ಕನ್ನಡ ಜಾಗೃತಿ ಸಮಿತಿ ಸಭೆ

0
95

ಮಡಿಕೇರಿ ಆ.12-ಕನ್ನಡ ಜಾಗೃತಿ ಸಮಿತಿ ಸಭೆಯು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಿತಿ ಸದಸ್ಯರಾದ ರಂಜಿತಾ ಕಾರ್ಯಪ್ಪ, ಕಾಜೂರು ಸತೀಶ್, ಇ.ರಾಜು ಇತರರು ಪಾಲ್ಗೊಂಡಿದ್ದರು.

ಸಭೆಯ ಆರಂಭದಲ್ಲಿ ಮಾತನಾಡಿದ ಕಾಜೂರು ಸತೀಶ್ ಆವರು ಸರ್ಕಾರಿ ಸಭೆ ಸಮಾರಂಭಗಳು ಹಾಗೂ ಕಾರ್ಯಕ್ರಮದಲ್ಲಿ ಹಾರ, ತುರಾಯಿ, ಹೂಗುಚ್ಚ ಬದಲಾಗಿ, ಕನ್ನಡ ಪುಸ್ತಕ ನೀಡಬೇಕೆಂದು ಸರ್ಕಾರ ಆದೇಶಿಸಿದೆ. ಆ ದಿಸೆಯಲ್ಲಿ ಕನ್ನಡ ಪುಸ್ತಕಗಳನ್ನು ನೀಡುವಂತಾಗಬೇಕು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು, ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡನಾಮ ಫಲಕ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು, ಕನ್ನಡ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿ ಮಾಡಬೇಕು. ಜೊತೆಗೆ ಕನ್ನಡ ಮಾದ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕು ಎಂದು ಅವರು ಸಲಹೆ ಮಾಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೆ.ಟಿ ದರ್ಶನ್ ಅವರು ಮಾತನಾಡಿ ಗಡಿ ಭಾಗಗಳಲ್ಲಿ ಕನ್ನಡ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗುತ್ತಿದ್ದು, ಅಗತ್ಯ ಮೂಲ ಸೌಲಭ್ಯವನ್ನು ಒದಗಿಸಬೇಕು. ಕನ್ನಡ ಕುರಿತು ಅಂತರ್ಜಾಲದಲ್ಲಿ ಮಾಹಿತಿ ಲಭ್ಯವಾಗುವಂತಾಗಬೇಕು, ಪ್ರಮುಖ ರಸ್ತೆಗಳಿಗೆ ಕನ್ನಡ ಕವಿ ಹಾಗೂ ಸಾಹಿತಿಗಳ ಹೆಸರಿಡಬೇಕು. ಬ್ಯಾಂಕ್‍ನ ರಸೀದಿಯಲ್ಲಿ ಕನ್ನಡ ಭಾಷೆ ಬಳಸುವಂತಾಗಬೇಕೆಂದು ಸಮಿತಿ ಸದಸ್ಯರು ಪ್ರಸ್ತಾಪಿಸಿದ್ದಾರೆ ಎಂದು ಅವರು ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕಾಂತರಾಜು, ಮಣಜೂರು ಮಂಜುನಾಥ್ ಇತರರು ಇದ್ದರು.

LEAVE A REPLY

Please enter your comment!
Please enter your name here