ಅಕ್ರಮ ಪಡಿತರ ಸಾಗಣೆ 7 ಜನರ ವಿರುದ್ಧ ಪ್ರಕರಣ: 259 ಕ್ವಿಂಟಲ್ ಅಕ್ಕಿ ವಶ

0
145

ಹುಬ್ಬಳ್ಳಿ: ಏ.20: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 8 ಲಕ್ಷ ರೂ.ಮೌಲ್ಯದ 259 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು, 7 ಜನರ ವಿರುದ್ಧ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಕ್ರಮ ಪಡಿತರ ಧಾನ್ಯ ಸಾಗಣೆ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪ್ರಭಾರ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಅವರ ನೇತೃತ್ವದಲ್ಲಿ, ಆಹಾರ,ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಸುಧೀರ್ ಸಾವ್ಕಾರ್ ಮತ್ತಿತರ ಅಧಿಕಾರಿ,ಸಿಬ್ಬಂದಿಯನ್ನೊಳಗೊಂಡ ತಂಡ ನಿನ್ನೆ (ಏ.18) ರಾತ್ರಿ ಅಣ್ಣಿಗೇರಿಗೆ ಭೇಟಿ ನೀಡಿ , ನಿಂಗಪ್ಪ ದೇಸಾಯಿ ಅವರ ಜಿನ್ನಿಂಗ್ ಫ್ಯಾಕ್ಟರಿ ಆವರಣದಲ್ಲಿ ದ್ದ ಒಂದು ಲಾರಿ ಹಾಗೂ ಬೊಲೆರೋ ವಾಹನದಲ್ಲಿ ಅಕ್ಕಿಯ ಚೀಲಗಳನ್ನು ಪತ್ತೆ ಮಾಡಿ, ಅವು ಸಾರ್ವಜನಿಕ ಪಡಿತರ ಅಕ್ಕಿ ಎಂದು ಗುರುತಿಸಿ ವಶ ಪಡಿಸಿಕೊಳ್ಳಲಾಗಿದೆ.

ಕೆಎ 25-ಎಎ3293 ನೋಂದಣಿ ಸಂಖ್ಯೆಯ ಲಾರಿಯಲ್ಲಿ 483 ಹಾಗೂ ಕೆಎ25-ಎಬಿ 4432 ನೋಂದಣಿ ಸಂಖ್ಯೆಯ ಬೊಲೆರೋ ವಾಹನದಲ್ಲಿ 34 ಅಕ್ಕಿ ಚೀಲಗಳು ದೊರೆತಿವೆ.ಒಟ್ಟು 259.9 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.ಸರ್ಕಾರದ ನಿಗದಿಯಂತೆ ಪ್ರತಿ ಕೆ.ಜಿ.ಗೆ 32 ರೂ.ದರದಂತೆ ಒಟ್ಟು 8,31,680 ರೂ.ಮೌಲ್ಯ ಅಂದಾಜಿಸಲಾಗಿದೆ.

ಲಾರಿ ಚಾಲಕ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಚಳಗೇರಿಯ ಸುರೇಶ ರುದ್ರಪ್ಪ ಶೆಟ್ಟರ್,ಕ್ಲೀನರ್ ಯಲ್ಲಪ್ಪ ಅಡವಿಭಾವಿ,ಅಕ್ರಮ ಪಡಿತರ ಅಕ್ಕಿಯ ಖರೀದಿದಾರ ಹುಬ್ಬಳ್ಳಿಯ ಸಚಿನ್ ಜರತಾರಘರ್,ಲಾರಿ ಮಾಲಿಕ ಹುಬ್ಬಳ್ಳಿಯ ಬಷೀರ್ ಅಹ್ಮದ್ ಪಾಟೀಲ, ಬೊಲೆರೊ ಮಾಲೀಕ ಅಣ್ಣಿಗೇರಿಯ ಹಜರೇಸಾಬ ಬಡಿಗೇರ,ಅಕ್ರಮ ಪಡಿತರ ದಾಸ್ತಾನಿಗೆ ಸ್ಥಳ ನೀಡಿದ ಅಣ್ಣಿಗೇರಿಯ ನಿಂಗಪ್ಪ ದೇಸಾಯಿ ಹಾಗೂ ಪರಾರಿಯಾಗಿರುವ ಬೊಲೆರೊ ವಾಹನ ಚಾಲಕ ಹಾಗೂ ಇತರರ ವಿರುದ್ಧ ಆಹಾರ ನಿರೀಕ್ಷಕ ತಮ್ಮಣ್ಣ ಮುತ್ತಣ್ಣವರ ನೀಡಿರುವ ದೂರನ್ನು ಅಣ್ಣಿಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಶಪಡಿಸಿಕೊಂಡಿರುವ ಪಡಿತರ ಅಕ್ಕಿಯನ್ನು ಹುಬ್ಬಳ್ಳಿ ಅಮರಗೋಳ ಎಪಿಎಂಸಿ ಆವರಣದ ಗೋದಾಮುಗಳಲ್ಲಿ ಸಂಗ್ರಹಿಸಿ ಇಡಲಾಗಿದೆ.

LEAVE A REPLY

Please enter your comment!
Please enter your name here