ಕಾವೇರಿ ಮತ ಬ್ಯಾಂಕಿಗೆ ಕೈ ಹಾಕಿದ ಕೈ ಸೇನೆ

0
71

ಇದು ವೀರೇಂದ್ರಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಘಟನೆ.
ಆ ಸಂದರ್ಭದಲ್ಲಿ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕೋರಲು ಅಲ್ಲಿನ ಸಚಿವರೊಬ್ಬರು ಬೆಂಗಳೂರಿಗೆ ಬಂದರು.
ವಸ್ತುಸ್ಥಿತಿ ಎಂದರೆ ಕಾವೇರಿ ನದಿ ನೀರಿನ ವಿಷಯದಲ್ಲಿ ಕರ್ನಾಟಕ-ತಮಿಳುನಾಡು ರಾಜ್ಯಗಳ ಮಧ್ಯೆ ಏನೇ ಭಿನ್ನಾಭಿಪ್ರಾಯವಿದ್ದರೂ 1989 ರ ತನಕ ಪರಸ್ಪರ ಮಾತುಕತೆಯ ಮೂಲಕವೇ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಕೆಲಸ ನಡೆಯುತ್ತಿತ್ತು.
ಕರ್ನಾಟಕದಿಂದ ತಮಿಳುನಾಡಿಗೆ ಇಂತಿಷ್ಟು ಪ್ರಮಾಣದ ನೀರನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಕೋರುವುದು,ಮತ್ತು ಅದಕ್ಕೆ ಪ್ರತಿಯಾಗಿ ಇಂತಿಷ್ಟು ನೀರನ್ನು ನಾವು ಕೊಡುತ್ತೇವೆ ಎಂದು ಕರ್ನಾಟಕ ಹೇಳುವುದು ನಡೆದುಕೊಂಡು ಬಂದಿತ್ತು.
ಇದೇ ರೀತಿ 1989 ರಲ್ಲಿ ವೀರೇಂದ್ರಪಾಟೀಲರ ನೇತೃತ್ವದ ಕಾಂಗ್ರೆಸ್‌ ಇಲ್ಲಿ ಅಧಿಕಾರ ಹಿಡಿದ ಶುರುವಿನಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ.ಕರುಣಾನಿಧಿ ಅವರು ತಮ್ಮ ಸಂಪುಟದ ಸಚಿವರೊಬ್ಬರನ್ನು ಮಾತುಕತೆಗಾಗಿ ಕರ್ನಾಟಕಕ್ಕೆ ಕಳಿಸಿದರು.
ಅವರು ಹೀಗೆ ಬರುವ ಕಾಲದಲ್ಲಿ ಮುಖ್ಯಮಂತ್ರಿ ವೀರೇಂದ್ರಪಾಟೀಲರು ಪ್ರವಾಸದಲ್ಲಿದ್ದರು.ಹೀಗಾಗಿ ತಮ್ಮ ಗೈರು ಹಾಜರಿಯಲ್ಲಿ ತಮಿಳುನಾಡಿನ ಸಚಿವರ ಜತೆ ಮಾತುಕತೆ ನಡೆಸಿ ವಿಷಯ ಇತ್ಯರ್ಥ ಮಾಡುವಂತೆ ತಮ್ಮ ಸಂಪುಟದ ಹಿರಿಯ ಸಚಿವರೊಬ್ಬರಿಗೆ ಅವರು ಸೂಚನೆ ನೀಡಿದ್ದರು.
ಆದರೆ ತಮಿಳುನಾಡಿನಿಂದ ಬಂದ ಸಚಿವರು ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಕಾದಿದ್ದೇ ಬಂತು.ದಿನ ಕಳೆದರೂ ಅವರ ಜತೆ ಮಾತುಕತೆ ನಡೆಸಲು ಕರ್ನಾಟಕದ ಆ ಸಚಿವರು ಹೋಗಲಿಲ್ಲ.
ಈ ಬೆಳವಣಿಗೆ ಸಹಜವಾಗಿಯೇ ತಮಿಳುನಾಡಿನ ಮುಖ್ಯಮಂತ್ರಿ‌ ಕರುಣಾನಿಧಿಯವರ ಆಕ್ರೋಶಕ್ಕೆ ಕಾರಣವಾಯಿತು.ಮಾತುಕತೆಗೆ ಎಂದು ಹೋದರೂ ಅವರನ್ನು ಭೇಟಿ ಮಾಡುವ ಸೌಜನ್ಯವನ್ನು ಕರ್ನಾಟಕ ಸರ್ಕಾರ ತೋರಲಿಲ್ಲ ಎಂದು ಸಿಟ್ಟಿಗೆದ್ದ ಅವರು ಕಾವೇರಿ ನ್ಯಾಯಮಂಡಳಿಯ ರಚನೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರು.
ಅಷ್ಟೊತ್ತಿಗಾಗಲೇ ಕೇಂದ್ರದಲ್ಲಿ ವಿ.ಪಿ.ಸಿಂಗ್‌ ನೇತೃತ್ವದ ಸರ್ಕಾರ ರಚನೆಯಾಗಿತ್ತು.ಮತ್ತು ಈ ಸರ್ಕಾರಕ್ಕೆ ಕರುಣಾನಿಧಿ ನೇತೃತ್ವದ ಡಿ.ಎಂ.ಕೆ ಬೆಂಬಲ ನೀಡಿತ್ತು.
ಹೀಗೆ ಸರ್ಕಾರದ ಭಾಗವಾಗಿದ್ದ ಡಿಎಂಕೆ ಕಾವೇರಿ ನ್ಯಾಯಮಂಡಳಿಯನ್ನು ರಚಿಸುವಂತೆ ಒತ್ತಡ ಹೇರಿದಾಗ ಅದನ್ನು ತಡೆಗಟ್ಟುವ ಶಕ್ತಿ ಯಾರಿಗೂ ಇರಲಿಲ್ಲ.ಪರಿಣಾಮ?ಕರ್ನಾಟಕ ಮತ್ತು ತಮಿಳುನಾಡಿನ ನಡುವಣ ಕಾವೇರಿ ನದಿ ನೀರಿನ ವಿವಾದವನ್ನು ಬಗೆಹರಿಸಲು ಕಾವೇರಿ ನ್ಯಾಯಮಂಡಳಿ ವಿದ್ಯುಕ್ತವಾಗಿ ರಚನೆಯಾಯಿತು.
ಮುಂದೆ ನ್ಯಾಯಮಂಡಳಿ 1992 ರಲ್ಲಿ ಮಧ್ಯಂತರ ಆದೇಶ ನೀಡಿ:ಕಾವೇರಿಯಿಂದ ತಮಿಳುನಾಡಿಗೆ ಪ್ರತಿವರ್ಷ 205 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಆದೇಶ ನೀಡಿದಾಗ ಮುಖ್ಯಮಂತ್ರಿ ಬಂಗಾರಪ್ಪ ಸಿಡಿದು ಬಿದ್ದರು.
ನ್ಯಾಯಮಂಡಳಿಯ ಆದೇಶದನುಸಾರ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದವರು ಅಬ್ಬರಿಸಿದ್ದಷ್ಟೇ ಅಲ್ಲ,ಇದರ ವಿರುದ್ಧ ಗೆಜೆಟ್‌ ಅಧಿಸೂಚನೆ ಹೊರಡಿಸಿದರು.ಆ ಸಂದರ್ಭದಲ್ಲಿ ನಡೆದ ಗಲಭೆಯನ್ನು ಇಡೀ ದೇಶವೇ ಧಿಗ್ಭ್ರಮೆಯಿಂದ ನೋಡಿತು.
ಹೀಗೆ ಕಾವೇರಿ ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಕರ್ನಾಟಕ ತಿರುಗಿ ಬಿದ್ದ ಬೆಳವಣಿಗೆಯಿಂದ ತುಂಬ ಮುಜುಗರಕ್ಕೀಡಾದವರು ಅಂದಿನ ಪ್ರಧಾನಮಂತ್ರಿ ಪಿ.ವಿ.ನರಸಿಂಹರಾವ್.‌
ಹೀಗೆ ವಿವಾದಕ್ಕೆ ಸಿಲುಕಿದ ಕಾವೇರಿ ನದಿ ನೀರಿನ ವಿಷಯದಲ್ಲಿ ತುಂಬ ಪರಿಣಾಮಕಾರಿಯಾಗಿ ಹೋರಾಡಿದ ಕರ್ನಾಟಕದ ನಾಯಕರು ಎಂದರೆ ಹೆಚ್.ಡಿ.ದೇವೇಗೌಡ.
ವಸ್ತುಸ್ಥಿತಿ ಎಂದರೆ ಕಾವೇರಿ ನದಿ ನೀರಿನ ವಿಷಯವನ್ನು ಮುಂದಿಟ್ಟುಕೊಂಡು ಪರಿಣಾಮಕಾರಿ ಹೋರಾಟಗಳನ್ನು ಮಾಡಿದವರ ಸಾಲಿನಲ್ಲಿ ದೇವೇಗೌಡರ ಹೆಸರೇ ನಂಬರ್‌ ಒನ್.‌
ಕಾವೇರಿ ನ್ಯಾಯಮಂಡಳಿ ರಚನೆಯಾದಾಗ,ಅದು ಮಧ್ಯಂತರ ಆದೇಶ ನೀಡಿದಾಗ ಸಮರ್ಥವಾಗಿ ಕರ್ನಾಟಕದ ವಾದವನ್ನು ಎತ್ತಿ ಹಿಡಿದಿದ್ದ ದೇವೇಗೌಡರೇ ಮುಂದೆ 1994 ರಲ್ಲಿ ಮುಖ್ಯಮಂತ್ರಿಯಾದರು.
ಆ ಸಂದರ್ಭದಲ್ಲಿ ಕಾವೇರಿಯಿಂದ ತನಗೆ ಸಮರ್ಪಕ ಪ್ರಮಾಣದ ನೀರನ್ನು ಕರ್ನಾಟಕ ಬಿಡುಗಡೆ ಮಾಡುತ್ತಿಲ್ಲ ಎಂದು ತಮಿಳುನಾಡು ತಕರಾರು ಎತ್ತಿದಾಗ ಮುಖ್ಯಮಂತ್ರಿ ದೇವೇಗೌಡರು ತಿರುಗಿಬಿದ್ದರು.
ಅಷ್ಟೇ ಅಲ್ಲ,ಗುಪ್ತವಾಗಿ ಒಂದು ತಂಡವನ್ನು ತಮಿಳುನಾಡಿನ ಕಾವೇರಿ ಜಲಾನಯನ ಪಾತ್ರಕ್ಕೆ ಕಳುಹಿಸಿ,ಅಲ್ಲಿನ ಮೆಟ್ಟೂರು ಆಣೆಕಟ್ಟೆಯಿಂದ ಹಿಡಿದು ವಿವಿಧ ಆಣೆಕಟ್ಟುಗಳಲ್ಲಿ ಸಂಗ್ರಹವಿರುವ ನೀರು ಎಷ್ಟು?ಎಂಬ ವಿಡಿಯೋ ವಿವರಗಳನ್ನು ಸಂಗ್ರಹಿಸಿ ದೇಶದ ಮುಂದಿಟ್ಟರು.
ವಾಸ್ತವವಾಗಿ ತಮಿಳು ನಾಡು ಕರ್ನಾಟಕದಿಂದ ನೀರು ಬಯಸುವಾಗ ತನ್ನ ಆಣೆಕಟ್ಟುಗಳಲ್ಲಿ ಎಷ್ಟು ನೀರಿನ ಕೊರತೆ ಇದೆ ಎಂದು ಹೇಳಿತ್ತೋ?ಅದು ವಾಸ್ತವಾಂಶಕ್ಕೆ ವಿರೋಧವಾಗಿತ್ತು.ಹಾಗೆಯೇ ತಮಿಳುನಾಡಿನ ರೈತರಿಗೆ ಕೊರತೆ ಇಲ್ಲದಷ್ಟು ನೀರು ಅದರ ಸಂಗ್ರಹದಲ್ಲಿತ್ತು.
ಆದರೆ ಯಾವಾಗ ದೇವೇಗೌಡರು ವಸ್ತುಸ್ಥಿತಿಯನ್ನು ದೇಶದ ಮುಂದಿಟ್ಟರೋ?ಆಗ ಮೊಟ್ಟ ಮೊದಲ ಬಾರಿ ತಮಿಳುನಾಡಿನ ಆರ್ಭಟ ಕಡಿಮೆಯಾಯಿತು.ದೇಶದ ಮುಂದೆ ಕರ್ನಾಟಕವನ್ನು ವಿಲನ್‌ ಮಾಡುವ ಅದರ ಧೋರಣೆಗೆ ಕೊಂಚ ಹಿನ್ನಡೆಯಾಯಿತು.
ಹೀಗೆ ಕಾವೇರಿ ನದಿ ನೀರಿನ ವಿಷಯದಲ್ಲಿ ಕರ್ನಾಟಕದ ವಾದವನ್ನು ತುಂಬ ಪರಿಣಾಮಕಾರಿಯಾಗಿ ದೇಶದ ಮುಂದಿಟ್ಟ ದೇವೇಗೌಡರೇ 1996 ರಲ್ಲಿ ದೇಶದ ಪ್ರಧಾನಿಯಾದರು.
ಈ ಸಂದರ್ಭದಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ಒಂಭತ್ತು ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂಬ ಸೂಚನೆ ಹೊರಬಿದ್ದಾಗ ಆ ವಿಷಯ ಕರ್ನಾಟಕದ ವಿರೋಧಕ್ಕೆ ಕಾರಣವಾಯಿತು.
ಹೀಗಾಗಿ ಅವತ್ತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಗೆ ಆಗಮಿಸಿದ ಪ್ರಧಾನಮಂತ್ರಿ ದೇವೇಗೌಡರು:ಸರ್ಕಾರ ಮತ್ತು ಪ್ರತಿಪಕ್ಷಗಳ ಮನ ಒಲಿಸಿದರು.ಆ ಮೂಲಕ ಕರ್ನಾಟಕದ ಇಚ್ಚೆಗೆ ವಿರುದ್ಧವಾಗಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿಸಿದರು.
ಈ ಕುರಿತು ಕೇಳಿದರೆ:ಒಬ್ಬ ಮುಖ್ಯಮಂತ್ರಿಯಾಗಿ ನಾನು ಕರ್ನಾಟಕದ ಪರ ನಿಲ್ಲುವುದು ಬೇರೆ,ಆದರೆ ಒಕ್ಕೂಟ ವ್ಯವಸ್ಥೆಯ ಪ್ರಧಾನಿಯಾಗಿ ಆ ರೀತಿ ನಿಲ್ಲುವುದು ಕಷ್ಟ ಎಂದು ಆಪ್ತರ ಬಳಿ ಹೇಳಿಕೊಂಡರು.
ಈ ಎಲ್ಲದರ ನಡುವೆಯೂ ಕಾವೇರಿ ನದಿ ನೀರಿನ ವಿಷಯದಲ್ಲಿ ದೇವೇಗೌಡರ ಹೋರಾಟ ಎಷ್ಟು ಪರಿಣಾಮಕಾರಿಯೋ?ಅದೇ ರೀತಿ ಕಾವೇರಿಯಿಂದ ರಾಜಕೀಯ ಲಾಭ ಪಡೆದವರಲ್ಲಿಯೂ ದೇವೇಗೌಡರೇ ನಂಬರ್‌ ಒನ್.‌
ಇವತ್ತಿಗೂ ಅವರ ಪಕ್ಷ ಜೆಡಿಎಸ್‌ಗೆ ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಗಟ್ಟಿಯಾದ ತಳಪಾಯ ಇದ್ದರೆ ಅದಕ್ಕೆ ಇದೂ ಮುಖ್ಯ ಕಾರಣ.ಒಕ್ಕಲಿಗ ಮತ ಬ್ಯಾಂಕ್‌ನ ಆಶೀರ್ವಾದ ಹೇಗೆ ಅವರಿಗೆ ಸಿಕ್ಕಿದೆಯೋ?ಅದೇ ರೀತಿ ಕಾವೇರಿ ನದಿ ಪಾತ್ರದ ಎಲ್ಲ ಜನರ ಶಕ್ತಿಯೂ ಅವರ ಬೆನ್ನಿಗೆ ನಿಂತಿದೆ.
ಆದರೆ ಸದಾಕಾಲ ದೇವೇಗೌಡರೊಬ್ಬರಿಗೇ ರಾಜಕೀಯ ನೆರವು ನೀಡಿದ ಕಾವೇರಿ ನದಿ ವಿವಾದವನ್ನು ಈ ಬಾರಿ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್‌ ಹೊರಟಿದೆ.ಅದರಲ್ಲೂ ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದರ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ.
ಅಂದ ಹಾಗೆ ಕಾಂಗ್ರೆಸ್‌ ಪಕ್ಷದ ಮೇಕೆದಾಟು ಪಾದಯಾತ್ರೆ ಬಹಿರಂಗವಾಗಿ ಯಾವ ಮಟ್ಟದಲ್ಲಿ ಯಶಸ್ಸು ಪಡೆಯುತ್ತದೆ ಎಂಬುದು ಬೇರೆ ವಿಷಯ.ಆದರೆ ಇಷ್ಟಾದರೂ ಆಂತರಿಕವಾಗಿ ಮೇಕೆದಾಟು ಯೋಜನೆಯ ವಿಷಯದಲ್ಲಿ ಅದು ನಿಂತ ಪರಿ ಅದಕ್ಕೆ ಒಂದಷ್ಟು ಲಾಭ ತಂದುಕೊಡುವುದು ನಿಜ.
ಯಾಕೆಂದರೆ ಮೇಕೆದಾಟು ಯೋಜನೆ ಏನಿದೆ?ಈ ಯೋಜನೆಯ ಡಿಪಿಆರ್‌ ತಯಾರಿಸಿದ್ದು ಈ ಹಿಂದೆ ಇದ್ದ ಸಿದ್ಧರಾಮಯ್ಯ ಅವರ ಸರ್ಕಾರ.ಆದರೆ ಅದು ಡಿಪಿಆರ್‌ ತಯಾರಿಸಲು ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸಿತು.ಮತ್ತು ಅದರ ಪ್ರತಿಫಲವಾಗಿ ಈ ಯೋಜನೆಯ ಜಾರಿ ವಿಳಂಬವಾಯಿತು ಎಂಬುದು ಹಾಲಿ ಬಿಜೆಪಿ ಸರ್ಕಾರದ ವಾದ.
ಆದರೆ ಅದರ ವಾದ ಏನೇ ಇದ್ದರೂ ಹೊಡೆತ ಬೀಳುವುದು ಮಾತ್ರ ಬಿಜೆಪಿಗೇ.ಯಾಕೆಂದರೆ ಮೇಕೆದಾಟು ಯೋಜನೆಯ ಡಿಪಿಆರ್‌ ತಯಾರಿಸಲು ಸಿದ್ಧರಾಮಯ್ಯ ಅವರ ಸರ್ಕಾರ ವಿಳಂಬ ಧೋರಣೆ ಮಾಡಿದ್ದು ನಿಜ ಎಂದೇ ಇಟ್ಟುಕೊಳ್ಳೋಣ.
ಆದರೆ ಹೀಗೆ ಡಿಪಿಆರ್‌ ತಯಾರಿಸಿ ಅದನ್ನು ಜಲ ಆಯೋಗಕ್ಕೆ ಸಲ್ಲಿಸಿ ಮೂರು ವರ್ಷಗಳೇ ಕಳೆದಿವೆಯಲ್ಲ?ಈ ಮೂರು ವರ್ಷಗಳಲ್ಲಿ ಅದನ್ನು ಒಪ್ಪಲು,ಮುಂದಡಿ ಇಡುವಂತೆ ಕರ್ನಾಟಕಕ್ಕೆ ಸೂಚಿಸಲು ಅದರಿಂದೇಕೆ ಆಗಲಿಲ್ಲ?
ಅರ್ಥಾತ್‌,ಕೇಂದ್ರದ ಬಿಜೆಪಿ ಸರ್ಕಾರ ತಮಿಳುನಾಡಿನ ರಾಜಕೀಯದಲ್ಲಿ ಮಿತಿ ಮೀರಿದ ಆಸಕ್ತಿ ಹೊಂದಿದೆ.ಜಯಲಲಿತಾ ನಿರ್ಗಮನದ ನಂತರ ತಮಿಳುನಾಡಿನಲ್ಲಿ ರಾಜಕೀಯ ನೆಲೆಗಟ್ಟನ್ನು ಭದ್ರಪಡಿಸಿಕೊಳ್ಳಲು ಅದು ಹವಣಿಸುತ್ತಲೇ ಇದೆ.
ತಕ್ಷಣಕ್ಕೆ ಅದು ಸಾಧ್ಯವಾಗದೇ ಇರಬಹುದು,ಆದರೆ 2024 ರ ವೇಳೆಗೆ ಅಲ್ಲವಾದರೂ 2029 ರ ವೇಳೆಗಾದರೂ ತಮಿಳುನಾಡಿನಲ್ಲಿ ತನ್ನ ರಾಜಕೀಯ ಬೆಳೆ ಕಟಾವಿಗೆ ತಮಿಳು ನಡು ಎಂದು ಅದು ಲೆಕ್ಕ ಹಾಕಿದೆ.
ಇದೇ ಕಾರಣಕ್ಕಾಗಿ ಅದು ತಮಿಳುನಾಡಿನ ಇಚ್ಚೆಯ ವಿರುದ್ಧ ಹೆಜ್ಜೆ ಇಡುವ ಆಸಕ್ತಿ ತೋರುತ್ತಿಲ್ಲ.ಹೀಗಾಗಿ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವ ವಿಷಯದಲ್ಲಿ ತಮಿಳುನಾಡಿನ ಮನ ಒಲಿಸಿ ಎಂದು ಕರ್ನಾಟಕಕ್ಕೆ ಸಲಹೆ ನೀಡುವ ಕೆಲಸ ಮಾಡುತ್ತಾ ಬಂದಿದೆ.
ಅಂದ ಹಾಗೆ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಪ್ರಕಟವಾಗಿ ಹಲವು ವರ್ಷಗಳು ಕಳೆದಿವೆ.ಅಂದರೆ?ಕಾವೇರಿ ನದಿಯಲ್ಲಿ ಲಭ್ಯವಾಗುವ ನೀರಿನ ಪೈಕಿ ಕರ್ನಾಟಕದ ನೀರಿನ ಪಾಲು ಎಷ್ಟು ಅನ್ನುವುದು ಸ್ಪಷ್ಟವಾಗಿದೆ.
ಅದರ ವ್ಯಾಪ್ತಿಯಲ್ಲಿ ಕರ್ನಾಟಕ ಜಾರಿಗೊಳಿಸಲು ಉದ್ದೇಶಿಸಿರುವ ಮೇಕೆದಾಟು ಯೋಜನೆಯಲ್ಲಿ ಯಾವ ದೋಷವೂ ಇಲ್ಲ,ಅದನ್ನು ವಿರೋಧಿಸಲು ತಮಿಳುನಾಡಿಗೆ ಕಾರಣವೂ ಇಲ್ಲ.
ಇಷ್ಟಾದರೂ ಅದು ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ.ಮತ್ತು ಈ ವಿರೋಧವನ್ನು ಮುಖ್ಯವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಕೂಡಾ ತಾರಮ್ಮಯ್ಯ ಆಡುತ್ತಾ ವಿಷಯ ವಿಳಂಬವಾಗುವಂತೆ ನೋಡಿಕೊಳ್ಳುತ್ತಿದೆ.
ಅಂದ ಹಾಗೆ ಕಾವೇರಿ ನದಿ ನೀರಿನ ವಿಷಯದಲ್ಲಿ ಅಂದಿನ ಮೈಸೂರು ಮತ್ತು ಮದ್ರಾಸ್‌ ಸರ್ಕಾರಗಳ ಮಧ್ಯೆ 1924 ರಲ್ಲಿ ಒಂದು ಒಪ್ಪಂದವಾಯಿತಲ್ಲ?ಆ ಒಪ್ಪಂದದಲ್ಲಿ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ತಮಿಳುನಾಡು ಒಪ್ಪಿಗೆ ನೀಡಿದೆ.
ಈ ವಿಷಯವನ್ನು ಕರ್ನಾಟಕ ಪರಿಣಾಮಕಾರಿಯಾಗಿ ಸುಪ್ರೀಂಕೋರ್ಟ್‌ ಮುಂದೆ ವಾದಿಸಿಲ್ಲ ಎಂಬುದು ಹೌದಾದರೂ,ಕಾವೇರಿ ನ್ಯಾಯಮಂಡಳಿಯ ತೀರ್ಪು ಪ್ರಕಟವಾದ ಮೇಲೆ ಮತ್ತು ಅದರಲ್ಲಿ ಕರ್ನಾಟಕದ ನೀರಿನ ಪಾಲು ಎಷ್ಟು ಎಂಬುದು ನಿಗದಿಯಾದ ಮೇಲೆ ತಮಿಳುನಾಡು ವಿರೋಧಿಸುವುದಲ್ಲಿ ಅರ್ಥವಿಲ್ಲ ಎಂದು ಕೇಂದ್ರದ ಜಲ ಆಯೋಗ ಯಾವತ್ತೋ ಹೇಳಬೇಕಿತ್ತು.
ಆದರೆ ಆ ಕೆಲಸವಾಗಿಲ್ಲ.ಯಾಕೆ ಆಗಿಲ್ಲ ಎಂಬುದು ರಹಸ್ಯವೇನಲ್ಲ.ರಾಜಕೀಯ ಇಚ್ಚಾಶಕ್ತಿ ಎಂಬುದು ತಮಿಳುನಾಡಿನ ಕಡೆಗಿದ್ದಾಗ ಕರ್ನಾಟಕದ ಹೆಜ್ಜೆಗೆ ತಡೆ ಹಾಕುವುದು ಕೇಂದ್ರಕ್ಕೆ ಅನಿವಾರ್ಯ.
ಹೀಗಾಗಿ ಮೇಕೆದಾಟು ಯೋಜನೆಯ ವಿಳಂಬದ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷದ ಮೇಲೆ ಬಿಜೆಪಿ ಸರ್ಕಾರ ಅದೇನೇ ಗೂಬೆ ಕೂರಿಸಲಿ.ಆದರೆ ಅಂತಿಮವಾಗಿ ಅದು ತಿರುಗು ಬಾಣವಾಗುವುದು ಬಿಜೆಪಿಗೇ.
ಹೀಗೆ ಹಲವು ದಶಕಗಳ ಕಾಲ ದೇವೇಗೌಡರಿಗೆ ರಾಜಕೀಯ ಲಾಭ ತಂದುಕೊಡುತ್ತಿದ್ದ ಕಾವೇರಿ ನದಿ ನೀರಿನ ವಿಷಯವನ್ನು ಹಿಡಿದುಕೊಂಡು ಲಾಭ ಗಳಿಸಲು ಈಗ ಕಾಂಗ್ರೆಸ್‌ ಹೊರಟಿದೆ.
ಒಕ್ಕಲಿಗ ಮತಬ್ಯಾಂಕ್‌ ಜೆಡಿಎಸ್‌ ಪಕ್ಷದಿಂದ ಪಲ್ಲಟಗೊಳುತ್ತಿರುವ ಈ ಕಾಲಘಟ್ಟದಲ್ಲಿ ಅದರ ಈ ಹೋರಾಟ ನಿಶ್ಚಿತವಾಗಿ ಅದಕ್ಕೆ ಲಾಭವನ್ನೂ ತಂದುಕೊಡಲಿದೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here