ಜಿಲ್ಲಾಮಟ್ಟದ ಬ್ಯಾಂಕರ್‍ಗಳ ವಿಶೇಷ ಸಭೆ ‘ರೈತರ ಪಾಲ್ಗೊಳ್ಳುವಿಕೆ ನಮ್ಮ ಆದ್ಯತೆ’ ಆಂದೋಲನ ಯಶಸ್ವಿಗೊಳಿಸಿ: ಜಿಪಂ ಸಿಇಒ ಜಿ.ಲಿಂಗಮೂರ್ತಿ

0
59

ಬಳ್ಳಾರಿ,ಏ.22 : ಇದೇ ಏ.24ರಿಂದ ಮೇ 1ರವರೆಗೆ ನಡೆಯುವ ರೈತರ ಪಾಲ್ಗೊಳ್ಳುವಿಕೆ ನಮ್ಮ ಆದ್ಯತೆ(ಕಿಸಾನ್ ಭಾಗೀದಾರಿ ಪ್ರಾಥಮಿಕ್ತಾ ಹಮಾರಿ) ಆಂದೋಲನದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವುದರ ಮೂಲಕ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಲಿಂಗಮೂರ್ತಿ ಅವರು ಬ್ಯಾಂಕ್ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿಯ ನಜೀರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಬ್ಯಾಂಕರ್‍ಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಭಾನುವರ ಮಹಾಗ್ರಾಮ ಸಭಾ ಕಾರ್ಯಕ್ರಮದಲ್ಲಿ ಕಿಸಾನ್ ಭಾಗೀದಾರಿ ಪ್ರಾಥಮಿಕ್ತಾ ಹಮಾರಿ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ. ಈ ಆಂದೋಲನವು ಮೇ 1ರವರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಲಿದೆ ಎಂದು ತಿಳಿಸಿದ ಅವರು ಜಿಲ್ಲೆಯ ಎಲ್ಲ ರೈತರು ಕಿಸಾನ್ ಕ್ರೇಡಿಟ್ ಕಾರ್ಡ್‍ನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಾಗಿದ್ದು,ಕಿಸಾನ್ ಕ್ರೇಡಿಟ್ ಕಾರ್ಡ್ ಪಡೆಯದೇ ಇರುವ ರೈತರು ಗ್ರಾಮಸಭೆಗಳಲ್ಲಿ ಭಾಗವಹಿಸಿ ಕಿಸಾನ್ ಕ್ರೇಡಿಟ್ ಕಾರ್ಡ್(ಕೆಸಿಸಿ) ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ ಜಿಪಂ ಸಿಇಒ ಲಿಂಗಮೂರ್ತಿ ಅವರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಿಸಿದ ಗ್ರಾಪಂಗಳಿಗೆ ಕಳುಹಿಸಿಕೊಡಲಾಗಿದೆ;ಅಲ್ಲಿನ ಸ್ಥಳೀಯ ಪಿಡಿಒ ಅಥವಾ ಕಾರ್ಯದರ್ಶಿಗಳು ಏ.24ರಿಂದ ಮೇ 1ರವರೆಗೆ ಪಟ್ಟಿಯಲ್ಲಿರುವ ಫಲಾನುಭವಿಗಳು ಮತ್ತು ಕೆಸಿಸಿ ಕಾರ್ಡ್ ಪಡೆಯದವರನ್ನು ಸಂಪರ್ಕಿಸಿ ಅವರ ಅರ್ಜಿಗಳನ್ನು ಪಡೆದುಕೊಂಡು ಹತ್ತಿರದ ಬ್ಯಾಂಕ್‍ಗೆ ಸಲ್ಲಿಸಬೇಕು.ನಿತ್ಯದ ಅರ್ಜಿಗಳ ಸ್ವೀಕಾರ ಮತ್ತು ಬ್ಯಾಂಕ್‍ಗಳಿಗೆ ಅರ್ಜಿಗಳ ಸಲ್ಲಿಕೆಯ ಅಪ್ಡೇಟ್ ಮಾಹಿತಿ ಒದಗಿಸಬೇಕು ಎಂದು ಅವರು ಸೂಚನೆ ನೀಡಿದರು.
ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿದ ರೈತರೂ ಸಹ ಅರ್ಜಿಗಳನ್ನು ತಮ್ಮ ಪಹಣಿ ಲಗತ್ತಿಸಿ ಸಲ್ಲಿಸಬಹುದಾಗಿದೆ ಎಂದು ವಿವರಿಸಿದ ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಸಾಲವು ಶೂನ್ಯ ಬಡ್ಡಿದರದಲ್ಲಿ ಹಾಗೂ ಗ್ರಾಮೀಣ ಬ್ಯಾಂಕ್,ರಾಷ್ಟ್ರೀಕೃತ ಬ್ಯಾಂಕ್,ಖಾಸಗಿ ಬ್ಯಾಂಕ್‍ಗಳಲ್ಲಿ ಕಿಸಾನ್ ಕ್ರೇಡಿಟ್ ಸಾಲವು ಶೇ.4ರ ಬಡ್ಡಿದರದಲ್ಲಿ ದೊರೆಯಲಿದೆ. ಬೆಳೆ ಸಾಲ,ಹೈನುಗಾರಿಕೆ,ಮೀನುಗಾರಿಕೆಗಳಿಗೂ ಕಿಸಾನ್ ಕ್ರೇಡಿಟ್ ಕಾರ್ಡ್ ಸಾಲಸೌಲಭ್ಯ ಅನ್ವಯವಾಗಲಿದೆ ಎಂದರು.
ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಎಸ್‍ಬಿವೈ,ಪಿಎಂಜೆಜೆಬಿವೈ, ಅಟಲ್ ಪಿಂಚಣಿ ಯೋಜನೆಗಳಿಗೆ ನೋಂದಣಿ ಮಾಡಲು ಕೆಸಿಸಿ ಅರ್ಜಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ 103582 ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಾಗಿದ್ದಾರೆ; ಈ ಫಲಾನುಭವಿಗಳಿಗಿಂತಲೂ ಹೆಚ್ಚು ಅಂದರೇ 135245 ರೈತರು ಕಿಸಾನ್ ಕ್ರೇಡಿಟ್ ಕಾರ್ಡ್ ಪಡೆದುಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸಂಡೂರು,ಕುರುಗೋಡು ತಾಲೂಕುಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗಿಂತಲೂ ಕಡಿಮೆ ರೈತರು ಕಿಸಾನ್ ಕ್ರೇಡಿಟ್ ಕಾರ್ಡ್ ಪಡೆದುಕೊಂಡಿದ್ದು, ಕಾರ್ಡ್ ಪಡೆದುಕೊಳ್ಳದವರನ್ನು ಗುರುತಿಸಿ ಅವರಿಗೆ ಒದಗಿಸುವ ಕೆಲಸ ಮಾಡಿ ಎಂದರು.
ಬಳ್ಳಾರಿ ಲೀಡ್ ಬ್ಯಾಂಕ್ ಮ್ಯಾನೇಜರ್ ಎನ್.ನವೀನಕುಮಾರ್ ಅವರು ರೈತರ ಪಾಲ್ಗೊಳ್ಳುವಿಕೆ ನಮ್ಮ ಆದ್ಯತೆ(ಕಿಸಾನ್ ಭಾಗೀದಾರಿ ಪ್ರಾಥಮಿಕ್ತಾ ಹಮಾರಿ) ಆಂದೋಲನದ ಧ್ಯೇಯೋದ್ಧೇಶಗಳು ಮತ್ತು ವಿವಿಧ ಇಲಾಖೆಗಳಿಗೆ ವಹಿಸಲಾದ ಜವಾಬ್ದಾರಿಗಳ ಕುರಿತು ಸಭೆಗೆ ತಿಳಿಸಿದರು.
ನಬಾರ್ಡ್‍ನ ಯುವರಾಜ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಮತ್ತು ವಿವಿಧ ಬ್ಯಾಂಕ್‍ಗಳ ವ್ಯವಸ್ಥಾಪಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here