ಮ್ಯಾನುವೆಲ್ ಸ್ಕ್ಯಾವೇಂಜರ್ಸ್ ಸಮೀಕ್ಷೆ ಕೈಗೊಳ್ಳುವ ಮುನ್ನ ತರಬೇತಿ ನೀಡಿ -ಡಾ.ದಿಲೀಷ್ ಶಶಿ:

0
110

ಕಲಬುರಗಿ,ಡಿ.28: ಸರ್ಕಾರದಿಂದ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಸಮೀಕ್ಷೆಗೆ ನಿರ್ದೇಶನ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಪೌರ ಸಂಸ್ಥೆಗಳ ಅಧಿಕಾರಿ-ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಪ್ರಭಾರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಶಿ ಅವರು ತಿಳಿಸಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಮಟ್ಟದ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ನೇಮಕಾತಿ ಪ್ರತಿಬಂಧಕ ಮತ್ತು ಪುನರ್ವಸತಿ ಅಧಿನಿಯಮ-2013ರ ಜಿಲ್ಲಾ ಮಟ್ಟದ ಜಾಗೃತ ಮತ್ತು ಮೇಲುಸ್ತುವಾರಿ ಸಮಿತಿಯ ಮೂರನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೌರಾಡಳಿತ ಇಲಾಖೆಯಿಂದ ಸಮೀಕ್ಷೆ ಕುರಿತಂತೆ ಎಸ್.ಓ.ಪಿ ಮಾರ್ಗಸೂಚಿ ನೀಡಲಾಗಿದೆ. ಅದರಂತೆ ಸಮೀಕ್ಷೆಯ ರೂಪು ರೇಷೆ ಮತ್ತು ಅದರ ಕಾರ್ಯವಿಧಾನದ ಬಗ್ಗೆ ಶೀಘ್ರದಲ್ಲಿಯೇ ತರಬೇತಿ ನೀಡಿ 2022ರ ಜನವರಿ ಮಾಹೆ ಅಂತ್ಯದೊಳಗೆ ಸಮೀಕ್ಷೆ ಕಾರ್ಯ ಮುಗಿಸಬೇಕು ಎಂದರು.
ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಬಳಸುತ್ತಿಲ್ಲ ಎಂದು ವರದಿ ನೀಡಲಾಗಿದೆ. ಅದೇ ರೀತಿ ಜಿಲ್ಲೆಯ ಇತರೆ ನಿಲ್ದಾಣಗಳ ಕುರಿತು ಸಹ ವರದಿ ನೀಡುವಂತೆ ಸೋಲಾಪೂರ ಸೀನಿಯರ್ ಡಿವಿಜನಲ್ ಕಮರ್ಶಿಯಲ್ ಮ್ಯಾನೇಜರ್ ಅವರಿಗೆ ಪತ್ರ ಬರೆಯುವಂತೆ ಡಾ.ದಿಲೀಷ್ ಶಶಿ ಸೂಚಿಸಿದರು.
ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ ಮಾತನಾಡಿ ಜಿಲ್ಲೆಯಾದ್ಯಂತ 9 ಸಕ್ಕಿಂಗ್ ಯಂತ್ರಗಳು ಮತ್ತು 4 ಜಟ್ಟಿಂಗ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಅಮೃತ್ ಯೋಜನೆಯಡಿ ಇನ್ನೂ 5 ಜಟ್ಟಿಂಗ್ ಯಂತ್ರಗಳನ್ನು ಖರೀದಿಸಬೇಕಿದೆ. ಗೃಹ ಭಾಗ್ಯ ಯೋಜನೆಯಡಿ ಕಲಬುರಗಿ ಪಾಲಿಕೆಯ ಪೌರಕಾರ್ಮಿಕರಿಗೆ ಮನೆ ನಿರ್ಮಿಸಲಾಗುತ್ತಿದೆ. ಪೌರಕಾರ್ಮಿಕರಿಗೆ ಬೆಳಗಿನ ಉಪಹಾರವನ್ನು ನೀಡಲಾಗುತ್ತಿದ್ದು, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮತ್ತು ಕೆಲಸಕ್ಕೆ ಬೇಕಾಗುವ ಪರಿಕರಗಳನ್ನು ಪೂರೈಸಲಾಗುತ್ತಿದೆ ಎಂದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಅಲ್ಲಾಭಕ್ಷ, ನಾಮನಿರ್ದೇಸಿತ ಸದಸ್ಯರಾದ ಅನೀಲಕುಮಾರ, ಭೀಮಕುಮಾರ, ಪಾಲಿಕೆ, ಕೆಯುಡಬ್ಲ್ಯೂ&ಡಿಬಿ, ರೈಲ್ವೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here