ಮಕ್ಕಳಲ್ಲಿನ ನ್ಯುಮೋನಿಯಾ ರೋಗ ತಡೆಗೆ ಸೆಪ್ಟಂಬರ್ ಮೊದಲ ವಾರದಿಂದ ಪಿಸಿವಿ ಲಸಿಕೆ-ಮಹಾಂತೇಶ್ ಬೀಳಗಿ.

0
87

ದಾವಣಗೆರೆ ಆ. 26: ಮಕ್ಕಳಲ್ಲಿ ಕಂಡುಬರುವ ನ್ಯುಮೋನಿಯಾ, ನ್ಯುಮೋಕಾಕಲ್ ಹಾಗೂ ಇತರೆ ರೋಗಗಳಿಂದ ರಕ್ಷಣೆ ನೀಡುವಂತಹ ಪಿಸಿವಿ (ನ್ಯುಮೊಕಾಕಲ್ ಕಾಂಜುಗೇಟ್ ವ್ಯಾಕ್ಸಿನ್) ನೂತನ ಲಸಿಕೆಯನ್ನು ಉಚಿತವಾಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಕುವಂತಹ ಕಾರ್ಯಕ್ರಮ ಸೆಪ್ಟಂಬರ್ ಮೊದಲ ವಾರದಲ್ಲಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.
ನೂತನ ಲಸಿಕೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪ್ರಾರಂಭಿಸುವುದರ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಕಂಡುಬರುವ ನ್ಯುಮೋನಿಯಾ ರೋಗವನ್ನು ತಡೆಗಟ್ಟುವ ಸಲುವಾಗಿ ಹಾಗೂ ಮಕ್ಕಳ ಮರಣ ಪ್ರಮಾಣ ಕಡಿಮೆಗೊಳಿಸುವ ನಿಟ್ಟಿನಲ್ಲಿ, ಸರ್ಕಾರ ಪಿಸಿವಿ (ನ್ಯುಮೊಕಾಕಲ್ ಕಾಂಜುಗೇಟ್ ವ್ಯಾಕ್ಸಿನ್) ನೂತನ ಲಸಿಕೆಯನ್ನು 03 ಡೋಸ್ ನಲ್ಲಿ ನೀಡುವ ಕಾರ್ಯಕ್ರಮ ಪ್ರಾರಂಭಿಸುವಂತೆ ಸೂಚನೆ ನೀಡಿದೆ. ಈಗಾಗಲೆ ಈ ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದ್ದು, ಪ್ರತಿ ಡೋಸ್‍ಗೆ ಸುಮಾರು 2 ರಿಂದ 4 ಸಾವಿರ ರೂ. ಗಳನ್ನು ನೀಡಿ ಪಾಲಕರು ತಮ್ಮ ಮಕ್ಕಳಿಗೆ ಹಾಕಿಸುತ್ತಿದ್ದಾರೆ. ಇದೀಗ ಸರ್ಕಾರ ಈ ಪಿಸಿವಿ ಲಸಿಕೆಯನ್ನು ಉಚಿತವಾಗಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳಡಿ ನೀಡಲು ತೀರ್ಮಾನಿಸಿ, ಲಸಿಕೆಯನ್ನು ಜಿಲ್ಲೆಗೆ ಪೂರೈಕೆ ಮಾಡಿದೆ. ನ್ಯುಮೊಕಾಕಲ್ ನ್ಯುಮೋನಿಯಾ ಒಂದು ಶ್ವಾಸಕೋಶದ ಸೋಂಕಾಗಿದ್ದು, ಇದು ತೀವ್ರ ಸ್ವರೂಪ ಪಡೆದಲ್ಲಿ ಮರಣವೂ ಸಂಭವಿಸಬಹುದು. ಪಿಸಿವಿ ಲಸಿಕೆ ಡೋಸ್ ಅನ್ನು 06 ವಾರ, 14 ವಾರದ ಮಗುವಿಗೆ ನೀಡಲಾಗುತ್ತದೆ. 9 ತಿಂಗಳ ಮಗುವಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ, ಹೀಗೆ ಪ್ರತಿ ಮಗುವಿಗೆ ಒಟ್ಟು 03 ಡೋಸ್ ಪಿಸಿವಿ ಲಸಿಕೆ ನೀಡಲಾಗುತ್ತದೆ. ಈ ನೂತನ ಲಸಿಕಾ ಕಾರ್ಯಕ್ರಮವನ್ನು ಸೆಪ್ಟಂಬರ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಪ್ರಾರಂಭಿಸಲಾಗುತ್ತಿದ್ದು, ಇದಕ್ಕೆ ಬೇಕಿರುವ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಪ್ರತಿಯೊಂದು ಗ್ರಾಮಗಳಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವ್ಯಾಪಕ ಪ್ರಚಾರ ಆಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಬಳ್ಳಾರಿ ವಿಭಾಗದ ಸರ್ವೇಲೆನ್ಸ್ ಮೆಡಿಕಲ್ ಆಫೀಸರ್ ಡಾ. ಶ್ರೀಧರ್ ಅವರು ಪಿಸಿವಿ ನೂತನ ಲಸಿಕೆ ಕುರಿತು ಮಾಹಿತಿ ನೀಡಿ, ಪಿಸಿವಿ ಲಸಿಕೆ ಈಗಾಗಲೆ ಜಗತ್ತಿನ 146 ದೇಶಗಳಲ್ಲಿ 2000 ನೇ ವರ್ಷದಿಂದಲೇ ಬಳಕೆಯಾಗುತ್ತಿದ್ದು, ಭಾರತದಲ್ಲಿ 2017 ರಿಂದ ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ಬಳಕೆಯಾಗುತ್ತಿದ್ದು, ಕರ್ನಾಟಕದಲ್ಲಿ ಈ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ. ನ್ಯುಮೋಕಾಕಲ್ ಸೋಂಕು ತಗುಲಿದ ಮಗುವಿಗೆ ಉಸಿರಾಡಲು ಕಷ್ಟವಾಗಿ, ಪಕ್ಕೆ ಸೆಳೆತ, ಜ್ವರ, ಕೆಮ್ಮು ಮತ್ತು ಇತರೆ ಸಮಸ್ಯೆಗಳು ಕಂಡುಬರುತ್ತದೆ. ಇದು ತೀವ್ರ ಸ್ವರೂಪ ಪಡೆದಲ್ಲಿ ಮರಣವೂ ಸಂಭವಿಸಬಹುದು. ಇದು ಕೆಮ್ಮಿದಾಗ ಅಥವಾ ಸೀನಿದಾಗ ಸಿಡಿಯುವ ತುಂತುರುಗಳ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ರಾಜ್ಯದಲ್ಲಿ 2018 ರಲ್ಲಿ ನ್ಯುಮೋನಿಯಾ ರೋಗದಿಂದ ಸುಮಾರು 1.27 ಲಕ್ಷ ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಈ ನ್ಯುಮೋಕಾಕಲ್ ರೋಗ 2 ರಿಂದ 5 ವರ್ಷದೊಳಗಿನ ಮಕ್ಕಳ ಮೇಲೆ ಹೆಚ್ಚು ಗಂಭೀರ ಪರಿಣಾಮ ಬೀರುತ್ತದೆ. ರಾಜ್ಯದಲ್ಲಿ 2005 ರಿಂದಲೇ ಖಾಸಗಿ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿದ್ದು, ಪ್ರತಿ ಡೋಸ್‍ಗೆ 2 ರಿಂದ 04 ಸಾವಿರ ರೂ. ಹಣ ತೆತ್ತು ಪಾಲಕರು ತಮ್ಮ ಮಕ್ಕಳಿಗೆ ಹಾಕಿಸುತ್ತಿದ್ದಾರೆ. ಇದೀಗ ಸರ್ಕಾರವೇ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳಡಿ ಪಿಸಿವಿ ನೂತನ ಲಸಿಕೆಯನ್ನು ಸೇರಿಸಿ, ಕರ್ನಾಟಕ ರಾಜ್ಯದಲ್ಲಿಯೂ ಲಸಿಕೆ ನೀಡಿಕೆಯನ್ನು ಪ್ರಾರಂಭಿಸಲು ಕ್ರಮ ಕೈಗೊಂಡಿದೆ ಎಂದರು.
ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಮಾತನಾಡಿ, ಪಿಸಿವಿ ನೂತನ ಲಸಿಕೆ ಕುರಿತಂತೆ ಎಲ್ಲ ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳಲ್ಲಿ ಬರುವ ತಾಯಂದಿರಿಗೆ ಮಾಹಿತಿ ನೀಡಬೇಕು. ಆಶಾ ಕಾರ್ಯಕರ್ತರು ಕೂಡ ತಾಯಂದಿರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿ, ಪಿಸಿವಿ ನೂತನ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲೆಡೆ ಕೈಗೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಸೆಪ್ಟಂಬರ್ ಮೊದಲ ವಾರದಿಂದ ಲಸಿಕೆ ನೀಡಿಕೆಗೆ ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಆನಂದ್, ಡಿಹೆಚ್‍ಒ ಡಾ. ನಾಗರಾಜ್, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ಶಶಿಧರ್, ಡಾ. ರೇಣುಕಾರಾಧ್ಯ, ಟಿಹೆಚ್‍ಒ ಡಾ. ಎಲ್.ಡಿ. ವೆಂಕಟೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here