ಎಲ್ಲರ ಹೃದಯ ಗೆದ್ದ ಹರ್ಲೀನ್‌ ರವರ ಸ್ಟನ್ನಿಂಗ್‌ ಕ್ಯಾಚ್‌

0
146

ಇಂಗ್ಲೆಂಡ್‌ ವಿರುದ್ಧ ಮೊದಲನೇ ಟಿ20 ಪಂದ್ಯದಲ್ಲಿ ಭಾರತ ಸೋತರೂ ಬೌಂಡರಿ ಲೈನ್‌ ಬಳಿ ಎಮಿ ಜೋನ್ಸ್ ಅವರ ಸ್ಟನ್ನಿಂಗ್‌ ಕ್ಯಾಚ್‌ ಪಡೆಯುವ ಮೂಲಕ ಹರ್ಲೀನ್‌ ಡಿಯೋಲ್‌ ಎಲ್ಲರ ಹೃದಯ ಗೆದ್ದಿದ್ದಾರೆ.

ಶುಕ್ರವಾರ ತಡರಾತ್ರಿ ಇಂಗ್ಲೆಂಡ್‌ ವಿರುದ್ದ ಮೊದಲನೇ ಟಿ20 ಪಂದ್ಯದಲ್ಲಿ(ಡಿಎಲ್‌ಎಸ್‌) ಭಾರತ ಮಹಿಳಾ ತಂಡ ಸೋಲು ಅನುಭವಿಸಿದರೂ ಪ್ರವಾಸಿಗರ ಹರ್ಲೀನ್‌ ಡಿಯೋಲ್‌ ಅವರ ಸ್ಟನ್ನಿಂಗ್‌ ಕ್ಯಾಚ್‌ ಎಲ್ಲರ ಗಮನ ಸೆಳೆಯಿತು. ಭಾರತದ ಆಟಗಾರ್ತಿಯ ಅಸಾಧಾರಣ ಫೀಲ್ಡಿಂಗ್‌ಗೆ ಕ್ರಿಕೆಟ್‌ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾರ್ಥ್‌ಹ್ಯಾಂಪ್ಟನ್‌ನಲ್ಲಿ ನಡೆದಿದ್ದ ಪಂದ್ಯದ 19ನೇ ಓವರ್‌ನಲ್ಲಿ ಶಿಖಾ ಪಾಂಡ್ಯ ಎಸೆತದಲ್ಲಿ ಇಂಗ್ಲೆಂಡ್‌ ವಿಕೆಟ್‌ ಕೀಪರ್‌ ಎಮಿ ಜೋನ್ಸ್‌ ಲಾಂಗ್‌ ಆಫ್‌ ಮೇಲೆ ಭರ್ಜರಿ ಶಾಟ್‌ ಮಾಡಿದ್ದರು. ಇದು ಖಂಡಿತಾ ಸಿಕ್ಸರ್‌ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಬೌಂಡರಿ ಲೈನ್‌ ಬಳಿ ಇದ್ದ ಹರ್ಲೀನ್‌ ಡಿಯೋಲ್‌ ಎಲ್ಲರ ನಿರೀಕ್ಷೆಯನ್ನು ಸುಳ್ಳಾಗಿಸಿದರು.

ಲಾಂಗ್‌ ಆಫ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಹರ್ಲೀನ್‌ ಡಿಯೋಲ್‌ ಜಂಪ್‌ ಮಾಡಿ ಚೆಂಡನ್ನು ಹಿಡಿದರು. ಆದರೆ, ಬ್ಯಾಲೆನ್ಸ್ ಸರಿಯಾಗಿ ಸಿಗದ ಕಾರಣ ಬೌಂಡರಿ ಲೈನ್‌ ಕ್ರಾಸ್‌ ಮಾಡುವುದಕ್ಕೂ ಮುನ್ನ ಚೆಂಡನ್ನು ಗಾಳಿಯಲ್ಲಿ ಎಸೆದು, ನಂತರ ಅಂಗಳಕ್ಕೆ ಹಾರಿ ಸ್ಟನ್ನಿಂಗ್‌ ಕ್ಯಾಚ್‌ ಪಡೆದರು. ಇದನ್ನು ವಿಕ್ಷಿಸುತ್ತಿದ್ದ ಆಟಗಾರ್ತಿಯರ ಜೊತೆಗೆ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಕೂಡ ಒಂದು ಸೆಕೆಂಡ್‌ ದಂಗಾಗಿ ಬಿಟ್ಟರು!

ಹರ್ಲೀನ್‌ ಡಿಯೋಲ್‌ ಅವರ ಈ ಅದ್ಭುತ ಕ್ಯಾಚ್‌ನ ವಿಡಿಯೋ ಟ್ವಿಟರ್ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅಲ್ಲದೆ, ಸಚಿನ್‌ ತೆಂಡೂಲ್ಕರ್‌ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡುವ ಮೂಲಕ ಭಾರತದ ಆಟಗಾರ್ತಿಯನ್ನು ಶ್ಲಾಘಿಸಿದ್ದಾರೆ. ಜತೆಗೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಕೂಡ ಭಾರತೀಯ ಆಟಗಾರ್ತಿಯ ಪ್ರಯತ್ನವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಮೊದಲು ಬ್ಯಾಟ್‌ ಮಾಡಿದ್ದ ಇಂಗ್ಲೆಂಡ್‌ ಮಹಿಳಾ ತಂಡದ ಪರ
ಎಮಿ ಜೋನ್ಸ್ ಎರಡನೇ ವೈಯಕ್ತಿಕ ಗರಿಷ್ಠ ಸ್ಕೋರರ್ ಆಗಿದ್ದರು. 43 ರನ್‌ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದ ಜೋನ್ಸ್ ಅವರ ಯೋಜನೆಯನ್ನು ಹರ್ಲೀನ್‌ ಡಿಯೋಲ್‌ ಮಣ್ಣು ಪಾಲು ಮಾಡಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳ ಮುಕ್ತಾಯಕ್ಕೆ ಇಂಗ್ಲೆಂಡ್‌ ತಂಡ, 7 ವಿಕೆಟ್‌ ನಷ್ಟಕ್ಕೆ 177 ರನ್‌ ಕಲೆ ಹಾಕಿತ್ತು. ಇಂಗ್ಲೆಂಡ್‌ ಪರ ನಟಾಲಿಯಾ ಸೈವರ್ 55 ರನ್‌ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಭಾರತದ ಶಿಖಾ ಪಾಂಡೆ 22 ರನ್‌ ನೀಡಿ 3 ವಿಕೆಟ್‌ ಪಡೆಯುವ ಮೂಲಕ ಯಶಸ್ವಿ ಬೌಲರ್‌ ಎನಿಸಿಕೊಂಡರು. ನಟಾಲಿಯಾ ಸೈವರ್‌ ಹಾಗೂ ಎಮಿ ಜೋನ್ಸ್ ಅವರಂತಹ ಪ್ರಮುಖ ವಿಕೆಟ್‌ಗಳನ್ನು ಶಿಖಾ ಪಾಂಡೆ ಕಬಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಆದರೆ, ಇನ್ನುಳಿದ ಬೌಲರ್‌ಗಳು ಆಂಗ್ಲರ ಎದುರು ದುಬಾರಿಯಾದರು.

178 ರನ್‌ ಗುರಿ ಹಿಂಬಾಲಿಸಿದ ಭಾರತ ತಂಡ 8.4 ಓವರ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು 54 ರನ್‌ ಗಳಿಸಿತ್ತು. ಈ ವೇಳೆ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಯಿತು. ನಂತರ ಪಂದ್ಯವನ್ನು ಮುಂದುವರಿಸಲಾಗದ ಪರಿಸ್ಥಿತಿಯನ್ನು ಅರಿತ ತೀರ್ಪುಗಾರರು, ಡೆಕ್‌ವರ್ತ್‌ ಲೂಯಿಸ್‌ ನಿಯಮದ ಅನ್ವಯ ಇಂಗ್ಲೆಂಡ್‌ಗೆ 18 ರನ್‌ಗಳ ಜಯ ಘೋಷಿಸಿದರು.

LEAVE A REPLY

Please enter your comment!
Please enter your name here