ಮಹಿಳೆಯರಲ್ಲಿ ಒಗ್ಗಟ್ಟು ಬರಬೇಕು

0
190

ಹಿಂದೆ ಮಹಿಳೆಯರು ಮನೆಯೊಳಗೆ ನಾಲ್ಕು ಗೋಡೆಗಳಿಗೇ ಸೀಮಿತವಾಗಿರುತ್ತಿದ್ದರು. ಅವರಿಗೆ ಯಾವುದೇ ವಿಷಯದಲ್ಲೂ ಸ್ವಾತಂತ್ರ್ಯವಿರಲಿಲ್ಲ.. ಆದರೆ ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಆದರೂ ಶಿಕ್ಷಣ ಕ್ಷೇತ್ರವೊಂದನ್ನು ಹೊರತುಪಡಿಸಿ ಉಳಿದ ಯಾವುದೇ ಕ್ಷೇತ್ರದಲ್ಲೂ ಮಹಿಳೆಯರಿಗೆ ೩೩% ಅವಕಾಶಗಳು ಸಿಕ್ಕಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಮಹಿಳೆಯರಲ್ಲಿ ಒಗ್ಗಟ್ಟು ಬರುವ ತನಕ, ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶಗಳು ಸಿಕ್ಕುವುದಿಲ್ಲ. ಇದರ ಅರಿವಿದ್ದೂ ಮಹಿಳೆಯರು ಮಹಿಳೆಯರಿಗೇ ಬೆಂಬಲವಾಗಿ ನಿಲ್ಲದಿರುವುದೇ ವಿಪರ್ಯಾಸ. ಅದರಿಂದಾಗಿಯೇ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರ ಹೆಸರು ಕೇಳಿಬಂದಿಲ್ಲ. ಹೆಣ್ಣಿಗೆ ಹೆಣ್ಣೇ ಶ್ರೀರಕ್ಷೆ ಆಗಬೇಕು. ಆಗ ಹೆಣ್ಣು ಮಕ್ಕಳು ೩೩% ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ.

ಎಷ್ಟು ಜನ ಪುರುಷರು ಭಾರತದ ಪ್ರಧಾನಿ, ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ? ಮತ್ತು ಎಷ್ಟು ಜನ ಮಹಿಳೆಯರು ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳಾಗಿದ್ದಾರೆ? ಮತ್ತು ಸರಕಾರದಲ್ಲಿ ಎಷ್ಟು ಜನ ಮಹಿಳಾ ಸಚಿವರಿದ್ದಾರೆ? ಎಂಬುದನ್ನು ಗಮನಿಸಿದರೆ, ಇನ್ನೂ ಲಿಂಗ ತಾರತಮ್ಯ ಇದ್ದೇ ಇದೆ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕಾಗುತ್ತದೆ.

ಇಂದು ಮಹಿಳೆಯರು ಏನನ್ನಾದರೂ ಸಾಧಿಸುವ ಸಂದರ್ಭದಲ್ಲಿ ಅನೇಕ ಪುರುಷರು ಬೆಂಬಲ ನೀಡುತ್ತಿದ್ದಾರೆ. ಮಹಿಳೆಯರೂ ಕೂಡಾ ಅಸೂಯೆಯನ್ನು ಬದಿಗಿಟ್ಟು ಒಗ್ಗಟ್ಟಿನಿಂದ ತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕಾಗಿದೆ. ಲಿಂಗ ತಾರತಮ್ಯ ನಿವಾರಣೆಗಾಗಿ ಎಲ್ಲಾ ಮಹಿಳೆಯರೂ ಕ್ಲಾರಾ ಜೆಟ್ ಕಿನ್ ಆಗಬೇಕಾಗಿದೆ.

೧೯೧೦ ರ ಆಗಷ್ಟ್ ನಲ್ಲಿ ಡೆನ್ಮಾರ್ಕ್‌ನ ಕೋಪೆನ್ ಹೇಗನ್ ನಗರದಲ್ಲಿ ಎರಡನೇ ಅಂತರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನ ನಡೆದಿತ್ತು. ಅಲ್ಲಿ ಅಂತರಾಷ್ಟ್ರೀಯ ಮಹಿಳಾ ಸೆಕ್ರೆಟರಿಯೇಟ್ ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್ ಕಿನ್ ಆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅಂದು ಮಹಿಳೆಯರಿಗೂ ಮತದಾನದ ಹಕ್ಕನ್ನು ನೀಡಬೇಕೆಂದೂ, ಮತ್ತು ಮಾರ್ಚ್ ೮ ನೇ ತಾರೀಖು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಬೇಕೆಂದು ವಿಷಯವನ್ನು ಮಂಡಿಸಿದರು. ೧೯೧೧ ರಲ್ಲಿ ರಷ್ಯಾದಲ್ಲಿ ಫೆಬ್ರುವರಿ ೧೯ ರಂದು ಮೊದಲ ಬಾರಿಗೆ ಮಹಿಳಾ ದಿನಾಚರಣೆಯನ್ನೂ ಆಚರಿಸಲಾಯಿತು. ನಂತರ ಇತರೇ ದೇಶಗಳಲ್ಲೂ ಆಚರಣೆ ಶುರುವಾಯಿತು. ವಿಶ್ವ ಸಂಸ್ಥೆ ೧೯೭೫ ರಲ್ಲಿ ಮಾರ್ಚ್ ೮ ನೇ ತಾರೀಖು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವೆಂದು ಘೋಷಿಸಿತು. ಆಗಿನಿಂದ ಅನೇಕ ದೇಶಗಳಲ್ಲಿ ಪ್ರತೀ ವರ್ಷ ಮಹಿಳೆಯರ ದಿನವನ್ನು ಆಚರಿಸಲಾಗುತ್ತಿದೆ.

ಕ್ಲಾರಾ ಜೆಟ್ ಕಿನ್ ದುಡಿಯುವ ಮಹಿಳೆಯರಿಗೆ ವೇತನ ಸೌಲಭ್ಯ, ಹೆರಿಗೆ ಭತ್ಯೆಯ ಸೌಲಭ್ಯ, ಮತದಾನದ ಹಕ್ಕು, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಖಂಡನೆ ಮೊದಲಾದ ವಿಷಯಗಳಿಂದ ಗಮನ ಸೆಳೆದರು. ಮಹಿಳೆಯರಿಗೆ ನ್ಯಾಯ ಕೊಡಿಸುವಲ್ಲಿಯೂ ಆಕೆ ಯಶಸ್ವಿಯಾದಳು. ಆಕೆ ಸ್ವಾರ್ಥಿಯಾಗಿದ್ದರೆ ಮಹಿಳೆಯರ ಪರ ಹೋರಾಡುತ್ತಿರಲಿಲ್ಲ. ಅಂಥಾ ಮಹಿಳೆಯನ್ನು ನೆನಪಿಸಿಕೊಂಡು ಇವತ್ತು ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರನ್ನು ಗೌರವಿಸಲಾಗುತ್ತದೆ.

ಮಹಿಳೆಯರನ್ನು ಗೌರವಿಸುವ ಕಾರ್ಯಕ್ರಮವನ್ನು ಪುರುಷರು ಮಾಡಿದರೆ ಅರ್ಥ ಬರುತ್ತದೆ. ಆದರೆ
ಮಹಿಳೆಯರು ಕೇವಲ ಸನ್ಮಾನಕ್ಕೆ ಸೀಮಿತವಾಗದೇ ಸಾಧನೆಯತ್ತ ಗಮನ ಹರಿಸಬೇಕು. ಹಾಗೇ ಪುರುಷರು ಮಹಿಳೆಯರನ್ನು ಕೇವಲ ವೇದಿಕೆಗೆ ಸೀಮಿತಗೊಳಿಸದೇ ಅವರ ಬೆಳವಣಿಗೆಗೆ ಸಹಕಾರ ನೀಡಬೇಕು. ಆಗಲೇ ಈ ಮಹಿಳಾ ದಿನಾಚರಣೆಗೊಂದು ಅರ್ಥ ಬರುತ್ತದೆ ಎಂಬುದು ನನ್ನ ಅನಿಸಿಕೆ.

ವೈ. ಎಂ. ವೈದ್ಯನಾಥ.
ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು
ಕೆ.ಪಿ.ಟಿ.ಸಿ.ಎಲ್.ಮತ್ತು ಜೆಸ್ಕಾಂ. ಬಳ್ಳಾರಿ

LEAVE A REPLY

Please enter your comment!
Please enter your name here