ಆ.15ರಿಂದ ಜಿಲ್ಲೆಯಾದ್ಯಂತ ರೈತ ಬಂಧು ಅಭಿಯಾನ, ಪ್ರತಿ ಗ್ರಾಪಂಗೆ 50 ಎರೆಹುಳು ತೊಟ್ಟಿ ನಿರ್ಮಾಣ:ಜಿಪಂ ಸಿಇಒ ಕೆ.ಆರ್.ನಂದಿನಿ

0
412

ಬಳ್ಳಾರಿ,ಆ.09: ರೈತರಿಗೆ ಎರೆಹುಳು ಗೊಬ್ಬರ ತಯಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಆ.15 ರಿಂದ ಅಕ್ಟೋಬರ್ 15 ರವರೆಗೆ 02 ತಿಂಗಳ ಅವಧಿಯಲ್ಲಿ ಬಳ್ಳಾರಿ ಜಿಲ್ಲಾ ಪಂಚಾಯಿತಿಯು ಕೃಷಿ ಇಲಾಖೆಯ ಸಹಯೋಗದಲ್ಲಿ ರೈತ ಬಂಧು ಅಭಿಯಾನ ಹಮ್ಮಿಕೊಂಡಿದೆ. ನರೇಗಾ ಅಡಿ ಪ್ರತಿ ಗ್ರಾಮ ಪಂಚಾಯತಿಗೆ 50 ರಂತೆ ಎರೆಹುಳು ತೊಟ್ಟಿಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಭೂಸುಧಾರಣಾ ಕುಟುಂಬಗಳು, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳು, ಅಲೆಮಾರಿ ಜನಾಂಗದವರು,ಬಿಪಿಎಲ್ ಕುಟುಂಬಗಳು, ಸ್ತ್ರೀ ಪ್ರಧಾನ ಕುಟುಂಬಗಳು, ಸಣ್ಣ ಮತ್ತು ಅತೀ ಸಣ್ಣ ರೈತರು, ವಿಕಲಚೇತನ ಪ್ರಧಾನ ಕುಟುಂಬಗಳು,ಅನುಸೂಚಿತ ಬುಡಕಟ್ಟುಗಳು ಮತ್ತು ಪಾರಂಪರಿಕ ಅರಣ್ಯ ವಾಸಿಗಳು ಈ ಕಾಮಗಾರಿಯ ಸೌಲಭ್ಯ ಪಡೆಯಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.

ಎರೆಹುಳು ತೊಟ್ಟಿ ನಿರ್ಮಾಣಕ್ಕೆ ಸಲ್ಲಿಸಬೇಕಾದ ದಾಖಲೆಗಳಿವು:-
ನರೇಗಾ ಉದ್ಯೋಗ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಹಣಿ, ಜಾತಿ ಪ್ರಮಾಣ ಪತ್ರ (ಪ.ಜಾತಿ/ಪ.ಪಂಗಡದ ರೈತರಿಗೆ), ನಮೂನೆ 24/ಸಣ್ಣ ಹಿಡುವಳಿದಾರರ ಪತ್ರ (ಸಾಮಾನ್ಯ ವರ್ಗದವರಿಗೆ), ನಮೂನೆ-6 (ಗ್ರಾಮ ಪಂಚಾಯತಿಯಿಂದ)ಅನ್ನು ಗ್ರಾಪಂ ನಲ್ಲಿ ಸಲ್ಲಿಸಬೇಕು.

ಆಸಕ್ತ ರೈತರು ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಬಹುದು, ಗ್ರಾಮ ಪಂಚಾಯತಿ ಕಚೇರಿಯಲ್ಲಿರುವ ಕಾಮಗಾರಿ ಬೇಡಿಕೆ ಪೆಟ್ಟಿಗೆಯಲ್ಲಿ ಅರ್ಜಿ ಹಾಕಬಹುದು. ಕಾಯಕ ಮಿತ್ರ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಂಡು ಅದರ ಮೂಲಕ ಸಲ್ಲಿಸಬಹುದು. ಉಚಿತ ಸಹಾಯವಾಣಿ ಸಂ: 1800-425-8666 ಮೂಲಕ ಬೇಡಿಕೆ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ನಿರ್ದೇಶಕರುಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಎರೆಹುಳು ತೊಟ್ಟಿ ನಿರ್ಮಾಣದ ಉದ್ದೇಶಗಳು:-
ಆರ್ಥಿಕ ಸ್ಥಿರತೆ-ರಾಸಾಯನಿಕ ಗೊಬ್ಬರದ ಬದಲಾಗಿ ಎರೆಹುಳು ಗೊಬ್ಬರದ ಉಪಯೋಗದಿಂದ ಉತ್ಪಾದನೆ ವೆಚ್ಚ ಕಡಿಮೆಯಾಗುವುದರಿಂದ ರೈತರ ಆದಾಯ ಹೆಚ್ಚಿಸಲು ಅನುಕೂಲವಾಗುತ್ತದೆ.
ತ್ಯಾಜ್ಯ ವಸ್ತುಗಳ ಸದ್ಬಳಕೆಯಿಂದ (ಕೃಷಿ ಡೈರಿ) ಪರಿಸರ ಮಾಲಿನ್ಯ ಕಡಿಮೆಗೊಳಿಸಿ ಸ್ವಚ್ಛ ಪರಿಸರ ಸೃಷ್ಟಿಸಲು ಅನುಕೂಲವಾಗುತ್ತದೆ. ರೈತರಲ್ಲಿ ಎರೆಹುಳು ಗೊಬ್ಬರ ಉತ್ಪಾದನೆ, ಅದರ ಉಪಯುಕ್ತತತೆ ಹಾಗೂ ಸಾವಯವ ಕೃಷಿ ಉತ್ತೇಜಿಸುವ ಬಗ್ಗೆ ಜಾಗೃತಿ ಮೂಡಿಸುವುದು. ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಹಾಗೂ ರೈತರಿಗೆ ಎರೆಹುಳು ಗೊಬ್ಬರದ ಉತ್ಪಾದನೆ ಹಾಗೂ ಉದ್ಯಮಶೀಲತೆಯ ಅವಕಾಶಗಳ ಬಗ್ಗೆ ಪೂರಕ ಮಾಹಿತಿ ನೀಡಿ ಪ್ರೋತ್ಸಾಹಿಸಲು ಎರೆಹುಳು ತೊಟ್ಟಿ ನಿರ್ಮಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ರಾಸಾಯನಿಕ ಗೊಬ್ಬರ, ಕೀಟನಾಶಕ ಹಾಗೂ ಶೀಲಿಂದ್ರ ನಾಶಕಗಳ ಯಥೇಚ್ಛ ಬಳಕೆಯಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತದೆ. ಇದರಿಂದ ವಾತಾವರಣ ಕಲುಷಿತವಾಗುತ್ತದೆ. ಕೃಷಿ ಉತ್ಪನ್ನಗಳಲ್ಲಿ ರಾಸಾಯನಿಕ ಉಳಿಯುವಿಕೆಯಿಂದ ಉತ್ಪನ್ನಗಳ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಎರೆಹುಳು ಗೊಬ್ಬರ ಬಳಕೆಯಿಂದ ಆಗುವ ಉಪಯೋಗಗಳು:-
ಕಪ್ಪು ಬಂಗಾರವೆಂದೇ ಕರೆಯಲ್ಪಡುವ ಎರೆಹುಳು ಗೊಬ್ಬರ ಒಂದು ಸ್ಥಿರವಾದ ಸಾವಯವ ಗೊಬ್ಬರವಾಗಿದ್ದು, ಇದರ ಬಳಕೆಯಿಂದ ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳು ಪೂರೈಕೆಯಾಗುವುದಲ್ಲದೆ ಮಣ್ಣಿನ ಗುಣಮಟ್ಟ ಮತ್ತು ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚಿಸುತ್ತದೆ.ಎರೆಹುಳು ಗೊಬ್ಬರ ಸ್ವಂತ ಉತ್ಪಾದನೆ ಮಾಡಿ ಉಪಯೋಗಿಸುವುದರಿಂದ ಕೃಷಿ ಉತ್ಪಾದನೆ ವೆಚ್ಚ ಶೇ.25ರಿಂದ 30ರವರೆಗೆ ವೆಚ್ಚ ಕಡಿಮೆಗೊಳಿಸಬಹುದು. ಎರೆಹುಳು ಗೊಬ್ಬರದ ಜೊತೆಗೆ ಜೈವಿಕ ಗೊಬ್ಬರದ ಮಿಶ್ರಣದಿಂದ ರೋಗ ಉಂಟು ಮಾಡುವ ಸೂಕ್ಷ್ಮ ಜೀವಿಗಳನ್ನು ನಿಯಂತ್ರಿಸುತ್ತದೆ. ಎರೆಹುಳು ಕೃಷಿ ಅಳವಡಿಕೆಯಿಂದ ಮಣ್ಣಿನ ರಚನೆ. ನೀರು ಹೀರುವ ಗುಣ, ಗಾಳಿಯಾಡುವ ಗುಣ ಮತ್ತು ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ. ಮಣ್ಣಿನ ತ್ಯಾಜ್ಯ ಮತ್ತು ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆಯಾಗುವುದರೊಂದಿಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು. ಎರೆಹುಳು ಗೊಬ್ಬರ ತೊಟ್ಟಿ ನಿರ್ಮಿಸಿಕೊಳ್ಳಲು ಸುಲಭ ಕಡಿಮೆ ಖರ್ಚು ಹಾಗೂ ಕಡಿಮೆ ಶ್ರಮ ಹೊಂದಿರುತ್ತದೆ ಹಾಗೂ ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆಯಾಗುತ್ತದೆ. ಎರೆಹುಳು ಗೊಬ್ಬರದ ಉಪಯೋಗದಿಂದ ಉತ್ಪನ್ನಗಳ ಗುಣಮಟ್ಟ ಮತ್ತು ಶೇಖರಣೆ ಅವಧಿಯು ಹೆಚ್ಚಲಿದೆ ಎಂದು ಅವರು ತಿಳಿಸಿದ್ದಾರೆ.
ಹೊಲಕ್ಕೆ ಹಾಕಿದರೇ ಎರೆಹುಳು ಗೊಬ್ಬರ ಫಸಲು ಆದೀತು ಪ್ರಬಲ ಎನ್ನುವಂತೆ ಜಿಲ್ಲೆಯಲ್ಲಿರುವ ರೈತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಎರೆಹುಳು ತೊಟ್ಟಿಗಳನ್ನು ನಿರ್ಮಿಸಲು ಮುಂದಾಗಬೇಕು ಮತ್ತು ಈ ಮೂಲಕ ರಾಸಾಯನಿಕ ಗೊಬ್ಬರ ಬಳಸುವುದನ್ನು ಕಡಿಮೆಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here