ಶಿವಮೊಗ್ಗ ಜಿಲ್ಲೆಯ ಯಾವೆಲ್ಲ ಶಾಸಕರಿಗೆ ಲಭಿಸಲಿದೆ ಸಚಿವ ಸ್ಥಾನ?

0
106

ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆಗೆ ಕ್ಷಣಗಣನೆ ಆರಂಭವಾಗಿದೆ. ಸಿಎಂ ಬೊಮ್ಮಾಯಿ ಸೋಮವಾರ ಸಂಜೆ ದೆಹಲಿ ಯಾತ್ರೆಯಿಂದಾಗಿ ನಿರೀಕ್ಷೆಗಳು ಗರಿಗೆದರಿವೆ. ಕೊನೆ ಹಂತದ ಲಾಬಿ ಕೂಡ ಬಿರುಸು ಪಡೆದುಕೊಂಡಿದೆ. ಈ ನಡುವೆ ಶಿವಮೊಗ್ಗ ಜಿಲ್ಲೆಯ ಯಾವೆಲ್ಲ ಶಾಸಕರಿಗೆ ಸಚಿವ ಸ್ಥಾನ ಲಭಿಸಲಿದೆ ಎಂಬುದರ ಕುರಿತು ಕುತೂಹಲ ಹೆಚ್ಚಾಗಿದೆ.


ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ಹಿರಿಯ ಶಾಸಕ ಆರಗ ಜ್ಞಾನೇಂದ್ರ ಹೆಸರು ಮುಂಚೂಣಿಯಲ್ಲಿದ್ದು, ಇವರಲ್ಲಿ ಒಬ್ಬರು ಅಥವಾ ಇಬ್ಬರು ಸಂಪುಟ ಸೇರ್ಪಡೆ ಸಂಭವ ಹೆಚ್ಚಾಗಿದೆ.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಜಿಲ್ಲಾ ಬಿಜೆಪಿಯ ಪ್ರಭಾವಿ ಮುಖಂಡ. ಸಚಿವ ಸ್ಥಾನ ಕಳೆದುಕೊಳ್ಳುವ ವಿಚಾರ ತಿಳಿಯುತ್ತಿದ್ದಂತೆಯೇ ತಮ್ಮ ಹತಾಶೆ ಹೊರ ಹಾಕಿದ್ದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಸಚಿವ ಸ್ಥಾನ ಹೋದರೆ ಗೂಟ ಹೋಯ್ತು ಅಂದುಕೊಳ್ಳುತ್ತೇನೆ ಎಂದಿದ್ದರು. ಪಕ್ಷದ ಸಂಘಟನೆ ಕೆಲಸದಲ್ಲಿ ತೊಡಿಗಿಸಿಕೊಳ್ಳುವುದಾಗಿ ಹೇಳಿದ್ದರು. ಸಚಿವ ಸ್ಥಾನ ಕಳೆದುಕೊಂಡ ಬಳಿಕ, ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನ ಯಾವುದು ನೀಡಿದರೂ ನಿಭಾಯಿಸುತ್ತೇನೆ ಎನ್ನುವ ಮೂಲಕ ತಾವಿನ್ನೂ ಸಚಿವ ಸ್ಥಾನದ ರೇಸ್‌ನಲ್ಲಿ ಇರುವುದಾಗಿ ತಿಳಿಸಿದ್ದಾರೆ.

ಕುತೂಹಲ ಮೂಡಿಸಿದೆ ಆರಗ ಬೆಂಗಳೂರು ಟೂರ್ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಸಂಪುಟ ಸೇರಲಿದ್ದಾರೆ ಎಂದು ಬೆಂಬಲಿಗರು ವಿಶ್ವಾಸದಲ್ಲಿದ್ದಾರೆ. ಈ ನಡುವೆ ಆರಗ ಜ್ಞಾನೇಂದ್ರ ದಿಢೀರ್ ಬೆಂಗಳೂರಿಗೆ ತೆರಳಿದ್ದಾರೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸೋಮವಾರ ಅಥವಾ ಮಂಗಳವಾರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿರುವ ನೂತನ ಸಚಿವರ ಪಟ್ಟಿಯಲ್ಲಿ ಜ್ಞಾನೇಂದ್ರ ಹೆಸರಿರಬಹುದು ಎಂದು ಬೆಂಬಲಿಗರು ನಂಬಿಕೆಯಲ್ಲಿದ್ದಾರೆ.

‘ಹಾಲಪ್ಪಗೆ ಸಚಿವ ಸ್ಥಾನ ಫಿಕ್ಸ್’ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪರಿಗೂ ಸಚಿವ ಸ್ಥಾನ ಸಿಗುವ ಸಂಭವವಿದೆ ಎಂದು ಅವರ ಅಭಿಮಾನಿಗಳ ನಂಬಿಕೆಯಾಗಿದೆ. ಹಿರಿಯರೆಲ್ಲ ಸಚಿವ ಸ್ಥಾನ ತ್ಯಜಿಸಿದರೆ ತಮಗೆ ಹಾಗೂ ಆರಗ ಜ್ಞಾನೇಂದ್ರರಿಗೆ ಅವಕಾಶವಾಗಲಿದೆ ಎಂದು ಇತ್ತೀಚೆಗೆ ಹರತಾಳು ಹಾಲಪ್ಪ ಹೇಳಿದ್ದರು. ಅಲ್ಲದೆ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ತಮ್ಮ ಹೆಸರಿದೆ ಎಂದೂ ಹೇಳಿದ್ದಾರೆ. ಹಾಗಾಗಿ ಹಾಲಪ್ಪರಿಗೆ ಸಚಿವ ಸ್ಥಾನ ಫಿಕ್ಸ್ ಎಂದು ಬೆಂಬಲಿಗರ ವಿಶ್ವಾಸವಾಗಿದೆ.

ತೆರೆಮರೆಯಲ್ಲಿ ಪ್ರಯತ್ನಗಳು ಶುರು ಸಚಿವ ಸ್ಥಾನಕ್ಕಾಗಿ ತೆರೆಮರೆ ಪ್ರಯತ್ನಗಳು ಆರಂಭವಾಗಿದ್ದು, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಂಘ ಪರಿವಾರದ ಪ್ರಮುಖರನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ. ಇತ್ತೀಚಿಗೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ರನ್ನು ಭೇಟಿಯಾಗಿದ್ದರು. ಇತ್ತ ಮಾಜಿ ಸಚಿವ ಹರತಾಳು ಹಾಲಪ್ಪ ತಮ್ಮ ಪಾಲಿಗೆ ಎರಡು ಹೈಕಮಾಂಡ್ ಇದೆ. ಒಂದು ದೆಹಲಿಯದ್ದು, ಮತ್ತೊಂದು ಯಡಿಯೂರಪ್ಪ ಎಂದು ಹೇಳಿಕೆ ನೀಡಿದ್ದು, ಅವರಿಂದಲೇ ತಮ್ಮ ಹೆಸರು ಮುನ್ನಲೆಗೆ ಬರುವಂತೆ ನೋಡಿಕೊಂಡಿದ್ದಾರೆ. ಇತ್ತ ಶಾಸಕ ಆರಗ ಜ್ಞಾನೇಂದ್ರ ಸಂಘ ಪರಿವಾರಕ್ಕೂ ನಿಷ್ಠರಾಗಿ, ಯಡಿಯೂರಪ್ಪರನ್ನೂ ಪದೇ ಪದೇ ಭೇಟಿಯಾಗುತ್ತಿದ್ದಾರೆ.

ಮೂವರಿಗೂ ಸಚಿವ ಸ್ಥಾನ ನಿರೀಕ್ಷೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಹರತಾಳು ಹಾಲಪ್ಪ ಮತ್ತು ಆರಗ ಜ್ಞಾನೇಂದ್ರರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರವರ ಬೆಂಬಲಿಗರು ಆಗ್ರಹಿಸಿದ್ದಾರೆ. ಹಲವರು ಸುದ್ದಿಗೋಷ್ಠಿಗಳನ್ನು ನಡೆಸಿ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ಪ್ರಾದೇಶಿಕತೆ, ಜಾತಿ ಲೆಕ್ಕಾಚಾರಗಳನ್ನು ಅಳೆದು ತೂಗಲಾಗುತ್ತಿದೆ. ಹಾಗಾಗಿ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಅನ್ನುವುದು ಈಗ ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ ಭದ್ರಕೋಟೆಯಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಸಚಿವ ಸ್ಥಾನ ಕುರಿತು ನಿರೀಕ್ಷೆಗಳು ಹೆಚ್ಚಾಗಿವೆ.

LEAVE A REPLY

Please enter your comment!
Please enter your name here