ಸ್ಮಯೋರ್ ಸಂಸ್ಥೆಯಿಂದ ವಿಶ್ವ ಪರಿಸರ ದಿನಾಚರಣೆ

0
114

ಸಂಡೂರು:ಜೂನ್:10:- ಸ್ಮಯೋರ್ ಮೈನಿಂಗ್ ಸಂಸ್ಥೆಯಿಂದ ಸಂಡೂರಿನ ದೇವಗಿರಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಬಳ್ಳಾರಿ ವಿಭಾಗದ ಡಿಸಿಎಫ್ ಸಂದೀಪ್ ಸೂರ್ಯವಂಶಿ ಮತ್ತು ಸ್ಮಯೋರ್ ಸಂಸ್ಥೆಯ ಮೈನ್ಸ್ ಡೈರೆಕ್ಟರ್ ಮೊಹಮ್ಮದ್ ಅಬ್ದುಲ್ ಸಲೀಂ ಅವರಿಂದ ಆಲದ ಮರಕ್ಕೆ, ನೀರುಣಿಸುವ ಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು.

ಸಂದೀಪ್ ಸೂರ್ಯವಂಶಿಯವರು ಮಾತನಾಡುತ್ತ ಸ್ಮಯೋರ್ ಸಂಸ್ಥೆಯು ಬೆಳೆಸಿದ ಸಸ್ಯೋದ್ಯಾನ (ಬೊಟಾನಿಕಾಲ್ ಗಾರ್ಡನ್), ಶಾಲಾ ವಿದ್ಯಾರ್ಥಿಗಳಿಂದ ಮರ ಗಿಡಗಳ ದತ್ತು ಕಾರ್ಯಕ್ರಮವನ್ನು, ಸ್ಥಳೀಯ ಬೀಜಗಳ ಸಂಗ್ರಹವನ್ನು ಮತ್ತು ಇನ್ನೂ ಅನೇಕ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಅವರು ಮುಂದುವರಿದು ಮಾತನಾಡುತ್ತ ಮುಂದಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮವನ್ನು ಉದಾಹರಣೆಗಳೊಂದಿಗೆ ವಿವರಿಸಿದರು. ಅಲ್ಲದೇ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಯು ಅರಣ್ಯಗಳನ್ನು ಸಂರಕ್ಷಿಸಿ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವಲ್ಲಿ ಮಾಡುವ ಪ್ರಯತ್ನವನ್ನು ಸಹ ಅವರು ಶ್ಲಾಘಿಸಿದರು.

ಸ್ವಾಗತ ಭಾಷಣ ಮಾಡಿದ ವಿ.ಜಯಪ್ರಕಾಶ್ ಹಿರಿಯ ಜನರಲ್ ಮ್ಯಾನೇಜರ್ (ಪರಿಸರ ಮತ್ತು ನಾಗರಿಕ) ಅವರು ಸ್ಮಯೋರ್ ಸಂಸ್ಥೆಯು ಕಳೆದ ಆರು ದಶಕಗಳ ಗಣಿಗಾರಿಕೆಯಲ್ಲಿ ಪರಿಸರಕ್ಕೆ ಹೆಚ್ಚು ಒತ್ತು ಕೊಟ್ಟಿದೆ ಎಂದು ಹೇಳಿದರು. “ನಾವು ಸಸ್ಯಗಳನ್ನು ಬೆಳೆಸುವುದಿಲ್ಲ, ನಾವು ಕಾಡುಗಳನ್ನು ಬೆಳೆಸುತ್ತೇವೆ” ಎಂಬ ಸ್ಮಯೋರ್ ತತ್ವವನ್ನು ಪುನರುಚ್ಚರಿಸಿದರು. ನಂತರ ಶ್ರೀಧರ್ ಪಿ ಹೆಗ್ಡೆ ಅವರು ‘ಹಸಿರು ಹಸಿರಿನ ಹೆಸರಿಲ್ಲದ ಮರ’ ಎಂಬ ವಿಶೇಷ ಗೀತೆಯನ್ನು ಹಾಡಿದರು.
“ಪ್ರಕೃತಿಯೊಂದಿಗೆ ಸುಸ್ಥಿರವಾಗಿ ಬದುಕುವುದು” ಎಂಬ ಉದ್ದೇಶದಿಂದ “ಒಂದೇ ಭೂಮಿ” ಎಂಬ ಅಭಿಯಾನದ ಘೋಷಣೆಯೊಂದಿಗೆ ವಿವಿಧೆಡೆ ಬ್ಯಾನರ್‍ಗಳನ್ನು ಹಾಕಲಾಗಿತ್ತು. ಸ್ಮಯೋರ್ ಸಂಸ್ಥೆಯ ಮೊಹಮ್ಮದ್ ಅಬ್ದಲ್ ಸಲೀಂ (ಮೈನ್ಸ್ ಡೈರೆಕ್ಟರ್) ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಸ್ಮಯೋರ್ ಸಂಸ್ಥೆಯು ಗುತ್ತಿಗೆ ಪ್ರದೇಶದ ಸುತ್ತಮುತ್ತಲಿನ ಪರಿಸರ ಮತ್ತು ಅರಣ್ಯ ಸಂಪನ್ಮೂಲಗಳ ರಕ್ಷಣೆಯಲ್ಲಿ ಗಮನಾರ್ಹವಾದ ಕೆಲಸವನ್ನು ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಸ್ಮಯೋರ್ ಸಂಸ್ಥೆಯು ಸಂಡೂರಿನ ಸ್ಥಳೀಯ ಸಸ್ಯವರ್ಗವನ್ನು ಒಳಗೊಂಡಿರುವ ಸಸ್ಯೋದ್ಯಾನವನ್ನು ಸ್ಥಾಪಿಸುವುದು, ಸ್ಥಳೀಯ ವಿವಿಧ ತಳಿಗಳ ಬೀಜ ಭಂಡಾರವನ್ನು ಸ್ಥಾಪಿಸುವುದು, ಅಲ್ಲದೇ 500 ಕ್ಕೂ ಹೆಚ್ಚು ಸಸಿಗಳನ್ನು ನೆಡುವುದರೊಂದಿಗೆ ಮತ್ತು ಮುಂದಿನ ದಿನಗಳಲ್ಲಿ 1,50,000 ಸ್ಥಳೀಯ ಸಸ್ಯಗಳನ್ನು ನೆಡುವ ಗುರಿಯನ್ನು ಹಾಕಿಕೊಂಡಿತು.

ಸ್ಮಯೋರ್ ಸಂಸ್ಥೆಯ ಪ್ರೌಢಶಾಲೆ ದೇವಗಿರಿ ವಿದ್ಯಾರ್ಥಿಗಳಿಂದ “ಒಂದೇ ಭೂಮಿ” ಎನ್ನುವ ವಿಷಯದ ಮೇಲೆ ಚಿತ್ರಕಲೆ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಾದ ಸಂದೀಪ್ ಸೂರ್ಯವಂಶಿಯವರಿಂದ ಬಹುಮಾನ ವಿತರಿಸಲಾಯಿತು.ಆಚರಣೆಯ ಅಂಗವಾಗಿ, ಸ್ಮಯೋರ್ ಸಂಸ್ಥೆಯು ಮುಖ್ಯಮಂತ್ರಿಗಳ ಪ್ರಶಸ್ತಿ ಪುರಸ್ಕøತರಾದ ರೇಂಜ್ ಫಾರೆಸ್ಟ್ ಆಫೀಸರ್ (ಆರ್ ಎಫ್ ಓ)ಗುಡೇಕೋಟೆ ಎ.ರೇಣುಕಮ್ಮ ಅವರನ್ನು ಸನ್ಮಾನಿಸಿ ಗೌರವಿಸಿತು.

ಹಾಗೂ ಹಿರಿಯ ಅರಣ್ಯ ಅಧಿಕಾರಿಯಾದ ಸೋಮಶೇಖರ್ ರೆಡ್ಡಿ ಆರ್‍ಎಫ್‍ಓ, ಸಂಡೂರು ಅವರನ್ನು ಸಹ ಗೌರವಿಸಲಾಯಿತು. ಅಲ್ಲದೇ ಸ್ಮಯೋರ್ ಸಂಸ್ಥೆಯು ಗಣಿಗಳನ್ನು ಹಸಿರಾಗಿಸುವುದು, ಅಲ್ಲದೇ ನರ್ಸರಿಗಳನ್ನು ನಿರ್ವಹಿಸುವ ಕಾರ್ಯಗಳಲ್ಲಿ ತೊಡಗಿಕೊಂಡ ತಮ್ಮದೇ ಸಂಸ್ಥೆಯ ಉದ್ಯೋಗಿಗಳಾದ ಕುತುಬ್ ಸಾಬ್ ಹೆಚ್, ಮೊಹಮ್ಮದ್ ರಫಿ ಮತ್ತು ಕೊಮಾರಸ್ವಾಮಿ.ಟಿ, ಅವರನ್ನು ಸಹ ಗೌರವಿಸಿತು.

ಮುಖ್ಯ ಅತಿಥಿಗಳು ಮತ್ತು ಇತರ ಗಣ್ಯರ ಉಪಸ್ಥಿಯಲ್ಲಿ ಸ್ಮಯೋರ್ ನೌಕರರು, ಚುನಾಯಿತ ಪಂಚಾಯತ್ ಸದಸ್ಯರು ಮತ್ತು ದೇವಗಿರಿ ಗ್ರಾಮದ ನಿವಾಸಿಗಳು ದೇವಗಿರಿ ಪಂಚಾಯತಿಯನ್ನು ಹಂತ ಹಂತವಾಗಿ “ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ” ಮಾಡಲು ಪ್ರಮಾಣ ವಚನ ಸ್ವೀಕರಿಸಿದರು.
ಸುಮಂತ್ ಬೆಣ್ಣಿಹಳ್ಳಿಯವರಿಂದ ವಂದನಾರ್ಪಣೆ ಕಾರ್ಯಕ್ರಮವು ನಡೆಯಿತು. ಸ್ಮಯೋರ್ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಬಚಲಪ್ಪ, ಡಾ.ನಝೀಮ ಭಾನು, ಸುನಿಲಕುಮಾರ, ಪ್ರಕಾಶ್ ಬಾಬು, ಸೀಮಾ ಅಲ್ಲದೇ ಮುಂತಾದವರಿದ್ದರು.

LEAVE A REPLY

Please enter your comment!
Please enter your name here