ವಿಜಯನಗರದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ, ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟ,ರಜಾಕರ ದೌರ್ಜನ್ಯ ಬಿಚ್ಚಿಟ್ಟ ಸಚಿವ ಆನಂದಸಿಂಗ್

0
118

ಹೊಸಪೇಟೆ(ವಿಜಯನಗರ),ಸೆ: ಪ್ರವಾಸೋದ್ಯಮ,ಪರಿಸರ,ಜೀವಿಶಾಸ್ತ್ರ ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಕಲ್ಯಾಣ ಕರ್ನಾಟಕ ಪ್ರದೇಶ ವಿಮೋಚನೆಗೊಳ್ಳಲು ನಡೆಸಿದ ಹೋರಾಟ, ರಜಾಕರು ಜನರ ಮೇಲೆ ನಡೆಸಿದ ದೌರ್ಜನ್ಯಗಳನ್ನು,ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ದಿಟ್ಟತನದ ಪೊಲೀಸ್ ಕಾರ್ಯಾಚರಣೆಯನ್ನು ತಮ್ಮ ಭಾಷಣದಲ್ಲಿ ಬಿಚ್ಚಿಟ್ಟರು.
ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ನಿಮಿತ್ತ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ದೇಶ 1947ರ ಆಗಸ್ಟ್ 15 ರಂದು ಸ್ವಾತಂತ್ರ್ಯ ಗಳಿಸಿಕೊಂಡಿದ್ದು, ತಮ್ಮೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಪ್ರಸ್ತುತ ವಿಜಯನಗರ ಪ್ರದೇಶಗಳು ಸ್ವತಂತ್ರ್ಯವಾಗಲು ಒಂದು ವರ್ಷ ಕಾಲ ಕಾಯಬೇಕಾಯಿತು ಎಂದು ಅವರು ಹೇಳಿದರು.
ಹೈದ್ರಾಬಾದ್ ಸಂಸ್ಥಾನದ ಪ್ರಜೆಗಳಿಗೆ ಸ್ವಾತಂತ್ರ್ಯ ದೊರೆತಿರಲಿಲ್ಲ. ಸ್ವತಂತ್ರ ರಾಷ್ಟ್ರಕಟ್ಟುವ ಬಯಕೆಯಿಂದ ಹೈದ್ರಾಬಾದ್ ನಿಜಾಮರಾದ ಮೀರ್ ಉಸ್ಮನ್ ಅಲಿ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಕೊಳ್ಳದೇ ಸ್ವತಂತ್ರವಾಗಿರಲು ಬಯಸಿ ಹೈದ್ರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ. ಇದರಿಂದಾಗಿ ಭಾರತದೊಡನೆ ವಿಲೀನಗೊಳ್ಳುವ ಉದ್ದೇಶದಿಂದ ಹೈದ್ರಾಬಾದ್ ಸಂಸ್ಥಾನದ ಜನರು ಸ್ವಾಮಿ ರಮಾನಂದ ತೀರ್ಥರು ಅಹಿಂಸಾತ್ಮಕ ಚಳುವಳಿಯನ್ನು ಪ್ರಾರಂಭಿಸಿದರು. ಈ ಚಳುವಳಿಯನ್ನು ಹತ್ತಿಕ್ಕಲು ಹೈದ್ರಾಬಾದ್ ನಿಜಾಮನು ಖಾಸಿಂ ರಜನಿ ಎಂಬುವವನ ನೇತೃತ್ವದಲ್ಲಿ ರಜಾಕಾರ ದಾಳಿಯನ್ನು ಆರಂಭಿಸಿದರು. ಈ ರಜಾಕಾರರು ಈ ಭಾಗದ ಜನರ ಮೇಲೆ ನಿರಂತರವಾಗಿ ಹಿಂಸೆ ಸುಲಿಗೆ, ಕೊಲೆ ಮತ್ತು ದೌರ್ಜನ್ಯ ಮಾಡುತ್ತಾ ಜನರನ್ನು ಲೂಟಿ ಮಾಡಿದರು. ಇದರ ಪರಿಣಾಮವಾಗಿ ಈ ಭಾಗದ ಜನರು ಅಭಿವೃಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳು ಜನರ ಪಾಲಿಗೆ ಇರಲೇ ಇಲ್ಲ. ಈ ಪ್ರದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಕ್ಷೇತ್ರಗಳ ಪ್ರಗತಿ ಶೂನ್ಯದ ಕಡೆಗೆ ಹೆಜ್ಜೆ ಇಡುವಂತಾಯಿತು ಎಂದು ಅವರು ವಿವರಿಸಿದರು.
ಸ್ವಾಮಿ ರಮಾನಂದ ತೀರ್ಥರು, ಡಾ. ಮೇಲುಕೋಟೆಯವರು ಕಲುಬುರಗಿಯ ಅನಿರುದ್ಧ ದೇಸಾಯಿ, ಯಾದಗಿರಿಯ ಕೋಲೂರು ಮಲ್ಲಪ್ಪ ಹಾಗೂ ಛಿತ್ರಾಪುರದ ಬಸಪ್ಪ ಸಜ್ಜನ್ ಶೆಟ್ಟರ್, ಕಾರಟಗಿಯ ಬೆಣಕಲ್ ಭೀಮಸೇನರಾಯ್, ಆಳಂದದ ಎ.ಬಿ.ಪಾಟೀಲ್, ಕನಕಗಿರಿಯ ಜಯತೀರ್ಥ ರಾಜ ಪುರೋಹಿತ್ ಮುಂತಾದವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದ ವಿಮೋಚನೆಗೆ ಹೋರಾಟಗಳು ಪ್ರಾರಂಭಗೊಂಡವು. ಸ್ವಾಮಿ ರಮಾನಂದ ತೀರ್ಥರು ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ “ಕ್ವಿಟ್ ಕಾಲೇಜು ಆ್ಯಕ್ಟ್ ನವ್” ಕರೆಗೆ ಸಾವಿರಾರು ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳು ಚಳುವಳಿಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬಲ ತುಂಬಿದರು. ಇಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಅನ್ನದಾನಯ್ಯ ಪುರಾಣಿಕ, ಪ್ರಭುರಾಜ ಪಾಟೀಲ್, ಶಿವಮೂರ್ತಿ ಸ್ವಾಮಿ ಅಳವಂಡಿ, ಡಾ. ಚುರ್ಚಿಹಾಳ್‍ಮಠ, ಭೀಮಜ್ಜ, ಕೊರ್ಲಹಳ್ಳಿ ಶ್ರೀನಿವಾಸಾಚಾರಿ, ಕಾಟಾಪುರದ ಹನುಮಂತರಾವ್, ಕಿಸನ್ ರಾವ್ ದೇಸಾಯಿ, ಶೇಷಪ್ಪ ಪತ್ತಾರ್, ಕುರುಬರ ಯಲ್ಲಪ್ಪ, ಹರಿಜನ ಹಳ್ಳೆಪ್ಪ, ನಾಗೋಜಿ ಔದೋಜಿ ಮುಂತಾದವರು ಕಲ್ಯಾಣ ಕರ್ನಾಟಕ ವಿಮೋಚನೆಗೆ ತಮ್ಮ ಪ್ರಾಣವನ್ನೇ ಲೆಕ್ಕಿಸದೇ ನಡೆಸಿದ ಹೋರಾಟವನ್ನು ಸಚಿವ ಸಿಂಗ್ ಅವರು ಸ್ಮರಿಸಿದರು.
ಅಲ್ಲದೇ ಅಕ್ಕಮ್ಮ ಮಹಾದೇವಿ, ರಟ್ಟಗಲ್ಲ ಸೂಗಮ್ಮ, ಹಟಿ ಗುರುಬಸವ್ವ, ಸೀತಮ್ಮ ಬಡಿಗೇರ ಮುಂತಾದ ಮಹಿಳಾ ಮುಖಂಡರು ತ್ರಿವರ್ಣ ಧ್ವಜ ಹಿಡಿದು ವಂದೇ ಮಾತರಂ ಘೋಷಣೆ ಕೂಗುತ್ತಾ ಭಾಗದ ಜನರಲ್ಲಿ ಧೈರ್ಯ ತುಂಬಿದರು. ವಿಧ್ಯಾರ್ಥಿ ಮುಖಂಡರುಗಳಾದ ಮಠಮಾರಿ ನಾಗಪ್ಪ, ಚಂದ್ರಯ್ಯ, ಶರಬಯ್ಯ, ಬಸವಣ್ಣ, ಮುಂತಾದವರು ಕಲ್ಯಾಣ ಕರ್ನಾಟಕ ವಿಮೋಚನೆಗೆ ಹೋರಾಡಿದರು. ಅಲ್ಲದೇ ಕಲಬುರಗಿ ಆರ್ಯ ಸಮಾಜ ಚಳುವಳಿ ಹಾಗೂ ಮತ್ತಿತರ ಸಂಘ ಸಂಸ್ಥೆಗಳು ಹೋರಾಟಕ್ಕೆ ಇಳಿದು ರಜಾಕಾರ ದಬ್ಬಾಳಿಕೆಯನ್ನು ದಿಕ್ಕರಿಸಿ ಸ್ವಾತಂತ್ಯ್ರಯವನ್ನು ಪಡೆಯುವಲ್ಲಿ ಯಶಸ್ವಿಯಾದರು. ಇವರೆನ್ನಲ್ಲಾ ನಾವು ಇಂದು ಸ್ಮರಿಸಬೇಕಾಗಿದೆ ಎಂದರು.
ಭಾರತದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಾಟೀಲರು 1948 ರ ಸೆಪ್ಟಂಬರ್ 13 ರಂದು ದಿಟ್ಟತನದಿಂದ ಭಾರತ ಸೇನೆಯ ಮುಖಂಡ ಜನರಲ್ ಚೌದ್ರಿ ನೇತೃತ್ವದಲ್ಲಿ ಕೈಗೊಂಡ ಪೊಲೀಸ್ ಕಾರ್ಯಾಚರಣೆಯಲ್ಲಿ ಹೈದ್ರಾಬಾದ್ ನಿಜಾಮರು ಶರಣಾಗಿ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಗೊಳ್ಳಲು ಒಪ್ಪಿಕೊಂಡನು. ಇದರ ಪರಿಣಾಮವಾಗಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿ ವಿಶ್ವವೇ ನಿಬ್ಬೆರಗಾಗುವಂತಹ ಜಗಜ್ಯೊತಿ ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಬುನಾದಿ ಹಾಕಿದ ಈ ಪವಿತ್ರ ಭೂಮಿ 1948 ರ ಸೆಪ್ಟೆಂಬರ್ 17 ರಂದು ರಾಜ್ಯದ ಇತರ ಭಾಗಗಳಂತೆ ಸ್ವತಂತ್ರ್ಯವಾಗಿ ಉಸಿರಾಡಲು ಸಾಧ್ಯವಾಯಿತು ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಅಶೋಕ ಜೀರೆ, ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಆಯುಕ್ತರಾದ ಅನಿರುದ್ಧ ಶ್ರವಣ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ,ಸಹಾಯಕ ಆಯುಕ್ತ ಸಿದ್ಧರಾಮೇಶ್ವರ, ಜಿಪಂ ಉಪಕಾರ್ಯದರ್ಶಿ ತಿಮ್ಮಪ್ಪ, ತಹಸೀಲ್ದಾರ್ ವಿಶ್ವನಾಥ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here