ಸಂಸದರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿ ಸಭೆ; ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡಿ: ಸಂಸದ ವೈ.ದೇವೆಂದ್ರಪ್ಪ

0
46

ಬಳ್ಳಾರಿ,ಸೆ.04:ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಂಸದರಾದ ವೈ.ದೇವೆಂದ್ರಪ್ಪ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ಸೋಮವಾರದಂದು, ನಗರದ ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಅಭಿವೃದ್ದಿ ಮತ್ತು ಮೇಲ್ವಿಚಾರಣಾ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಜಲ ಜೀವನ ಮಿಷನ್ ಯೋಜನೆಯ ಅನುಷ್ಠಾನ ತೃಪ್ತಿಕರವಾಗಿಲ್ಲ. ಕೆಲವು ಕೆರೆಗಳಿಂದ ನೀರು ಸೋರಿಕೆಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡು ನಿಷ್ಕ್ರಿಯಗೊಂಡಿವೆ ಎಂದು ಕಳವಳ ವ್ಯಕ್ತಪಡಿಸಿದ ಸಂಸದರು, ಈ ಕುರಿತು ಕಾಮಗಾರಿ ಪರಿಶೀಲಿಸಲು ಸಮಿತಿ ರಚಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶುದ್ಧ ನೀರಿನ ಘಟಕ ಯೋಜನೆಯಡಿ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಗೊಂಡಿವೆ. ಇದಕ್ಕೆ ಸಂಬಂಧಿಸಿದಂತೆ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದ ಸಂಸದರು, ಇದೇ ಸಂದರ್ಭದಲ್ಲಿ ಮೋಕಾ ಕೆರೆಯ ಶೀಥಲೀಕರಣ ಕುರಿತು ಸ್ಥಳ ಭೇಟಿ ನಡೆಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಗಾರ್ಮೆಂಟ್ಸ್ ಯೂನಿಟ್ ಪ್ರಾರಂಭಕ್ಕೆ ಉತ್ತೇಜನ ನೀಡಿ:
ಬಳ್ಳಾರಿಯಲ್ಲಿ ಜೀನ್ಸ್ ಉದ್ಯಮ ಹೆಚ್ಚು ಬೆಳೆಯುತ್ತಿದ್ದು ಇದಕ್ಕೆ ಬೇಡಿಕೆಯು ಹೆಚ್ಚುತ್ತಿದೆ. ನಿರುದ್ಯೋಗ ಮಹಿಳೆಯರಿಗೆ ಜೀನ್ಸ್ ಹೊಲಿಗೆ ತರಬೇತಿಯನ್ನು ಕೌಶಲ್ಯಾಭಿವೃದ್ದಿ ಇಲಾಖೆಯಿಂದ ಕೈಗೊಳ್ಳಬೇಕು. ಈಗಾಗಲೇ ಬಳ್ಳಾರಿಯಲ್ಲಿ ಜೀನ್ಸ್‍ಗೆ ಸಾಕಷ್ಟು ಮಾರುಕಟ್ಟೆ ಬೇಡಿಕೆ ಇದ್ದು, ಇದಕ್ಕೆ ತರಬೇತಿಯ ಮೂಲಕ ಉತ್ತೇಜನ ನೀಡುವುದರಿಂದ ಇಲ್ಲಿನ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸಲಿವೆ ಎಂದು ಕೌಶಲ್ಯಾಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಕ್ಕಳ ಪೌಷ್ಟಿಕತೆಗೆ ಫಾರ್ಟಿಫೈಡ್ ಅಕ್ಕಿ: ಅಂಗನವಾಡಿ ಕೇಂದ್ರಗಳಲ್ಲಿ ನೀಡುವ ಆಹಾರ ಮತ್ತು ಗರ್ಭೀಣಿಯರಿಗೆ ವಿತರಿಸುವ ಆಹಾರ ಸಾಮಾಗ್ರಿಗಳ ದಾಸ್ತಾನು ಕೊಠಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಕ್ಕಳ ಉತ್ತಮ ಬೆಳವಣಿಗೆಗೆ ಉತ್ತಮ ಪೋಷಕಾಂಶ ಇರುವ ಫಾರ್ಟಿಫೈಡ್ ಅಕ್ಕಿಯನ್ನು ಕೆಎಸ್‍ಎಫ್‍ಸಿ ಇಂದ ಸರಬರಾಜು ಮಾಡÀಲಾಗುತ್ತಿದೆ. ಈ ಕುರಿತು ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರಾ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ನೀಡುವ ಬಿಸಿಯೂಟದಲ್ಲಿ ಕಬ್ಬಿಣಾಂಶ ಇರುವ ತರಕಾರಿಗಳನ್ನು ಬಳಸಬೇಕು. ಶಾಲೆಯ ಆವರಣದಲ್ಲಿ ಜಾಗವಿದ್ದಲ್ಲಿ ನರೇಗಾ ಯೋಜನೆಯ ಸೊಪ್ಪು-ತರಕಾರಿ ಬೆಳೆಯಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮನೆಗಳು ಬ್ಲಾಕ್ ಆಗದಂತೆ ನೋಡಿಕೊಳ್ಳಿ: ಮನೆ/ನಿವೇಶನ ರಹಿತರಿಗೆ ಸೂರು ಒದಗಿಸಿ ಅವರ ಜೀವನದಲ್ಲಿ ನೆಮ್ಮದಿಯಿಂದ ಇರಲಿ ಎಂಬುವ ಸದುದ್ದೇಶದಿಂದಲೇ ಸರಕಾರ ವಿವಿಧ ಯೋಜನೆಗಳಡಿ ಮನೆಗಳನ್ನು ನಿರ್ಮಿಸಿಕೊಡುವ ಕೆಲಸ ಮಾಡುತ್ತಿದೆ. ಅನಿವಾರ್ಯ ಹಾಗೂ ವಿವಿಧ ಕಾರಣಗಳಿಂದ ಆಯ್ಕೆಯಾದ ಫಲಾನುಭವಿಗಳು ನಿಗದಿಪಡಿಸಿದ ಅವಧಿಯೊಳಗೆ ಮನೆನಿರ್ಮಿಸಿಕೊಳ್ಳದಿದ್ದಲ್ಲಿ ಬ್ಲಾಕ್ ಆಗುತ್ತವೆ. ಬ್ಲಾಕ್ ಆಗುವುದಕ್ಕಿಂತ ಮುಂಚೆಯೇ ಅಧಿಕಾರಿಗಳು ಆಯ್ಕೆಯಾದ ಫಲಾನುಭವಿಗಳಿಗೆ ನೋಟಿಸ್ ನೀಡುವುದರ ಜೊತೆಗೆ ಅವರಿಗೆ ತಿಳಿವಳಿಕೆ ಮೂಡಿಸಿ ಮನೆ ನಿರ್ಮಿಸಿಕೊಳ್ಳಲು ಇನ್ಮುಂದೆ ಪ್ರೇರೆಪಿಸುವ ಕೆಲಸ ಮಾಡಿ ಎಂದು ಸಂಸದ ದೇವೆಂದ್ರಪ್ಪ ಅವರು ಸೂಚನೆ ನೀಡಿದರು.
ಬಳ್ಳಾರಿ-ಹೊಸಪೇಟೆ ಮತ್ತು ಬಳ್ಳಾರಿ-ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತು ಕೊಪ್ಪಳ ಲೋಕಸಭೆ ಸಂಸದರಾದ ಕರಡಿ ಸಂಗಣ್ಣ ಅವರು ವಿಚಾರಿಸಿದಾಗ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಗೆ ಮಾಹಿತಿ ಇಲ್ಲದ ಕಾರಣ, ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಇತರರು ನಮ್ಮನ್ನು ವಿಚಾರಿಸುತ್ತಾರೆ; ಪ್ರತಿ ಸಭೆಗೂ ಅಧಿಕಾರಿಗಳ ಬದಲಾಗಿ ಇತರರನ್ನು ಕಳುಹಿಸುತ್ತಾರೆ. ಕೂಡಲೇ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿಎಂಎಫ್ ಅಡಿ ಮಂಜೂರಾದ ಕಾಮಗಾರಿಗಳ ಪ್ರಗತಿಯ ವಿವರ: ಜಿಲ್ಲೆಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಡಿ ಜಿಲ್ಲೆಗೆ 6 ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ. ಅದರಲ್ಲಿ 1406 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 989 ಮುಕ್ತಾಯಗೊಂಡ ಕಾಮಗಾರಿಗಳು, 169 ಪ್ರಗತಿ ಹಂತದಲ್ಲಿರುವ ಕಾಮಗಾರಿಗಳು, 77 ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಟೆಂಡರ್ ಕರೆಯುವ ಹಂತದಲ್ಲಿವೆ. 108 ಟೆಂಡರ್ ಹಂತದಲ್ಲಿರುವ ಕಾಮಗಾರಿಗಳು ಹಾಗೂ 63 ರದ್ದುಪಡಿಸಲಾದ ಕಾಮಗಾರಿಗಳು. 6 ಕ್ರಿಯಾ ಯೋಜನೆಗೆ ಮೀಸಲಿರಿದ್ದ ರೂ.1593.68 ಕೋಟಿಗಳಲ್ಲಿ 1406 ಕಾಮಗಾರಿಗಳಿಗೆ ಇಲ್ಲಿಯವರೆಗೆ ರೂ.597.91 ಕೋಟಿ ಬಿಡುಗಡೆಯಾಗಿದೆ ಎಂದು ಜಿಲ್ಲಾ ಖನಿಜ ಪ್ರತಿಷ್ಠಾನದ ವಿಶೇಷ ಅಧಿಕಾರಿ ಪಿ.ಎಸ್.ಮಂಜುನಾಥ ಅವರು ಸಭೆಗೆ ತಿಳಿಸಿದರು.
ಡಿಎಂಎಫ್ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳಲ್ಲಿ ರದ್ದು ಪಡಿಸಲಾದ ಕಾಮಗಾರಿಗಳನ್ನು ಮುಂದಿನ ಹಂತಕ್ಕೆ ಏನು ಮಾಡಬಹುದು ಎಂದು ಸಂಸದ ಕರಡಿ ಸಂಗಣ್ಣ ಅವರು ಪ್ರಸ್ತಾಪಿಸಿದಾಗ, ಆ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ, ಸಮ್ಮುಖದಲ್ಲಿ ಗೌರ್ನಿಂಗ್ ಸಭೆ ಏರ್ಪಡಿಸಿ ಅವರ ಸಮ್ಮುಖದಲ್ಲಿ ಚರ್ಚಿಸಲಾಗುವುದು ಎಂದು ಡಿಎಂಎಫ್ ವಿಶೇಷಾಧಿಕಾರಿ ಮಂಜುನಾಥ ಅವರು ತಿಳಿಸಿದರು.
ಸಭೆಯಲ್ಲಿ ನರೇಗಾ ಯೋಜನೆ, ದೀನ್-ದಯಾಳ್ ಅಂತ್ಯೋದಯ ಯೋಜನೆ, ಕೃಷಿ ಇಲಾಖೆಯ ವಿವಿಧ ಯೋಜನೆಗಳು, ಆರೋಗ್ಯ ಇಲಾಖೆಯ ಆಯುಷ್ಮಾನ್ ಭಾರತ್ ಸೇರಿದಂತೆ ವಿವಿಧ ಇಲಾಖೆಗಳ ಕೇಂದ್ರ ಪುರಸ್ಕøತ ಯೋಜನೆ ಅನುಷ್ಠಾನಗಳ ಕುರಿತು ಸಂಸದರು ಮಾಹಿತಿ ಪಡೆದುಕೊಂಡರಲ್ಲದೇ, ಸಲಹೆ-ಸೂಚನೆಗಳನ್ನು ಇದೇ ಸಂದರ್ಭದಲ್ಲಿ ನೀಡಿದರು.
ಇದಕ್ಕೂ ಮುಂಚೆ ಕೇಂದ್ರ ಪುರಸ್ಕøತ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಡಿ ಇತ್ತೀಚೆಗೆ ಮೈಸೂರು ಹೊರವಲಯದಲ್ಲಿ ಅಪಘಾತಕ್ಕಿಡಾದ ಬಳ್ಳಾರಿಯ ಸಂಗನಕಲ್ಲು ಗ್ರಾಮದ ಕುಟುಂಬದ ಗಾಯತ್ರಿ ಗಂಡ ಜನಾರ್ಧನ ಅವರಿಗೆ ರೂ.2 ಲಕ್ಷ ವಿಮೆ ಪತ್ರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಲೋಕಸಭೆ ಸಂಸದ ಕರಡಿ ಸಂಗಣ್ಣ, ವಿಧಾನಪರಿಷತ್ ಸದಸ್ಯರಾದ ವೈ.ಎಂ.ಸತೀಶ್, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಸೇರಿದಂತೆ ನಾಮನಿರ್ದೇಶಿತ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here