ಮಾತೆಂಬುದು ಜ್ಯೋತಿರ್ಲಿಂಗ ಎಂಬುದು ನಾಯಕರಿಗೆ ಗೊತ್ತಿರಬೇಕು

0
252

ಅದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲ.
ಆ ಸಂದರ್ಭದಲ್ಲಿ ಉಪ ಪ್ರಧಾನಿಯಾಗಿದ್ದ ಬಿಜೆಪಿಯ ರಾಷ್ಟ್ರೀಯ ನಾಯಕ ಲಾಲಕೃಷ್ಣ ಅಡ್ವಾಣಿ ಕೇರಳಕ್ಕೆ ಭೇಟಿ ನೀಡಿದ್ದರು.
ಹೀಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇಶದ ರಾಜಕಾರಣದ ಬಗ್ಗೆ ಮಾತನಾಡುತ್ತಾ ಕರ್ನಾಟಕದಲ್ಲಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಟೀಕಾಪ್ರಹಾರ ನಡೆಸಿದರು.
ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ.ಅದರ ಸಾಧನೆ ಶೂನ್ಯ ಎಂದು ಅಬ್ಬರಿಸಿದರು.
ದೇಶದ ಉಪಪ್ರಧಾನಿ ಈ ರೀತಿ ವಾಗ್ಧಾಳಿ ಮಾಡಿದರೆ ಮುಖ್ಯಮಂತ್ರಿಯಾಗಿದ್ದವರು ಸುಮ್ಮನೆ ಕೂರಲು ಸಾಧ್ಯವೇ?ಹಾಗಂತಲೇ ಆಪ್ತರೆನ್ನಿಸಿಕೊಂಡವರು ಕೃಷ್ಣ ಅವರ ಬಳಿ ಹೋದರು.
ಸಾರ್,ಉಪಪ್ರಧಾನಿಗಳು ನಿಮ್ಮ ಮೇಲೆ ಒಂದೇ ಸಮನೆ ವಾಗ್ಧಾಳಿ ನಡೆಸುತ್ತಿದ್ದಾರೆ.ಅವರ ಆರೋಪಕ್ಕೆ ನೀವು ತಕ್ಕ ಉತ್ತರ ನೀಡದಿದ್ದರೆ ದೇಶಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ.ಯಾಕೆಂದರೆ ಇವತ್ತು ದೇಶದಲ್ಲಿ ಕಾಂಗ್ರೆಸ್ ಪಾಲಿಗೆ ಶಕ್ತಿ ಅಂತಿರುವುದೇ ಕರ್ನಾಟಕದಲ್ಲಿ.ಹೀಗಾಗಿ ನೀವು ಅಡ್ವಾಣಿಯವರಿಗೆ ತಕ್ಕ ಉತ್ತರ ನೀಡಬೇಕು ಎಂದರು.
ಸರಿ,ಕೃಷ್ಣ ಅವರೂ ಅಡ್ವಾಣಿ ಅವರಿಗೆ ಉತ್ತರ ನೀಡಲು ತಯಾರಾದರು.ಇದಕ್ಕಾಗಿ ಕರೆದ ಪತ್ರಿಕಾಗೋಷ್ಟಿಯಲ್ಲಿ ತಮ್ಮ ಸರ್ಕಾರದ ಸಾಧನೆ ಏನು?ಅನ್ನುವುದರ ಇಂಚಿಂಚು ವಿವರ ನೀಡಿದರು.ಅಷ್ಟೇ ಅಲ್ಲ,ನನ್ನ ಸರ್ಕಾರದ ಸಾಧನೆ ಶೂನ್ಯವೇ ಅಂತ ನೀವೇ ನಿರ್ಧರಿಸಿ ಎಂದು ಬಿಟ್ಟರು.
ಆದರೆ ಇಷ್ಟೆಲ್ಲದರ ನಡುವೆ ಅವರು ತಪ್ಪಿಯೂ ಅಡ್ವಾಣಿ ಅವರ ವಿರುದ್ಧ ಟೀಕೆ ಮಾಡಲಿಲ್ಲ,ಕೇಳಿದರೆ,ಟೀಕೆಗೆ ಪ್ರತಿಟೀಕೆ‌ ಉತ್ತರವಲ್ಲ ಎಂದು ಕೂಲ್ ಆಗಿ ಉತ್ತರಿಸಿದರು.
ಕೃಷ್ಣರ ಉತ್ತರದಿಂದ ಕೆಲವರಿಗೆ ನಿರಾಸೆ ಆಯಿತು.ಯಾಕೆಂದರೆ ಅಡ್ವಾಣಿ ಅವರ ವಿರುದ್ಧ‌ ಕೃಷ್ಣ ಟೀಕಾಪ್ರಹಾರ ನಡೆಸಿದ್ದರೆ ಅದು ರಾಷ್ಟ್ರಮಟ್ಟದ ಸುದ್ದಿಯಾಗುತ್ತಿತ್ತು ಎಂಬುದು ಅವರ ಹಳಹಳಿಕೆ.
ಅಂದ ಹಾಗೆ ಇದೊಂದು ಘಟನೆ ಅಂತಲ್ಲ,ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಅಗತ್ಯ ಮೀರಿ ಯಾವತ್ತೂ‌ ಮಾತನಾಡಲಿಲ್ಲ.ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಯಾವಾಗ ಮಾತನಾಡಬೇಕು?ಯಾವಾಗ ಮೌನ ಧರಿಸಬೇಕು ಎಂಬುದು ಗೊತ್ತಿತ್ತು.
ಹೀಗಾಗಿ ಅವರು ಯಾವ ಸಂದರ್ಭದಲ್ಲೇ ಬಾಯಿ ತೆರೆಯಲಿ,ಅವರೇನು ಹೇಳುತ್ತಾರೆ?ಎಂಬ ಕುತೂಹಲ ಇದ್ದೇ ಇರುತ್ತಿತ್ತು.


ಹೀಗೆ ಮುಖ್ಯಮಂತ್ರಿಗಳಾದವರು ಅಗತ್ಯಕ್ಕಿಂತ ಹೆಚ್ಚು ಮಾತನಾಡುವ ಪರಂಪರೆಯೇ ರಾಜ್ಯದಲ್ಲಿರಲಿಲ್ಲ.
ಜವಾಬ್ದಾರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕೆ.ಸಿ.ರೆಡ್ಡಿ ಅವರಿಂದ ಹಿಡಿದು ಎಸ್.ಎಂ.ಕೃಷ್ಣ ಅವರವರೆಗೆ ಬಹುತೇಕ ಎಲ್ಲರಿಗೂ ಮಾತಿಗಿಂತ ಮೌನದ ಮಹತ್ವ ಏನು ಅನ್ನುವುದು ಗೊತ್ತಿತ್ತು.
ಮಧ್ಯೆ ಬಂದ ಆರ್.ಗುಂಡೂರಾವ್ ಅವರಂತಹ ನಾಯಕ ಸಿಡಿಗುಂಡಿನಂತೆ ಸಿಡಿಯುತ್ತಿದ್ದರು ಎಂಬುದನ್ನು ಬಿಟ್ಟರೆ ಪ್ರತಿ ದಿನ ಸುದ್ದಿಯಾಗುವ ಗೀಳು ಯಾರಿಗೂ‌ ಇರಲಿಲ್ಲ.
ಅಂದ ಹಾಗೆ ಕೆ.ಸಿ.ರೆಡ್ಡಿ,ಕೆಂಗಲ್ ಹನುಮಂತಯ್ಯ,ಕಡಿದಾಳ್ ಮಂಜಪ್ಪ,ನಿಜಲಿಂಗಪ್ಪ,ಬಿ.ಡಿ.ಜತ್ತಿ,ಎಸ್.ಆರ್.ಕಂಠಿ,ವೀರೇಂದ್ರ ಪಾಟೀಲ್,ದೇವರಾಜ ಅರಸರು ಆಳಿದ ಕಾಲಘಟ್ಟದಲ್ಲಿ ಪತ್ರಿಕೆಗಳು ಮೈಯೆಲ್ಲ ಕಣ್ಣಾಗಿದ್ದವು.
ಮುಖ್ಯಮಂತ್ರಿಗಳಾಗಿದ್ದವರು ಒಂದು ಸಲ ಮಾತನಾಡಿದರು ಎಂದರೆ,ಅದನ್ನು ವರದಿ ಮಾಡುವವರು ತುಂಬ ಎಚ್ಚರಿಕೆಯಿಂದಿರುತ್ತಿದ್ದರು.
ಯಾಕೆಂದರೆ ಮಾತನಾಡುವವರಿಗೆ ಪ್ರಚಾರದ ಗೀಳು‌ ಇರಲಿಲ್ಲ.ಬದಲಿಗೆ ಜನರಿಗೆ ಯಾವ ಮಾಹಿತಿ‌ ಹೋಗಬೇಕು ಎಂಬುದು ಮುಖ್ಯ ಕಾಳಜಿಯಾಗಿತ್ತು.
ಹೀಗಾಗಿ ಪತ್ರಕರ್ತರೂ ಒಂದಲ್ಲ,ನಾಲ್ಕು ಬಾರಿ ತಮ್ಮ ತಮ್ಮಲ್ಲೇ ಮಾತನಾಡಿಕೊಂಡು‌ ಮುಖ್ಯಮಂತ್ರಿಗಳ ಮಾತು,ಮಾತಿನ ಅರ್ಥವನ್ನು ಮನದಟ್ಟು ಮಾಡಿಕೊಂಡು ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು.
ಹಾಗೆ ನೋಡಿದರೆ ಮುಖ್ಯಮಂತ್ರಿ‌ ಹುದ್ದೆಯಲ್ಲಿ ಕುಳಿತು ಪತ್ರಕರ್ತರ ಪಾಲಿನ ಫೆವರಿಟ್ ಅನ್ನಿಸಿಕೊಂಡವರು ರಾಮಕೃಷ್ಣ ಹೆಗಡೆ.
ಅವರು ಪತ್ರಿಕೆಗಳ ಮುಂದೆ ಮಾತನಾಡುವ ಮುನ್ನ ಏನು ಹೇಳಬೇಕು?ಏನು ಹೇಳಬಾರದು ಅಂತ ನಿರ್ಧರಿಸಿಯೇ ಬರುತ್ತಿದ್ದರು.
ತಾವಾಡುವ ಮಾತುಗಳು‌ ಯಾರಿಗೆ ಯಾವ ಸಂದೇಶ ರವಾನಿಸುತ್ತದೆ ಅನ್ನುವ ಪರಿಪೂರ್ಣ ಜ್ಞಾನ ಅವರಿಗಿತ್ತು.
ಎಷ್ಟೇ ಆದರೂ ಅವರು ರಾಷ್ಟ್ರ ರಾಜಕಾರಣದ ಘಮಲಿನಿಂದ ಆವೃತರಾದವರು.
ಯಾವಾಗ ಅವರು ಕರ್ನಾಟಕದ ಮುಖ್ಯಮಂತ್ರಿಯಾದರೋ?ಆನಂತರ ಪತ್ರಿಕೆಗಳಿಗೆ ವಿಶೇಷ ಸರಕುಗಳು‌ ಲಭ್ಯವಾಗತೊಡಗಿದವು.
ಅರ್ಥಾತ್,ಹೆಗಡೆಯವರು ಒಂದು ಸಲ ಮಾತನಾಡಿದರು ಎಂದರೆ ಪತ್ರಕರ್ತರಿಗೆ ಹಲವು ತಲೆಬರಹಗಳು ಸಿಗುತ್ತಿದ್ದವು.ಆ ಮೂಲಕ ಎಲ್ಲರೂ ತಮಗೆ ಬೇಕಾದಂತೆ ಹೆಡ್ಡಿಂಗುಗಳನ್ನು ಕೊಟ್ಟು‌ ಸುದ್ದಿ ಬರೆಯಲು ಸಾಧ್ಯವಾಗುತ್ತಿತ್ತು.
ಅಂದ ಹಾಗೆ ಹೆಗಡೆ ಅವರಿಗೂ ತಾವು ಏನು ಹೇಳಬೇಕು?ಏನು ಹೇಳಬಾರದು?ಯಾವಾಗ ಮೌನ ವಹಿಸಬೇಕು?ಎಂಬುದು ಗೊತ್ತಿತ್ತು.
1989 ರಲ್ಲಿ ಮರಳಿ‌ ಮುಖ್ಯಮಂತ್ರಿ ಗದ್ದುಗೆಗೇರಿದ ವೀರೇಂದ್ರ ಪಾಟೀಲರು ಪತ್ರಿಕೆಗಳಿಂದ ದೂರವೇ ಉಳಿಯುತ್ತಿದ್ದರು.ಸರ್ಕಾರದ ಕೆಲಸಗಳ ಬಗ್ಗೆ ತಮ್ಮ‌ ಮಂತ್ರಿಮಂಡಲದ ಸಹೋದ್ಯೋಗಿಗಳೇ ಮಾತನಾಡಲಿ ಎಂಬ ನಿಲುವಿಗೆ ಬಂದಿದ್ದ ವೀರೇಂದ್ರ ಪಾಟೀಲರು ತೀರಾ ಅನಿವಾರ್ಯ ಅನ್ನಿಸಿದರೆ ಮಾತನಾಡುತ್ತಿದ್ದರು.
ಅವರ ನಂತರ ಬಂದ ಬಂಗಾರಪ್ಪ ಮುಕ್ತ‌ ಮನಸ್ಸಿನಿಂದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರೂ ಪದೇ‌ ಪದೇ ಸುದ್ದಿಗಾರರ ಜತೆ ಮಾತನಾಡುತ್ತಿರಲಿಲ್ಲ.
ಇನ್ನು ವೀರಪ್ಪ ಮೊಯ್ಲಿ ಅವರಿಗೆ ಫೈನಾನ್ಸ್ ವಿಷಯದಲ್ಲಿ ಆಸಕ್ತಿ‌ ಹೆಚ್ಚಿತ್ತು.ಹೀಗಾಗಿ ಅವರ ಎದುರು ಕೂರುವ ಸುದ್ದಿಗಾರರು ಅಂಕಿ-ಅಂಶಗಳ ಮಳೆಯಲ್ಲಿ ತೊಯ್ದು ಹೋಗುತ್ತಿದ್ದರು.
ಹೀಗೆ ತಾವಾಡುವ ಮಾತುಗಳಿಂದ ಪತ್ರಕರ್ತರಿಗೆ ಬೋರ್ ಆಗಬಹುದಾ?ಅಂತಲೂ ಅವರು ಯೋಚಿಸುತ್ತಿರಲಿಲ್ಲ.ಆದರೆ ಅವರು ಕೂಡಾ ಪ್ರತಿದಿನ ಸುದ್ದಿಗಾರರನ್ನು ಭೇಟಿ ಮಾಡುತ್ತಿರಲಿಲ್ಲ.
ಇನ್ನು ದೇವೇಗೌಡರಿಗೆ ತಾವಾಡುವ ಮಾತುಗಳು ಹೇಗಿರಬೇಕು?ಯಾವ ಸಂದೇಶ ರವಾನಿಸಬೇಕು?ಎಂಬುದು ಆದ್ಯತೆಯ ವಿಷಯವಾಗಿತ್ತು.
ಬರೆಯುವವರು ಕೂಡಾ ದೇವೇಗೌಡರ ವಿಷಯದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಿತ್ತು.
ಒಂದು ವೇಳೆ ತಾವಾಡಿದ ಮಾತುಗಳು ಸ್ವಲ್ಪ ತಪ್ಪಾಗಿ ಪ್ರಕಟವಾಗಿದೆ ಅನ್ನಿಸಿದರೂ ಸಾಕು.ದೇವೇಗೌಡರ‌ ಮನಸ್ಸು ಹುಳ್ಳಗಾಗಿ ಬಿಡುತ್ತಿತ್ತು.
ಹೀಗಾಗಿ,ಇದು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪು,ನನ್ನನ್ನು ಹಣಿಯಲು ನಡೆಸುತ್ತಿರುವ ಯತ್ನ ಎಂಬ ತೀರ್ಮಾನಕ್ಕೆ ಅವರು ಬಂದು ಬಿಡುತ್ತಿದ್ದರು.
ಅಷ್ಟೇ ಅಲ್ಲ,ಪತ್ರಿಕೆಯ‌ ಮುಖ್ಯಸ್ಥರಿಗೆ ಅಟಕಾಯಿಸಿಕೊಂಡು,ನಾನು ಹೇಳಿದ್ದು ಹಾಗಲ್ಲ,ಹೀಗೆ.ತಕ್ಷಣವೇ ಇದನ್ನು ಸರಿಪಡಿಸಿ ಅಂತ ಸ್ಪಷ್ಟೀಕರಣ ಕೊಡುತ್ತಿದ್ದರು.ತಾವು ಕೊಡುತ್ತಿದ್ದ ಸ್ಪಷ್ಟೀಕರಣ ಪ್ರಕಟವಾಗುವವರೆಗೆ ಅವರು ಬಿಡುತ್ತಿರಲಿಲ್ಲ.
ಇದೇ ಕಾರಣಕ್ಕಾಗಿ ಪ್ರಜಾವಾಣಿಯ ಕೆ.ಎನ್.ಹರಿಕುಮಾರ್ ಅವರು:ಗೌಡರ ಹೇಳಿಕೆಯನ್ನು ಪದೇ‌ ಪದೇ‌ ಕನ್ ಫರ್ಮ್ ಮಾಡಿಕೊಳ್ಳಿ ಎಂದು ನ್ಯೂಸ್ ಡೆಸ್ಕಿನಲ್ಲಿದ್ದವರಿಗೆ ಎಚ್ಚರಿಸುತ್ತಿದ್ದರು.
ಇದೆಲ್ಲ ಏನೇ ಇರಲಿ,ದೇವೇಗೌಡರು ಕೂಡಾ ಪದೇ ಪದೇ ಸುದ್ದಿಗಾರರ ಮುಂದೆ‌ ಕೂರುತ್ತಿರಲಿಲ್ಲ.ತಾವು ಹೇಳಬೇಕು ಅಂದುಕೊಂಡಿದ್ದನ್ನು ಬಿಟ್ಟು ಬೇರೆ ಹೇಳುತ್ತಿರಲಿಲ್ಲ.
ಹಾಗೆ ನೋಡಿದರೆ‌ ಮಾಧ್ಯಮಗಳ ಎದುರು ಬಿಂದಾಸ್ ಬ್ಯಾಟಿಂಗ್ ಮಾಡುತ್ತಿದ್ದವರು ಜೆ.ಹೆಚ್.ಪಟೇಲ್.ತಾವಾಡುವ ಮಾತುಗಳು ವಿವಾದಕ್ಕೀಡಾಗುತ್ತವೆ ಎಂಬುದು ಗೊತ್ತಿದ್ದರೂ ಎದುರು ಬಿದ್ದ ಚೆಂಡು(ಪ್ರಶ್ನೆ)ಬೌಂಡರಿ ಗೆರೆ ದಾಟುವಂತೆ‌ ನೋಡಿಕೊಳ್ಳುತ್ತಿದ್ದರು.
ಒಂದು ಸಲ ಕರ್ನಾಟಕಕ್ಕೆ ಬಂದ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು‌ ಮೈಸೂರು ದಸರಾ ಮಹೋತ್ಸವದಲ್ಲಿ ಆಚರಿಸಲ್ಪಡುವ ಒಂದು ಸಂಪ್ರದಾಯದ ಬಗ್ಗೆ ಅಪಸ್ವರ ತೆಗೆದಿದ್ದರು.
ಆನೆಯ ಮೇಲೆ ಅಂಬಾರಿ ಹೊರಿಸುವುದರ ಬಗ್ಗೆ ತಕರಾರು ಎತ್ತಿದ ಅವರು:ಇದು ಪ್ರಾಣಿ ಹಿಂಸೆ,ಯಾವ ಕಾರಣಕ್ಕೂ‌ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.ಇದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗುಡುಗಿದ್ದರು.
ಅವರಾಡಿದ ಮಾತುಗಳ‌ ಬಗ್ಗೆ ಮುಖ್ಯಮಂತ್ರಿ ಪಟೇಲರನ್ನು ಕೇಳಿದರೆ:ಅವರು ಹೇಳುವುದು ಕರೆಕ್ಟ್,ಪ್ರಾಣಿ ಹಿಂಸೆ ಮಹಾಪಾಪ,ಹೀಗಾಗಿ ಒಂದು ಕೆಲಸ ಮಾಡೋಣ.ಇನ್ನು ಮುಂದೆ ದಸರಾ ಮಹೋತ್ಸವದಲ್ಲಿ ಅಂಬಾರಿಯನ್ನು ಆನೆ‌ ಹೊರುವುದು ಬೇಡ,ಮೇನಕಾಗಾಂಧಿ ಅವರೇ ಬಂದು‌ ಹೊರಲಿ ಎಂದರು.
ಅವತ್ತೇ ಕೊನೆ,ಆನೆ ಅಂಬಾರಿ ಹೊರುವುದು ತಪ್ಪು ಅಂತ ಮೇನಕಾಗಾಂಧಿ ಯಾವತ್ತೂ ಧ್ವನಿ ಎತ್ತಿಲ್ಲ.
ಪಟೇಲರ ನಂತರ ಬಂದ‌ ಕೃಷ್ಣರ ಬಗ್ಗೆ ಹೆಚ್ಚು ಹೇಳುವುದೇ ಬೇಕಿಲ್ಲ.ಮಾತಿಗಿಂತ ಮೌನ ಕೊಡುವ ಮೆಸೇಜು ದೊಡ್ಡದು ಎಂಬುದು ಅವರಿಗೆ ಗೊತ್ತಿತ್ತು.ಹೀಗಾಗಿ ಅವರ ಮಾತಿನಂತೆ,ಅವರ ಮೌನವೂ ಸಂದೇಶ ರವಾನಿಸುತ್ತಿತ್ತು.ಬಲ್ಲವರಿಗೆ ಇದು ಗೊತ್ತಿತ್ತು.
ಹಾಗೆ ನೋಡಿದರೆ ಮಾಧ್ಯಮಗಳನ್ನು ತುಂಬ ಹಚ್ಚಿಕೊಂಡವರು ಧರ್ಮಸಿಂಗ್.2004 ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದ ಅವರು ಪ್ರತಿದಿನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಶಾಯರಿ ಪ್ರಿಯರಾಗಿದ್ದ ಧರ್ಮಸಿಂಗ್ ಕೋಪ ಬಂದಾಗ ಥೇಟು ದೂರ್ವಾಸ ಮುನಿ.ಆದರೆ ಅವರ ಕೋಪ ಕೆಲವೇ ನಿಮಿಷಗಳಲ್ಲಿ ಇಳಿದು ನೆಲ ಸೇರಿಬಿಡುತ್ತಿತ್ತು.
ಒಮ್ಮೆ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾ ಬಳಿ ಎ.ಬಿ.ವಿ.ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು.ಧರ್ಮಸಿಂಗ್ ಅವರು ಸ್ಥಳಕ್ಕೆ ಬರುವುದಕ್ಕೂ,ಅವರ ಕೂಗಾಟ ಹೆಚ್ಚುವುದಕ್ಕೂ‌ ಸರಿಹೋಯಿತು.
ಅವರ ಈ ಕೂಗಾಟ ಧರ್ಮಸಿಂಗ್ ಅವರನ್ನು ಎಷ್ಟು ಕೆರಳಿಸಿತು ಎಂದರೆ,ಕೋಪದ ಭರದಲ್ಲಿ ಅವರು ಅಲ್ಲಿದ್ದ ಎ.ಬಿ.ವಿ.ಪಿ ಕಾರ್ಯಕರ್ತನೊಬ್ಬನ ಕಪಾಳಕ್ಕೆ ಬಾರಿಸಿಬಿಟ್ಟರು.
ಈ ಕಪಾಳ ಮೋಕ್ಷದ ಘಟನೆ ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಯಿತು.ಇನ್ನೇನು ಅದು ಪ್ರಕಟವಾದರೆ ದೊಡ್ಡ ವಿವಾದವಾಗುತ್ತದೆ ಎನ್ನುವಾಗ ಒಂದು‌ ಮ್ಯಾಜಿಕ್ ನಡೆಯಿತು.
ಅದೆಂದರೆ,ಧರ್ಮಸಿಂಗ್ ಅವರು ಎ.ಬಿ.ವಿ.ಪಿ ಕಾರ್ಯಕರ್ತನ ಕೆನ್ನೆಗೆ ಬಾರಿಸಿದ್ದನ್ನು ಯಾವ ಟಿವಿ ಚಾನೆಲ್ಲುಗಳು ಹೈಲೈಟ್‌ ಮಾಡಲಿಲ್ಲ.ಕಾರಣ?ಧರ್ಮಸಿಂಗ್ ತುಂಬ ಸ್ನೇಹಮಯಿ ಮತ್ತು ಅಂತ:ಕರಣಿ ಅನ್ನುವುದು ಮೀಡಿಯಾ ಹೌಸ್‌ ಮುಖ್ಯಸ್ಥರ ಏಕಾಭಿಪ್ರಾಯವಾಗಿತ್ತು.
ಹೀಗೆ ಧರ್ಮಸಿಂಗ್ ಅವರು ತಮ್ಮ ಸಜ್ಜನ‌ ವ್ಯಕ್ತಿತ್ವದಿಂದ ಮಾಧ್ಯಮಗಳನ್ನು ತೂಗಿಸಿಕೊಂಡು ಹೋದರೂ ಅಗತ್ಯಕ್ಕಿಂತ ಹೆಚ್ಚಾಗಿ ಮಾಧ್ಯಮಗಳ‌ ಜತೆ ಮಾತನಾಡುತ್ತಿದ್ದರು ಎಂಬುದು ನಿಜ.
ನಂತರ ಬಂದ ಹೆಚ್.ಡಿ. ಕುಮಾರಸ್ವಾಮಿ ಸ್ವಭಾವತ: ಎಮೋಶನಲ್.ಹೀಗಾಗಿ ಹೇಳಬೇಕಾದ್ದನ್ನು ಹೇಳಿದರೂ ಅವರ ಮಾತಿನ ಮಧ್ಯೆ ವಿವಾದದ ತುಣುಕು ಹೆಕ್ಕುವುದು ಮಾಧ್ಯಮಗಳಿಗೆ ಸುಲಭವಾಗಿತ್ತು.ಹೀಗಾಗಿ ಅವರು ವಿವಾದಗಳ ಹಳಿಯ ಮೇಲೆ ಸಾಗಬೇಕಾಯಿತು.
ಇನ್ನು ಮಾತಿಗಿಂತ ಮೌನಕ್ಕೆ‌ ಹೆಚ್ಚು ಬೆಲೆ ಅನ್ನುವುದು ಜಗದೀಶ್ ಶೆಟ್ಟರ್ ಅವರಿಗೆ ಗೊತ್ತಿತ್ತು.ಹೀಗಾಗಿ ಅವರೇನೇ ಮಾತನಾಡಿದರೂ ಅದಕ್ಕೆ ವಿವಾದದ ಲೇಪ ಹಚ್ಚುವುದು ಅಸಾಧ್ಯವಾಗಿತ್ತು.ಇನ್ನು
ಸಿದ್ಧರಾಮಯ್ಯ ಅವರು ಡೋಂಟ್ ಕೇರ್ ಮಾಸ್ಟರ್ ಶೈಲಿಯಲ್ಲಿ ಹೇಳಬೇಕಾದ್ದನ್ನು ಹೇಳಿ ಸುಮ್ಮನಿರುತ್ತಿದ್ದರು.ಅದು ವಿವಾದವಾದರೂ ಅವರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.ಹಾಗೆಯೇ ಅಗತ್ಯ ಮೀರಿ ಯಾವತ್ತೂ ಮಾತನಾಡುತ್ತಿರಲಿಲ್ಲ.
ಆದರೆ ಯಡಿಯೂರಪ್ಪ ಅವರಿಗೆ ಮಾಧ್ಯಮಗಳೆಂದರೆ ಅಪಾರ ಪ್ರೀತಿ.ಹೀಗಾಗಿ ಸುದ್ದಿಗಾರರಿಗೆ ಯಾವಾಗ ಬೇಕಿದ್ದರೂ ಅವರು ಸಿಗುತ್ತಿದ್ದರು,ಮಾತನಾಡುತ್ತಿದ್ದರು.
ಈಗ ಬಂದಿರುವ ಬಸವರಾಜ ಬೊಮ್ಮಾಯಿ ಅವರಂತೂ ಹೇಳಿ ಕೇಳಿ ಮಾತುಗಾರರು.
ಬೆಳಿಗ್ಗೆ ಎದ್ದರೆ ತಿಂಡಿ ತಿನ್ನುವುದನ್ನಾದರೂ ಅವರು ಮರೆಯಬಹುದು.ಆದರೆ ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ನಿಶ್ಚಿತವಾಗಿ ಮಾತನಾಡುತ್ತಾರೆ.
ಆನಂತರ ಗೃಹ ಕಚೇರಿ‌ ಕೃಷ್ಣಾದಲ್ಲಿ,ವಿಧಾನಸೌಧದ ಪ್ರತಿಮೆ ಎದುರಲ್ಲಿ.ನಂತರ ಇನ್ನೊಂದು ಕಡೆ ಅಂತ ಮಾತನಾಡುತ್ತಲೇ‌ ಇರುತ್ತಾರೆ.ಎಷ್ಟೇ ಜ್ಞಾನಿ ಇರಲಿ,ಆದರೆ ದಿನಕ್ಕೆ‌ ಐದಾರು ಸಲ ಮಾತನಾಡುತ್ತಾ ಹೋದರೆ ಅದಕ್ಕೆ ಶಕ್ತಿಯೇ ಉಳಿಯುವುದಿಲ್ಲ.ಹೀಗೆ ಪ್ರತಿದಿನ ಮಾತನಾಡುವ ಬದಲು ಅಗತ್ಯವಿದ್ದಾಗ ಮಾತ್ರ ಮಾತನಾಡಿ,ಉಳಿದಂತೆ ಮೌನವಾಗಿದ್ದರೆ ಅದರ ತೂಕವೇ ಬೇರೆ.ಮಾತೆಂಬುದು‌ ಜ್ಯೋತಿರ್ಲಿಂಗವಾಗುವುದು ಹೀಗೆ.ಆದರೆ ಇದನ್ನು ಬಸವರಾಜ ಬೊಮ್ಮಾಯಿ ಅವರಿಗೆ ಹೇಳುವವರು ಯಾರು?

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here