ಅನಾಥರಿಗೆ ಬಾಳದೀಪವಾದ ಕೊಟ್ಟೂರಿನ ಸಾಧಕಿ ಉತ್ತಂಗಿ ರುದ್ರಮ್ಮ:ಗಂಡನ ಪಿಂಚಣಿ ಸೌಲಭ್ಯದಲ್ಲಿ ಅನಾಥಾಶ್ರಮ

0
320

ಕೊಟ್ಟೂರು:ಜೂನ್:26:-ಪಟ್ಟಣದಲ್ಲಿ ಉತ್ತಂಗಿ ರುದ್ರಮ್ಮನವರು ಅನಾಥಾಶ್ರಮವನ್ನು ಸುಮಾರು ವರ್ಷಗಳಿಂದಲೂ ನಡೆಸುತ್ತಿದ್ದಾರೆ. ತನ್ನ ಗಂಡನ ಪಿಂಚಣಿ ಸೌಲಭ್ಯದಲ್ಲಿ ಅನಾಥಾಶ್ರಮ ನಡೆಸುತ್ತಾ, ಇಲ್ಲದವರ ಬಾಳಿಗೆ ಊರುಗೋಲಾಗಿದ್ದಾರೆ. ಅನಾಥಾಶ್ರಮದಲ್ಲಿ ವೃದ್ಧರು, ಅಂಗವಿಕಲರನ್ನು ಆರೈಕೆ ಮಾಡುತ್ತಾ, ತಮ್ಮ ಬದುಕನ್ನು ತುಂಬಾ ಅರ್ಥಪೂರ್ಣವಾಗಿ ಬಿಂಬಿಸಿಕೊಂಡಿದ್ದಾರೆ. ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯದೇ, ಪಟ್ಟಣದ ರಂಗಮಂದಿರವನ್ನು ಅನಾಥಾಶ್ರಮವಾಗಿ ಮಾರ್ಪಾಡುಗಳನ್ನು ತಮ್ಮ ಸ್ವಂತ ಹಣದಲ್ಲಿ ಮಾಡಿಕೊಂಡು ನಡೆಸುತ್ತಾ ಹೃದಯ ವೈಶಾಲ್ಯವನ್ನು ಮೆರೆದಿದ್ದಾರೆ. ತಂದೆ ತಾಯಿ, ಬಂಧು ಬಳಗ, ರಕ್ತ ಸಂಬಂಧಗಳ ಬೆಲೆಯೇ ಗೊತ್ತಿಲ್ಲದಿರುವ ಪೀಳಿಗೆಯ ಬಹುತೇಕರಿಗೆ ಮಾನವೀಯತೆ, ಭಾವನಾತ್ಮಕತೆಯ ಪಾಠವನ್ನು ತೋರಿಸುವ ಮೂಲಕ ಮಾನವೀಯತೆಗೆ ಹೊಸ ಅರ್ಥ ಕಲ್ಪಿಸಿದ್ದಾರೆ.

ಈ ಭಾಗದಲ್ಲಿ ರುದ್ರಮ್ಮನೆಂದರೆ ಎಲ್ಲರಿಗೂ ಒಂದು ರೀತಿಯ ಧನ್ಯತಾ ಭಾವ. ಅವರನ್ನು ಕಂಡರೆ ಅಮ್ಮ ಎಂದು ಕರೆದು ಮಾತಾಡಿಸುತ್ತಾರೆ. ತಮಗೆ ಮಕ್ಕಳಾಗದಿದ್ದರೂ ಅನಾಥಾಶ್ರಮದಲ್ಲಿನ ವೃದ್ಧರಿಗೆ ಅಂಗವಿಕಲರಿಗೆ, ತಾಯಿಯಾಗಿ ಪೊರೆಯುತ್ತಿರುವುದು ಮನಮಿಡಿಯುತ್ತದೆ.
ಅವರ ಬದುಕೇ ಒಂದು ರೀತಿ ವಿಚಿತ್ರವೆನ್ನಿಸಿದರೂ ಸತ್ಯ. ಅವರ ಬದುಕು ಬರೀ ರಹದಾರಿಯಾಗಿರಲಿಲ್ಲ. ಅಲ್ಲಿ ಕಲ್ಲು ಮುಳ್ಳುಗಳೂ ಇದ್ದವು. ಅವುಗಳನ್ನೆಲ್ಲವನ್ನೂ ಮೀರಿ, ತಾವು ಅನಾಥಾಶ್ರಮಕ್ಕೆ ತಮ್ಮೆಲ್ಲಾ ಶಕ್ತಿಯನ್ನು ಧಾರೆಯೆರೆದು ಮುನ್ನಡೆಸುತ್ತಿರುವುದು ಈ ಕಾಲದ ವೈಚಿತ್ರ್ಯವೇ ಸರಿ. ತಮ್ಮ ಬದುಕಿಗೆ ಮೂಲ ಆಧಾರಸ್ತಂಭವಾಗಿದ್ದ ಮನೆಯನ್ನು ಮಾರಿ, ಆ ಹಣವನ್ನು ಬ್ಯಾಂಕ್‌ನಲ್ಲಿ ಜಮಾ ಮಾಡಿ ಅದರಿಂದ ಬರುವ ಬಡ್ಡಿಯಿಂದ ಆಶ್ರಮ ನಡೆಸುತ್ತಿದ್ದುದನ್ನು ಕೇಳಿದರೆ ಮನಸ್ಸು ಆರ್ದ್ರಗೊಳ್ಳುತ್ತದೆ. ಅವರನ್ನು ಸಂಪರ್ಕಿಸಿ ಅವರ ಬದುಕನ್ನು ಅವಲೋಕನ ಮಾಡುತ್ತಾ ಹೋದರೆ, ಅವರ ನಿಜ ವ್ಯಕ್ತಿತ್ವ ಎಂತಹುದು ಎಂದು ಗೊತ್ತಾಗಬಹುದು. ಹೊರಜಗತ್ತಿಗೆ ಪರಿಚಯವೇ ಇರದ ರುದ್ರಮ್ಮನವರನ್ನು ಸಮಾಜಕ್ಕೆ ಪರಿಚಯ ಮಾಡಿಸಲೇಬೇಕು ಎನ್ನುವ ಒತ್ತಾಸೆಯೊಂದಿಗೆ ಲೇಖಕ ಉಜ್ಜಿನಿ ರುದ್ರಪ್ಪನವರು ಅಮ್ಮ ಎನ್ನುವ ಪುಸ್ತಕದಿಂದ ಅವರನ್ನು ಸಮಾಜಕ್ಕೆ ಪರಿಚಯಿಸುವ ಹೊಣೆ ಹೊತ್ತಿರುವುದು ಶ್ಲಾಘನೀಯ. ಆ ಮೂಲಕ ಉಜ್ಜಿನಿ ರುದ್ರಪ್ಪನವರು ಒಬ್ಬ ಸೃಜನಶೀಲ ಲೇಖಕ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಅಮ್ಮ ಪುಸ್ತಕದಲ್ಲಿ ರುದ್ರಮ್ಮನವರ ಬದುಕಿನ ಘಟನೆಗಳು, ಅವರು ಕಂಡ ಬದುಕು, ಅನಾಥಾಶ್ರಮದ ಸಮಗ್ರ ಪರಿಚಯವೇ ಪುಸ್ತಕ ರೂಪದಲ್ಲಿ ಹೊರಬಂದಿದೆ. ಅವರು ಕಂಡ ಪಡಿಪಾಟಲು, ಜಗತ್ತನ್ನು ಅವರನ್ನು ನಡೆಸಿಕೊಂಡ ರೀತಿ ಹೇಗಿತ್ತು ಎನ್ನುವ ಸಮಗ್ರ ದಾಖಲೆಯೂ ಈ ಪುಸ್ತಕದಲ್ಲಿದೆ.

ಅಮ್ಮ ಪುಸ್ತಕ ಲೋಕಾರ್ಪಣೆ
ಇಂದು ಅದೇ ಪುಸ್ತಕ ಕೊಟ್ಟೂರಿನ ಪಟ್ಟಣದಲ್ಲಿ ಬಾಲಾಜಿ ಕನ್ವೆನ್‌ಷನ್ ಹಾಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಪುಸ್ತಕ ಬಿಡುಗಡೆಯ ಸಮಾರಂಭ ಜೆ.ಸಿ.ಐ. ಮತ್ತು ಹಸಿರು ಹೊನಲು ತಂಡದ ಸಹಯೋಗದಲ್ಲಿ ನಡೆಯಲಿದ್ದು, ಡೋಣೂರು ಶ್ರೀ ಚಾನುಕೋಟಿ ಶ್ರೀಗಳು ಸಾನಿಧ್ಯ ವಹಿಸಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃ ಕುಂ.ವೀ. ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಮತ್ತು ಖ್ಯಾತ ವಿಮರ್ಶಕ ಡಾ.ವೆಂಕಟಗಿರಿ ದಳವಾಯಿ ಅವರು ಪುಸ್ತಕ ಪರಿಚಯ ಮಾಡಲಿದ್ದಾರೆ. ಕೊಟ್ಟೂರಿನ ಸೃಜನಶೀಲ ಮನಸ್ಸುಗಳು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here