತ್, ಯಮ ವೇಗದ ಬೌಲರ್ ಅಮೃತ್ ರಾಸ್ ಹೀಗೆ ಹಲವರು.ಇವರ ಪೈಕಿ ಬಹುತೇಕ ಮಂದಿಗೆ ಸಕಾಲಕ್ಕೆ ಬೆಂಬಲ ಸಿಕ್ಕಿದ್ದರೆ, ಟ್ರೈನಿಂಗು ಕೊಡುವವರು ಅಂತ ಇದ್ದಿದ್ದರೆ ಬಹುತೇಕ ಮಂದಿ ರಣಜಿ ತಂಡದಲ್ಲೋ,ರಾಷ್ಟ್ರೀಯ ತಂಡದಲ್ಲೋ ಆಡುವ ಲಕ್ಕು ಪಡೆದಿರುತ್ತಿದ್ದರು. ಅವರು ಆ ರೀತಿ ಲಕ್ಕು ಪಡೆಯಲಿ,ಬಿಡಲಿ. ಆದರೆ ಅವರೆಲ್ಲ ತಮ್ಮ ಬದುಕಿನ ಮೂಲಕ, ನಡವಳಿಕೆಯ ಮೂಲಕ ಮನುಷ್ಯ ಎಂತಹ ಸಂದರ್ಭದಲ್ಲೂ ಹೇಗೆ ಸಮಚಿತ್ತತೆ ಹೊಂದಿರಬೇಕು?ಅನ್ನುವುದನ್ನು ಪರೋಕ್ಷವಾಗಿ ಹೇಳಿಕೊಟ್ಟರು. ಬದುಕಿನಲ್ಲಿ ಚಿಕ್ಕವರಿದ್ದಾಗ ನಾವು ಎಂತೆಂತವರನ್ನು ನೋಡುತ್ತೇವೆ? ಎಂತೆಂತ ಗುಣದವರನ್ನು ನೋಡುತ್ತೇವೆ? ಎಂಬುದರ ಆಧಾರದ ಮೇಲೆ ಮುಂದೆ ನಮ್ಮ ಮನಸ್ಸು ದೊಡ್ಡ ಮಟ್ಟದಲ್ಲಿ ರೂಪುಗೊಳ್ಳುತ್ತದೆ.
ಎಂತಹ ಸಂದರ್ಭದಲ್ಲೂ ಸಮಚಿತ್ತತೆ ಹೊಂದಿರುತ್ತಿದ್ದ ಇವರೆಲ್ಲ ತಮ್ಮ ಬದುಕಿನ ಮೂಲಕ ನನ್ನಂತವರ ಮೇಲೆ ಬೀರಿದ ಪ್ರಭಾವ ಅಪಾರ. ಮುಂದೆ ನನ್ನ ಬದುಕು ಪತ್ರಿಕೋದ್ಯಮದತ್ತ ಹೊರಳಿಕೊಂಡಿತು. ಈ ಮೂವತ್ತು ವರ್ಷಗಳಲ್ಲಿ ಒಂದರ ಹಿಂದೊಂದರಂತೆ ಯುದ್ಧ ಸ್ವರೂಪಿ ಘಟನೆಗಳಾದವು ಬಿಡಿ.
ಅವುಗಳನ್ನು ಹೇಳುತ್ತಾ ಹೋದರೆ ಅದೇ ದೊಡ್ಡ ಕತೆ. ಇಂತಹ ಸಂಕಷ್ಟದ ಕಾಲವನ್ನು ಎದುರಿಸುವಾಗ ನನಗರಿವಿಲ್ಲದಂತೆಯೇ ಒಂದು ಸಮಚಿತ್ತತೆ ಕೆಲಸ ಮಾಡುತ್ತಿತ್ತು. ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಸಾಕು, ಗೆಲ್ಲಲೇಬೇಕು ಎಂದು ಹೋರಾಡಿದರೆ ಸಾಕು, ಫಲಿತಾಂಶ ಏನೇ ಬರಲಿ. ಅದಕ್ಕಾಗಿ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂಬುದನ್ನು ಅರ್ಥೈಸಿಕೊಳ್ಳಲು ನನಗೆ ನೆರವಾಗಿದ್ದೇ ಬಾಲ್ಯದ ಈ ನೆನಪುಗಳು.
ಈಗ ರಾಜಕೀಯದಲ್ಲಿ ಅತ್ಯಂತ ಎತ್ತರಕ್ಕೇರಿದ ಕರ್ನಾಟಕದ ಬಹುತೇಕ ರಾಜಕಾರಣಿಗಳನ್ನು ನಿರಾಯಾಸವಾಗಿ ಸಂಪರ್ಕಿಸುವ,ಸುದ್ದಿಗಾಗಿ ಗಂಟೆಗಟ್ಟಲೆ ಮಾತನಾಡುವ, ಈ ಕೆಲಸ ಮಾಡುವಾಗ ಒಂದಿನಿತೂ ಅಳುಕಿಲ್ಲದಂತೆ ಮಾಡುವ ಮನ:ಸ್ಥಿತಿ ದಕ್ಕಿದ್ದರೆ, ಅದಕ್ಕೆ ಬಾಲ್ಯದ ಈ ನೆನಪುಗಳೂ ಕಾರಣ.ತುಂಬ ಸಲ ಕೆಲವರು, ಈ ಬದುಕಿನಲ್ಲಿ ನನ್ನ ಶ್ರಮದಿಂದಲೇ ನಾನು ಮೇಲೆದ್ದು ಬಂದೆ. ಇದೆಲ್ಲವೂ ನನ್ನದೇ ಶಕ್ತಿಯ ಫಲ ಎನ್ನುತ್ತಿರುತ್ತಾರೆ.
ಆಗೆಲ್ಲ ನನಗೆ ಅಚ್ಚರಿಯಾಗುತ್ತದೆ. ನಿಮಗೆ ಗೊತ್ತಿದ್ದೋ, ಗೊತ್ತಿಲ್ಲದಂತೆಯೋ ನೂರಾರು ಮಂದಿಯ ಪ್ರೇರಣೆ, ಹತ್ತಾರು ಮಂದಿಯ ಶ್ರಮ ನಿಮ್ಮ ಜತೆ ಇರದಿದ್ದರೆ, ನೀವು ಬದುಕಿನಲ್ಲಿ ಯಶಸ್ವಿ ವ್ಯಕ್ತಿಯಾಗಲು ಸಾಧ್ಯವೇ ಇಲ್ಲ. ಯಾಕೆಂದರೆ ನಾವು ಎಲ್ಲವನ್ನೂ ಈ ಬದುಕಿನಿಂದಲೇ ಪಡೆದಿರುತ್ತೇವೆ. ಯಶಸ್ಸನ್ನು ಕೂಡಾ. ಹೀಗಾಗಿ ಅದಕ್ಕೆ ಹಲವರ ನಿಸ್ವಾರ್ಥ ಬೆಂಬಲ ಕೆಲಸ ಮಾಡಿರುತ್ತದೆ.
ಇದೆಲ್ಲ ಯಾಕೆ ನೆನಪಿಗೆ ಬಂತೆಂದರೆ ಮೊನ್ನೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಮಾತನಾಡುತ್ತಿದ್ದೆ. ನಾನು ನೋಡಿದಂತೆ ಯಾವುದಕ್ಕೂ ಹೆದರದ, ಅಪಾರ ಧೈರ್ಯದ, ಬೆಟ್ಟವನ್ನೇ ಗುದ್ದಿ ಪುಡಿ ಮಾಡುವಂತಹ ವ್ಯಕ್ತಿತ್ವದವರು ಕುಮಾರಸ್ವಾಮಿ.
ತುಂಬ ಸಲ ಅವರು ಹೇಳುತ್ತಿರುತ್ತಾರೆ. ನಾವಿಲ್ಲಿಯ ತನಕ ಬರಲು ನೂರಾರು ಮಂದಿ ಕಾರಣರಾಗಿರುತ್ತಾರೆ ವಿಠ್ಢಲಮೂರ್ತಿ.ಎಲ್ಲರ ಋಣ ತೀರಿಸುವುದು ಆಗದ ಮಾತು.ಆದರೆ ಅವರು ಸದಾ ಸ್ಮರಣೀಯರು. ಎಲ್ಲಿಯ ತನಕ ಇದನ್ನು ಗಮನದಲ್ಲಿಟ್ಟುಕೊಂಡಿರುತ್ತೇವೋ ?ಅಲ್ಲಿಯ ತನಕ ನಾವು ಏನನ್ನು ಬೇಕಾದರೂ ಎದುರಿಸಬಹುದು. ಯಾವಾಗ ಅದನ್ನು ಮರೆಯುತ್ತೀವೋ? ಆಗ ದೇವರೂ ನಮ್ಮ ಸಹಾಯಕ್ಕೆ ಬರುವುದಿಲ್ಲ ಎನ್ನುತ್ತಿರುತ್ತಾರೆ
ಎಷ್ಟು ನಿಜವಲ್ಲವೇ?

LEAVE A REPLY

Please enter your comment!
Please enter your name here