ಮಾಹಿತಿ ತಂತ್ರಜ್ಞಾನ ಭರಾಟೆಯಲ್ಲಿ ವಿಸ್ಮಯ, ತವಕ, ಕೌತುಕ, ನಿರೀಕ್ಷೆಗಳೇ ಇಲ್ಲವಾಗಿವೆ. ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ

0
178

ಬಳ್ಳಾರಿ, ಸೆ.10: ಮಾಹಿತಿ ತಂತ್ರಜ್ಞಾನ ಭರಾಟೆಯಲ್ಲಿ ವಿಸ್ಮಯ, ತವಕ, ಕೌತುಕ, ನಿರೀಕ್ಷೆಗಳಿಲ್ಲದೆ ಶುಷ್ಕ ಕಾಲದಲ್ಲಿ ಬದುಕುತ್ತಿದ್ದೇವೆ ಎಂದು ಹಿರಿಯ ಸಮಾಜವಾದಿ ಧುರೀಣ, ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಆತಂಕ ವ್ಯಕ್ತಪಡಿಸಿದರು.
ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಮತ್ತು ಹೂವಿನ ಹಡಗಲಿಯ ಶೋಭ ಪ್ರಕಾಶನ ಸಹಯೋಗದಲ್ಲಿ ನಗರದ
ಶ್ರೀ ಕೊಟ್ಟೂರು ಸ್ವಾಮಿ ಬಿಇಡಿ ಕಾಲೇಜ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಹಿತಿ ದಂಪತಿ ಪ್ರಕಾಶ್ ಮಲ್ಕಿಒಡೆಯರ್ ಮತ್ತು ಶೋಭ ಮಲ್ಕಿಒಡೆಯರ್ ಅವರ ‘ಯುಗಳ ಗೀತೆ’ ಹನಿಗವನ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಾಮಾಜಿಕ‌ ಜಾಲತಾಣಗಳ ಅತಿಯಾದ ಬಳಕೆಯಿಂದ ಮನುಷ್ಯರ ಬದುಕು ಯಾಂತ್ರಿಕವಾಗುತ್ತಿದೆ. ಯುವ, ವಿದ್ಯಾರ್ಥಿ ಸಮೂಹ ತಂತ್ರಜ್ಞಾನ ಅಗತ್ಯವಿರುವಷ್ಟೇ ಬಳಸಿಕೊಳ್ಳಬೇಕು. ಸಾಮಾಜಿಕ ತಾಣಗಳು‌ ಮಾಹಿತಿಗಾಗಿ ಉಪಯೋಗಿಸಿ ಕೊಳ್ಳಬೇಕು ಹೊರತು ದಾಸರಾಗಬಾರದು ಎಂದು ಎಚ್ಚರಿಸಿದರು.
ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಶಿಕ್ಷಕರು, ಯುವಕರ ಪಾತ್ರ ಅತ್ಯಂತ ಮಹತ್ವದ್ದು. ಜ್ಞಾನರ್ಜನೆಗೆ ಅಧ್ಯಯನ ಅತ್ಯಗತ್ಯ ಎಂದರು.
ಕನ್ನಡದಲ್ಲಿ ಪ್ರತಿವರ್ಷ ಎಂಟರಿಂದ ಹತ್ತು ಸಾವಿರ ಕೃತಿಗಳು ಪ್ರಕಟವಾಗುತ್ತಿವೆ. ಆದರೆ ಹತ್ತು ಸಾವಿರ ಗಂಭೀರ ಓದುಗರಿಲ್ಲ ಎಂದು ವಿಷಾಧಿಸಿದರು.
ಸಹ ಲೇಖಕರ, ಕವಿಗಳ ಕೃತಿಗಳನ್ನು ಓದುವುದೇ ಇಲ್ಲ. ಸಾಹಿತಿಗಳಿಗೆ ಶ್ರೇಷ್ಟತೆ ವ್ಯಸನ ಇರಬಾರದು. ಪರಸ್ಪರರ ಸಾಹಿತ್ಯವನ್ನು ಓದಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಸಂಸಾರದಲ್ಲಿ ಪ್ರೀತಿಯ ಜತೆ ಕೋಪವೂ ಇರಬೇಕು. ಕೋಪ ಇದ್ದರೆ ಪ್ರೀತಿ ಹುಟ್ಟುವುದು. ಸಾಹಿತಿ ದಂಪತಿಗಳ ಯುಗಳ ಗೀತೆ ಕೃತಿಯಲ್ಲಿ ಪ್ರೀತಿ, ಕೋಪ, ಜಗಳ, ಸಾಮರಸ್ಯ ಎಲ್ಲವೂ ಅಭಿವ್ಯಕ್ತಿಯಾಗಿದೆ ಎಂದು ತಿಳಿಸಿದರು.
ಬಿ.ಇಡಿ ವಿದ್ಯಾರ್ಥಿಗಳು ತಿಂಗಳಲ್ಲಿ ಕನಿಷ್ಟ ಎರಡು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಭಾವಿ ಶಿಕ್ಷಕರಿಗೆ ಪಠ್ಯೇತರ(ಸಾಹಿತ್ಯ) ಚಟುವಟಿಕೆಗಳು ಅತ್ಯಗತ್ಯ ಎಂದು ಹೇಳಿದರು.
ಕೃತಿ ಪರಿಚಯಿಸಿದ ಕನ್ನಡ ಉಪನ್ಯಾಸಕ ಎ ಎಂ ಪಿ ವೀರೇಶಸ್ವಾಮಿ, ಕನ್ನಡ ಸಾಹಿತ್ಯದಲ್ಲಿ ಹನಿಗವನಗಳ ಪರಂಪರೆ ಶರಣ ಸಾಹಿತ್ಯದಿಂದ ಆರಂಭವಾಗಿದೆ ಎಂದು ತಿಳಿಸಿದರು.
ಹನಿಗವನದ ಮುಖ್ಯ ಆಶಯವೇ ಓದುಗರನ್ನು ನಕ್ಕು ನಲಿಸುವ ಜತೆ ನೀತಿಯನ್ನು ಭೋದಿಸುವುದು. ಈ ಹಿನ್ನಲೆಯಲ್ಲಿ ಮಲ್ಕಿ ಒಡೆಯರ್ ದಂಪತಿ ಯುಗಳ ಗೀತೆ ಹನಿಗವನ ಸಂಕಲನ ಯಶಸ್ವಿಯಾಗಿದೆ ಎಂದರು.
ಈ ದಂಪತಿಗಳು ತಮ್ಮ ಬದುಕಿನೊಂದಿಗೆ ಬರಹವನ್ನು ಹಂಚಿಕೊಂಡಿರುವುದು ವಿಶೇಷ. ಕನ್ನಡ ಸಾಹಿತ್ಯದಲ್ಲಿ ಕಡಿಮೆಸಂಖ್ಯೆಯ ಸತಿಪತಿಗಳು ಕಾವ್ಯ ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಶೋಭ ಪ್ರಕಾಶ್ ಮಲ್ಕಿ ಒಡೆಯರ್ ದಂಪತಿಗಳು ಹಲವು ಕೃತಿಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕೊಟ್ಟೂರುಸ್ವಾಮಿ ಬಿಇಡಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಎಂ.ಕಾತ್ಯಾಯಿನಿ‌ ಮರಿದೇವಯ್ಯ, ಮುಖ್ಯ ಅತಿಥಿಯಾಗಿದ್ದ ಪಶು ಸಂಗೋಪನೆ ಇಲಾಖೆಯ ನಿವೃತ್ತ‌ ಸಹಾಯಕ‌ ನಿರ್ದೇಶಕ ಡಾ.ಪಿ.ಎಲ್ ಗಾದಿಲಿಂಗನಗೌಡ, ದೇವಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ, ಇಂಜನಿಯರ್ ಪದವೀಧರ ಮಹೇಂದ್ರ ನಂದಿಹಳ್ಳಿ ಮಾತನಾಡಿದರು.
ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ.‌ಸತೀಶ ಹಿರೇಮಠ ಉಪಸ್ಥಿತರಿದ್ದರು.

ಸನ್ಮಾನ:- ಇದೇ ಸಂದರ್ಭದಲ್ಲಿ ಸಾಹಿತಿ ದಂಪತಿ, ಚಿತ್ರ ಕಲಾವಿದ ಮಂಜುನಾಥ್ ಗೋವಿಂದವಾಡ, ಯುವ ಗಾಯಕ ಚಿಗುರು ಹುಲುಗಪ್ಪ, ಗಣ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸ್ ಎಂ ಹುಲುಗಪ್ಪ ಅವರ ಗೀತಾ ಮಾಧುರ್ಯ ಕಾರ್ಯಕ್ರಮ ಸಭಿಕರ ಗಮನ ಸೆಳೆಯಿತು.
ವಿಶೇಷವೆಂದರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಯುಗಳ ಗೀತೆ ಕೃತಿಯನ್ನು ಶೋಭ ಪ್ರಕಾಶನದಿಂದ ಉಚಿತವಾಗಿ ನೀಡಲಾಯಿತು.
ವೇದಿಕೆ ಅಧ್ಯಕ್ಷ ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಾಜಗುರು ವಂದಿಸಿದರು. ವಿದ್ಯಾರ್ಥಿಗಳಾದ ಅಂಬುಜಾ, ವೀರೇಂದ್ರ ಕುಮಾರ ನಿರೂಪಿಸಿದರು. ಶಗುಪ್ತ, ನೇಹ ಕೌಸರ್, ನಿಖಿಲ ನಾಗರಾಜ್, ರಾಮ್ ಜೀ ನಿರ್ವಹಿಸಿದರು.

ವರದಿ:-ಮಹೇಶ್

LEAVE A REPLY

Please enter your comment!
Please enter your name here