ಎಸ್ಸಿಪಿ/ಟಿಎಸ್ಪಿ ಕಾರ್ಯಕ್ರಮದ ಪ್ರಗತಿ ತಂತ್ರಾಂಶದಲ್ಲಿ ಅಪ್‍ಡೇಟ್ ಮಾಡಲು ಡಿಸಿ ಸೂಚನೆ

0
49

ಮಡಿಕೇರಿ ಸೆ.13 :-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಪ್ರತೀ ತಿಂಗಳು ಅನುಪಾಲನಾ ವರದಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡುವುದರ ಜೊತೆಗೆ ಕಾರ್ಯಕ್ರಮಗಳ ಪ್ರಗತಿ ಸಂಬಂಧ ತಂತ್ರಾಂಶದಲ್ಲಿ ಅಪ್‍ಡೇಟ್ ಮಾಡುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸ್ಸಿಪಿ/ಟಿಎಸ್ಪಿ ಕಾರ್ಯಕ್ರಮ ಪ್ರಗತಿ ಹಾಗೂ ಸಫಾಯಿ ಕರ್ಮಚಾರಿಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ವೇಳೆ ಕಾರ್ಯಕ್ರಮ ಅನುಷ್ಠಾನದಲ್ಲಿ ಕುಂಠಿತವಾದರೆ ಇಲಾಖೆಯ ಕಚೇರಿ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಆದ್ದರಿಂದ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಎಸ್‍ಸಿಎಸ್‍ಪಿ, ಟಿಎಸ್‍ಪಿ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಎಸ್‍ಸಿಎಸ್‍ಪಿ/ ಟಿಎಸ್‍ಪಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳು ಜಿ.ಪಂ.ವ್ಯಾಪ್ತಿಯ ನಿಗಧಿಪಡಿಸಿರುವ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಪೌರಕಾರ್ಮಿಕ ಕುಟುಂಬಗಳ ಸಮೀಕ್ಷೆ ಮಾಡಲಾಗಿದ್ದು, ಒಟ್ಟು 166 ಕುಟುಂಬಗಳಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್ ಅವರು ಮಾಹಿತಿ ನೀಡಿದ್ದಾರೆ.
ಮಡಿಕೇರಿ ತಾಲ್ಲೂಕಿನಲ್ಲಿ 32, ಸೋಮವಾರಪೇಟೆ ತಾಲ್ಲೂಕಿನಲ್ಲಿ 88 ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 46 ಪೌರ ಕಾರ್ಮಿಕ ಕುಟುಂಬಗಳಿದೆ. ಈ ಕುಟುಂಬದಲ್ಲಿ 588 ಅವಲಂಬಿತರಿದ್ದಾರೆ. ಇದರಲ್ಲಿ 178 ಪೌರಕಾರ್ಮಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಪೌರಕಾರ್ಮಿಕ ಕುಟುಂಬದ ಮಕ್ಕಳು ಟೈಲರಿಂಗ್, ವಾಹನ ಚಾಲನೆ, ಗಣಕಯಂತ್ರ ತರಬೇತಿ ಹೀಗೆ ಹಲವು ವೃತ್ತಿಪರ ತರಬೇತಿ ಪಡೆಯಲು ಇಚ್ಛಿಸಿದ್ದು, ಅವರಲ್ಲಿ 92 ಪುರುಷರು ಮತ್ತು 98 ಮಂದಿ ಮಹಿಳೆಯರು ತರಬೇತಿ ಪಡೆಯಲು ಮುಂದೆ ಬಂದಿದ್ದಾರೆ ಎಂದರು.
ಈಗಾಗಲೇ 48 ಮಂದಿ ಟೈಲರಿಂಗ್, 35 ಮಂದಿ ಡ್ರೈವಿಂಗ್, 65 ಮಂದಿ ಕಂಪ್ಯೂಟರ್, 8 ಮಂದಿ ತಾಂತ್ರಿಕ ಕೆಲಸ ಹಾಗೂ 4 ಮಂದಿ ಬ್ಯೂಟಿ ಪಾರ್ಲರ್ ಇತರೆ 30 ಮಂದಿ ಇತರೆ ಚಟುವಟಿಕೆಯ ತರಬೇತಿ ಪಡೆಯಲು ಹೆಸರು ನೋಂದಾಯಿಸಿದ್ದಾರೆ. ಕೂಡಿಗೆಯಲ್ಲಿರುವ ಕಾಬ್ಸೆಟ್ ಸಂಸ್ಥೆಯಿಂದ ತರಬೇತಿ ಕೊಡಿಸಲು ಉದ್ದೇಶಿಸಲಾಗಿದೆ ಎಂದು ಶೇಖರ್ ಅವರು ಮಾಹಿತಿ ನೀಡಿದರು.
ಪೌರಕಾರ್ಮಿಕ ಕುಟುಂಬದಲ್ಲಿ 20 ಮಂದಿ ಅವಿದ್ಯಾವಂತರಿದ್ದು, 61 ಮಂದಿ ಎಸ್‍ಎಸ್‍ಎಲ್‍ಸಿ ಒಳಗೆ ವಿದ್ಯಾಭ್ಯಾಸ ಮಾಡಿದ್ದಾರೆ. 48 ಮಂದಿ ಎಸ್‍ಎಸ್‍ಎಲ್‍ಸಿ, 28 ಮಂದಿ ಪಿಯುಸಿ, 26 ಮಂದಿ ಪದವಿ ಪಡೆದಿದ್ದಾರೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅವರು ಮಾಹಿತಿ ನೀಡಿದರು.
ಗೃಹ ಭಾಗ್ಯ ಯೋಜನೆಯಡಿ ಖಾಯಂ ಪೌರ ಕಾರ್ಮಿಕರಿಗೆ ವಸತಿ ಹಾಗೂ ಮನೆ ನಿರ್ಮಿಸಿಕೊಡಬೇಕಿದ್ದು, ಆ ನಿಟ್ಟಿನಲ್ಲಿ ಪ್ರಗತಿ ಕಾರ್ಯ ನಡೆದಿದೆ ಎಂದು ಶೇಖರ್ ಅವರು ಮಾಹಿತಿ ನೀಡಿದರು.
ಎಂಜಿನಿಯರಿಂಗ್ ಇಲಾಖೆಗಳು ಪ್ರತೀ ತಿಂಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸುವಂತೆ ಕೋರಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ್ ಅವರು ಪರಿಶಿಷ್ಟ ಪಂಗಡ ಉಪಯೋಜನೆ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಕೋರಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತಾಧಿಕಾರಿ ನಂಜುಂಡೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಜಿ.ಪಂ. ಯೋಜನಾ ನಿರ್ದೇಶಕರಾದ ಶ್ರೀಕಂಠ ಮೂರ್ತಿ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ರಾಜು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ನಾಗರಾಜು, ಜಿ.ಪಂ. ಕಾರ್ಯಪಾಲಕ ಎಂಜಿನಿಯರ್ ಶ್ರೀಕಂಠಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಕೆ.ವಿ.ಸುರೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಆಹಾರ ಇಲಾಖೆ ಉಪ ನಿರ್ದೇಶಕರಾದ ಗೌರವ ಕುಮಾರ್ ಶೆಟ್ಟಿ, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಸುರೇಶ್ ಭಟ್, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಮುತ್ತುರಾಜು, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್, ಜಿಲ್ಲಾ ಶಿಕ್ಷಣಾಧಿಕಾರಿ ಕಾಂತರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಸಾಮಾಜಿಕ ಅರಣ್ಯ ವಿಭಾಗದ ಪೂರ್ಣಿಮಾ, ಇತರರು ತಮ್ಮ ಇಲಾಖಾ ವ್ಯಾಪ್ತಿಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here