ಹೋರಾಟಗಾರರ ಫಲವಾಗಿ ದೊರೆತ ಸ್ವಾತಂತ್ರ್ಯಕ್ಕೆ 75ರ ಸಂಭ್ರಮ

0
430

ಭಾರತ ಇಂದು ಸ್ವಾತಂತ್ರ್ಯ ಪಡೆದು 75 ವರ್ಷಗಳಾಗಿದ್ದು, ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡುತ್ತಿದೆ. ರಾಷ್ಟ್ರೀಯ ಹೆಮ್ಮಯ ಪ್ರತೀಕವಾದ ತ್ಯಾಗ, ಶಾಂತಿ, ಪ್ರಗತಿಯ ಸಂಕೇತವನ್ನು ಸೂಚಿಸುವ, ಧರ್ಮವನ್ನು ಪ್ರತಿನಿಧಿಸುವ ಅಶೋಕ ಚಕ್ರ ಹಾಗೂ ಮಧ್ಯ ಇರುವ 24 ಗೆರೆಗಳು ವಿವಿಧ ಆಚರಣೆ, ಸಂಸ್ಕೃತಿ, ವಿವಿಧತೆಯಂತಹ ಬಹುತ್ವವನ್ನು ಪ್ರತಿನಿಧಿಸುವ ತ್ರಿವರ್ಣ ಧ್ವಜವನ್ನು ಇಡೀ ದೇಶದ ಜನತೆ ಮನೆ ಮನೆಗಳ ಮೇಲೆ ಹಾರಿಸಿ ಸ್ವಾತಂತ್ರ್ಯದ ಸಂಭ್ರಮವನ್ನು ಮುಗಿಲೆತ್ತರಕ್ಕೆ ತಲುಪಿಸಿ ಸಂಭ್ರಮಿಸಿದ್ದಾರೆ. ಈ ಸಂಭ್ರಮಕ್ಕೆ ಕಾರಣ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ಹೋರಾಟ, ತ್ಯಾಗ ಬಲಿದಾನಗಳೇ ಆಗಿವೆ. ಸ್ವಾತಂತ್ರ್ಯ ತಂದುಕೊಡಲು ಕೋಟ್ಯಂತರ ಭಾರತೀಯರ ನಿರಂತರ ಹೋರಾಟದ ಶ್ರಮವಿದೆ. ನಾವೆಲ್ಲರೂ ಇಂದು, ಮುಂದು, ಎಂದೆಂದೂ ಅವರನ್ನು ಸ್ಮರಿಸಿಕೊಳ್ಳಬೇಕಿದೆ.

ತಕ್ಕಡಿ ಹಿಡಿದು ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಈಸ್ಟ್ ಇಂಡಿಯಾ ಕಂಪನಿ ಇಲ್ಲಿನ ಪರಿಸ್ಥಿತಿಯ ಲಾಭವನ್ನು ಅರಿತು ತಮ್ಮ ಮಾನಸಿಕ ತಕ್ಕಡಿಯಲ್ಲಿ ತೂಗಿ ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟಿ, ಹೊಡೆದಾಳುವ ನೀತಿ ಅನುಸರಿಸಿ ಕೊನೆಗೆ ಭಾರತವನ್ನೇ ತಮ್ಮ ಕೈವಶ ಮಾಡಿಕೊಂಡು 200 ವರ್ಷಗಳ ಕಾಲ ಆಳ್ವಿಕೆಯನ್ನು ನಡೆಸಿದರು. ಭಾರತಾಂಬೆಯನ್ನು, ಆಕೆಯ ಮಕ್ಕಳನ್ನು ಬ್ರಿಟಿಷರ ದುರಾಡಳಿತದ ಸಂಕೋಲೆಯಿಂದ ಬಿಡಿಸಲು ಅನೇಕ ಮಹನೀಯರು ಹೋರಾಡಿದರು. ಸತ್ಯ ಹಾಗೂ ಅಹಿಂಸೆಯ ಮೂಲಕ ಸ್ವಾತಂತ್ರ್ಯವನ್ನು ಪಡೆಯಬೇಕೆಂದು ಹೊರಟ ಮಹಾತ್ಮ ಗಾಂಧೀಜಿಯವ ನೇತೃತ್ವದಲ್ಲಿ ಮಂದಗಾಮಿಗಳು, “ನಮಗೆ ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾಂತ್ರ್ಯ ತಂದುಕೊಡುತ್ತೇನೆ” ಎಂದು ಯುವ ಮನಸ್ಸುಗಳನ್ನು ಹುರಿದುಂಬಿಸಿದ ನೇತಾಜಿ ಸುಭಾಷ್ ಚಂದ್ರಭೋಸ್, “ಸ್ವರಾಜ್ಯ ನನ್ನ ಜನ್ಮ ಸಿದ್ದಹಕ್ಕು, ಅದನ್ನು ಪಡೆದೇ ಪಡೆಯುತ್ತೇನೆ” ಎಂದು ಪ್ರತಿಜ್ಞೆ ಮಾಡಿ ಹೋರಾಡಿದ ಬಾಲಗಂಗಾಧರ ತಿಲಕ ಮುಂದಾತದವರ ನೇತೃತ್ವದಲ್ಲಿ ತೀವ್ರಗಾಮಿಗಳ ಹೋರಾಟದ ನೇತೃತ್ವದಲ್ಲಿ ಅನೇಕ ಮಹನೀಯರು ಸೇರಿಕೊಂಡು ಬಲನೀಡಿದರು. “ನಾನು ಸಾಯಬಹುದು, ನನ್ನ ಹೋರಾಟದ ಕಿಚ್ಚು ಸಾಯುವುದಿಲ್ಲ, ಮತ್ತೆ ಸಾವಿರಾರು ಭಗತ್ ಜನಿಸುತ್ತಾರೆ” ಎಂದು ನಗುನಗುತ್ತಲೇ ನೇಣಿಗೆ ಕೊರಳನ್ನು ನೀಡಿ ಹುತಾತ್ಮರಾದ ಭಗತ್ ಸಿಂಗ್, ಬ್ರಿಟಿಷರ ಲಾಟಿಯ ಏಟಿನಿಂದ ಪ್ರಾಣತೆತ್ತ ಲಾಲ ಲಜ್ ಪತ್ ರಾಯ್, ತಮ್ಮ ಹೋರಾಟದಿಂದಲೇ ‘ಸರ್ದಾರ್’ ಎಂದು ಬಿರುದು ಹೊಂದಿದ್ದ ಉಕ್ಕಿನ ಮನುಷ್ಯ ವಲ್ಲಭ್ ಬಾಯಿ ಪಟೇಲ್, ಚಂದ್ರ ಶೇಖರ್ ಅಜಾದ್, ಮೌಲಾನ ಅಬ್ದುಲ್ ಕಲಾಂ, ಲಾಲಬಹದ್ದೂರ್ ಶಾಸ್ತ್ರಿ ಹೀಗೆ ಅಸಂಖ್ಯ ಹೋರಾಟಗಾರರು ಭಾರತ ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಕಾಣಿಕೆಯನ್ನು ನೀಡಿದ್ದಾರೆ.

ಈ ಹೋರಾಟದಲ್ಲಿ ಬರೀ ಪುರುಷರು ಮಾತ್ರವಿಲ್ಲ. ಅನೇಕ ವೀರಾಗ್ರಣಿ ಮಹಿಳೆಯರೂ ಇದ್ದಾರೆ. 1824ರಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದು, ಹೀನಾಯವಾಗಿ ಸೋಲಿಸುವ ಮೂಲಕ ಬ್ರಿಟಿಷರ ಹೋರಾಟಕ್ಕೆ ನಾಂದಿ ಹಾಡಿದ ಪ್ರಥಮ ಮಹಿಳೆಯಾಗಿ ಕಿತ್ತೂರು ರಾಣಿ ಚನ್ನಮ್ಮ ಕಂಗೊಳಿಸುತ್ತಾಳೆ. ತಾಯಿ ಚನ್ನಮ್ಮನ ಹೋರಾಟಕ್ಕೆ ಬೆಂಗಾವಲಾಗಿ ನಿಂತಿದ್ದರೆ ಭಹುಶ: ಸ್ವಾತಂತ್ರ್ಯ ಇನ್ನೂ ಬೇಗ ದೊರೆಯುತ್ತಿತ್ತೇನೋ. ದುರಂತವೆಂದರೆ, ನಮ್ಮವರೇ ಅವರ ಬೆನ್ನಿಗೆ ಚೂರಿ ಹಾಕಿ ಬ್ರಿಟಿಷರಿಗೆ ಸಹಾಯ ಮಾಡಿ ಸೆರೆ ಸಿಗುವಂತೆ ಮಾಡಿದ್ದು ದುರಂತವೇ ಸರಿ. ತನ್ನ ದತ್ತು ಮಗನನ್ನು ಬೆನ್ನಿಗೆ ಕಟ್ಟಿಕೊಂಡು ರಣಾಂಗಣದಲ್ಲಿ ವೀರಗಚ್ಚೆಯನ್ನು ಹಾಕಿ ಹೋರಾಡಿದ ಝಾನ್ಸಿರಾಣಿ ಲಕ್ಷ್ಮಿಬಾಯಿ, ಕೆಳದಿ ಚನ್ನಮ್ಮ, ಬೇಗಂ ಹಝರತ್ ಮಹಲ್, ಮೇಡಂ ಬಿಕಾಜಿ ಕಾಮಾ, ಸುಚೇತ ಕೃಪಲಾನಿ, ಅರುಣಾ ಅಸಾಫ್ ಅಲಿ, ದುರ್ಗಾಬಾಯ್ ದೇಶ್ ಮುಖ್, ಆ್ಯನಿಬೆಸೆಂಟ್, ಮಾತಾಂಗಿನಿ ಹಜ್ರಾ ಮುಂತಾದವರು ಪ್ರಮುಖರಾಗಿದ್ದಾರೆ.

ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಇಡೀ ದೇಶವನ್ನು ಸುತ್ತಾಡಿ, ಜನರನ್ನು ಹುರಿದುಂಬಿಸುತ್ತಿದ್ದರು. ಹೀಗೆ 02.03.1934ರಂದು ಈಗಿನ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣಕ್ಕೆ ಆಗಮಿಸಿ ತೇರು ಬಯಲಿನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ನಡೆಸಿ ಬ್ರಿಟಿಷರ ವಿರುದ್ಧ ಸಾರ್ವಜನಿಕರಿಗೆ ಸ್ಪೂರ್ತಿಯ ಮಾತುಗಳನ್ನಾಡಿದರು. ಅವರ ಮಾತುಗಳಿಗೆ ಪ್ರಭಾವಿತರಾಗಿ ಈಗಿನ ವಿಭಜಿತ ಕೂಡ್ಲಿಗಿ ತಾಲೂಕು ಸೇರಿ 80ಕ್ಕೂ ಹೆಚ್ಚು ಜನರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದು ಇತಿಹಾಸ. ಗೊರ್ಲಿ ಶರಣಪ್ಪ ಇವರ ಪತ್ನಿ ರುದ್ರಮ್ಮ, ಬಣಕಾರ ಗೌಡಪ್ಪ, ಬಣಕಾರ ಸಿದ್ದಲಿಂಗಪ್ಪ, ಅಗಡಿ ಗುರುಸಿದ್ದಯ್ಯ ಸೇರಿದಂತೆ ಕೊಟ್ಟೂರು ಪಟ್ಟಣದಲ್ಲಿ 35 ಜನ, ಉಜ್ಜಿನಿಯಲ್ಲಿ 6 ಜನ, ತೂಲಹಳ್ಳಿಯಲ್ಲಿ 5ಜನ, ಹರಾಳು ಗ್ರಾಮದಲ್ಲಿ 4 ಜನ, ಕೋಗಳಿಯಲ್ಲಿ 3 ಜನ ಹಾಗೂ ಹರಾಳು ಗ್ರಾಮದಲ್ಲಿ ಚನ್ನವೀರಯ್ಯ ಸೇರಿ ಕೊಟ್ಟೂರು ತಾಲೂಕಿನಲ್ಲಿ 55ಕ್ಕೂ ಹೆಚ್ದು ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದು ತಾಲೂಕಿನ ಜನತೆ ಇಂದು ಹೆಮ್ಮೆಪಡುವ ವಿಷಯವಾಗಿದೆ.

ಹೀಗೆ ಅನೇಕ ಮಹನೀಯರ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಅಸಂಖ್ಯಾತ ಹೋರಾಟಗಾರರು ಬೆಂಬಲ ಸೂಚಿಸಿ ಹೋರಾಟದ ಕಿಚ್ಚು ಹೆಚ್ಚಾಗಲು ಕಾರಣವಾಗಿದೆ. ಸೆರೆಮನೆವಾಸ, ಬ್ರಿಟಿಷರ ಲಾಟಿ ಏಟು, ಬೂಟಿನ ಕಾಲ್ತುಳಿದ, ಅವರ ಬಂದೂಕಿಗೆ ಎದೆಗೊಟ್ಟು ಭಾರತ ಮಾತೆಗೆ ನೆತ್ತರು ಹರಿಸಿ ಗಳಿಸಿ ಕೊಟ್ಟ ಸ್ವಾತಂತ್ರ್ಯ ಸ್ವೇಚ್ಚಾಚಾರವಾಗಬಾರದು. ಅದನ್ನು ಇಂದು ಉಳಿಸಿಕೊಂಡು ಹೋಗಲು ಪ್ರತಿಯೊಬ್ಬ ಭಾರತೀಯನು ಶ್ರಮಿಸಿಬೇಕಿದೆ.

ಭಾರತವನ್ನು ಬ್ರಿಟಿಷರು ಬರುವ ಪೂರ್ವದಲ್ಲೇ ಮೊಗಲರು, ಮಹಮಮ್ಮದೀಯರು, ಪ್ರೆಂಚರು, ಡಕ್ಕರು, ಫೋರ್ಚಗೀಸರು ಹೀಗೇ ಅನೇಕರು ಬಂದು ಇಲ್ಲಿನ ಸಂಪತ್ತನ್ನ ನಿರಂತರವಾಗಿ ದೋಚಿದ್ದಾರೆ. ಬ್ರಿಟಿಷರು 200 ವರ್ಷಗಳ ಕಾಲ ಕೊಳ್ಳೆಹೊಡೆದಿದ್ದಾರೆ. ಆದರೂ ಭಾರತ ಈಗಲೂ ವಿಶ್ವದಲ್ಲೇ ಸಂಪಧ್ಬರಿತ ದೇಶವಾಗಿದೆ. ಈ ದೇಶದ ಸಂಪತ್ತು ಉಳಿಯಬೇಕಾದರೆ, ಬ್ರಿಟಿಷರು ಹೋದ ನಂತರ ಉಳಿದಿರುವ ಭಾರತೀಯ ಬ್ರಿಟಿಷರು ಲೂಟಿ ಮಾಡುವುದನ್ನು ನಿಲ್ಲಿಸಬೇಕು. ಭ್ರಷ್ಠಾಚಾರ ಕೊನೆಗೊಳ್ಳಬೇಕು, ಹೆಣ್ಣಿನ ಮೇಲಿನ ದೌರ್ಜನ್ಯ, ಹತ್ಯಾಚಾರ ನಿಲ್ಲಬೇಕು, ದುಡಿಯಲು ಸಿದ್ದವಿರುವ ಯುವಕರಿಗೆ ಉದ್ಯೋಗ ಸಿಗಬೇಕು. ಭಾರತದಲ್ಲಿ ಕಲಿತು ಹಣದಾಸೆಗೆ ವಿದೇಶಕ್ಕೆ ಹೊಲಸೆ ಹೋಗುವ ಯುವ ಜನತೆ ದೇಶದ ಏಳಿಗೆಗಾಗಿ ಭಾರತದಲ್ಲೇ ಇದ್ದು ದೇಶದ ಪ್ರಗತಿಗೆ ಶ್ರಮಿಸಬೇಕು. ಪ್ರಗತಿಯ ಪಥದಲ್ಲಿ ಸಾಗುತ್ತಿರುವ ದೇಶವು ಪ್ರಗತಿ ಹೊಂದಿದ ದೇಶವಾಗಿ ಇಡೀ ವಿಶ್ವದಲ್ಲಿ ದೊಡ್ಡಣ್ಣನಾಗಿ ಮೆರೆಯಬೇಕು. ಅದಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಮಹನೀಯ ತ್ಯಾಗ, ಬಲಿದಾನವನ್ನು ಅರ್ಥಮಾಡಿಕೊಂಡು, ಅವರ ಶ್ರಮವನ್ನು ಅರಿತು ಅವರ ಆದರ್ಶಗಳನ್ನು ಪಾಲಿಸಿ ಅವರಿಗೆ ಗೌರವನ್ನು ತೋರಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ. ಅವರ ಶ್ರಮ ಸಾರ್ಥಕವಾಗಲಿ, ಅವರ ಹೋರಾಟದ ಫಲ ನಿರಂತರವಾಗಲಿ. ನಮ್ಮ ಹೆಮ್ಮೆಯ ಭಾರತದ ತ್ರಿವರ್ಣ ಧ್ವಜ ಬಾನೆತ್ತರಕ್ಕೆ ಹಾರಿ ವಿಶ್ವದೆಲ್ಲಡೇ ಮಿನುಗಲಿ ಎನ್ನುವುದೇ ನಮ್ಮಯ ಆಶಯ.

ಸಿ.ಮ.ಗುರುಬಸವರಾಜ,
ಹವ್ಯಾಸಿ ಬರಹಗಾರರು.
ಮೊ: 6366112086

LEAVE A REPLY

Please enter your comment!
Please enter your name here