ಡಿಕೆಶಿಗೆ ಕಿರಿಕಿರಿ ಮಾಡಿದ ಆ ರಹಸ್ಯ ವರದಿ?

0
191

ಕೆಲವು ದಿನಗಳ ಹಿಂದೆ ರಾಜ್ಯ ಕಾಂಗ್ರೆಸ್‌ ನ ರಣತಂತ್ರ ನಿಪುಣ ಸುನೀಲ್‌ ಕಣುಗಲು ಕೈ ಪಾಳೆಯದ ವರಿಷ್ವರಿಗೆ ಒಂದು ವರದಿ ರವಾನಿಸಿದರು.
ಹೀಗೆ ಅವರು ರವಾನಿಸಿದ ವರದಿಯಲ್ಲಿ ರಾಜ್ಯ ಕಾಂಗ್ರೆಸ್‌ ನ ಸಧ್ಯದ ಪರಿಸ್ಥಿತಿಯ ಕುರಿತು ವಿವರ ನೀಡಿದ್ದರಲ್ಲದೆ,ಇಲ್ಲಿ ಪಕ್ಷದ ಬಹುತೇಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಜತೆಗಿಲ್ಲ.ಬದಲಿಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜತೆಗಿದ್ದಾರೆ ಎಂದು ಹೇಳಿದ್ದರು.
ಅರ್ಥಾತ್‌,ರಾಜ್ಯ ಕಾಂಗ್ರೆಸ್‌ ನಲ್ಲಿ ಇವತ್ತೂ ಪ್ರಮುಖ ಮತ್ತು ಜನಪ್ರಿಯ ನಾಯಕರೆಂದರೆ ಸಿದ್ಧರಾಮಯ್ಯ ಅವರೇ ಎಂಬುದು ಅವರ ವರದಿಯ ತಾತ್ಪರ್ಯವಾಗಿತ್ತು.
ಅಂದ ಹಾಗೆ ಸುನೀಲ್‌ ಕಣುಗಲು ಅವರು ದೇಶದ ಎಲೆಕ್ಷನ್‌ ಸ್ಪೆಷಲಿಸ್ಟ್‌ ಎಂದೇ ಖ್ಯಾತರಾದ ಪ್ರಶಾಂತ್‌ ಕಿಶೋರ್‌ ಅವರ ಜತೆಗಿದ್ದವರು.ಚುನಾವಣಾ ರಣತಂತ್ರದ ವಿಷಯದಲ್ಲಿ ಅವರಿಗೂ ಈಗ ಸೀನಿಯಾರಿಟಿ ಬಂದಿದೆ.
ಹಾಗಂತಲೇ ರಾಹುಲ್‌ ಗಾಂಧಿ ಅವರು ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಸೂಚನೆ ನೀಡಿ,ಇನ್ನು ಮುಂದೆ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಏನು ಮಾಡಬೇಕು?ಎಂಬ ಕುರಿತು ಸುನೀಲ್‌ ಕಣುಗಲು ಅವರು ನಿಮಗೆ ಸಲಹೆ ಕೊಡುತ್ತಿರುತ್ತಾರೆ.ಹೀಗಾಗಿ ಅವರ ಸಲಹೆಗಳನ್ನು ಪಾಲಿಸಿ ಎಂದಿದ್ದರಂತೆ.
ವಸ್ತುಸ್ಥಿತಿ ಎಂದರೆ ಕರ್ನಾಟಕದಲ್ಲಿ ಪಕ್ಷವನ್ನುಮರಳಿ ಅಧಿಕಾರಕ್ಕೆ ತರಲು ಪೂರಕವಾಗಿ ಸುನೀಲ್‌ ಕಣುಗಲು ಅವರನ್ನು ನೇಮಕ ಮಾಡಿಕೊಳ್ಳುವ ಉತ್ಸುಕತೆ ಡಿ.ಕೆ.ಶಿವಕುಮಾರ್‌ ಅವರಿಗೇನೂ ಇರಲಿಲ್ಲ.ಬದಲಿಗೆ ಈ ಹಿಂದೆಯೇ ಅವರು ಪಕ್ಷ ಅಧಿಕಾರಕ್ಕೆ ಬರಲು ಏನೇನು ಮಾಡಬೇಕು?ಅಂತ ಸಲಹೆ ಪಡೆಯಲು ರಾಜನೀತಿ ಎಂಬ ತಂಡವನ್ನು ನೇಮಕ ಮಾಡಿಕೊಳ್ಳಲು ಬಯಸಿದ್ದರು ಎಂಬುದು ಕೈ ಪಾಳೆಯದ ಗುಸು-ಗುಸು.
ಅಂದ ಹಾಗೆ ರಾಜನೀತಿ ತಂಡ ಕೂಡಾ ಕಳೆದ ಹಲವು ಕಾಲದಿಂದ ಡಿ.ಕೆ.ಶಿವಕುಮಾರ್‌ ಅವರಿಗೆ ಸಾಕಷ್ಟು ಟಿಪ್ಸ್‌ ಗಳನ್ನು ನೀಡಿತ್ತು.ಅದರ ಪ್ರಕಾರ,ಕರ್ನಾಟಕದಲ್ಲಿ ಈಗ ವಿಧಾನಸಭೆ ಚುನಾವಣೆ ನಡೆದರೂ ಕಾಂಗ್ರೆಸ್‌ ಪಕ್ಷದ ಗ್ರಾಫು ಎಂಭತ್ತರ ಆಸುಪಾಸನಲ್ಲಿದೆ.
ಹೀಗಾಗಿ ಮ್ಯಾಜಿಕ್‌ ನಂಬರ್‌ 113 ನ್ನು ತಲುಪಬೇಕೆಂದರೆ,ಹಳೆ ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚುವರಿಯಾಗಿ ಮೂವತ್ತು ಪ್ಲಸ್‌ ಸೀಟುಗಳನ್ನು ಗಳಿಸಬೇಕು.ಆದರೆ ಹಾಗೆ ಗಳಿಸಬೇಕು ಎಂದರೆ ದೇವೇಗೌಡ ಇ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಬುಟ್ಟಿಗೂ ಕೈ ಹಾಕಬೇಕು.
ಅದೇ ಕಾಲಕ್ಕೆ ಉತ್ರರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಾಬಲ್ಯವನ್ನು ಕಡಿಮೆ ಮಾಡಿ ಅದರ ಲಾಭವನ್ನು ಪಡೆಯಬೇಕು.ಹಾಗಾದಾಗ ಮಾತ್ರ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಮರಳಿ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಸಲಹೆ ನೀಡಿತ್ತು.
ಅದರ ಈ ಸಲಹೆಯ ಆಧಾರದ ಮೇಲೆ ರೂಪುಗೊಂಡಿದ್ದೇ ಮೇಕೆದಾಟು ಪಾದಯಾತ್ರೆ.ಹಳೆ ಮೈಸೂರು ಭಾಗದಲ್ಲಿ ಇತ್ಯರ್ಥವಾಗದೆ ಉಳಿದಿರುವ ಮೇಕೆದಾಟು ಯೋಜನೆಯ ವಿವಾದ ಸಧ್ಯಕ್ಕೆ ನ್ಯಾಯಾಲಯದ ಅಂಗಳದಲ್ಲಿದೆ.ಇದಕ್ಕೆ ತಮಿಳ್ನಾಡಿನ ವಿರೋಧವೇ ಪ್ರಮುಖ ಕಾರಣ.
ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮನಸ್ಸು ಮಾಡಿದ್ದರೆ ಕಾವೇರಿ ನದಿ ಪ್ರಾಧಿಕಾರದಿಂದ ಹಿಡಿದು ಎಲ್ಲ ಹಂತಗಳಲ್ಲೂ ಕರ್ನಾಟಕಕ್ಕೆ ಅನುಕೂಲ ಮಾಡಿಕೊಡಬಹುದಿತ್ತು.ಆದರೆ ಅದು ರಾಜಕೀಯ ಲಾಭಕ್ಕಾಗಿ ಮೇಕೆದಾಟು ವಿವಾದದ ವಿಷಯದಲ್ಲಿ ಮೌನವಾಗಿದೆ.
ಹೀಗಾಗಿ ಇದನ್ನೇ ಪ್ರಮುಖ ಆರೋಪವನ್ನಾಗಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ವಿರುದ್ಧ ಹೋರಾಡಬಹುದು ಎಂಬ ಸಲಹೆ ಸಿಕ್ಕಿದ್ದೇ ತಡ,ಡಿ.ಕೆ.ಶಿವಕುಮಾರ್‌ ಪಟ್ಟು ಹಿಡಿದು ಮೇಕದಾಟು ಪಾದಯಾತ್ರೆಗೆ ಸಜ್ಜಾಗಿಬಿಟ್ಟರು.
ಅವರು ಹೀಗೆ ಮೇಕೆದಾಟು ಪಾದಯಾತ್ರೆ ರೂಪಿಸಿದ್ದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಗೆ ಪಥ್ಯವಾಗಲಿಲ್ಲ ಎಂಬ ಕೂಗು ಶುರುವಾಯಿತು.ಆದರೆ ಈ ವಿಷಯದಲ್ಲಿ ಏನೇ ಕೂಗು ಕೇಳಿ ಬಂದರೂ ಸಿದ್ಧರಾಮಯ್ಯ ಮಾತ್ರ ಅದನ್ನು ತೋರಗೊಡಗಲಿಲ್ಲ.
ಬದಲಿಗೆ ಡಿ.ಕೆ.ಶಿವಕುಮಾರ್‌ ಅವರ ಪ್ರತಿಷ್ಟೆಯ ಸಂಕೇತವಾಗಿದ್ದ ಮೇಕೆದಾಟು ಪಾದಯಾತ್ರೆಯಲ್ಲಿ ಪಾಳ್ಗೊಂಡರು.ಒಂದು ಮಟ್ಟದಲ್ಲಿ ಅದು ಹಳೆ ಮೈಸೂರು ಭಾಗದ ಜನರ ಗಮನ ಸೆಳೆದಿದ್ದೂ ನಿಜವೇ.ಯಾವಾಗ ಮೇಕೆದಾಟು ಪಾದಯಾತ್ರೆ ನಡೆಸಲು ಡಿಕೆಶಿ ಸಜ್ಜಾದ ವಿಷಯ ತಿಳಿಯಿತೋ?ಆಗ ಜೆಡಿಎಸ್‌ ಕೂಡಾ ಗಡಬಡಿಸಿ ಮೇಲೆದ್ದು ಜನತಾ ಜಲಧಾರೆ ಕಾರ್ಯಕ್ರಮ ರೂಪಿಸಿತು.
ಆದರೆ ಕೊರೋನಾ ಹಿನ್ನೆಲೆಯಲ್ಲಿ ಅದರ ಜಲಧಾರೆ ಕಾರ್ಯಕ್ರಮ ಮುಂದಕ್ಕೆ ಹೋಯಿತು.ಡಿಕೆಶಿ ಮಾತ್ರ ಪಟ್ಟು ಹಿಡಿದು ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿ,ಎರಡು ಹಂತಗಳಲ್ಲಿ ಅದನ್ನು ಪೂರ್ಣಗೊಳಿಸಿದರು.
ಹೀಗೆ ಮೇಕೆದಾಟು ಪಾದಯಾತ್ರೆ ಮಾಡಿ ಮುಂದಿನ ಗೇಮ್‌ ಪ್ಲಾನಿಗೆ ಅವರು ರೆಡಿಯಾಗುತ್ತಿದ್ದರೇನೋ ನಿಜ.ಆದರೆ ಅಷ್ಟರಲ್ಲೇ ಬಿಜೆಪಿ ಗ್ಯಾಂಗಿನಿಂದ ರೂಪುಗೊಂಡ ಹಿಜಾಬು,ಹಲಾಲಿನಂತಹ ವಿಷಯಗಳು ಕಾಂಗ್ರೆಸ್‌ ಪಾಳೆಯದ ಕೈ ಕಟ್ಟ ಹಾಕಿಬಿಟ್ಟವು.
ಹೀಗೆ ಬಿಜೆಪಿ ಪಾಳೆಯ ಕೈ ಕಟ್ಟಿ ಹಾಕಿದ ರಭಸಕ್ಕೆ ರಾಜ್ಯ ಕಾಂಗ್ರೆಸ್‌ ಕೆಲ ಕಾಲ ಮೂಕ ವಿಸ್ಮಿತವಾಗಿದ್ದು ಸುಳ್ಳೇನಲ್ಲ.ಅಷ್ಟರಲ್ಲೇ ರಾಹುಲ್‌ ಗಾಂಧಿ ಅವರು ಡಿ.ಕೆ.ಶಿವಕುಮಾರ್‌ ಅವರಿಗೆ ಒಂದು ಸೂಚನೆ ನೀಡಿ:ಕರ್ನಾಟಕದಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಏನೇನು ಮಾಡಬೇಕು?ಅನ್ನುವುದನ್ನು ಹೇಳಲು ಸುನೀಲ್ ಕಣುಗಲು ಅವರನ್ನು ಕಳಿಸುತ್ತಿದ್ದೇನೆ.ನೀವು ಅವರಿಗೆ ಎಲ್ಲ ಸಹಕಾರ ನೀಡಿ ಎಂದು ಬಿಟ್ಟರು.
ವಾಸ್ತವದಲ್ಲಿ ಈ ಕೆಲಸಕ್ಕಾಗಿ ರಾಜನೀತಿ ತಂಡದೊಂಡನೆ ಒಪ್ಪಂದ ಮಾಡಿಕೊಳ್ಳಲು ಆಸಕ್ತರಾಗಿದ್ದ ಡಿಕೆಶಿ ಅದಕ್ಕೆ ಸಂಬಂಧಿಸಿದಂತೆ ವ್ಯಾವಹಾರಿಕ ಮಾತುಕತೆಯನ್ನೂ ಮುಗಿಸಿದ್ದರು.ಆದರೆ ಯಾವಾಗ ಸುನೀಲ್‌ ಕಣುಗಲು ಇಲ್ಲಿಗೆ ಬರುವಂತಾಯಿತೋ?ಇದಾದ ನಂತರ ರಾಜನೀತಿ ತಂಡ ತೆರೆಯ ಹಿಂದೆ ಸರಿಯುವಂತಾಯಿತು ಎಂಬುದು ಕೈ ಪಾಳೆಯದ ಪಿಸು ಮಾತು.
ಹೀಗೆ ರಾಹುಲ್‌ ಗಾಂಧಿ ಅವರ ಸೂಚನೆಯ ಮೇಲೆ ಕರ್ನಾಟಕಕ್ಕೆ ಬಂದ ಸುನೀಲ್‌ ಕಣುಗಲು ಇಲ್ಲಿ ಕಛೇರಿ ತೆರೆದಿದ್ದಾರೆ.ಒಂದು ಮೂಲದ ಪ್ರಕಾರ ಜುಲೈ ತಿಂಗಳ ಒಳಗಾಗಿ ಅವರು ಕೈ ಪಾಳೆಯದ ವರಿಷ್ಟರಿಗೆ ಮೂರು ವರದಿಗಳನ್ನು ನೀಡಲಿದ್ದಾರೆ.
ಈ ಮೂರು ವರದಿಗಳ ಪೈಕಿ ಒಂದು ವರದಿ ಈಗ ಕಾಂಗ್ರೆಸ್‌ ಹೈಕಮಾಂಡ್‌ ಕೈ ಸೇರಿದೆ.ಅದರ ಪ್ರಕಾರ,ಇವತ್ತು ಕರ್ನಾಟಕದಲ್ಲಿ ಪಕ್ಷದ ಜನಪ್ರಿಯ ನಾಯಕ ಎಂದರೆ ಸಿದ್ಧರಾಮಯ್ಯ.ಇವತ್ತಿಗೂ ಪಕ್ಷದ ಬಹುತೇಕ ಶಾಸಕರು ಮತ್ತು ಕಾರ್ಯಕರ್ತರು ಅವರ ಜತೆಗಿದ್ದಾರೆ.ಹಾಗೆಯೇ ಅವರ ಜತೆ ನಿರ್ದಿಷ್ಟ ಮತ ಬ್ಯಾಂಕ್‌ ಇದೆ.ಆದರೆ ಡಿಕೆಶಿ ಜತೆಗಿರುವವ ಸಂಖ್ಯೆಯೂ ಕಡಿಮೆ.ಮತ್ತು ಅವರ ಬೆನ್ನ ಹಿಂದೆ ನಿರ್ದಿಷ್ಟ ಮತ ಬ್ಯಾಂಕ್‌ ಇಲ್ಲ.
ಮುಂದಿನ ಚುನಾವಣೆಯಲ್ಲಿ ಒಕ್ಕಲಿಗರು ತಮ್ಮ ಜತೆ ನಿಲ್ಲುತ್ತಾರೆ ಎಂದು ಅವರೇನು ಭಾವಿಸಿದ್ದಾರೆ.ಅದು ಸುಳ್ಳು.ಯಾಕೆಂದರೆ ಒಕ್ಕಲಿಗ ಮತ ಬ್ಯಾಂಕ್‌ ಇವತ್ತಿಗೂ ದೊಡ್ಡ ಮಟ್ಟದಲ್ಲಿ ಜೆಡಿಎಸ್‌ ಜತೆ ಇದೆ.ಅದೇ ರೀತಿ ಬಿಜೆಪಿ ಕೂಡಾ ಒಂದು ಮಟ್ಟದಲ್ಲಿ ಒಕ್ಕಲಿಗರ ಮೇಲೆ ಪ್ರಭಾವ ಬೀರುವ ಕೆಲಸದಲ್ಲಿ ಯಶಸ್ವಿಯಾಗುತ್ತಿದೆ.
ಹೀಗಾಗಿ ಡಿಕೆಶಿ ಭಾವಿಸಿದಂತೆ ಒಕ್ಕಲಿಗ ಮತಬ್ಯಾಂಕ್‌ ಅವರಿಗೆ ಗಣನೀಯ ಪ್ರಮಾಣದ ಷೇರುಗಳನ್ನು ಕೊಡುವುದಿಲ್ಲ ಎಂಬುದು ಸುನೀಲ್‌ ಕಣುಗಲು ಅವರ ವರದಿಯ ತಾತ್ಪರ್ಯ ಎಂಬುದು ಕೈ ಪಾಳೆಯ ಗುಟ್ಟಾಗಿ ಹೇಳುತ್ತಿದೆ.
ಅಂದ ಹಾಗೆ ಯಾವಾಗ ಈ ವರದಿ ದಿಲ್ಲಿಗೆ ರವಾನೆ ಆಯಿತೋ?ಇದಾದ ನಂತರವೇ ರಾಜ್ಯ ಕಾಂಗ್ರೆಸ್‌ ನಲ್ಲಿ ಹಲವು ಬೆಳವಣಿಗೆಗಳು ಕಂಡು ಬಂದವು.ಮಾಜಿ ಸಂಸದೆ ರಮ್ಯಾ ಅವರ ಎಪಿಸೋಡೇ ಇರಬಹುದು.ಮಾಜಿ ಸಚಿವ ಎಂ.ಬಿ.ಪಾಟೀಲರ ಎಪಿಸೋಡೇ ಇರಬಹುದು.
ಇವೆಲ್ಲ ಡಿಕೆಶಿಗೆ ಮುಜುಗರವಾಗುವ ಹಂತಕ್ಕೆ ತಲುಪುವುದರ ಹಿಂದೆ ದಿಲ್ಲಿಗೆ ತಲುಪಿದ ಸುನೀಲ್‌ ಕಣುಗಲು ಅವರ ವರದಿ ಕೂಡಾ ಪ್ರೇರೇಪಣೆ ನೀಡಿದೆ ಎಂಬುದು ಈ ಮೂಲಗಳ ವಾದ.
ಅಂದ ಹಾಗೆ ಮುಂದಿನ ಚುನಾವಣೆಯ ನಂತರ ಮುಖ್ಯಮಂತ್ರಿಯಾಗಬೇಕು ಅಂತ ಡಿಕೆಶಿ ಹಾಗೂ ಸಿದ್ಧರಾಮಯ್ಯ ಕನಸು ಕಾಣುತ್ತಿರುವ ಪರಿಣಾಮವಾಗಿ ಕಾಂಗ್ರೆಸ್‌ ಪಾಳೆಯದಲ್ಲಿ ಇವತ್ತು ಎಲ್ಲವೂ ಅಸ್ತವ್ಯಸ್ತವಾಗಿದೆ.
ಇದ್ದುದರಲ್ಲೇ ಕೆಲವರು:ಈ ಸಮಸ್ಯೆಯನ್ನು ರಾಹುಲ್‌ ಗಾಂಧಿ ಕೆಲ ದಿನಗಳ ಹಿಂದೆ ಪರಿಹರಿಸಿದ್ದಾರೆ.ಅದರ ಪ್ರಕಾರ,ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ಅವಧಿಯಲ್ಲಿ ಸಿದ್ಧರಾಮಯ್ಯ ಸಿಎಂ ಆಗುತ್ತಾರೆ.ಎರಡನೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ ಎನ್ನುತ್ತಿದ್ದಾರೆ.
ಆದರೆ ಈ ವಿಷಯ ಇತ್ಯರ್ತವಾಗಿದ್ದು ನಿಜವೇ ಆಗಿದ್ದರೆ,ಡಿಕೆಶಿ ಮತ್ತು ಸಿದ್ಧರಾಮಯ್ಯ ಅವರ ನಡುವಣ ಶೀತಲ ಸಮರ ಮುಂದುವರಿಯಬಾರದು.ಆದರೂ ಅದು ಮುಂದುವರಿದಿದೆ ಎಂಬುದರ ಅರ್ಥವೇನು?ಅನ್ನುವುದು ಇನ್ನು ಕೆಲವರ ವಾದ.
ಅವರ ಪ್ರಕಾರ,ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ನನ್ನನ್ನು ಸಿಎಂ ಮಾಡಬೇಕು.ಹಾಗಂತ ಘೋಷಿಸಬೇಕು ಎಂದು ಡಿ.ಕೆ.ಶಿವಕುಮಾರ್‌ ಅವರು ರಾಹುಲ್‌ ಗಾಂಧಿ ಅವರ ಬಳಿ ಹೇಳಿದ್ದರಂತೆ.ಆದರೆ ಕರ್ನಾಟಕದ ಬಗ್ಗೆ ಈಗಾಗಲೇ ಒಂದು ಚಿತ್ರಣ ಇರುವ ರಾಹುಲ್‌ ಗಾಂಧಿ ಅದಕ್ಕೆ ಒಪ್ಪಿಗೆ ನೀಡಲಿಲ್ಲ.
ಇವತ್ತು ರಾಜ್ಯದಲ್ಲಿ ಮಾಸ್‌ ಲೀಡರ್‌ ಆಗಿರುವ ಸಿದ್ಧರಾಮಯ್ಯ ಅವರನ್ನಿಟ್ಟುಕೊಂಡು ನಿಮ್ಮನ್ನು ಸಿಎಂ ಕ್ಯಾಂಡಿಡೇಟ್‌ ಎಂದು ಘೋಷಿಸಿದರೆ ಮರಳಿ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರ ಹಿಡಿಯುತ್ತದೆ.ಹಾಗಾಗುವುದು ಬೇಡ.ಎಲ್ಲಕ್ಕಿಂತ ಮುಖ್ಯವಾಗಿ ವಿಧಾನಸಭೆ ಚುನಾವಣೆಗಿಂತ ಮುಂಚಿತವಾಗಿ ಸಿಎಂ ಹೆಸರನ್ನು ಘೋಷಿಸುವ ಸಂಪ್ರದಾಯವನ್ನು ಪಕ್ಷ ಇಷ್ಟಪಡುವುದಿಲ್ಲ ಎಂದು ಹೇಳಿದರಂತೆ.
ಪರಿಣಾಮ?ಸಧ್ಯದ ಪರಿಸ್ಥಿತಿಯಲ್ಲಿ ಡಿ.ಕೆ.ಶಿವಕುಮಾರ್‌ ಅವರ ಉತ್ಸುಕತೆ ಕಡಿಮೆಯಾಗಿದೆ.ಎಲ್ಲಕ್ಕಿಂತ ಮುಖ್ಯವಾಗಿ ತಮ್ಮದೇ ಖಾಸಗಿ ವ್ಯವಹಾರಗಳ ಮೇಲೆ ನಿಗಾ ಕೊಡಬೇಕಾದ ಸ್ಥಿತಿ ಅವರಿಗೆ ಇದೆ.ಹೀಗಾಗಿ ಸಿಎಂ ಹುದ್ದೆಯ ವಿಷಯ ಸೆಟ್ಲ್‌ ಆಗದೆ ದುಡಿಯುವುದು ಎಂದರೆ ಸಿದ್ಧರಾಮಯ್ಯ ಅವರಿಗಾಗಿ ದುಡಿದಂತಾಗುತ್ತದೆ ಎಂದವರ ಯೋಚನೆ ಅಂತ ಇದೇ ಮೂಲಗಳು ಹೇಳುತ್ತವೆ.
ಪರಿಣಾಮ?ರಾಜ್ಯ ಕಾಂಗ್ರೆಸ್‌ ಮೇಲೆ ನಿಯಂತ್ರಣ ಸಾಧಿಸುವ ವಿಷಯದಲ್ಲಿ ಸಿದ್ಧರಾಮಯ್ಯ ಅವರ ಕೈ ಮೇಲಾಗಿದೆ.ಸುನೀಲ್‌ ಕಣಗಲು ಅವರ ಮೊದಲ ವರದಿಯ ಎಫೆಕ್ಟು ಈ ಮಟ್ಟದಲ್ಲಿದೆ ಎಂದರೆ ಇನ್ನೆರಡು ವರದಿಗಳನ್ನು ಅವರು ಕೈ ಪಾಳೆಯದ ವರಿಷ್ಟರ ಕೈಲಿಡುವ ಹೊತ್ತಿಗೆ ಇನ್ನು ಏನೇನಾಗಿರುತ್ತದೋ?

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here