ಆ.28 ಮತ್ತು 29ರಂದು ಸಿಇಟಿ ಪರೀಕ್ಷೆಗಳಿಗೆ ಸಕಲ ಸಿದ್ಧತೆ:ಶಿವಶರಣಪ್ಪ ಮೂಳೆಗಾವ

0
85

ಕಲಬುರಗಿ.ಆ.26: ಆಗಸ್ಟ್ 28 ಹಾಗೂ 29 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಪದವಿ ಪೂರ್ವಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾವ ಅವರು ಹೇಳಿದರು.

ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕಲಬುರಗಿ, ಆಳಂದ ಹಾಗೂ ಚಿಂಚೋಳಿಯ ಒಟ್ಟು 27 ಪರೀಕ್ಷೆ ಕೇಂದ್ರಗಳಲ್ಲಿ 9,528 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಒಂದು ಗಂಟೆ ಮುಂಚಿತವಾಗಿಯೇ ಹಾಜರಾಗಬೇಕು. ಇದಲ್ಲದೇ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ವಿದ್ಯಾರ್ಥಿಗಳು ಹಾಗೂ ರೂಮ್ ಸೂಪರ್‍ವೈಸರ್ ಸೇರಿದಂತೆ ಎಲ್ಲರೂ ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಅವರು ತಿಳಿಸಿದರು.

ಆಗಸ್ಟ್ 28ರ ಬೆಳಿಗ್ಗೆ 10:30 ರಿಂದ 11:50 ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2:30 ರಿಂದ 3:50 ರವರೆಗೆ ಗಣಿತಶಾಸ್ತ್ರ ಪರೀಕ್ಷೆಗಳು ನಡೆಯಲಿದ್ದು, ಆಗಸ್ಟ್ 29ರಂದು ಬೆಳಿಗ್ಗೆ 10:30 ರಿಂದ 11:50 ರವರೆಗೆ ಭೌತಶಾಸ್ತ್ರ ಪರೀಕ್ಷೆ ಹಾಗೂ ಮಧ್ಯಾಹ್ನ 2:30 ರಿಂದ 3:50 ರವರೆಗೆ ರಾಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿದೆ ಎಂದು ಉಪ ನಿರ್ದೇಶಕರು ತಿಳಿಸಿದರು.

ಪರೀಕ್ಷೆ ನಡೆಯುವ ಕೇಂದ್ರದ 200 ಮೀಟರ್ ಪ್ರದೇಶವನ್ನು ನಿಷೇದಿಸಲಾಗಿದೆ. ನಕಲು ತಡೆ ನಿಟ್ಟಿನಲ್ಲಿ ಮುಖ್ಯ ಅಧೀಕ್ಷಕರು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಉಪ ಮುಖ್ಯ ಅಧೀಕ್ಷಕರು ತಮ್ಮ ಕೇಂದ್ರಗಳ ಇನ್ವಿಜಿ ಲೇಟರ್‍ಗಳೊಂದಿಗೆ ಒಂದು ಸುತ್ತಿನ ಸಭೆ ನಡೆಸಬೇಕು. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶಿವಶರಣಪ್ಪ ನಂದಗಿರಿ ಹಾಗೂ ಪರೀಕ್ಷಾ ಕೇಂದ್ರಗಳ ಉಪ ಮುಖ್ಯ ಅಧೀಕ್ಷಕರು, ಜಿಲ್ಲಾಧಿಕಾರಿಗಳಿಂದ ನೇಮಿಸಲ್ಪಟ್ಟ ಪರಿವೀಕ್ಷಕರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here