ಅಮೃತ ಗ್ರಾಮ ಪಂಚಾಯತ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ-ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ

0
130

ಧಾರವಾಡ:ಸೆ.11: ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸವಿ ನೆನಪಿಗಾಗಿ ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿಗಳ ಮೂಲ ಸೌಕರ್ಯಗಳನ್ನು ಉನ್ನತಿಕರಿಸಲು ಜಾರಿಗೊಳಿಸಲಾಗುತ್ತಿರುವ ಅಮೃತ ಗ್ರಾಮ ಪಂಚಾಯತ ಯೋಜನೆಯನ್ನು ಧಾರವಾಡ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈ ಗೊಳ್ಳಲಾಗುವುದೆಂದು ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಅವರು ಇಂದು ಮಧ್ಯಾಹ್ನ ಧಾರವಾಡ ಜಿಲ್ಲಾ ಪಂಚಾಯತ ಸಂಭಾಗಣದಲ್ಲಿ ಅಮೃತ ಗ್ರಾಮ ಪಂಚಾಯತ ಯೋಜನೆಯಡಿ ಗ್ರಾಮ ಪಂಚಾಯತಿಗಳ ಆಯ್ಕೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಗ್ರಾಮ ಪಂಚಾಯತ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಸರ್ಕಾರದಿಂದ ಅನುಷ್ಠಾನಗೊಳಿಸಲಾಗಿದೆ. ಅಮೃತ ಯೋಜನೆಯಡಿ ಗ್ರಾಮ ಪಂಚಾಯತಿಗಳ ಆಯ್ಕೆಗಾಗಿ ಸರ್ಕಾರವು ನಿರ್ಧಿಷ್ಟ ಮಾರ್ಗಸೂಚಿಗಳನ್ನು ನೀಡಿದ್ದು, ಅವುಗಳನ್ವಯ ಪ್ರತಿ ತಾಲೂಕಿನಿಂದ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದೆಂದು ಅವರು ಹೇಳಿದರು.
ಸರ್ಕಾರದ ವಿವಿಧ ಯೋಜನೆಗಳ ಅಡಿ ಗ್ರಾಮ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸಮುದಾಯ ಭವನಗಳ ಸದುಪಯೋಗವಾಗುವಂತೆ ಕ್ರಮವಹಿಸಬೇಕು. ದುರುಪಯೋಗವಾಗದಂತೆ ಅಧಿಕಾರಿಗಳು ಎಚ್ಚರಿಕೆವಹಿಸಬೇಕು. ಸಾಧ್ಯವಾದರೆ ಗ್ರಂಥಾಲಯದಂತಹ ಮುಖ್ಯ ಕಾರ್ಯಗಳಿಗೆ ಅವುಗಳನ್ನು ಬಳಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಜಲ ಜೀವನ ಮಿಷನ್‍ದಲ್ಲಿ ಮೇಲ್ಮಟ್ಟದ (ಓಎಚ್‍ಟಿ) ಜಲಸಂಗ್ರಹಗಳನ್ನು ಶಾಲಾ ಆವರಣದಲ್ಲಿ ಮತ್ತು ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ನಿರ್ಮಿಸದಂತೆ ನಿರ್ದೇಶಿಸಲಾಗಿದೆ. ಮತ್ತು ಸಂಬಂಧಿಸಿದ ಅಧಿಕಾರಿಗಳು ಶಾಲಾ ಆವರಣ ಹಾಗೂ ಇತರ ಕಡೆಗಳಲ್ಲಿ ಇರುವ ನಿರುಪಯುಕ್ತ ಓಎಚ್‍ಟಿ ಟ್ಯಾಂಕ್‍ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲೆಯ ವಿವಿಧ ಶಾಲಾ ಆವರಣದಲ್ಲಿರುವ ಹೆಸ್ಕಾಂನ ಟಿಸಿ ಕಂಬಗಳು, ಪಶು ಆಸ್ಪತ್ರೆ, ಓಎಚ್‍ಟಿ ಟ್ಯಾಂಕ್‍ಗಳನ್ನು ತೆರವುಗೊಳಿಸಲು ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಶಾಸಕ ಸಿ.ಎಮ್.ನಿಂಬಣ್ಣವರ ಮಾತನಾಡಿ, ಗ್ರಾಮ ಪಂಚಾಯತ ಮಟ್ಟದಲ್ಲಿರುವ ಗ್ರಂಥಾಲಯಗಳ ಅಧಿಕಾರಿಗಳಿಗೆ ಸೂಕ್ತ ತರಬೇತಿಯನ್ನು ನೀಡಬೇಕು ಮತ್ತು ಆಯಾ ಗ್ರಂಥಾಲಯಗಳಲ್ಲಿರುವ ಪುಸ್ತಕಗಳು ಸದುಪಯೋಗವಾಗುವಂತೆ, ಗ್ರಾಮಸ್ಥರು ಓದುವಂತೆ ಯೋಜನೆ ರೂಪಿಸಬೇಕು ಎಂದು ಅವರು ಹೇಳಿದರು.
ಶಾಸಕ ಅಮೃತ ದೇಸಾಯಿ ಮಾತನಾಡಿ, ರಾಜ್ಯ ಸರ್ಕಾರದ ಅಮೃತ ಯೋಜನೆಯು ಅಗತ್ಯವಿರುವ ಗ್ರಾಮಗಳಲ್ಲಿ ಜಾರಿಗೊಳಿಸಬೇಕು. ಹಿಂದಿನ ಸರ್ಕಾರಗಳಲ್ಲಿ ಗ್ರಾಮಗಳ ಅಭಿವೃದ್ಧಿಗಾಗಿ ಸುವರ್ಣ ಗ್ರಾಮ, ಮುಖ್ಯಮಂತ್ರಿಗಳ ಗ್ರಾಮ ಯೋಜನೆ ಸೇರಿದಂತೆ ವಿವಿಧ ರೀತಿಯ ಯೋಜನೆಗಳು ಜಾರಿಯಾಗಿವೆ. ಆದ್ದರಿಂದ ಹಿಂದಿನ ಯೋಜನೆಗಳಿಗೆ ಸೇರದೆ ಇರುವ ಮತ್ತು ಅಭಿವೃದ್ಧಿ ಅಗತ್ಯವಿರುವ ಗ್ರಾಮಗಳನ್ನು ಆಯ್ಕೆಗೆ ಪರಿಗಣಿಸಬೇಕೆಂದು ತಿಳಿಸಿದರು. ಮತ್ತು ಅಂಗವಿಕಲರ ಕಲ್ಯಾಣ ಇಲಾಖೆಯಿಂದ ವಿಕಲಚೇತನರಿಗೆ ವಾಹನಗಳನ್ನು ನೀಡಲು ಶೇ.70 ಕ್ಕಿಂತ ಹೆಚ್ಚು ಅಂಗವಿಕಲತೆಯನ್ನು ಹೊಂದಿದವರಿಗೆ ಆಧ್ಯತೆ ನೀಡುವಂತೆ ಸೂಚಿಲಾಗಿದೆ. ಆದರೆ ಈ ನಿಯಮ ಅಷ್ಟು ಸಮಂಜಸವಾಗಿಲ್ಲ ಮತ್ತು ನ್ಯಾಯಯುತವಾಗಿಲ್ಲ. ಈ ಕುರಿತು ಸರ್ಕಾರದಿಂದ ಪರಿಷ್ಕøತ ಮಾರ್ಗಸೂಚಿಯ ಅಗತ್ಯವಿದೆ ಎಂದು ಅವರು ಹೇಳಿದರು.
ಶಾಸಕಿ ಕುಸುಮಾವತಿ ಶಿವಳ್ಳಿಯವರು ಮಾತನಾಡಿ, ಅಮೃತ ಯೋಜನೆಯಡಿ ಗ್ರಾಮಗಳ ಆಯ್ಕೆಯಲ್ಲಿ ತಾರತಮ್ಯವಾಗದಂತೆ ಮಾರ್ಗಸೂಚಿಗಳ ಪ್ರಕಾರ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಂಚಾತಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ., ಅವರು ಮಾತನಾಡಿ, ಅಮೃತ ಗ್ರಾಮ ಪಂಚಾಯತ ಯೋಜನೆಗಾಗಿ ಜಿಲ್ಲೆಯ 17 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಬೇಕಾಗಿದೆ. ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಗ್ರಾಮಗಳ ಆಯ್ಕೆ ಯಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಈ ಕಾರ್ಯ ನೆಡೆಯಬೇಕು ಎಂದು ಅವರು ಹೇಳಿದರು.
ಗ್ರಾಮ ವಸತಿ ಯೋಜನೆಯಡಿ ಪ್ರತಿ ವಿಧಾನ ಸಭಾ ಮತಕ್ಷೇತ್ರದಿಂದ ಎರಡು ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಬೇಕಿದ್ದು, ಮಾನ್ಯ ಶಾಸಕರು ಈ ಕುರಿತು ಮಾಹಿತಿ ನೀಡುವಂತೆ ಅವರು ತಿಳಿಸಿದರು.
ಜಿಲ್ಲೆಯ ಗ್ರಾಮ ಪಂಚಾಯತಿಗಳ ಅಧೀನದಲ್ಲಿರುವ ಗ್ರಾಮ ಪಂಚಾಯತ ಗ್ರಂಥಾಲಯಗಳ ಅಭಿವೃದ್ಧಿಗೆ ಆಧ್ಯತೆ ನೀಡಲಾಗಿದ್ದು ದೆಹಲಿ ಮೂಲದ ಪ್ರಥಮ್ ಸರ್ಕಾರೆತರ ಸಂಸ್ಥೆಯು ಪ್ರತಿ ಗ್ರಾಮ ಪಂಚಾಯತಿಗಳಿಗೆ 100 ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಿದೆ. ಮತ್ತು ಅಲ್ಲಿನ ಸಿಬ್ಬಂದಿಗೆ ತರಬೇತಿ, ಗ್ರಂಥಾಲಯ ಡಿಜಿಟಲೀಕರಣಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಸಚಿವರು ಹಾಗೂ ಶಾಸಕರು ಪ್ರಥಮ್ ಸರ್ಕಾರೆತರ ಸಂಸ್ಥೆ ದೇಣಿಯಾಗಿ ನೀಡಿರುವ ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ರೇಖಾ ಡೋಳ್ಳಿನ, ಯೋಜನಾ ನಿರ್ದೇಶಕ ಬಿ.ಎಸ್.ಮೂಗನೂರಮಠ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಗ್ರಾಮ ಕುಡಿಯುವ ನೀರು ನೈರ್ಮಲ್ಯ ಯೋಜನೆಯ ಕಾರ್ಯಪಾಲಯ ಅಭಿಯಂತರ ರಾಜಶೇಖರ ಮುನವಳ್ಳಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಎಸ್.ಮೂಲಿಮನಿ ಸೇರಿದಂತೆ ತಾಲೂಕಾ ಪಂಚಾಯತ ಕಾರ್ಯನಿರ್ವಾಹ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಚಿವರಿಂದ ವಿಕಲಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ಮೋಟಾರ ವಾಹನಗಳನ್ನು ಹಸ್ತಾಂತರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2020-21 ನೇ ಸಾಲಿನ ಇಲಾಖಾ ಅನುದಾನದಲ್ಲಿ ವಿಕಲಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ಮೋಟಾರ ವಾಹನಗಳನ್ನು ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು ಹಾಗೂ ಧಾರವಾಡ ಜಿಲ್ಲೆ ಕೋವಿಡ್ ಮತ್ತು ನೆರೆ ಹಾವಳಿ ಪರಿಹಾರ ಸಚಿವ ಶಂಕರ ಬ.ಪಾಟೀಲ ಮುನೇನಕೊಪ್ಪ ಅವರು ಇಂದು ( ಸೆ.11) ಬೆಳಿಗ್ಗೆ ಜಿಲ್ಲಾಪಂಚಾತ ಆವರಣದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಒಟ್ಟು 50 ವಾಹನಗಳ ಪೈಕಿ ನವಲಗುಂದ ತಾಲ್ಲೂಕಿಗೆ- 16, ಧಾರವಾಡ ತಾಲ್ಲೂಕಿಗೆ- 2, ಕಲಘಟಗಿ ತಾಲ್ಲೂಕಿಗೆ- 2, ಕುಂದಗೋಳ ತಾಲ್ಲೂಕಿಗೆ- 2 ಸೇರಿ ಒಟ್ಟು 22 ಯಂತ್ರಚಾಲಿತ ತ್ರಿಚಕ್ರ ಮೋಟಾರ ವಾಹನಗಳನ್ನು ವಿಕಲಚೇತನರಿಗೆ ನೀಡಲಾಯಿತು.
ಜಿಲ್ಲಾ ಪಂಚಾಯತ ಸಿಇಓ ಡಾ.ಸುಶೀಲಾ ಬಿ., ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ರೇಖಾ ಡೋಳ್ಳಿನ, ಯೋಜನಾ ನಿರ್ದೇಶಕ ಬಿ.ಎಸ್.ಮೂಗನೂರಮಠ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಎಸ್.ಮೂಲಿಮನಿ ಉಸ್ಥಿತರಿದ್ದರು.

LEAVE A REPLY

Please enter your comment!
Please enter your name here