ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ತಾಲೂಕಾವಾರು ಕ್ರಿಯಾ ಯೋಜನೆ ಸಲ್ಲಿಸಲು ಜಿ.ಪಂ. ಸಿಇಓ ಡಾ:ಸುಶೀಲಾ ಬಿ. ನಿರ್ದೇಶನ

0
240

ಧಾರವಾಡ.ಫೆ.22: ಧಾರವಾಡದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಿಇಓ ಡಾ.ಸುಶೀಲಾ.ಬಿ. ಅವರ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು ಇತ್ತಿಚಿಗೆ (ಫೆ.18) ಸಭೆ ಜರುಗಿತು.
ಸಿಇಓ ಡಾ.ಸುಶೀಲಾ.ಬಿ. ಅವರು ಮಾತನಾಡಿ, 2021 ರ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗಾಗಿ ಜಿಲ್ಲೆಯಲ್ಲಿ ಹಮ್ಮಿಕೊಂಡ ನೇರ ಫೋನ್ ಇನ್ ಕಾರ್ಯಕ್ರಮವು ಒಂದು ಉತ್ತಮವಾದ ಕಾರ್ಯಕ್ರಮವಾಗಿದ್ದು, ತಾವು ಸಹ ಈ ಫೋನ್‍ಇನ್ ಕಾರ್ಯಕ್ರಮದಲ್ಲಿ ಹಾಜರಾಗಿ ಮಕ್ಕಳೊಂದಿಗೆ ಮಾತನಾಡುವುದಾಗಿ ಅವರು ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ ಜನೆವರಿ 27, 28 ಹಾಗೂ 29/01/2021 ಈ ಮೂರು ದಿನಗಳಂದು ನಡೆಸಲಾದ ಕಲಿಕಾ ಸೇತು ಪರೀಕ್ಷೆಯ ಫಲಿತಾಂಶ ವಿಶ್ಲೇಷಣೆಯನ್ನು ಮಾಡಿ ಧಾರವಾಡ ಗ್ರಾಮೀಣ ಹಾಗೂ ಕುಂದಗೋಳ ತಾಲೂಕಿನ ಫಲಿತಾಂಶದ ಸುಧಾರಣೆಯ ಬಗ್ಗೆ ವಿಶೇಷ ಕ್ರಮ ಕೈಕೊಳ್ಳಲು ತಿಳಿಸಿದರು. ವಾರಕ್ಕೊಮ್ಮೆ ಸಮಸ್ಯೆ ಪರಿಹಾರ ಅವಧಿಯನ್ನು ನಡೆಸಬೇಕು ಎಂದು ಅವರು ಸೂಚಿಸಿದರು.
ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಆನ್ವಯಿಕ ಪ್ರಶ್ನೆಗಳನ್ನು ಬಿಡಿಸುವಲ್ಲಿ ಮಕ್ಕಳು ಅಸಮರ್ಥರಾಗಿರುವುದು ಕಂಡುಬರುತ್ತಿದೆ. ಆದ್ದರಿಂದ ನುರಿತ ಸಂಪನ್ಮೂಲ ಶಿಕ್ಷಕರಿಂದ ಮಾರ್ಗದರ್ಶನ ಮಾಡಿಸುವ ಬಗ್ಗೆ ಕ್ರಮ ವಹಿಸಲು ತಿಳಿಸಿದರು.
ಮಕ್ಕಳಿಗೆ ಪ್ರತಿದಿನ ಅಭಿಪ್ರೇರಣೆ ಮಾಡಿ ಪರೀಕ್ಷೆಯ ಕುರಿತಾಗಿ ಆತ್ಮ ವಿಶ್ವಾಸವನ್ನು ಮೂಡಿಸಬೇಕು ಈ ಮೂಲಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಬಲ್ಲೆ ಎಂಬ ಧೈರ್ಯ ತುಂಬಬೇಕು ಹಾಗೂ ಪಾಲಕರಿಗೂ ಕೂಡ ಈ ಕುರಿತು ಮಾಹಿತಿ ನೀಡಬೇಕು ಎಂಬ ಸಲಹೆ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಪರೀಕ್ಷೆಗೆ ಕಡಿಮೆ ಅವಧಿ ಲಭ್ಯವಿರುತ್ತದೆ. ಕಾರಣ ಅದಕ್ಕನುಗುಣವಾಗಿ ಶೇ.30 ಪಠ್ಯವನ್ನು ಕಡಿತಗೊಳಿಸಲಾಗುತ್ತದೆ. ಆದ್ದರಿಂದ ಲಭ್ಯವಿರುವ ಸಮಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ನಿರ್ದೇಶನ ನೀಡಿದರು.
ಶಾಲೆಗಳಲ್ಲಿ ಪ್ರತಿ ವಾರ ಎಲ್ಲ ವಿಷಯಗಳಲ್ಲಿ ಘಟಕ ಪರೀಕ್ಷೆಗಳನ್ನು ಮಾಡಿ ವಾರವಾರಕ್ಕೆ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸುವುದು, ಕ್ಷೇತ್ರಶಿಕ್ಷಣಾಧಿಕಾರಿಗಳು ಫಲಿತಾಂಶ ಸುಧಾರಣೆಗಾಗಿ ತಮ್ಮ ತಾಲೂಕಿನ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಂಡು ಅನುಷ್ಠಾನ ಮಾಡಲು ಮತ್ತು ಅದರ ಪ್ರತಿಯನ್ನು ಜಿಲ್ಲಾ ಪಂಚಾಯತ್‍ಗೆ ಸಲ್ಲಿಸಲು ತಿಳಿಸಿದರು. ವಿದ್ಯಾರ್ಥಿಗಳಿಗೆ ವೈಯಕ್ತಿಕ ವೇಳಾಪಟ್ಟಿ ತಯಾರಿಸಿ ಕೊಡುವುದು ಹಾಗೂ ಅಣಕು ಪರೀಕ್ಷೆಗಳನ್ನು ನಡೆಸಲು ಸೂಚಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಲ್. ಹಂಚಾಟೆ ಮಾತನಾಡಿ, 2020-21 ನೇ ಸಾಲಿಗೆ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಉತ್ತಮಗೊಳಿಸುವಲ್ಲಿ ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಕೈಗೊಂಡ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಕಲಿಕಾ ಸೇತು ಕಾರ್ಯಕ್ರಮದಡಿ ಜಿಲ್ಲಾದ್ಯಂತ ಏಕರೂಪದ ಪರೀಕ್ಷೆಯನ್ನು ನಡೆಸಿ ಫಲಿತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ. ಈ ಫಲಿತಾಂಶದ ಆಧಾರದ ಮೇಲೆ ಜಿಲ್ಲಾ ಹಂತದಲ್ಲಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿಗಳು, ಡಿವೈಪಿಸಿ., ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕರು ಹಾಗೂ ತಾಲೂಕಾ ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here