ಡಿಕೆ ” ಮೇಕೆ” ಅಬ್ಬರ; ಲಿಂಗಾಯತರ ಮಹಾವಲಸೆಗೆ ಹಾಕುವುದೇ ಬ್ರೇಕ್!?

0
87

ಹುಳ್ಳಿಪ್ರಕಾಶ,
ಸಂಪಾದಕರು.
ಬಳ್ಳಾರಿ ಸುನಾಮಿ ಪತ್ರಿಕೆ.
9448234961

ಮೇಕೆದಾಟು ಪಾದಯಾತ್ರೆ ಸ್ಥಗಿತಗೊಂಡಿದೆ.
ಆದರೇ, ಈ ಯಾತ್ರೆಯ ಹೆಸರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ ಅಬ್ಬರಿಸಿ, ಬೊಬ್ಬಿರಿದ ಪರಿ ಮತ್ತು ಮಾಧ್ಯಮಗಳಲ್ಲಿ ಪಡೆದುಕೊಂಡ ಮೈಲೇಜ್ ಗಳನ್ನು ನೋಡುತ್ತಿದ್ದರೇ, ಮಾಜಿ ಸಿಎಂ ಸಿದ್ದರಾಮಯ್ಯ ಸಹಿತ ಕೈ ಪಕ್ಷದ ಘಟಾನುಘಟಿ ನಾಯಕರೆಲ್ಲರನ್ನೂ ಒಂದೇ ಏಟಿಗೆ ಸೈಡ್ ಗೆ ತಳ್ಳಿ, ಪಕ್ಷದಲ್ಲಿ ಡಿಕೆಶಿ ನಂಬರ್ ಸ್ಥಾನವನ್ನು ಅತಿ ಕ್ರಮಿಸಿರುವುದಂತು ದಿಟ.

ಚುನಾವಣೆಯ ಹೊಸ್ತಲಿನಲ್ಲಿರುವಾಗಲೇ ಪಾದಯಾತ್ರೆ ನೆಪದಲ್ಲಿ ಆಗುತ್ತಿರುವ ಈ ಬೆಳವಣಿಗೆಗಳು ಬಹುಮುಖ್ಯವಾಗಿ ವೀರಶೈವ ಸಮುದಾಯದಲ್ಲಿ ತಲ್ಲಣವನ್ನುಂಟು ಮಾಡಿದೆ. ಏಕೆಂದರೆ, ಬಿಜೆಪಿ ತೊರೆದು ಕೈನತ್ತ ಮಹಾ ವಲಸೆ ಹೋಗಿ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಜಾತಿ ಕಾರ್ಡ್ ಪ್ಲೆ ಮಾಡಿ ಜನಾಂಗಕ್ಕೆ ಸಿಎಂ ಹುದ್ದೆಯನ್ನು ಗಿಟ್ಟಿಸಿಕೊಳ್ಳುವ ಮಹಾದಾಸೆ ಕರ್ನಾಟಕದ ವೀರಶೈವರದ್ದಾಗಿತ್ತು. ಆದರೆ, ಮೇಕೆದಾಟು ಪಾದಯಾತ್ರೆಯುದ್ದಕ್ಕೂ ಡಿಕೆ ಶಿವಕುಮಾರವರ ಬಾಡಿಲಾಂಗ್ವೇಜ್, ಅವರ ನೋಟಗಳು, ನಾನೇ ಸಿಎಂ ಎನ್ನುವ ರೀತಿಯ ಅವರ ಶೈಲಿಗಳು ಲಿಂಗಾಯತರು ಕೈನತ್ತ ಮಹಾವಲಸೆ ಆರಂಭಿಸುವ ಕಾರ್ಯಕ್ಕೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಹಾಕಿಸಲಿವೆ ಎನ್ನುವುದು ಈ ಹೊತ್ತಿನ ಕರ್ನಾಟಕ ರಾಜಕಾರಣದ ವರ್ತಮಾನದ ವಿಶ್ಲೇಷಣೆಯು ಹೌದಾಗಿದೆ.

ಆಗೇನೆ ಎರಡನೇ ಸಲ ಸಿಎಂ ಆಗಿ, ದೇವರಾಜ ಅರಸು ದಾಖಲೆ ಸರಿಗಟ್ಟಲು ಜಮೀರ್, ಹಿಟ್ನಾಳ್, ಭೈರತಿ ಸುರೇಶ ರಂತಹ ಶಾಸಕರ ಮೂಲಕ ಮುಂದಿನ ಸಿಎಂ ಸಿದ್ದರಾಮಯ್ಯ ಎನ್ನುವ ಕೂಗನ್ನು ಹುಟ್ಟಹಾಕಿಸಿ ಸರದಿಯಲ್ಲಿ ನಿಂತವರೇ ಸಿದ್ದರಾಮಯ್ಯ. ಮೇಕೆದಾಟು ಡಿಕೆ ಎಫೆಕ್ಟ್ ನನಗೂ ಕಾಡಿದರೇ!? ಎನ್ನುವ ಆತಂಕದ ತಳಮಳ,ತಲ್ಲಣಗಳ ಮಹಾ ಸಂಘರ್ಷವೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯರ ಒಡಲಾಳದಲ್ಲಿ ಈಗಾಗಲೇ ಶುರುವಾಗಿರಲೂ ಬಹುದು.

ಬಹುಮುಖ್ಯವಾಗಿ ವೀರಶೈವ ಲಿಂಗಾಯತ ಸಮುದಾಯದಲ್ಲಿ ರಾಜಕೀಯ ತಲ್ಲಣಗಳು ಜೋರಾಗಿವೆ. ಇದಕ್ಕೂ ಬಲವಾದಕಾರಣಗಳು ಇವೆ.
ಏಕೆಂದರೆ ಈ ಸಮುದಾಯದ ನಾಯಕ ಬಿಎಸ್.ಯಡಿಯೂರಪ್ಪ ಬಿಜೆಪಿಯಲ್ಲಿ ಅವಗಣನೆಯ ಗೂಡಿಗೆ ತಳ್ಳಲ್ಪಟ್ಟಿದ್ದಾರೆ. ಆ ಬಳಿಕ ಬಹು ದೊಡ್ಡ ಸ್ತರದಲ್ಲಿಯೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದತ್ತ ಮಹಾ ವಲಸೆ ಆರಂಭಿಸಬೇಕೆನ್ನುವ ಚಿಂತನೆಗಳು ಆ ಜನಾಂಗದಲ್ಲಿ ಜನ್ಮತಾಳಿದವು. ಕಳೆದೊಂದು ವರ್ಷ ದಿಂದಲೇ ಇದಕ್ಕೆ ಸಂಬಂಧಿಸಿದ್ದಂತೆ ವೀರಶೈವ ಸಮುದಾಯದೊಳಗಡೆ ಚರ್ಚೆಗಳು, ರೂಪರೇಷೆಗಳು ವ್ಯಾಪಕವಾಗಿಯೇ ಸಿದ್ದವಾಗಲಾರಂಭಿಸಿದವು.

ಯಡಿಯೂರಪ್ಪ ಪದಚ್ಯುತಿಬಳಿಕ ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯದಲ್ಲಿ ಆಗುತ್ತಿರುವ ಮಹತ್ತರವಾದ ವಿದ್ಯಮಾನಗಳ ಕುರಿತಂತೆ ಇಂಚಿಂಚನ್ನು ಎಐಸಿಸಿ ಅಧಿನಾಯಕಿ ಗಮನಕ್ಕೆ ತರುವ ಕೆಲಸವನ್ನು ಮಾಡುತ್ತಲೆ ಬಂದಿದ್ರು ವಿಧಾನಪರಿಷತ್ತಿನ ವಿಪಕ್ಷ ನಾಯಕರಾಗಿದ್ದ ಎಸ್ಸಾರ್ ಪಾಟೀಲ್ .

ಎಐಸಿಸಿ ಲಿಂಗಾಯತರತ್ತ ಗಂಭೀರವಾಗಿ ನೋಡಲು ಸಕಾರಣವೂ ಇದೆ.

1990 ರಲ್ಲಿ ವೀರೇಂದ್ರ ಪಾಟೀಲರನ್ನು ಸಿಎಂ ಹುದ್ದೆಯಿಂದ ಕೆಳಗೆ ಇಳಿಸಲಾಯ್ತು. ಆ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಲಿಂಗಾಯತ ಸಮುದಾಯದ ಕಡು ವಿರೋಧಿ ಎನ್ನುವ ಹಣೆಪಟ್ಟಿಯನ್ನು ಕಟ್ಟಿಕೊಳ್ಳುವಂತಾಯ್ತು. ಅಲ್ಲಿಂದ ಈವರೆಗಿನ ತನಕವೂ ಹಳ್ಳಿಗಳಲ್ಲಿ ನಡೆಯುವ ಕೃಷಿ ಸೊಸೈಟಿ ಎಲೇಕ್ಷನ್ ನಿಂದ ಹಿಡಿದು ಲೋಕಸಭೆ ಚುನಾವಣೆ ತನಕವೂ ವೀರಶೈವ ಮತ ಬ್ಯಾಂಕಿನ ಕಡು ಪ್ರತಿರೋಧದ ಕೆನ್ನಾಲಿಗೆ ಕಾಂಗ್ರೆಸ್ ತುತ್ತಾಗುತ್ತಲೆ ಇದೆ.

ವೀರೇಂದ್ರ ಪಾಟೀಲ್ ನಿರ್ಗಮನದ ಬಳಿಕ ವೀರಶೈವ ಸಮುದಾಯ ಬಹುದೊಡ್ಡ ಸ್ತರದಲ್ಲಿಯೇ ಕಾಂಗ್ರೆಸ್ ಪಕ್ಷವನ್ನು ತೊರೆದು ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಇರುವ ತನಕ ಆಗಿನ ಜನತಾದಳ, ನಂತರ ಅವರು ಕಟ್ಟಿದ ಲೋಕಶಕ್ತಿ ಪಕ್ಷಗಳತ್ತ ಮಹಾವಲಸೆ ಬಂತ್ತು. ಬಿಎಸ್.ಯಡಿಯೂರಪ್ಪರನ್ನು ಮುಖ್ಯವಾಹಿನಿಯಲ್ಲಿ ತಂದು ನಿಲ್ಲಿಸುತ್ತಿದ್ದಂತೆಯೇ ಲಿಂಗಾಯತ ಸಮೂಹ ಭಾರೀ ಪ್ರಮಾಣದಲ್ಲಿಯೇ ಕೇಸರಿ ಪಕ್ಷದತ್ತ ಮಹಾವಲಸೆ ಹೊಯ್ತು. ಈ ವಲಸೆಯಿಂದ ಯಡಿಯೂರಪ್ಪಗೂ ಜೊತೆಗೆ ಈ ಬಿಜೆಪಿಗೂ ಅಧಿಕಾರ ಸಿಕ್ತು. ಈ ತನಕವೂ ಅದು ಮುಂದುವರಿದಿದೆ.

ವೀರಶೈವ ಬಲ ಇದ್ದರೇ ಕರ್ನಾಟಕದಲ್ಲಿ ಅಧಿಕಾರವನ್ನು ಶಾಶ್ವತವಾಗಿ ಪಡೆಯಬಹುದು ಎನ್ನುವುದು ಮನವರಿಕೆ ಮತ್ತು ಸಾಬೀತಾದ ಬಳಿಕ ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ ಅವರು ಪಕ್ಷ ದಿಂದ ಕಳಚಿರುವ ಲಿಂಗಾಯತ ಶಕ್ತಿಯನ್ನು ಪುನಃ ಕೈ ಜೋಡಿಸುವ ಕಾರ್ಯಕ್ಕೆ ಇತ್ತಿಚಿನ ದಿನಗಳಲ್ಲಿ ಗಂಭೀರವಾಗಿಯೇ ಕೈ ಹಾಕಿದ್ದಾರೆ ಎನ್ನುವುದು ಎಐಸಿಸಿ ಮತ್ತು ಕೆಪಿಸಿಸಿ ಕಾರಿಡಾರ್ ಗಳಲ್ಲಿ ನಿತ್ಯದ ಚರ್ಚೆ ಕೂಡ.

ಯಡಿಯೂರಪ್ಪ ಪದಚ್ಯುತಿ ಸಿಟ್ಟು ಇನ್ನೂ ಶಮನಗೊಂಡಿಲ್ಲ

ಆದರೆ, ಮೊನ್ನೆ, ಯಡಿಯೂರಪ್ಪರನ್ನು ಇದ್ದಕ್ಕಿದ್ದಂತೆಯೇ ಸಿಎಂ ಕುರ್ಚಿಯಿಂದ ಕೆಳಗಿಳಿಸಿ, ಆ ಹುದ್ದೆ ಮೇಲೆ ಮತ್ತೊಬ್ಬ ಲಿಂಗಾಯತರನ್ನು ಕೂಡಿಸಿದ್ರೂ ಆ ಸಮುದಾಯಕ್ಕೆ ಸಮಾಧಾನವಾಗಿಲ್ಲ. ಏಕೆಂದರೆ, ಯಡಿಯೂರಪ್ಪ ಪ್ರಧಾನಿ ಮೋದಿ, ಷಾರಷ್ಟೇ ಪ್ರಬಲ ನಾಯಕ. ಸಿಎಂ ಹುದ್ದೆಯನ್ನು ಪರಿಪೂರ್ಣವಾಗಿಸಿದರೇ ಅವರು ಬಹು ಎತ್ತರಕ್ಕೆ ಬೆಳೆಯುತ್ತಿದ್ರು. ಇದನ್ನು ಸಹಿಸದೆಯೇ ಅವರನ್ನು ಕೆಳಗಿಳಿಸಲಾಯ್ತು ಎನ್ನುವ ಆಕ್ರೋಶದ ಪರ್ವತಗಳ ಸಾಲು, ಸಾಲುಗಳೇ ಇವತ್ತು ಕರುನಾಡಿನ ಲಿಂಗಾಯತ ಸಮುದಾಯದ ನಡುವೆ ಬೃಹತ್ ಆಕಾರದಲ್ಲಿ ಎದ್ದು ನಿಂತಿವೆ. ಬಿಜೆಪಿ ಕಡೆಗೆ ತಿರುಗಿರುವ ಸಿಟ್ಟು, ಅಸಮಾಧಾನಗಳ ಪ್ರಮಾಣ ಈ ಕ್ಷಣಕ್ಕೂ ತಗ್ಗಿಲ್ಲ ಎನ್ನುವುದಕ್ಕೆ ಹಾನಗಲ್ ಬೈ ಎಲೇಕ್ಷನ್ ನಲ್ಲಿ, ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು ತಾಜಾ ಉದಾಹರಣೆ. ಯಡಿಯೂರಪ್ಪ ಪದಚ್ಯುತಿ ತರುವಾಯ ಲಿಂಗಾಯತ ಸಮುದಾಯದಲ್ಲಿ ಬಿಜೆಪಿ ಕಡೆಗೆ ತೀವ್ರ ಅಸಮಾಧಾನ ಕೇಂದ್ರಿಕೃತವಾಗಿರುವುದು ಖುದ್ದು ಪ್ರಧಾನಿ ಮೋದಿ, ಗೃಹ ಸಚಿವ ಅಮಿಶ್ ಷಾಗೂ ಗೊತ್ತಿರದ ರಹಸ್ಯ ವಿಚಾರವೇನಲ್ಲ.

ಮಠಗಳತ್ತ ಯಾತ್ರೆಗೆ ಎಐಸಿಸಿ ಸೂಚನೆ

ಇದರ ನಡುವೆ, ಉತ್ತರ ಕರ್ನಾಟಕದ ಕೈ ಪಕ್ಷದ ಹಿರಿಯ ನಾಯಕ, ವಿಧಾನಪರಿಷತ್ತಿನ ವಿಪಕ್ಷ ನಾಯಕರಾಗಿದ್ದ ಎಸ್.ಆರ್.ಪಾಟೀಲ್ ರವರಿಗೆ ಮಠಗಳತ್ತ ಯಾತ್ರೆ ಮಾಡುವಂತೆ ಎಐಸಿಸಿ ಕಡೆಯಿಂದ ಕಳೆದ ಅಕ್ಟೋಬರ್ ನಲ್ಲಿ ಸೂಚನೆ ಬಂತ್ತು. ಕರ್ನಾಟಕದಲ್ಲಿರುವ ಎಲ್ಲ ವೀರಶೈವಲಿಂಗಾಯತ ಮಠಗಳತ್ತ ಯಾತ್ರೆ ಮಾಡಿ ಮಠಾಧೀಶರುಗಳನ್ನು ಭೇಟಿ ಮಾಡಿ ಸಿದ್ದರಾಮಯ್ಯರ ಆಡಳಿತಾವಧಿಯಲ್ಲಿ ಆಗಿದ್ದ ವೀರಶೈವ ಪ್ರತ್ಯೇಕ ಧರ್ಮದ ವಿಚಾರ ದಿಂದ ಉಂಟಾಗಿದ್ದ ಅಸಮಾಧಾನವನ್ನು ಸರಿಪಡಿಸುವ ಕೆಲಸವನ್ನು ಎಸ್ಸಾರ್ಪಿ ಪರಿಪೂರ್ಣವಾಗಿಯೇ ಮಾಡಿದ್ರು. ಮಠಗಳತ್ತ ಯಾತ್ರೆಯ ಆ ತರುವಾಯ ಕೈ ಪಕ್ಷದ ವಿಚಾರದಲ್ಲಿ ಬಹುತೇಕ ಲಿಂಗಾಯತ ಮಠಾಧೀಶರುಗಳು ಸಾಫ್ಟ್ ಕಾರ್ನರ್ ಆದ್ರು. ಬಹುತೇಕ ಮಠಗಳು ಕೂಡ ಬರಲಿರುವ ಚುನಾವಣೆಯಲ್ಲಿ ಜನಾಂಗ ಕೈನತ್ತ ಮಹಾ ವಲಸೆಗೆ ಗ್ರಿನ್ ಸಿಗ್ನಲ್ ಕೊಡಲು ಮಾನಸಿಕವಾಗಿ ಗಟ್ಟಿಗೊರಿ. ಈ ಬೆಳವಣಿಗಗಳು ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೇರುವ ವೀರಶೈವ ಲಿಂಗಾಯತರ ಕನಸನ್ನು ಮತ್ತಷ್ಟು ಉರಿಗೊಳಿಸಿದವು.

ಎಸ್ಸಾರ್ಪಿಗೆ ಟಿಕೆಟ್ ತಪ್ಪಿಸಿದ್ರು.

ಇನ್ನೇನು ಎಲ್ಲವೂ ಸರಿ ಆಗುತ್ತಿದೆ ಎನ್ನುವಾಗಲೇ
ಮೊನ್ನೆಯ ಲೋಕಲ್ ಬಾಡಿ ಎಲೇಕ್ಷನ್ ನಲ್ಲಿ ಎಸ್ಸಾರ್ ಪಾಟೀಲ್ ರಿಗೆ ವಿಜಯಪುರ- ಬಾಗಲಕೋಟೆ ದ್ವಿ ಸದಸ್ಯ ಕ್ಷೇತ್ರದಲ್ಲಿ ಪಕ್ಷ ಟಿಕೆಟ್ ಕೊಡಲಿಲ್ಲ. 2018ರ ಅಸೆಂಬ್ಲಿ, 2019ರ ಪಾರ್ಲಿಮೆಂಟ್ ಎಲೇಕ್ಷನ್ ಗಳಲ್ಲಿ ಪ್ರತ್ಯೇಕ ಧರ್ಮದ ಪ್ರಸ್ತಾವನೆ ಎನ್ನುವ ಬೆಂಕಿಯ ಕೆನ್ನಾಲಿಗೆ ಕೈ ಪಕ್ಷಕ್ಕೆ ಸಾಕಷ್ಟುಪ್ರಮಾಣದಲ್ಲಿಯೇ ಹಾನಿ ಮಾಡಿತ್ತು. ಮಠಗಳತ್ತ ಯಾತ್ರೆ ಮೂಲಕ ಜ್ವಾಲೆಯನ್ನು ನಂದಿಸಲು ಎಸ್ಸಾರ್ಪಿ ಸಾಕಷ್ಟು ಶ್ರಮವಹಿಸಿದ್ರು. ಇಂತಹ ನಾಯಕನಿಗೆ ಅದರಲೂ ಚಾಲ್ತಿಯಲ್ಲಿರುವ ವಿರೋಧ ಪಕ್ಷದ ನಾಯಕನನ್ನು ಪಕ್ಷ ಕಡೆಗಣಿಸಿದ್ದೇಕೆ?ಎನ್ನುವ ಪ್ರಶ್ನೆ ವೀರಶೈವ ಜನಾಂಗದಲ್ಲಿ ಈಗ ಬಹು ದೊಡ್ಡದಾಗಿಯೇ ಮೂಡಿದೆ. ಆಗೇನೆ ಪಕ್ಷದಲ್ಲಿ ಆಗ್ರ ಸ್ಥಾನದಲ್ಲಿದ್ದ ಸಮುದಾಯದ ಮುಖಂಡನನ್ನು ಉದ್ದೇಶಪೂರ್ವಕವಾಗಿಯೇ ಅಧಿಕಾರ ದಿಂದ ದೂರ ಸರಿಸಲಾಗುತ್ತಿದೇನ್ನುವ ಅಸಮಾಧಾನ ಆ ಜನಾಂಗದಲ್ಲಿ ಈಗ ವ್ಯಾಪಕವಾಗಿ ವ್ಯಾಪಿಸಿದೆ ಕೂಡ.

.ಕುರುಬರ ಸಿದ್ದರಾಮಯ್ಯ ವಿರೋಧಪಕ್ಷದ ನಾಯಕ, ಒಕ್ಕಲಿಗರ ಡಿಕೆಶಿವಕುಮಾರ ಕೆಪಿಸಿಸಿ ಅಧ್ಯಕ್ಷ ಇರುವಾಗ ಮೇಲ್ಮನೆಯಲ್ಲಿ ಎಸ್ಸಾರ್ ಪಾಟೀಲರನ್ನು ವಿಪಕ್ಷ ನಾಯಕನ ಹುದ್ದೆಯಲ್ಲಿ ಕೂಡಿಸಿ, ಆ ಮೂಲಕ ವೀರಶೈವ ಸಮುದಾಯಕ್ಕೂ ಅಧಿಕಾರ ಕೊಟ್ಟಿದ್ದೇವೆಂದು ಬಿಂಬಿಸಿ. ವೀರೇಂದ್ರ ಪಾಟೀಲ್ ಪ್ರಕರಣದ ನಂತರ ಆ ಜನಾಂಗದಲ್ಲಿ ಪಕ್ಷದ ಕಡೆಗಿದ್ದ ತಪ್ಪು ಕಲ್ಪನೆಯನ್ನು ನಿವಾರಿಸುವ ಪ್ರಯತ್ನವೊಂದನ್ನು ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಮಾಡಿದ್ರು.

ಮೇಕೆ ಹಿಡಿದು ಡಿಕೆ ಅಬ್ಬರ

ಎಸ್ಸಾರ್ಪಿಗೆ ಟಿಕೆಟ್ ತಪ್ಪಿಸಿರುವ ಅಸಮಾಧಾನ ಮೊಳೆಕಟ್ಟಿರುವಾಗಲೇ, ಇತ್ತ ಮೇಕೆದಾಟು ಮೂಲಕ ಡಿಕೆ.ಶಿವಕುಮಾರ ಪಕ್ಷದ ತುಂಬಾ ನಾಯಕ ನಾನೇ ಎನ್ನುವಂತೆ ಅವರಿಸಿಕೊಂಡಿದ್ದಾರೆ. ಇನ್ನೂ ಪಾದಯಾತ್ರೆಯ ಉದ್ದಗಲಕ್ಕೂ ಹಾಕಿದ ಪ್ಲೆಕ್ಸ್ , ಬ್ಯಾನರ್ ಗಳಲ್ಲಿ ಡಿಕೆ ಶಿವಕುಮಾರ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಚಿತ್ರಗಳು, ಭವ್ಯದ ಕಟೌಟ್ ಗಳ ಮೆರವಣಿಗೆ ನಡೆದಿದ್ದು ಬಿಟ್ಟರೆ ಅಪ್ಪಿ,ತಪ್ಪಿ ಈ ಮೂವರು ಕಟೌಟ್ ಗಳ ಸಮಕ್ಕೆ ಒಬ್ಬೇ , ಒಬ್ಬ ವೀರಶೈವ ನಾಯಕನ ಕಟೌಟ್ ಗಳಿರಲಿಲ್ಲ.

ಇನ್ನೂ ಎಂಬಿ.ಪಾಟೀಲ್, ಹೆಚ್.ಕೆ.ಪಾಟೀಲ್ ರಂತಹ ನಾಯಕರು ಉದ್ಘಾಟನಾ ಸಾಮಾರಂಭದಲ್ಲಿದ್ರು. ಆದರೆ ಇವರನ್ನು ಹೊರತು ಪಡಿಸಿದರೆ ಪಕ್ಷದಲ್ಲಿ ಅಳವಾಗಿ ಗುರುತಿಸಿಕೊಂಡಿರುವ ಮತ್ತು ಸಮಸ್ತ ವೀರಶೈವರು ಒಪ್ಪಿರುವ ಎಸ್ಸಾರ್ ಪಾಟೀಲ್, ಶಾಮನೂರು ಶಿವಶಂಕರಪ್ಪರಂತಹವರನ್ನು ಪಾದಯಾತ್ರೆಯಲ್ಲಿ ಪ್ರಮುಖವಾಗಿ ಪರಿಗಣಿಸಿರಲಿಲ್ಲ.

ಯಡಿಯೂರಪ್ಪ ಅಲ್ಲದಿದ್ರೂ ಬಿಜೆಪಿಯಲ್ಲಿ ಲಿಂಗಾಯತರಿಗೆ ಸಿಎಂ ಕುರ್ಚಿ ಪಿಕ್ಸ್.

2023ರಲ್ಲಿ ಆಕಸ್ಮಿಕವಾಗಿ ಕರ್ನಾಟಕದಲ್ಲಿ ಕೈ ಪಕ್ಷ ಅಧಿಕಾರಕ್ಕೆ ಬಂದರೇ? ಸಿಎಂ ಹುದ್ದೆ ಸಹಜವಾಗಿಯೇ ಒಕ್ಕಲಿಗರಾದ ಡಿಕೆ.ಶಿವಕುಮಾರಗೆ ಒಲಿಯಲಿದೆ. ಒಂದುವೇಳೆ ಸಿದ್ದರಾಮಯ್ಯ ನವರಂಗಿ ಆಟವಾಡಿದರೇ ಆಗ ಈ ಇಬ್ಬರ ನಡುವೆ ತಲಾ 30:30 ಅನುಪಾತದಲ್ಲಿ ಸಿಎಂ ಹುದ್ದೆ ಹಂಚಿಕೆಯ ಸೂತ್ರವನ್ನು ಎಐಸಿಸಿ ಜಾರಿ ಮಾಡಲು ಬಹುದು. ಏಕೆಂದರೆ, ಪ್ರಸ್ತುತ ಎಐಸಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಧಾನಕಾರ್ಯದರ್ಶಿಗಳಲ್ಲಿ ಸಂಘಟನೆಯ ಜವಾಬ್ದಾರಿ ಹೊತ್ತಿರುವ ಕೆಸಿ.ವೇಣುಗೋಪಾಲ್ ಅತ್ಯಂತ ಪವರ್ ಫುಲ್. ಡಿಕೆ ಮತ್ತು ಸಿದ್ದು ಈ ಇಬ್ಬರು ನಡೆದುಕೊಳ್ಳುವ ದೇವರು ಈ ವೇಣುಗೋಪಾಲ್ ನೇ . ಹೀಗಾಗಿ ಮೂರನೇಯವರು ಮುಖ್ಯಮಂತ್ರಿ ಕುರ್ಚಿ ಸನಿಹಕ್ಕೂ ಸುಳಿಯದಂತೆ ವೇಣು ಶಕ್ತಿ ಬಿಡದು

ಈ ಅಂಶ ಲಿಂಗಾಯತ ಸಮುದಾಯದಲ್ಲಿ ಬರಲಿರುವ ಚುನಾವಣೆಗೆ ಕೈ ಪಕ್ಷದತ್ತ ಮಹಾವಲಸೆ ಹೋಗಬೇಕೆನ್ನುವ ಚಿಂತನೆ, ಪ್ರಾಸ್ತಾವನೆಗಳನ್ನು ಮರು ಚಿಂತಿಸುವಂತೆ ಮಾಡಿದೆ. ಏಕೆಂದರೆ, ಬಿಜೆಪಿ ಯಡಿಯೂರಪ್ಪರನ್ನು ಕಡೆಗಣಿಸಿದ್ರೂ ಆ ಪಕ್ಷದಲ್ಲಿ ಸಿಎಂ ಕುರ್ಚಿ ಲಿಂಗಾಯತರಿಗೆ ಪಿಕ್ಸ್ . ಬೊಮ್ಮಾಯಿ, ನಿರಾಣಿ, ಯತ್ನಾಳ, ಶೆಟ್ಟರ್, ಬೆಲ್ಲದ್ ಹೀಗೆ ಲಿಂಗಾಯತರನ್ನು ಸಿಎಂ ಮಾಡುವುದು ಗ್ಯಾರಂಟಿ. ಈ ಗ್ಯಾರಂಟಿ, ಖಚಿತತೆ ಕಾಂಗ್ರೆಸ್ ಪಕ್ಷದಲ್ಲಿ ನಿರೀಕ್ಷಿಸಲಾಗದು ಎನ್ನುವ ಸತ್ಯವನ್ನು ವೀರಶೈವ ಸಮುದಾಯಕ್ಕೆ ಚೆನ್ನಾಗಿ ಗೊತ್ತಿದೆ. ಡಿಕೆ ಮತ್ತು ಸಿದ್ದು ಸಿಎಂ ಮಾಡುವ ಸಲುವಾಗಿಯೇ ಕೈನತ್ತ ವಲಸೆ ಯಾಕೇ ಹೋಗಬೇಕೆನ್ನುವ ಚರ್ಚೆಗಳು ನಾಡಿನಾದ್ಯಂತ ಆ ಸಮುದಾಯದಲ್ಲಿ ಮೇಕೆದಾಟು ಪಾದಯಾತ್ರೆ ಬಳಿಕ ಜೋರಾಗಿವೆ.

ವೀರಶೈವ ಬಲದೊಂದಿಗೆ ಮುಂದಿನ ವರ್ಷ ಬಿಜೆಪಿ ಸೋಲಿಸಿ, ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರಬೇಕೆನ್ನುವ ಇರಾದೆಯಲ್ಲಿರುವ ಎಐಸಿಸಿ ಅಧಿನಾಯಕಿಯನ್ನು ಮೇಕೆದಾಟು ಪಾದಯಾತ್ರೆ ನಂತರ ಲಿಂಗಾಯತ ಸಮುದಾಯದಲ್ಲಿ ಘಟಿಸುತ್ತಿರುವ ವಿದ್ಯಮಾನಗಳು ಸಾಕಷ್ಟು ಚಿಂತೆಗೆ ದೂಡಿಸಿವೆ. ಎನ್ನುವುದು ಈ ಹೊತ್ತಿನ ಕರ್ನಾಟಕ ರಾಜಕಾರಣದ ವರ್ತಮಾನದ ವಿಶ್ಲೇಷಣೆಯು ಹೌದಾಗಿದೆ.

LEAVE A REPLY

Please enter your comment!
Please enter your name here