121.9ಕೋಟಿ ರೂ. ವೆಚ್ಚದಲ್ಲಿ ಜಿ+5 ಮಹಡಿ ನಿರ್ಮಾಣ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿಂದ ಉದ್ಘಾಟನೆ, ಬಳ್ಳಾರಿ ನೂತನ ಸುಸಜ್ಜಿತ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಲೋಕಾರ್ಪಣೆ

0
106

ಬಳ್ಳಾರಿ,ಜೂ.27: ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿ 121.9 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಜಿ+5 ಮಹಡಿಗಳ ನೂತನ ಸುಸಜ್ಜಿತ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ರಿತುರಾಜ್ ಅವಸ್ಥಿ ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ರಿತುರಾಜ್ ಅವಸ್ಥಿ ಅವರು ರಾಜ್ಯದ ಅತಿದೊಡ್ಡ ಜಿಲ್ಲಾ ನ್ಯಾಯಾಲಯ ಕಟ್ಟಡ ಇದಾಗಿದೆ. ಇದರಲ್ಲಿ 20 ಕೋರ್ಟ್ ಹಾಲ್‍ಗಳು,ಸುಸಜ್ಜಿತ ಕಾನ್ಪರೆನ್ಸ್ ಹಾಲ್ ಸೇರಿದಂತೆ ಸಕಲ ಸೌಲಭ್ಯಗಳನ್ನು ಹೊಂದಿರುವ ಈ ನ್ಯಾಯಾಲಯ ಕಟ್ಟದವು ವಕೀಲರು ಮತ್ತು ಕಕ್ಷಿದಾರರಿಗೆ ಅನುಕೂಲವಾಗುವಂತೆ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ನ್ಯಾಯಾಲಯದ ಕಟ್ಟಡ ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದ್ದು,ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಅವರು ಸಲಹೆ ನೀಡಿದರು.
ಬ್ರೀಟಿಷರ ಮದ್ರಾಸ್ ಪ್ರೆಸಿಡೆನ್ಸಿ ಅವಧಿಯಲ್ಲಿ ಬಳ್ಳಾರಿ ಜಿಲ್ಲಾ ನ್ಯಾಯಾಲಯವು 1901ರಲ್ಲಿ ಸ್ಥಾಪಿಸಲ್ಪಟ್ಟು ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದನ್ನು ಪರಿಗಣಿಸಿ 2013ರಲ್ಲಿ ಹೊಸ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು;ಅದನ್ನು ಮಾರ್ಪಾಡಿಸಿ 2017ರಲ್ಲಿ ಅನುಮೋದನೆ ನೀಡಲಾಯಿತು. 2017 ನವೆಂಬರ್‍ದಿಂದ ಕಾಮಗಾರಿ ಆರಂಭವಾಗಿ ನಮ್ಮ ಮುಂದೆ ಸುಂದರ ಕಟ್ಟಡ ತಲೆ ಎತ್ತಿ ನಿಂತಿದೆ ಎಂದರು.
ನ್ಯಾಯಾಂಗ ವ್ಯವಸ್ಥೆಗೆ ಬೇಕಾದ ಸಮರ್ಪಕ ಮೂಲಸೌಕರ್ಯಗಳು ಹಾಗೂ ಸೌಕರ್ಯಗಳನ್ನು ಒದಗಿಸುವುದು ಸರಕಾರದ ಜವಾಬ್ದಾರಿ ಮತು ಸಂವಿಧಾನತ್ಮಕ ಹೊಣೆಗಾರಿಕೆಯಾಗಿದೆ ಎಂದು ಹೇಳಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ನ್ಯಾಯಾಂಗ ಇಲಾಖೆಯ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅನುದಾನ ಬಿಡುಗಡೆ ಮಾಡಬೇಕಿದೆ ಎಂದರು.
ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೇ ಬಾಕಿ ಯೋಜನೆಗಳ ಪೂರ್ಣ ಮಾಡಲು ಅನುದಾನ ಬಿಡುಗಡೆಗೆ ಕೋರುತ್ತಿದ್ದೆ ಎಂದರು.
ನ್ಯಾಯವಿತರಣೆ ವ್ಯವಸ್ಥೆಗೆ ಈಗ ನೂತನ ತಂತ್ರಜ್ಞಾನ ವ್ಯವಸ್ಥೆ ಅತ್ಯವಶ್ಯವಾಗಿದ್ದು,ಅದನ್ನು ಸರಕಾರ ಒದಗಿಸಬೇಕು ಎಂದರು.
ಈ ನ್ಯಾಯಲಯದಲ್ಲಿ ವಕೀಲರ ಸಂಘದ ವಿವಿಧ ಬೇಡಿಕೆಗಳ ಕುರಿತಂತೆ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ಸದಸ್ಯರಾದ ಕೆ.ಕೋಟೇಶ್ವರರಾವ್ ಅವರು ಪ್ರಸ್ತಾಪಿಸಿದ್ದು,ಅವುಗಳ ಕುರಿತು ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿಗರು ಹಾಗೂ ಹೈಕೋರ್ಟ್ ನ್ಯಾ. ಆರ್.ದೇವದಾಸ್ ಹಾಗೂ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶರು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳಾದ ಆರ್.ದೇವದಾಸ್ ಅವರು ಹಲವು ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಶ್ರಮದಿಂದ ಈ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆ,ಕೋರ್ಟ್ ಹಾಲ್‍ಗಳು,ಕಾಯುವಿಕೆ ಕೊಠಡಿ,ಕಾನ್ಪರೆನ್ಸ್ ಹಾಲ್ ಸೇರಿದಂತೆ ಸಕಲ ಸೌಲಭ್ಯಗಳು ಈ ಕಟ್ಟಡ ಹೊಂದಿದೆ ಎಂದರು.
ಸಾರ್ವಜನಿಕ ಆಸ್ತಿಗಳನ್ನು ಜನರು ಚೆನ್ನಾಗಿ ನಿರ್ವಹಣೆ ಮಾಡುವುದಿಲ್ಲ ಎಂಬುದಕ್ಕೆ ಅಪವಾದ ಎಂಬಂತೆ ಈ ಬೃಹತ್ ಕಟ್ಟಡದ ನಿರ್ವಹಣೆಯನ್ನು ಚೆನ್ನಾಗಿ ಮಾಡಿಕೊಂಡು ಹೋಗಿ ಎಂದರು.
ಹೈಕೋರ್ಟ್ ನ್ಯಾಯಾಧೀಶರಾದ ಕೆ.ನಟರಾಜನ್, ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ಸದಸ್ಯರಾದ ಕೆ.ಕೋಟೇಶ್ವರರಾವ್ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್.ಪುಷ್ಪಾಂಜಲಿದೇವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ, ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ಸದಸ್ಯರಾದ ಜೆ.ಎಂ.ಅನಿಲಕುಮಾರ್, ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ ಕೆ.ಯೆರ್ರಿಗೌಡ, ಸಂಘದ ಕಾರ್ಯದರ್ಶಿ ಬಿ.ರವೀಂದ್ರನಾಥ, ಉಪಾಧ್ಯಕ್ಷ ಎಂ.ನಾಗರಾಜನಾಯಕ್, ಜಂಟಿ ಕಾರ್ಯದರ್ಶಿ ತ್ರೀವೇಣಿ ಪತ್ತಾರ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜನಿಯರ್ ಎಸ್.ಎಚ್.ಪೂಜಾರಿ,ಬಳ್ಳಾರಿ ವಕೀಲರ ಸಂಘದ ಖಜಾಂಚಿ ಕೆ.ಎನ್.ಈರೇಶ ಸೇರಿದಂತೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ನ್ಯಾಯಾಲಯಗಳ ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳು ಇದ್ದರು.

*ಸುಸಜ್ಜಿತ ಬೃಹತ್ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ…
ಬಳ್ಳಾರಿ ಜಿಲ್ಲಾ ನೂತನ ಸುಸಜ್ಜಿತ ನ್ಯಾಯಾಲಯದ ಸಂಕೀರ್ಣ ಕಟ್ಟಡದ ಕಾಮಗಾರಿಯು 2017 ನವೆಂಬರ್ 21ರಿಂದ ಆರಂಭವಾಗಿದ್ದು,20625 ಚದರ್ ಮೀಟರ್ ವಿಶಾಲ ವಿಸ್ತೀರ್ಣದಲ್ಲಿ ನೆಲಮಹಡಿ ಸೇರಿದಂತೆ ಒಟ್ಟು 6 ಮಹಡಿಗಳಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ತಲೆಎತ್ತಿದೆ. 5 ಮಹಡಿಗಳಲ್ಲಿ 20 ಕೋರ್ಟ್ ಹಾಲ್‍ಗಳು ನಿರ್ಮಿಸಲಾಗಿದ್ದು, ಅದಕ್ಕೆ ಹೊಂದಿಕೊಂಡಂತೆ ನ್ಯಾಯಾಧೀಶರ ಕೊಠಡಿಗಳು, ಬೃಹತ್ ಕಾನ್ಪರೆನ್ಸ್ ಹಾಲ್, ಕಂಪ್ಯೂಟರ್ ಕೊಠಡಿಗಳು,ಟೈಪಿಂಗ್ ಪೂಲ್, ಸಾಕ್ಷಿಗಳ ಕಾಯುವಿಕೆ ಕೊಠಡಿ,ಲಾಕ್‍ಅಪ್ ರೂಮ್ಸ್, ಸಣ್ಣ ಜೈಲುಗಳು ಸಹ ಈ ನ್ಯಾಯಾಲಯ ಸಂಕೀರ್ಣದಲ್ಲಿ ನಿರ್ಮಿಸಲಾಗಿದೆ. ಕಚೇರಿ ಸಿಬ್ಬಂದಿಗಳ ಕೊಠಡಿಗಳು ಮತ್ತು ಶೌಚಾಲಯಗಳು ನಿರ್ಮಿಸಲಾಗಿದೆ.
ಬೆಂಕಿ ನಂದಿಸುವ ಸಾಧನಗಳು(ಫೈರ್),ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರಿಗಾಗಿ ನಾಲ್ಕು ಲಿಫ್ಟ್‍ಗಳು ಹಾಗೂ ನ್ಯಾಯಾಧೀಶರಿಗಾಗಿ ಒಂದು ಲಿಫ್ಟ್ ಸೇರಿದಂತೆ 5 ಲಿಫ್ಟ್‍ಗಳ ವ್ಯವಸ್ಥೆಯನ್ನು ಈ ನ್ಯಾಯಾಲಯ ಸಂಕೀರ್ಣದಲ್ಲಿ ವ್ಯವಸ್ಥೆ ಮಾಡಲಾಗಿದೆ.
100 ಕೆಎಲ್‍ಡಿ ಸಾಮಥ್ರ್ಯದ ಸಿವೇಜ್ ಟ್ರೀಟ್ಮೆಂಟ್ ಪ್ಲಾಂಟ್(ಶೌಚಾಲಯ,ಚರಂಡಿ ಹಾಗೂ ಬಳಸಿದ ನೀರಿನ ಮರುಬಳಕೆ ಮಾಡುವ ಘಟಕ), 6ಲಕ್ಷ ಲೀಟರ್ ಸಾಮಥ್ರ್ಯದ ಒಳಚರಂಡಿ ಸಂಪ್ ನಿರ್ಮಾಣ, 1ಸಾವಿರ ಕೆ.ವ್ಯಾಟ್ ಸಾಮಥ್ರ್ಯದ ವಿದ್ಯುತ್ ಎಕ್ಸಪ್ರೆಸ್ ಲೈನ್ ಸಂಪರ್ಕ ಹಾಗೂ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆಯನ್ನು ನ್ಯಾಯಾಲಯ ಸಂಕೀರ್ಣದಲ್ಲಿ ಕಲ್ಪಿಸಲಾಗಿದೆ.
ನೆಟವರ್ಕಿಂಗ್ ಸಿಸ್ಟಮ್, ಇಂಟರ್ನಲ್ ಮತ್ತು ಎಕ್ಸಟರ್ನಲ್ ಎಲೆಕ್ಟ್ರಿಫಿಕೇಶನ್ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ಇಂಟರ್ನಲ್ ರಸ್ತೆಗಳನ್ನು ಈ ಆವರಣದಲ್ಲಿ ನಿರ್ಮಿಸಲಾಗಿದೆ.
ನೆಲಮಹಡಿಯಲ್ಲಿ ಕೇಂದ್ರೀಕೃತ ರಿಕಾರ್ಡ್ ರೂಂ, ಪ್ರಾಪರ್ಟಿ ರೂಂ,ಇ-ಸೇವಾ ಕೌಂಟರ್, ಹೆಲ್ಪ್‍ಡೆಸ್ಕ್, ನ್ಯಾಯಾಲಯ ಸೇವಾ ಕೇಂದ್ರ, ವಿಡಿಯೋ ಕಾನ್ಪರೆನ್ಸ್ ಕ್ಯಾಬಿನ್, ಶೌಚಾಲಯ ಸೌಲಭ್ಯ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಬಳ್ಳಾರಿಯ ಪ್ರಮುಖ ಆಕರ್ಷಣೀಯ ಕಟ್ಟಡಗಳಲ್ಲಿ ಒಂದಾಗಿ ಗಮನಸೆಳೆಯುತ್ತಿದೆ.

LEAVE A REPLY

Please enter your comment!
Please enter your name here