ಅವರ ಅಸಂತೋಷದಲ್ಲೇ ಇವರ ಸಂತೋಷವಿದೆ

0
94

ರಾಜ್ಯ ಬಿಜೆಪಿಯ ಮೇಲಿನ ಹಿಡಿತಕ್ಕಾಗಿ ನಿರಂತರವಾಗಿ ಬಡಿದಾಡುತ್ತಾ ಬಂದಿದ್ದ ಯಡಿಯೂರಪ್ಪ ಮತ್ತು ಬಿ.ಎಲ್.ಸಂತೋಷ್ ಈಗ ನೆಮ್ಮದಿ ಕಳೆದುಕೊಂಡಿದ್ದಾರೆ.
ಹೀಗೆ ಅವರು ನೆಮ್ಮದಿ ಕಳೆದುಕೊಂಡಿರುವ ಕಾರಣಗಳ ನೆಲೆಯಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಕ್ಷಣೆಯ ಬೀಜ ಇರಬಹುದೇ? ಅನ್ನುವುದು ಹಲವರ ಅನುಮಾನ.
ಅಂದ ಹಾಗೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಾಗ ಯಡಿಯೂರಪ್ಪ ಅವರಿಗೆ ಬೊಮ್ಮಾಯಿ ಪರ್ಯಾಯ ನಾಯಕರಾಗಿ ಕಂಡಿದ್ದಕ್ಕೆ ಕಾರಣವಿತ್ತು.
ಅದೆಂದರೆ,ತಾವು ಬಿಡುತ್ತಿರುವ ಪಾಳೇಪಟ್ಟಿನ ವಹಿವಾಟುಗಳ ಚಿತ್ರಣ ಬೊಮ್ಮಾಯಿ ಅವರಿಗಿದೆ.ಹೀಗಾಗಿ ಅವರು ತಮ್ಮ ಹಿತ ರಕ್ಷಿಸಬಲ್ಲರು ಎಂಬ ಲೆಕ್ಕಾಚಾರವಿತ್ತು.
ಆದರೆ ಮುಂದಿನ ಆರೇ ತಿಂಗಳಲ್ಲಿ ಯಡಿಯೂರಪ್ಪ ಅವರ ನಂಬಿಕೆ ಕರಗಿ ಹೋಯಿತು.ಬೊಮ್ಮಾಯಿ ತಮಗೆ ಅತ್ಯಾಪ್ತರಂತೆ ನಡೆದುಕೊಳ್ಳುವುದೇನೋ ಸರಿ,ಆದರೆ ತಮ್ಮ ಲೆಕ್ಕಾಚಾರಗಳ ಈಡೇರಿಕೆಗೆ ಅವರು ಸಹಕಾರಿಯಾಗುತ್ತಿಲ್ಲ ಎಂಬ ಅನುಮಾನ ಯಡಿಯೂರಪ್ಪ ಅವರಿಗೆ ಶುರುವಾಯಿತು.
ಅದರಲ್ಲೂ ಮುಖ್ಯವಾಗಿ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಮಂತ್ರಿ ಮಾಡಿಸುವ ವಿಷಯದಲ್ಲಿ ಬೊಮ್ಮಾಯಿ ಯಾಕೋ ಅಡ್ಡೇಟು ಹೊಡೆಯುತ್ತಿದ್ದಾರೆ ಅಂತ ಅವರಿಗೆ ಸಂದೇಹ ಶುರುವಾಯಿತು.
ದಿಲ್ಲಿಗೆ ಹೋದಾಗ,ಸಚಿವ ಸಂಪುಟಕ್ಕೆ ವಿಜಯೇಂದ್ರ ಅನಿವಾರ್ಯ.ಅವರಿದ್ದರೆ ಯಡಿಯೂರಪ್ಪ ಸಂಪೂರ್ಣ ಬಲ ಬಳಸಿ ಪಕ್ಷ ಮರಳಿ ಅಧಿಕಾರ ಹಿಡಿಯುವಂತೆ ಮಾಡುತ್ತಾರೆ ಅಂತ ಬೊಮ್ಮಾಯಿ ವರಿಷ್ಟರಿಗೆ ಹೇಳಲಿ ಅನ್ನುವುದು ಯಡಿಯೂರಪ್ಪ ಅವರ ಇಚ್ಚೆ ಆಗಿತ್ತು.
ಹಾಗಂತ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಪದೇ ಪದೇ ಹೇಳಿದ್ದರು.ಆದರೆ ದಿಲ್ಲಿಗೆ ಹೋದಾಗಲೆಲ್ಲ ನಾಯಕತ್ವದ ಪ್ರಶ್ನೆಗೆ ಬ್ರೇಕ್ ಹಾಕಿಸಬೇಕು ಎಂಬುದನ್ನು ಬಿಟ್ಟರೆ ಬೊಮ್ಮಾಯಿ ಅವರಿಗೆ ಬೇರೆ ಅಜೆಂಡಾ ಇರಲೇ ಇಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ವರಿಷ್ಟರೇಕೆ ತೀರ್ಮಾನಿಸಿದರು ಅಂತ ಬೊಮ್ಮಾಯಿ ಅವರಿಗೆ ಗೊತ್ತಿದೆಯಲ್ಲ?ಹೀಗಿರುವಾಗ ಅದಕ್ಕೆ ಕಾರಣರಾದ ಅವರ ಮಗ ಕ್ಯಾಬಿನೆಟ್ಟಿಗೆ ಬರಲಿ ಎಂದು ಹೇಳಲು ಹೋದರೆ ತಮ್ಮ ಪರಿಸ್ಥಿತಿ ಏನಾಗಬಹುದು?ಅನ್ನುವುದು ಬೊಮ್ಮಾಯಿ ಅವರ ಆತಂಕ.
ಇದೇ ಕಾರಣಕ್ಕಾಗಿ ಅವರು ವಿಜಯೇಂದ್ರ ಕ್ಯಾಬಿನೆಟ್ಟಿಗೆ ಬೇಕ್ಕೇ ಬೇಕ್ ಅಂತ ಹೇಳುವ ಗೋಜಿಗೆ ಹೋಗಲಿಲ್ಲ.
ವಂಶ ಪಾರಂಪರ್ಯ ರಾಜಕಾರಣ ಈ ದೇಶಕ್ಕಂಟಿದ ಶಾಪ.ಅದು ಕೇವಲ ಅಧಿಕಾರವನ್ನಷ್ಟೇ ಹಸ್ತಾಂತರಿಸುವುದಿಲ್ಲ.ಬದಲಿಗೆ ಭ್ರಷ್ಟಾಚಾರವನ್ನೂ ಹಸ್ತಾಂತರಿಸುತ್ತದೆ ಅಂತ ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಹೇಳುತ್ತಿರುವಾಗ ವಿಜಯೇಂದ್ರ ಪರವಾಗಿ ಬ್ಯಾಟಿಂಗ್ ಮಾಡುವುದು ಎಂದರೆ ಹಿಟ್ ವಿಕೆಟ್ ಆಗುವುದೆಂದೇ ಅರ್ಥ ಅಂತ ಬೊಮ್ಮಾಯಿ ಕಳೆದ ಒಂಭತ್ತು ತಿಂಗಳಿನಿಂದ ಮೌನವಾಗಿಯೇ ಇದ್ದಾರೆ
ಸಾಲದೆಂಬಂತೆ ಬೊಮ್ಮಾಯಿ ಸಂಪುಟದಲ್ಲಿರುವ ಹಲವು ಸಚಿವರು:ಯಾವ ಕಾರಣಕ್ಕೂ ವಿಜಯೇಂದ್ರ ಮಂತ್ರಿಯಾಗಬಾರದು.ಒಂದು ಸಲ ಅವರು ಮಂತ್ರಿಯಾದರೆ ನಿಮಗೆ ಪರ್ಯಾಯ ಶಕ್ತಿ ಕೇಂದ್ರವನ್ನು ನೀವೇ ಉದ್ಘಾಟಿಸಿದಂತಾಗುತ್ತದೆ ಅಂತ ಹೇಳುತ್ತಲೇ ಬಂದಿದ್ದಾರೆ.
ಯಾಕೆಂದರೆ ರಾಜಕೀಯ ಮಾರುಕಟ್ಟೆಯಲ್ಲಿ ಎಲ್ಲರೂ ಅಂಗಡಿ ಓಪನ್ ಮಾಡುವವರೇ.ಅದರಲ್ಲಿ ಪೆಟ್ಟಿ ಅಂಗಡಿ ಇಡುವವರ ಕತೆ ಹೇಗೋ ತೂರಾಡಿ,ಬೋರಾಡಿ ನಡೆಯುತ್ತದೆ.
ಆದರೆ ದೊಡ್ಡ ಅಂಗಡಿ ಇಟ್ಟುಕೊಂಡವರಿಗೆ ಆತಂಕ ಜಾಸ್ತಿ.ಯಾಕೆಂದರೆ ಇಂತವರಿಗೆ ಎದುರಾಗಿ ಯಾರಾದರೂ ಮಾಲ್ ತೆರೆದರೆ ಗೋವಿಂದ ಗೋವಿಂದ ಎನ್ನುವ ಸ್ಥಿತಿ ಬರುತ್ತದೆ.
ತಾವೆಲ್ಲ ದೊಡ್ಡ ಅಂಗಡಿ ತೆರೆದಿಟ್ಟುಕೊಂಡಾಗ ಯಡಿಯೂರಪ್ಪ ನಾಮಬಲದಿಂದ ವಿಜಯೇಂದ್ರ ಮಾಲ್ ಓಪನ್ ಮಾಡಿದರೆ ಗತಿ ಏನಾಗಬಹುದು?ಅನ್ನುವುದೇ ಬೊಮ್ಮಾಯಿ ಸಂಪುಟದ ಹಲವರ ಆತಂಕ.
ಇದೇ ಕಾರಣಕ್ಕಾಗಿ ಬಹುತೇಕರು:ಬೊಮ್ಮಾಯಿ ಸಿಎಂ ಆಗಿ ಕಂಟಿನ್ಯೂ ಆದ್ರೆ ಏನೂ ತೊಂದರೆ ಇಲ್ಲ.ಆದರೆ ಯಾವ ಕಾರಣಕ್ಕೂ ವಿಜಯೇಂದ್ರ ಮಂತ್ರಿಯಾಗಬಾರದು ಅಂತ ಪ್ರಚಾರ ಮಾಡುತ್ತಿದ್ದಾರೆ.
ಈ ಅಂಶವೇ ಯಡಿಯೂರಪ್ಪ ಅವರ ಪಾಲಿಗೆ ದೊಡ್ಡ ತಲೆನೋವಾಗಿ ಹೋಗಿದೆ.ಇದೇ ಕಾರಣಕ್ಕಾಗಿ ಅವರು ಬೊಮ್ಮಾಯಿ ವಿರುದ್ಧ ತಿರುಗಿ ಬಿದ್ದು ಲೀಡರ್ ಷಿಪ್ಪು ಚೇಂಜ್ ಆಗಬೇಕು ಅಂತ ಕೂಗೆಬ್ಬಿಸಿದರು.ಅಷ್ಟೇ ಅಲ್ಲ,ಬೊಮ್ಮಾಯಿ ಪಕ್ಕ ಫೆವಿಕಾಲ್ ಹಾಕಿಕೊಂಡು ಕುಳಿತಿರುವ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕೆಲ ದಿನಗಳ ಹಿಂದೆ ಮನೆಗೆ ಕರೆಸಿಕೊಂಡರು.
ಅಶೋಕ್ ನೀವೇ ಮುಂದಿನ ಸಿಎಂ ಆಗಬೇಕು ಅನ್ನುವುದು ನನ್ನಿಚ್ಚೆ.ರೆಡಿಯಾಗಿ ಎಂದು ಹೆಗಲು ತಟ್ಟಿದರು.
ಆದರೆ ಯಡಿಯೂರಪ್ಪ ಹೀಗೆ ತಿದಿ ಒತ್ತಿದರೂ ಅಶೋಕ್ ಹೆಚ್ಚು ಆಸಕ್ತಿ ತೋರಲಿಲ್ಲ.ಹೀಗಾಗಿ ಯಡಿಯೂರಪ್ಪ ಅವರ ಕಣ್ಣು ಜಗದೀಶ್ ಶೆಟ್ಟರ್ ಮೇಲೆ ಬಿತ್ತು.
ಹೇಗಾದರೂ ಮಾಡಿ ಬೊಮ್ಮಾಯಿಯವರನ್ನು ಇಳಿಸಬೇಕು,ಜಗದೀಶ್ ಶೆಟ್ಟರ್ ಅವರನ್ನು ಮೇಲೆ ಕೂರಿಸಬೇಕು,ಅದೇ ಕಾಲಕ್ಕೆ ವಸತಿ ಸಚಿವ ವಿ.ಸೋಮಣ್ಣ ಅವರಿಂದ ಹಿಡಿದು ಏಳೆಂಟು ಮಂದಿಗೆ ಕೊಕ್ ಕೊಡಿಸಬೇಕು ಎಂಬ ಅಜೆಂಡಾ ರೆಡಿ ಆಯಿತು.
ಅರ್ಥಾತ್,ಇದನ್ನು ಕಾರ್ಯಗತಗೊಳಿಸಿದರೆ ಇಡೀ ಸರ್ಕಾರವೇ ತಮ್ಮ ವಶಕ್ಕೆ ಬರುತ್ತದೆ ಎಂಬುದು ಯಡಿಯೂರಪ್ಪ ಲೆಕ್ಕಾಚಾರ.
ಆದರೆ ಇಂತಹ ಲೆಕ್ಕಾಚಾರದ ನಡುವೆ ಹಲವು ಬೆಳವಣಿಗೆಗಳಾದರೂ ಪಿಕ್ಚರು ಬದಲಾಗುತ್ತಿಲ್ಲ ಎಂಬುದು ಯಡಿಯೂರಪ್ಪ ಅವರ ಸಿಟ್ಟು.
ಇದೇ ಕಾರಣಕ್ಕಾಗಿ ಅವರೀಗ ನೆಮ್ಮದಿ ಕಳೆದುಕೊಂಡಿದ್ದಾರೆ.ಅವರಿಗೆ ನೆಮ್ಮದಿಯಾಗಬೇಕು ಎಂದರೆ ಸರ್ಕಾರ ಮರಳಿ ಅವರ ವಶಕ್ಕೆ ಬರಬೇಕು.

ಇನ್ನು ಸಂಘಪರಿವಾರದ ನಾಯಕ ಬಿ.ಎಲ್.ಸಂತೋಷ್ ಅವರು ನೆಮ್ಮದಿ ಕಳೆದುಕೊಳ್ಳಲೂ ಕಾರಣವಿದೆ.
ಅದೆಂದರೆ,ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಅವರು ನಡೆಸುತ್ತಿರುವ ಪ್ರಯತ್ನಗಳಿಗೆ ಈಗ ಪದೇ ಪದೇ ವಿಘ್ನ ಎದುರಾಗುತ್ತಿದೆ.
ಶುರುವಿನಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಮಂತ್ರಿ ಸ್ಥಾನ ಕಳೆದುಕೊಂಡರು.ಈಗ ವೈದ್ಯಕೀಯ ಶಿಕ್ಷಣ ಸಚಿವ ಡಾ.ಅಶ್ವಥ್ಥನಾರಾಯಣ ಅವರ ಸುತ್ತ ಚಕ್ರವ್ಯೂಹ ಹೆಣೆಯಲಾಗುತ್ತಿದೆ ಎಂಬುದು ಸಂತೋಷ್ ಅವರ ಸಿಟ್ಟು.
ಅಂದ ಹಾಗೆ ಪಿ.ಎಸ್.ಐ ನೇಮಕಾತಿ ಹಗರಣದಲ್ಲಿ ಅಶ್ವಥ್ಥನಾರಾಯಣ್ ಅವರನ್ನು ಬಲಿ ಪಡೆಯಲು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಯಸಿದ್ದಕ್ಕೆ ಕಾರಣವಿದೆ.
ಯಾಕೆಂದರೆ ಅವರ ತವರು ಜಿಲ್ಲೆಗೆ ನುಗ್ಗಿ ಅವರಿಗೇ ಸೆಡ್ಡು ಹೊಡೆಯುವ ಕೆಲಸ ಯಾರಿಂದಲೂ ಆಗಿರಲಿಲ್ಲ.ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಆಶ್ವಥ್ಥನಾರಾಯಣ ಯಾವ ಮುಲಾಜೂ ಇಲ್ಲದೆ ಆ ಕೆಲಸ ಮಾಡಿ ಬಂದರು.
ಅದಾದ ನಂತರ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಶತಾಯಗತಾಯ ಅಶ್ವಥ್ಥನಾರಾಯಣ ಅವರ ಮಂತ್ರಿಗಿರಿಗೆ ಸಂಚಕಾರ ತರಲು ಪ್ರಯತ್ನಿಸುತ್ತಿದ್ದಾರೆ.
ಹಾಗವರು ಪ್ರಯತ್ನಿಸುವುದೇನೋ ಸಹಜ.ಆದರೆ ಅವರಿಗೆ ತಮ್ಮ ಪಕ್ಷದ ಪ್ರಭಾವಿ ನಾಯಕರೇ ಸಪೋರ್ಟು ಮಾಡುತ್ತಿದ್ದಾರೆ ಎಂಬುದು ಬಿ.ಎಲ್.ಸಂತೋಷ್ ಅವರ ಅನುಮಾನ.
ಇದೇ ಕಾರಣಕ್ಕಾಗಿ ಅಶ್ವಥ್ಥನಾರಾಯಣ್ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸುತ್ತಿದ್ದರೆ ಅದನ್ನು ಕೌಂಟರ್ ಮಾಡುವ ಕೆಲಸ ನಡೆಯುತ್ತಿಲ್ಲ ಅಂತ ಸಂತೋಷ್ ಕೋಪಗೊಂಡಿದ್ದು ಸಹಜವೇ.
ಹೀಗಾಗಿಯೇ ಅವರು ಬೊಮ್ಮಾಯಿ ಸಂಪುಟದ ಹಲವು ಸಚಿವರ ಜಾತಕಕ್ಕೆ ನುಗ್ಗಿ:ನೀವೇನು ತಮಾಷೆ ನೋಡ್ತಿದೀರಾ?ಮೊದಲು ಅಶ್ವಥ್ಥನಾರಾಯಣ್ ಅವರನ್ನು ಸಮರ್ಥಿಸಿಕೊಂಡು ಮಾತಾಡ್ರೀ ಅಂತ ಗದರಿಕೊಂಡ ಮೇಲೆ ಹಲ ಮಂತ್ರಿಗಳು ಬಾಯಿ ತೆರೆದರು.ಅಶ್ವಥ್ಥನಾರಾಯಣ್ ಪರವಾಗಿ ಮಾತನಾಡಿದರು.
ಅಂದ ಹಾಗೆ ಸಂತೋಷ್ ಅವರ ಯೋಚನೆ ಎಂದರೆ ಪ್ರತಿಪಕ್ಷ ಕಾಂಗ್ರೆಸ್ ಭ್ರಷ್ಟಾಚಾರದ ವಿಷಯ ಹಿಡಿದುಕೊಂಡು ಬಿಜೆಪಿ ಮೇಲೆ ಎಗರಿದೆ.
ಹೀಗೆ ಅದು ಯಾರ ಮೇಲೆ ಎರಗುತ್ತಿದೆಯೋ?ಅವರೆಲ್ಲ ತಮ್ಮ ಕ್ಯಾಂಪಿನವರು ಎಂಬುದು.
ಹೀಗಾಗಿ ಅವರು ಬೊಮ್ಮಾಯಿ ಕ್ಯಾಬಿನೆಟ್ಟಿನಲ್ಲಿರುವ ತಮ್ಮವರ ರಕ್ಷಣೆಗೆ ಮುಂದಾಗಿದ್ದಾರೆ.
ಅದರೆ ಅವರಿಗೆ ಬೊಮ್ಮಾಯಿ ಸಿಎಂ ಹುದ್ದೆಯಲ್ಲಿ ಉಳಿಯುವುದು ಇಷ್ಟವಿಲ್ಲ.
ಹಾಗಂತ ಯಡಿಯೂರಪ್ಪ ಹೇಳಿದವರು ಬಂದು ಕೂರುವುದೂ ಇಷ್ಟವಿಲ್ಲ.
ಇದೇ ಕಾರಣಕ್ಕಾಗಿ ಅವರು ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಶೋಭಾ ಕರಂದ್ಲಾಜೆ ಬೆಸ್ಟು ಎಂಬ ಮೆಸೇಜು ವರಿಷ್ಟರಿಗೆ ರವಾನೆಯಾಗುವಂತೆ ಮಾಡಿದ್ದರು.
ಒಂದು ವೇಳೆ ಶೋಭಾ ಕರಂದ್ಲಾಜೆ ಸಿಎಂ ಆದರೆ ಬೊಮ್ಮಾಯಿ ಕ್ಯಾಬಿನೆಟ್ಟಿನಲ್ಲಿರುವ ತಮ್ಮ ಆಪ್ತರು ಎಂದಿನಂತೆ ನಿರಾತಂಕವಾಗಿರಬಹುದು ಎಂದವರು ಭಾವಿಸಿದ್ದರು.
ಆದರೆ ಈಗಿನ ವರ್ತಮಾನಗಳು ಅವರ ನೆಮ್ಮದಿಯನ್ನು ಕಸಿದುಕೊಂಡಿವೆ.

ಅಂದ ಹಾಗೆ ಬಸವರಾಜ ಬೊಮ್ಮಾಯಿ ಸಿಎಂ ಹುದ್ದೆಯಲ್ಲಿರುತ್ತಾರಾ?ಕೆಳಗಿಳಿಯುತ್ತಾರಾ?ಎಂಬ ವಿಷಯದಲ್ಲಿ ಇನ್ನೂ ಗೊಂದಲ ಮುಂದುವರಿದೇ ಇದೆ.ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ.
ಯಾಕೆಂದರೆ ಕರ್ನಾಟಕದ ನಾಯಕತ್ವದ ಬಗ್ಗೆ ಏನು ಮಾಡಬೇಕು?ಅಂತ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ತಮಗೆ ನೀಡಿದ ವರದಿಯ ಬಗ್ಗೆ ಅವರು ಇನ್ನೂ ಮೌನ‌ ಮುರಿದಿಲ್ಲ.
ಹಿಂದೆ ಯಡಿಯೂರಪ್ಪ ಕೆಳಗಿಳಿಯುವ ಸಂದರ್ಭದಲ್ಲಿ ಯಾರು ಸಿಎಂ ಆಗಬೇಕು ಎಂಬ ಪ್ರಶ್ನೆ ಬಂದಾಗ ಅವರ ಮುಂದೆ ಎರಡು ಹೆಸರುಗಳು ಇದ್ದವು.
ಈ ಪೈಕಿ ಒಬ್ಬರು ಜಗದೀಶ್ ಶೆಟ್ಟರ್.ಮತ್ತೊಬ್ಬರು ಬಸವರಾಜ ಬೊಮ್ಮಾಯಿ.ಈ ಪೈಕಿ ಬೊಮ್ಮಾಯಿ ಹೆಸರನ್ನು ಮೋದಿ ಅಂತಿಮಗೊಳಿಸಿದ್ದರು.
ಈಗ ಬೊಮ್ಮಾಯಿ ಅವರನ್ನು ಇಳಿಸಲು ತೀರ್ಮಾನಿಸಿದರೆ ತಮ್ಮ ಆಯ್ಕೆಯೇ ತಪ್ಪಾಗಿತ್ತು ಎಂಬ ಸಂದೇಶ ರವಾನೆಯಾಗುತ್ತದೆ ಎಂಬುದು ಅವರ ಯೋಚನೆಯಂತೆ.
ಹಾಗಂತ ಬಿಜೆಪಿ-ಸಂಘ ಪರಿವಾರದ ನಾಯಕರು ಕೊಟ್ಟಿರುವ ಸಲಹೆಯನ್ನು ಪರಿಗಣಿಸದೆ ಸಾರಾಸಗಟಾಗಿ ಅದನ್ನು ತಳ್ಳಿ ಹಾಕುವ ಸ್ಥಿತಿಯಲ್ಲೂ ಅವರಿಲ್ಲ.
ಅಂದ ಹಾಗೆ ಚುನಾವಣೆ ಹತ್ತಿರವಿರುವಾಗ ನಾಯಕತ್ವ ಬದಲಾವಣೆಯಂತಹ ವಿಷಯಕ್ಕೆ ಮೋದಿ ಕೈ ಹಾಕಲಾರರು ಎಂಬುದು ಸುಳ್ಳು.
ಹೀಗೆ ಚುನಾವಣೆ ಹತ್ತಿರದಲ್ಲಿದ್ದರೂ ಹಲವು ರಾಜ್ಯಗಳಲ್ಲಿ ನಾಯಕತ್ವ ಬದಲಾವಣೆಗೆ ಕೈ ಹಾಕಿ ಮೋದಿ ದಕ್ಕಿಸಿಕೊಂಡಿದ್ದಾರೆ.
ಇನ್ನು ಜನನಾಯಕರಲ್ಲದ ಬಸವರಾಜ ಬೊಮ್ಮಾಯಿ‌ ವಿಷಯದಲ್ಲಿ ಅವರು ಅಳುಕುತ್ತಾರೆ ಎನ್ನಲು ಆಧಾರಗಳೇ‌ ಇಲ್ಲ.
ಹೀಗಾಗಿ ಬೊಮ್ಮಾಯಿ ಇಳಿದರೆ ಅಚ್ಚರಿ ಇಲ್ಲ.ಉಳಿದುಕೊಂಡರೂ ಅಚ್ಚರಿ ಇಲ್ಲ.
ಅರ್ಥಾತ್,
ಬೊಮ್ಮಾಯಿ ಭವಿಷ್ಯ ಇನ್ನಷ್ಟೇ ನಿರ್ಧಾರವಾಗಬೇಕಿದೆ.

-ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here