ಸಂಡೂರು ಪುರಸಭೆಗೆ 45 ಲಕ್ಷ ರೂ. ಉಳಿತಾಯ ಬಜೆಟ್

0
79

◆2022-23ನೇ ಸಾಲಿನ ಆಯವ್ಯಯ ಮಂಡನೆ | ಪ್ರತಿ ಪಕ್ಷದ ನಾಯಕರ ವಿರೋಧ

ಸಂಡೂರು:ಪಟ್ಟಣದ ಪುರಸಭೆಯ ಅಧ್ಯಕ್ಷೆ ಅನಿತಾ ವಸಂತ್ ಕುಮಾರ್ ಹಾಗೂ ಉಪಾಧ್ಯಕ್ಷ ವೀರೇಶ ಸಿಂಧೆ ನೇತೃತ್ವದಲ್ಲಿ 2022-23ನೇ ಸಾಲಿನ 45,02,000 ರೂ, ಉಳಿತಾಯ ಬಜೆಟ್ ಮಂಡಿಸಲಾಯಿತು.

ಪುರಸಭೆ ಅಧ್ಯಕ್ಷರು ಮಾತನಾಡಿ 30,19,81,800, ರೂ. ಆದಾಯ 29,74,79,800 ರೂ ವೆಚ್ಚ ಕಳೆದು 45,02,000 ರೂ ಉಳಿತಾಯವಾಗಲಿದೆ ಎಂದು ಘೋಷಿಸಿದರು.

ಸದಸ್ಯ ಪ್ರತಿ ಪಕ್ಷದ ನಾಯಕ ಬಾಬು ಮುನಾಫ್ ಮಾತನಾಡಿ, ಕಳೆದ ಸಾಲಿನಲ್ಲಿ ವ್ಯಾಪಾರದ ಪರವಾನಗಿಗಾಗಿ 6 ಲಕ್ಷ ರೂ. ಗುರಿಗೆ 1.98 ಲಕ್ಷ ರೂ ವಸೂಲಾಗಿದೆ. ಬಜೆಟ್ ಸಂಪೂರ್ಣ ವಿಫಲತೆಯಿಂದ ಕೂಡಿದೆ. ಬಜೆಟ್ ತಯಾರಿಸುವ ಮುನ್ನ ಯಾವುದೇ ಸಂಘ,ಸಂಸ್ಥೆ, ಪುರಸಭೆ ಸದಸ್ಯರ ಸಭೆ ಕರೆದಿಲ್ಲ ಏಕಾಏಕಿಯಾಗಿ ಮಂಡಿಸಿದ ಬಜೆಟ್ ಗೆ ನಾವು ಒಪ್ಪುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಇಮಾಮ್ ಸಾಹೇಬ್ ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಾದ ಮಾಳ್ಗಿ ರಾಮಣ್ಣ, ಆಶಾ, ದುರುಗಮ್ಮ ಮಾತನಾಡಿ, ಬಜೆಟ್ ಮಂಡಿಸಲಾಗುತ್ತಿದೆ. ಒಪ್ಪುವುದು ಅಥವಾ ಒಪ್ಪದಿರುವುದು ಸ್ವತಂತ್ರ ಅಭಿಪ್ರಾಯ ಎಂದು ತಿಳಿ ಹೇಳಿದರು.

ಸದಸ್ಯ ರವಿಕಾಂತ್ ಮಾತನಾಡಿ ನಿವೇಶನ ನಿರ್ಮಾಣ ಹಾಗೂ ಕಟ್ಟಡ ನಿರ್ಮಾಣದ ಸಂಖ್ಯೆ ಹೆಚ್ಚುತ್ತಿದೆ ಆದರೆ ತೆರಿಗೆ ಮೊತ್ತ ಕಡಿಮೆ ಗುರಿ ಹೊಂದಲಾಗಿದೆ. ನಿರ್ವಹಣೆ ವೆಚ್ಚ ಎಂದು ಮೀಸಲಿಟ್ಟ ಹಣದಲ್ಲಿ ಪಟ್ಟಣದಲ್ಲಿ ತೋಡಲಾದ ಗುಂಡಿಗಳನ್ನು ಮುಚ್ಚಿಲ್ಲ ಎಂದು ಆಕ್ಷೇಪಿಸಿದರು.ಸದಸ್ಯೆ ಪುಷ್ಪಾ ಮಾತನಾಡಿ, ಬಜೆಟ್ ಪೂರ್ವದಲ್ಲಿ ಸದಸ್ಯರ ಅಭಿಪ್ರಾಯ ಪಡೆಯಬೇಕಿತ್ತು ಎಂದರು.

ಒಂದು ಹಂತದಲ್ಲಿ ಕೆಲ ಸದಸ್ಯರಿಂದ ಪಟ್ಟಣದ ಪ್ರತಿಷ್ಠಿತ ಶ್ರೀ ಶೈಲ ವಿದ್ಯಾಕೇಂದ್ರ ಮತ್ತು ಇತರೆ ಖಾಸಗಿ ಶಾಲೆ/ವ್ಯಕ್ತಿಗಳಿಂದ ರಾಜಕಾಲುವೆ ಹಾಗೂ ಪುರಸಭೆ ವ್ಯಾಪ್ತಿಯ ಜಾಗಗಳ ಒತ್ತುವರಿಯಾಗಿದೆ ಎಂದು ಅಧ್ಯಕ್ಷರು, ಮುಖ್ಯಾಧಿಕಾರಿಗಳ ಗಮನಕ್ಕೆ ತಂದಾಗ, ನಮ್ಮ ಪುರಸಭೆ ವ್ಯಾಪ್ತಿಯ ಜಾಗ ಮತ್ತು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಂತಹವರ ಮೇಲೆ ನಿಯಾಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ಹಾಗೂ ಮುಖ್ಯಾಧಿಕಾರಿ ತಿಳಿಸಿದರು.

ಸದಸ್ಯ ಹರ್ಷ ಮಾತನಾಡಿ, ಪಟ್ಟಣದಲ್ಲಿ ಎಷ್ಟು ಅಂಗಡಿಗಳಿವೆ, ಎಷ್ಟು ಅಂಗಡಿಗಳಿಗೆ ಪರವಾನಗಿ ಕೊಟ್ಟಿದ್ದೀರಿ ಎಂದು ಈವರೆಗೂ ಪುರಸಭೆ ಆಡಳಿತ ಮಾಹಿತಿ ನೀಡುತ್ತಿಲ್ಲ, ಹೈಟೆಕ್ ಪಾರ್ಕ್ ನಿರ್ವಹಣೆಯಾಗುತ್ತಿಲ್ಲ ಎಂದು ದೂರಿದರು.

ಸದಸ್ಯ ಹನುಮೇಶ ಮಾತನಾಡಿ, ನಾವು ಸದಸ್ಯರಾಗಿ ಆಯ್ಕೆಯಾಗಿ ಜನರಿಗೆ ಕನಿಷ್ಠ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಮಾನ ಹರಾಜಾಗುತ್ತಿದೆ.ಮಾಸಿಕ ಸಭೆ ಕರೆದು ಸಮಸ್ಯೆಗಳನ್ನು ಕೇಳಿ ಪರಿಹರಿಸಿ ಎಂದು ಒತ್ತಾಯಿಸಿದರು.

ಸದಸ್ಯರಾದ ಎಲ್ ಹೆಚ್ ಶಿವಕುಮಾರ್, ಕೆ.ವಿ ಸುರೇಶ್ ಮಾತನಾಡಿ ಪಾರ್ಕ್ ಗಳ ಒತ್ತುವರಿ ತಡೆಯಬೇಕು, ಕೆಲವರಿಗೆ ಪಾರ್ಕ್ ಗಳನ್ನು ಅವೈಜ್ಞಾನಿಕವಾಗಿ ಹಸ್ತಾಂತಿರಿಸಲಾಗಿದೆ ಎಂದು ದೂರಿದರು. ಪುರಸಭೆ ಮಾಡಿಕೊಂಡ ಒಪ್ಪಂದಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದರು. ಹಲವು ವಾರ್ಡ್ ಗಳ ಸದಸ್ಯರು ಇದ್ದರು. ಯೋಜನಾದಿಕಾರಿ ಪ್ರಭುರಾಜ್ ಹಗರಿ, ವ್ಯವಸ್ಥಾಪಕ ಖಾಜಾ ಮೈನುದ್ದೀನ್ ನಿರ್ವಹಿಸಿದರು

LEAVE A REPLY

Please enter your comment!
Please enter your name here