ವಿಶ್ವ ಚಿತ್ತವಿಕಲತೆ (ಸ್ಕಿಜೋಪ್ರೇನಿಯಾ) ಮಾನಸಿಕ ಕಾಯಿಲೆಯ ದಿನಾಚರಣೆ ; ಜನಜಾಗೃತಿ ಜಾಥಾ ಆಯೋಜನೆ

0
91

ಧಾರವಾಡ:ಮೇ.24: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ವಿಭಾಗ ಹಾಗೂ ತಾಲೂಕು ಆರೋಗ್ಯಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಿಗ್ಗೆ ಡಿಎಚ್‍ಓ ಕಾರ್ಯಾಲಯದ ಆವರಣದಲ್ಲಿ, “ಮೂಢನಂಬಿಕೆ ದೂರಮಾಡಿ ಚಿಕಿತ್ಸೆಗೆ ಮುಂದಾಗಿ, ಮನೋರೋಗಕ್ಕೆ ಚಿಕಿತ್ಸೆ ಇದೆ” ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಚಿತ್ತವಿಕಲತೆ(ಸ್ಕಿಜೋಪ್ರೇನಿಯಾ) ದಿನದ ಅಂಗವಾಗಿ ಕಾರ್ಯಕ್ರಮ ಹಾಗೂ ಜನಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ, ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಅವರು ಮಾತನಾಡಿ, ಚಿತ್ತವಿಕಲತೆ ಎಂಬ ಮಾನಸಿಕ ಕಾಯಿಲೆಯನ್ನು ಸ್ಕಿಜೋಫ್ರೇನಿಯಾ ಎಂದು ಕರೆಯುತ್ತಾರೆ. ಸಾರ್ವಜನಿಕರಲ್ಲಿ ಈ ಕಾಯಿಲೆಯ ಬಗೆಗಿನ ತಪ್ಪು ನಂಬಿಕೆಗಳಿಂದಾಗಿ ಇದು ಮಾಟ, ಮಂತ್ರ, ದೆವ್ವ ಅಥವಾ ಭೂತದ ಕಾಟದಿಂದ ಬರುತ್ತದೆ. ಈ ಕಾಯಿಲೆಯು ಮದುವೆಯಾದರೆ ಗುಣಮುಖವಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಕಾಯಿಲೆಗೆ ಯಾವುದೇ ಚಿಕಿತ್ಸೆಯಿಲ್ಲ ಎಂದು ಭಯ ಪಡೆಯಬಾರದು. ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಹೊಸ ಸಂಶೋಧನೆಗಳು ಆಗಿದ್ದು, ಪ್ರತಿಯೊಂದು ಕಾಯಿಲೆಗೂ ಇಂದು ಔಷಧಿ, ಚಿಕಿತ್ಸೆ ಲಭ್ಯವಿದೆ. ಸಾರ್ವಜನಿಕರು ಅನಗತ್ಯವಾಗಿ ಯಾವುದೇ ರೀತಿಯ ಮೂಢನಂಬಿಕೆ, ಕಂದಾಚಾರಗಳಿಗೆ ಒಳಗಾಗಬಾರದೆಂದು ಅವರು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಸಿಕರಿಗೌಡರ ಚಿತ್ತವಿಕಲತೆ (ಸ್ಕಿಜೋಫ್ರೇನಿಯಾ) ಕಾಯಿಲೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕಾಯಿಲೆ ಬಗ್ಗೆ ಭಯ ಬೇಡ. ನಿಯಮಿತವಾಗಿ ಔಷಧಿಗಳನ್ನು ಸೇವಿಸಿ ಹಾಗೂ ವೈದ್ಯರ ಸಲಹೆಗಳನ್ನು ಪಾಲಿಸುವುದರಿಂದ ಬೇಗ ಗುಣಮುಖರಾಗುತ್ತಾರೆ ಎಂದರು.

ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಹಾಗೂ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥೆ ಡಾ. ಶಶಿ ಪಾಟೀಲ ಮಾತನಾಡಿ, ಚಿತ್ತವಿಕಲತೆ ಕಾಯಿಲೆ ಬರಲು ಮೆದುಳಿನಲ್ಲಿ ಆಗುವ ನರವಾಹಕದ ವ್ಯತ್ಯಾಸ ಕಾರಣವಾಗಿದೆ ಮತ್ತು ಅನುವಂಶಿಕತೆ, ಮದ್ಯಪಾನ, ಮಾದಕ ವಸ್ತುಗಳ ಸೇವನೆ ಹಾಗೂ ಗರ್ಭಾವಸ್ಥೆಯಲ್ಲಿ ಮಗುವಿನ ನರಗಳ ಬೆಳವಣಿಗೆಯಲ್ಲಿ ಉಂಟಾಗುವ ತೊಂದರೆಗಳಿಂದ ಈ ಕಾಯಿಲೆ ಬರುತ್ತದೆ. ವಿನಾಕಾರಣ ನಗುವುದು, ಅಳುವುದು, ಒಬ್ಬರೆ ಮಾತನಾಡಿಕೊಳ್ಳುವುದು, ಕಾಲ್ಪನಿಕ ಧ್ವನಿ ಕೇಳಿಸುವುದು, ಕಾರಣವಿಲ್ಲದೆ ಅನುಮಾನ ಪಡುವುದು ಮತ್ತು ಹೆಚ್ಚು ಹೆಚ್ಚು ಮಾದಕ ವಸ್ತುಗಳ ಸೇವನೆ ಮಾಡುವುದು ಈ ರೋಗದ ಲಕ್ಷಣಗಳಾಗಿವೆ. ಆದ್ದರಿಂದ ನಿಯಮಿತ ಔಷಧಿಗಳು, ಆಪ್ತ ಸಮಾಲೋಚನೆ, ಚಿಕಿತ್ಸೆ ಅನುಸರಣೆ ಮತ್ತು ಪುನರ್ವಸತಿಗಳಿಂದ ಈ ಕಾಯಿಲೆ ಗುಣಮುಖ ಆಗುವ ಸಾಧ್ಯತೆ ಇರುತ್ತದೆ ಎಂದು ಡಾ.ಶಶಿ ಪಾಟೀಲ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ತಾಲೂಕಾ ಆರೋಗ್ಯಧಿಕಾರಿ ಡಾ. ತನುಜಾ ಕೆ.ಎನ್, ಜಿಲ್ಲಾ ಆರ್.ಸಿ.ಎಚ್.ಓ. ಡಾ.ಎಸ್.ಎಂ. ಹೊನಕೇರಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಮಂಜುನಾಥ ಎಸ್, ಮನೋವೈದ್ಯರಾದ ಡಾ. ವೈಶಾಲಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ, ಕೆ.ಕೆ ಚವ್ಹಾಣ, ಎಮ್.ಎನ್. ಅಗಡಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜನಜಾಗೃತಿ ಜಾಥಾ ಅಭಿಯಾನವು ಎಲ್.ಇ.ಎ. ಕ್ಯಾಂಟೀನ, ಮಹಾನಗರ ಪಾಲಿಕೆ, ಕಲಾಭವನ, ಜುಬಲಿ ಸರ್ಕಲ್ ಮಾರ್ಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯವರೆಗೆ ಸಂಚರಿಸಿತು.

LEAVE A REPLY

Please enter your comment!
Please enter your name here