ಗುವಿವಿ 40ನೇ ಅಂತರ ಮಹಾವಿದ್ಯಾಲಯಗಳ ಮಹಿಳಾ ಕ್ರೀಡಾಕೂಟ: ಗೆಲುವು-ಸೋಲು ಸಹಜ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ.ಪ್ರೊ. ದಯಾನಂದ ಅಗಸರ

0
102

ಕಲಬುರಗಿ,ಡಿ.30: ಕ್ರೀಡೆಯಲ್ಲಿ ಗೆಲುವು-ಸೋಲು ಸಹಜ. ಆದರೆ, ಭಾಗವಹಿಸುವುದು ಮುಖ್ಯ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅವರು ಅಭಿಪ್ರಾಪಟ್ಟರು.
ಗುರುವಾರ ಗುಲಬರ್ಗಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 40ನೇ ಅಂತರ ಮಹಾವಿದ್ಯಾಲಯಗಳ ಮಹಿಳಾ ಕ್ರೀಡಾಕೂಟ-2021-22ನ್ನು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಸ್ತು, ತಾಳ್ಮೆ, ಆತ್ಮಾಭಿಮಾನ, ವಿಶಿಷ್ಟ ಗುಣಧರ್ಮ ಎಲ್ಲವೂ ಕ್ರೀಡಾಪಟುಗಳಿಗೆ ಕ್ರೀಡೆಯಿಂದ ಲಭಿಸುತ್ತದೆ. ಕ್ರೀಡಾಳುಗಳು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿ ವಿಶ್ವವಿದ್ಯಾಲಯದ ಹೆಸರು ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂದರು.
ಕೋವಿಡ್ ಕಾರಣ 2 ವರ್ಷಗಳ ಬಳಿಕ ಇದೀಗ ವಿ.ವಿ.ಯಲ್ಲಿ ಕ್ರೀಡಾ ಚಟುವಟಿಕೆಗಳು ಮತ್ತೆ ಆರಂಭಗೊಂಡಿದ್ದು ಸಂತಸದ ವಿಚಾರವಾಗಿದೆ. ಅಂತರ ಮಹಾವಿದ್ಯಾಲಯ ಮಟ್ಟದಿಂದ ಅಂತರ ವಿ.ವಿ. ಮಟ್ಟಕ್ಕೆ ಆಯ್ಕೆಯಾಗಿ ಯಶಸ್ಸುಗಳಿಸುವಂತಹ ಪ್ರದರ್ಶನ ನೀಡಿ ಎಂದು ಕ್ರೀಡಾಪಟುಗಳಿಗೆ ಹಾರೈಸಿದರು.
ನಾನು ಸಹ ವಿದ್ಯಾರ್ಥಿಯಾಗಿದ್ದಾಗ ಇದೇ ಕ್ರೀಡಾಂಗಣದ ಟ್ರ್ಯಾಕ್ ಮೇಲೆ ಓಡಿದ್ದೇನೆ. ಪ್ರಸ್ತುತ ಕ್ರೀಡಾಂಗಣದಲ್ಲಿ ಗುಣಮಟ್ಟದ ಸೌಲಭ್ಯಗಳು ದೊರೆಯುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಸವರಾಜ ಬಿ. ಯಾದವಾಡ ಅವರು ಮಾತನಾಡಿ, ಕ್ರೀಡಾಪಟುಗಳು ಕಠಿಣ ಪರಿಶ್ರಮದಿಂದ ಕ್ರೀಡಾಕೂಟದಲ್ಲಿ ಭಾಗಿಯಾಗಿ ವಿವಿಯ ಕೀರ್ತಿ ಪತಾಕೆ ಹಾರಿಸಬೇಕು. ಕ್ರೀಡಾಪಟುಗಳಿಗೆ ತಾಳ್ಮೆ ಮತ್ತು ನಂಬಿಕೆ ಬಹಳ ಮುಖ್ಯವಾಗುತ್ತದೆ ಎಂದರು.
ಕಲಬುರಗಿ ಮತ್ತು ಬೀದರ ಜಿಲ್ಲೆಗಳ ವ್ಯಾಪ್ತಿಯ ವಿವಿಧ ಕಾಲೇಜಿನ ಸುಮಾರು 180 ಕ್ರೀಡಾಪಟುಗಳು ಭಾಗವಹಿಸಿದ್ದರು. ಶಾರ್ಟ್ ಪುಟ್, ಡಿಸ್ಕಸ್ ಥ್ರೋ, ಬ್ರಾಡ್ ಜಂಪ್, ಹೈ ಜಂಪ್, ಜಾವಲಿನ್ ಥ್ರೋ, ರಿಲೇ ಮುಂತಾದ ಕ್ರೀಡೆಗಳಲ್ಲಿ ಭಾಗವಹಿಸಿದ್ದರು.
ಸುರಪೂರ ತಾಲೂಕಿನ ದೇವಾಪುರ ಗ್ರಾಮದ ಶ್ರೀ ಪ್ರಭು (ಎಸ್.ಪಿ.) ಕಾಲೇಜಿನ ಏಕಲವ್ಯ ಬಿಲ್ವಿದ್ಯೆ ಕ್ರೀಡಾ ಕೇಂದ್ರದ 11 ಕ್ರೀಡಾಪಟುಗಳು ಬಿಲ್ಲುಗಾರಿಕೆ ಕಲೆ ಪ್ರದರ್ಶನ ಮೂಲಕ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ.ಬಿ.ಎಮ್. ಕನಹಳ್ಳಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಎನ್.ಜಿ. ಕಣ್ಣೂರ, ಡಾ.ಎಂ.ಎಸ್. ಪಾಸೋಡಿ, ಸಂಯೋಜಕ ಮತ್ತು ಪ್ರಾಂಶುಪಾಲ ಡಾ.ಎಚ್.ಎಸ್. ಜಂಗೆ ಸೇರಿದಂತೆ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here