ಹಳೇ ತಾಲೂಕ ಕಚೇರಿ ಕಟ್ಟಡ, ತಾಯಿ, ಮಕ್ಕಳ ಆಸ್ಪತ್ರೆಗೆ ಮೀಸಲು- ಶಾಸಕ ನೇಮಿರಾಜ್ ನಾಯ್ಕ್ .

0
34

ಹಗರಿಬೊಮ್ಮನಹಳ್ಳಿ, ಸೆ,13
ಖಾಲಿ ಇರುವ ಹಳೇ ತಾಲೂಕ ಕಚೇರಿ ಪಟ್ಟಣದಲ್ಲಿ ನೂತನವಾಗಿ ಆರಂಭಿಸಲು ಉದ್ದೇಶಿಸಿರುವ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸೂಕ್ತವಾಗಿದೆ ಎಂದು ಕ್ಷೇತ್ರದ ಶಾಸಕರಾದ ಕೆ.ನೇಮಿರಾಜ್ ನಾಯ್ಕ್ ಹೇಳಿದರು.

ಬುಧವಾರ ಮಧ್ಯಾಹ್ನ ಪಟ್ಟಣದ ರಾಮನಗರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭವ ಅಭಿಯಾನಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡುತ್ತಾ,
ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಬಡವರು, ಅರ್ಥಿಕ ದುರ್ಬಲರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಆ ಜನರಿಗಾಗಿ ಸುರಕ್ಷಿತವಾದ ಹೆರಿಗೆ, ಹೆರಿಗೆ ನಂತರ ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ ಮಾಡಲು ಸುಸಜ್ಜಿತವಾದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸೌಲಭ್ಯವನ್ನು ನೀಡುವುದು ನನ್ನ ಧ್ಯೇಯ ಹೌದಾಗಿದೆ ಎಂದರು.

ಏಕೆಂದರೆ, ಇತ್ತಿಚಿನ ದಿನಗಳಲ್ಲಿ ಸ್ಥಳಿಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕವಾದ ಹೆರಿಗೆ ಹಾಗೂ ಮಕ್ಕಳ ಆರೋಗ್ಯ ರಕ್ಷಣೆಯ ಸೌಲಭಗಳಿಲ್ಲ ಎನ್ನುವ ಕೊರಗು ಸಾಕಷ್ಟು ಇದೆ. ಕೊಪ್ಪಳ, ಬಳ್ಳಾರಿ, ಹೊಸಪೇಟೆ, ದಾವಣಗೆರೆ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುತ್ತಾರೆನ್ನುವ ದೂರುಗಳಿವೆ. ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಶುಲ್ಕದ ಬರೆಯು ಬಿಳುತ್ತಿದೆ ಎಂದು ಜನರು ಚುನಾವಣೆ ಸಮಯದಲ್ಲಿ ನನ್ನೇದುರಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದರು ಎಂದು ಶಾಸಕ ನೇಮಿರಾಜ್ ಹೇಳಿದರು.

ಹೈಟೇಕ್ ಮಾದರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭದೊಂದಿಗೆ ಈ ಎಲ್ಲ ಕೊರಗನ್ನು ನಿವಾರಿಸಲು ಸಾಧ್ಯ ಇದ್ದು.
ಈಗಾಗಲೆ ಮಿನಿ ವಿಧಾನಸೌಧ ಕಾರ್ಯಾರಂಭಗೊಂಡಿರುವುದ ರಿಂದಾಗಿ ತಾಲೂಕ ಕಚೇರಿ ಇದ್ದ ಕಟ್ಟಡ ಈಗ ಖಾಲಿ ಆಗಿದೆ. ಈ ಕಟ್ಟಡವನ್ನು ಸುಸಜ್ಜಿತವಾಗಿ ದುರಸ್ಥಿಗೊಳಿಸಿ, ನವೀಕರಣಮಾಡಿದರೆ ಉತ್ತಮ ಆಸ್ಪತ್ರೆಯ ಸೌಲಭ್ಯ ಕ್ಷೇತ್ರದ ಜನರಿಗೆ ದೊರಕಲಿದೆ ಎಂದರು.

ಹಳೇ ತಾಲೂಕ ಕಚೇರಿ ಪಟ್ಟಣದ ಹೃದಯ ಭಾಗದಲ್ಲಿದೆ. ಈ ಕಟ್ಟಡ ಹೊಸ ಮತ್ತು ಹಳೇ ಬಸ್ ನಿಲ್ದಾಣಗಳಿಗೆ, ರೈಲ್ವೆ ಸ್ಟೇಷನ್, ಬಸವೇಶ್ವರ ಬಜಾರಕ್ಕೂ ತೀರಾ ಸನಿಹದಲ್ಲಿದೆ. ಹೆರಿಗೆಗಾಗಿ ಮಹಿಳೆಯರು, ಅವರ ಅವಲಂಬಿತರು ಮನೆಯಿಂದ ಬಂದು ಹೋಗಲು ಸರ್ವ ಋತುವಿನಲ್ಲೂ ಎಲ್ಲಾ ಅನುಕೂಲಗಳು ಸನಿಹದಲ್ಲಿಯೇ ಸಿಗಲಿವೆ. ಈ ಕಾರಣಕ್ಕೇನೆ ಈ ಕಟ್ಟಡವನ್ನು ಆಸ್ಪತ್ರೆಗೆ ಆಯ್ಕೆ ಮಾಡಲು ನಿರ್ಧಾರಕ್ಕೆ ಬರಲಾಗಿದೆ ಎಂದರು.

ಅತ್ಯಂತ ವಿಶಾಲವಾಗಿರುವ ಈ ಕಟ್ಟಡ ತಾಯಿ ಮತ್ತು ಮಗು ಆಸ್ಪತ್ರೆಗೆ ಅತ್ಯಂತ ಸೂಕ್ತವಾಗಿದ್ದು, ಗರ್ಭೀಣಿಯರು, ಮಕ್ಕಳು ಆರೋಗ್ಯ ಕಾಪಾಡಲು ಇದನ್ನು ಉದ್ದೇಶಿಸಿತ ಆಸ್ಪತ್ರೆಗಾಗಿಯೇ ಮೀಸಲಿಡಬೇಕೆಂದು ಇಷ್ಟರಲ್ಲಿಯೇ ಸಿಎಂ, ಡಿಸಿಎಂ ಹಾಗೂ ಲೋಕೋಪಯೋಗಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿಯಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಶಾಸಕ ನೇಮಿರಾಜ್ ನಾಯ್ಕ್ ಹೇಳಿದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭಕ್ಕೆ ಅಗತ್ಯವಾದ ದಾಖಲೆ, ವಿವರಗಳು, ಹಾಗೇನೆ ಹಳೇ ತಾಲೂಕ ಕಚೇರಿ ಕಟ್ಟಡವನ್ನು ಆಸ್ಪತ್ರೆಗೆ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವ ಬಗ್ಗೆ ಒಂದು ಸವಿವರವಾದ ವರದಿಯನ್ನು ಸಿದ್ದಪಡಿಸಲು ಸಾರ್ವಜನಿಕ ಆಸ್ಪತ್ರೆಯ ಮುಖ್ಯಾವೈದ್ಯಾಧಿಕಾರಿ ಅಚ್ಯುತ್ ರಾಯ್ ಅವರಿಗೆ ಶಾಸಕರು ಸೂಚಿಸಿದರು.

ಪರಿಶೀಲನೆ: ಕಾರ್ಯಕ್ರಮದ ನಂತರ ಆಸ್ಪತ್ರೆಯಲ್ಲಿನ ಲೇಬರ್ ವಾರ್ಡ್, ಓಟಿ ಕೇಂದ್ರ, ಜನರಲ್ ವಾರ್ಡ್ ಗಳಿಗೆ ಭೇಟಿ ನೀಡಿದ ಶಾಸಕರು ಅಲ್ಲಿ ದಾಖಲಾದ ರೋಗಿಗಳನ್ನು ಮಾತನಾಡಿಸಿ, ಅವರ ಯೋಗ,ಕ್ಷೇಮ, ಆರೋಗ್ಯದ ಬಗ್ಗೆ ಕೇಳಿ ತಿಳಿದುಕೊಂಡು, ಬೇಗ ಗುಣಮುಖರಾಗುವಂತೆ ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ನೇಮಿರಾಜ್ ನಾಯ್ಕ್ ಸೂಚಿಸಿದರು.

ಸಿಎಂಓ ಅಚ್ಯುತ್ ರಾಯ್, ಮಕ್ಕಳ ತಜ್ಞ ತಿಪ್ಪೇಸ್ವಾಮಿ, ಪ್ರಭಾರಿ ಟಿಹೆಚ್ ಓ ಡಾ.ಗಂಗಮ್ಮ, ತಾಪಂ ಇಓ ಜಿ.ಪರಮೇಶ್ವರ ಸೇರಿದಂತೆ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here