ಕಲ್ಯಾಣ ಕರ್ನಾಟಕ ಉತ್ಸವ ಪೂರ್ವಭಾವಿ ಸಿದ್ಧತಾ ಸಭೆ, ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವ ಅರ್ಥಪೂರ್ಣ ಆಚರಣೆಗೆ ಸಕಲ ಸಿದ್ಧತೆ ಕೈಗೊಳ್ಳಿ: ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ

0
92

ಬಳ್ಳಾರಿ, ಸೆ.09 : ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮವನ್ನು ಸೆ.17 ರಂದು ಬೆಳಗ್ಗೆ 9ಕ್ಕೆ ನಗರದ ಮುನಿಸಿಪಾಲ್ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು.ಇದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುನಿಸಿಪಾಲ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರವಾಸೋದ್ಯ,ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ನೆರವೇರಿಸಬೇಕು. ಕೊರೊನಾ ಮೂರನೆ ಅಲೆಯು ಎದುರಾಗುವ ಸಂಭವವಿದ್ದು, ಕೋವಿಡ್ ತಡೆಯುವ ನಿಟ್ಟಿನಲ್ಲಿ ಸರಳವಾಗಿ ಉತ್ಸವ ದಿನಾಚರಣೆ ಕಾರ್ಯಕ್ರಮ ಆಚರಿಸಲಾಗುತ್ತದೆ. ಉತ್ಸವ ಕಾರ್ಯಕ್ರಮಕ್ಕೆ ಮಕ್ಕಳನ್ನು ಸೇರಿಸಬೇಡಿ ಎಂದರು. ಎಲ್ಲಾ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿ. ನಾವೆಲ್ಲಾ ಕಲ್ಯಾಣ ಕರ್ನಾಟಕದ ಸೌಲಭ್ಯ ಪಡೆಯುತ್ತಿದ್ದೇವೆ. ಕೆಕೆಆರ್‍ಡಿಬಿಯಿಂದ ಜಿಲ್ಲೆಯ ಅಭಿವೃದ್ಧಿಯಾಗುತ್ತಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದರು.
ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಅನ್ವಯ ಕಾರ್ಯಕ್ರಮ ಆಯೋಜನೆ ಮಾಡಬೇಕು. ತಪ್ಪದೇ ಮಾಸ್ಕ್ ಧರಸಿ, ಸ್ಯಾನಿಟೈಸ್ ಮಾಡಿಕೊಂಡು ಸಾಮಾಜಿಕ ಅಂತರ ಪಾಲಿಸುವ ಮೂಲಕ ಎಲ್ಲಾ ಕಡೆ ಕಾರ್ಯಕ್ರಮ ಆಚರಿಸುವಂತೆ ಅವರು ತಿಳಿಸಿದರು.
ಕಲ್ಯಾಣ ಕರ್ನಾಟಕ ಉತ್ಸವ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಿಗೆ ವಹಿಸಲಾದ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ್ ಕೆ.ರಂಗಣ್ಣನವರ್ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here