ಶಾಸಕರೇ ಪೊಲೀಸ್ ಕಟ್ಟಡಗಳ ಉದ್ಘಾಟನೆ ಯಾವಾಗ?

0
605

ವಿಜಯನಗರ:ಜೂನ್:07:-ಕೊಟ್ಟೂರು ಆರಕ್ಷಕ ನಿರೀಕ್ಷಕರ ಠಾಣೆ ಮತ್ತು ಕೊಟ್ಟೂರು ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿಯ ಕಟ್ಟಡಗಳ ಕಾಮಗಾರಿ ಈಗಾಗಲೇ ಸಂಪೂರ್ಣವಾಗಿ ಮುಗಿದಿದ್ದರೂ ಉದ್ಘಾಟನೆಯ ಭಾಗ್ಯ ಇನ್ನೂ ದೊರೆತಿಲ್ಲ. ಪ್ರತೀ ತಿಂಗಳು ಎರಡೂ ಕಟ್ಟಡಗಳಿಗೂ ಸುಮಾರು ಮೂವತ್ತೆರಡು ಸಾವಿರ ರೂ. ಬಾಡಿಗೆ ಕಟ್ಟುತ್ತಾ ಜನರ ಹಣ ಅನಾವಶ್ಯಕವಾಗಿ ಪೋಲಾಗುತ್ತಿದೆ. ಆದರೆ ಅದೇ ಪಟ್ಟಣ ಪಂಚಾಯಿತಿ ಕಛೇರಿಯ ಕಟ್ಟಡ ಇನ್ನೂ ಸಂಪೂರ್ಣವಾಗಿ ಮುಗಿಯದೇ ಇದ್ದರೂ ಸಹ ಉದ್ಘಾಟನೆಗೆ ಹಸಿರು ನಿಶಾನೆ ತೋರಿಸಿರುವುದು ಪಟ್ಟಣದ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ.
ಸಂಪೂರ್ಣವಾಗಿ ಮುಗಿದಿರುವ ಕಟ್ಟಡಗಳನ್ನು ಮೊದಲು ಉದ್ಘಾಟನೆ ಮಾಡಬೇಕೆನ್ನುವುದು ಸಾರ್ವಜನಿಕರ ವಾದವಾಗಿದೆ.

ಬುಧವಾರ ಕೊಟ್ಟೂರು ಪಟ್ಟಣ ಪಂಚಾಯಿತಿಯ ಹೊಸ ಕಟ್ಟಡ ಉದ್ಘಾಟನೆಯ ಕಾರಣಕ್ಕಾಗಿ ಇಡೀ ಕೊಟ್ಟೂರಿನ ತುಂಬಾ ಫ್ಲೆಕ್ಸ್‌ಗಳಲ್ಲಿ ಸ್ಥಳೀಯ ಶಾಸಕರು, ಶಾಸಕರ ಅಭಿಮಾನಿಗಳು ವಿಜೃಂಭಿಸುತ್ತಿದ್ದಾರೆ. ಆದರೆ ಪೋಲೀಸ್ ಕಟ್ಟಡಗಳು ಒಂದು ರೀತಿಯಾಗಿ ಅಸಹಾಯಕವಾಗಿ ಕಾಣಿಸುತ್ತಿವೆ. ಇದು ಸ್ಥಳೀಯ ಶಾಸಕರ ಕಣ್ಣಿಗೆ ಕಾಣುತ್ತಿಲ್ಲವೇ? ಪೊಲೀಸ್ ಠಾಣೆಯ ಕಟ್ಟಡ ಕಾಮಗಾರಿ ಮುಗಿದು ಮೂರು ತಿಂಗಳಾದರೂ ಸಹ ಉದ್ಘಾಟನೆಯಾಗುತ್ತಿಲ್ಲ. ಸಂಬಂಧಿಸಿದ ಮಂತ್ರಿಗಳು, ಸ್ಥಳೀಯ ಶಾಸಕರು ಜಿದ್ದಾಜಿದ್ದಿಗೆ ಬಿದ್ದಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆಯೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಉದ್ಘಾಟನೆಯಾಗಲಿರುವ ಪಟ್ಟಣ ಪಂಚಾಯಿತಿ ಕಛೇರಿ ಫ್ಲೆಕ್ಸ್‌ಗಳ ಹೊರನೋಟ

ಕಾಂಗ್ರೆಸ್ ಶಾಸಕ ಮತ್ತು ಬಿಜೆಪಿ ಸರ್ಕಾರದ ಮಧ್ಯೆ ಹೊಂದಾಣಿಕೆ ಇಲ್ಲದೇ ಇರುವುದರಿಂದ ಪೊಲೀಸ್ ಕಟ್ಟಡಗಳ ಉದ್ಘಾಟನೆಗೆ ತೊಡಕಾಗಿರಬಹುದು. ಕೂಡಲೇ ಸ್ಥಳೀಯ ಶಾಸಕರು, ಮಂತ್ರಿಗಳ ಸಹಯೋಗದೊಂದಿಗೆ ಪೊಲೀಸ್ ಕಛೇರಿಯ ಕಟ್ಟಡಗಳನ್ನು ಕೂಡಲೇ ಉದ್ಘಾಟಿಸಿ ಜನರ ಹಣ ಪೋಲಾಗುತ್ತಿರುವುದನ್ನು ತಡೆಯಬೇಕು.
-ಎಂ.ಶ್ರೀನಿವಾಸ
ಕೊಟ್ಟೂರು ತಾಲ್ಲೂಕು
ಕರವೇ ಅಧ್ಯಕ್ಷ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here