ಒಕ್ಕಲಿಗರ ಕೋಟೆಯ ಮುಂದೆ ಡಿಕೆ ಕೂಗಿದರೆ ನಕ್ಕಿದ್ದು ಹೆಚ್ ಡಿಕೆ

0
132

ರಾಜ್ಯ ಕಾಂಗ್ರೆಸ್ ಮೇಲೆ‌ ಹಿಡಿತ ಸಾಧಿಸಲು ಡಿಕೆಶಿ ನಡೆಸುತ್ತಿರುವ ಕಸರತ್ತಿನಿಂದ ಜೆಡಿಎಸ್ ನಾಯಕ ಕುಮಾರಸ್ವಾಮಿ ಫುಲ್ಲು ಖುಷಿಯಾಗಿದ್ದಾರೆ.
ಅಂದ ಹಾಗೆ ಮುಂದಿನ ಚುನಾವಣೆಯ ನಂತರ ಸಿಎಂ ಆಗುವ ಹಂಬಲದಿಂದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಡಿಕೆಶಿ ನಡೆಸಿರುವ ಜಂಗಿ ಕುಸ್ತಿ ಒಂದೇ ರೇಂಜಿನಲ್ಲಿ ಮುಂದುವರಿಯುತ್ತಿದೆ.
ಅಗಸ್ಟ್ ಮೂರರಂದು ನಡೆಯಲಿರುವ ಸಿದ್ಧು ಡೇ ಈ ಕುಸ್ತಿಯ ಮುಂದುವರಿದ ಭಾಗ.
ಅಂದ ಹಾಗೆ ಸಿದ್ಧರಾಮಯ್ಯ ಅವರ ಜನ್ಮ ದಿನದ ಹೆಸರಿನಲ್ಲಿ ನಡೆಯುತ್ತಿರುವ ಸಮಾರಂಭವೇನಿದೆ?
ಅದು ಸ್ಪಷ್ಟವಾಗಿ ಸಿದ್ಧರಾಮಯ್ಯ ಮುಂದಿನ ಸಿಎಂ ಎಂದು ಪ್ರತಿಬಿಂಬಿಸುವ ಉದ್ದೇಶವೇ ಹೊರತು ಬೇರೇನಲ್ಲ.
ಇದು ಯಾವಾಗ ಮನದಟ್ಟಾಯಿತೋ?ಆಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರ್ಣಾಯಕ ಆಟಕ್ಕೆ‌ ಮುಂದಾದರು.
ಎಸ್.ಎಂ.ಕೃಷ್ಣ ಅವರ ನಂತರ ಮತ್ತೊಮ್ಮೆ ಒಕ್ಕಲಿಗರಿಗೆ ಸಿಎಂ ಆಗುವ ಅವಕಾಶ ಬಂದಿದೆ.ಹೀಗಾಗಿ ತಮಗೆ ಸಮುದಾಯದ ಬೆಂಬಲ ಇರಲಿ ಎಂದವರು ಮನವಿ ಮಾಡಿಕೊಂಡರು.
ಯಾವಾಗ ಅವರು ಈ ಮನವಿ ಮಾಡಿಕೊಂಡರೋ?ಇದಾದ ನಂತರ ಮಾಜಿ ಮುಖ್ಯಮಂತ್ರಿ,ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಫುಲ್ಲು ಖುಷಿಯಾಗಿದ್ದಾರೆ.
ಕಾರಣ?ಡಿಕೆಶಿ ಹಾಕಿದ ಕೂಗು ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಪಾಸಿಟಿವ್ ಸಂದೇಶ ರವಾನಿಸುವ ಬದಲು ನೆಗೆಟೀವ್ ಸಂದೇಶ ರವಾನಿಸಿದೆ.
ಅರ್ಥಾತ್,ಕಾಂಗ್ರೆಸ್ ನಲ್ಲಿ ನಾಯಕತ್ವಕ್ಕಾಗಿ ಡಿಕೆಶಿ ಮತ್ತು ಸಿದ್ಧರಾಮಯ್ಯ ಅವರ ನಡುವೆ ನಡೆಯುತ್ತಿರುವ ಸಂಘರ್ಷ ಒಕ್ಕಲಿಗ ಮತದಾರರಲ್ಲಿ ಸಂದೇಹ ಮೂಡಿಸಿದೆ.
ಅಂದ ಹಾಗೆ ಡಿಕೆಶಿ‌ ಇವತ್ತು ನೇರವಾಗಿ ತಮ್ಮ ಮುಂದೆ ಇಂತಹ ಮನವಿ ಮಾಡುತ್ತಿರುವುದಕ್ಕೆ ಏನು ಕಾರಣ?
ಕಾಂಗ್ರೆಸ್ ಪಕ್ಷದಲ್ಲಿ ಸಿದ್ಧರಾಮಯ್ಯ ದಿನದಿಂದ ದಿನಕ್ಕೆ ಪವರ್ ಫುಲ್ ಆಗುತ್ತಿದ್ದಾರೆ.ಹೀಗೆ ಶಕ್ತಿಶಾಲಿಯಾಗುತ್ತಿರುವ ಅವರಿಗೆ ಸರಿಸಾಟಿ ಆಗಬೇಕೆಂದರೆ ಭವಿಷ್ಯದ ಶಾಸಕಾಂಗ ಪಕ್ಷದಲ್ಲಿ ತಮಗೂ ಬಲ ಇರಬೇಕು.
ಶಾಸಕಾಂಗ ನಾಯಕನ ಆಯ್ಕೆಯ ಸಂದರ್ಭದಲ್ಲಿ ಸಿದ್ಧರಾಮಯ್ಯ ಅರವತ್ತು ಬೆಂಬಲಿಗ ಶಾಸಕರನ್ನು ತೋರಿಸಬಲ್ಲರಾದರೆ ತಾವು ಕೂಡಾ ಅಂತಹದೇ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಗಿರಬೇಕು.
ಆದರೆ ಇವತ್ತಿನ ಸ್ಥಿತಿಯಲ್ಲಿ ಕೈ ಪಾಳೆಯದ ಬಹುತೇಕ ಶಾಸಕರು ಸಿದ್ಧರಾಮಯ್ಯ ಅವರ ಜತೆಗಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯ ನಂತರವೂ ಈ ಪರಿಸ್ಥಿತಿ ಮುಂದುವರಿದರೆ ಸಿದ್ಧರಾಮಯ್ಯ ಸಹಜವಾಗಿಯೇ ಶಾಸಕಾಂಗ ಪಕ್ಷದ ನಾಯಕರಾಗುತ್ತಾರೆ.
ಅಂದ ಹಾಗೆ ಕಾಂಗ್ರೆಸ್ ಹೈಕಮಾಂಡ್ ಬಲಾಬಲ ಲೆಕ್ಕ ಹಾಕದೆ ಶಾಸಕಾಂಗ ನಾಯಕರನ್ನು ನೇಮಕ ಮಾಡಿದ ಹಲವು ಉದಾಹರಣೆಗಳಿವೆ.
1990 ರಲ್ಲಿ ವೀರೇಂದ್ರ ಪಾಟೀಲರು ಸಿಎಂ ಹುದ್ದೆಯಿಂದ ಕೆಳಗಿಳಿದಾಗ ಪಕ್ಷದ ಶಾಸಕಾಂಗದಲ್ಲಿ ಹೆಚ್ಚು ಸಂಖ್ಯಾಬಲ ಇದ್ದುದು ಕೆ.ಹೆಚ್.ಪಾಟೀಲರಿಗೆ.
ಆದರೆ ಪಾರ್ಟಿ ಫಂಡ್ ಸಂಗ್ರಹಿಸುವ ವಿಷಯದಲ್ಲಿ ಕೆ.ಹೆಚ್.ಪಾಟೀಲರಿಗಿಂತ ಸಾರೆಕೊಪ್ಪ ಬಂಗಾರಪ್ಪ ಅವರಿಗೆ ಶಕ್ತಿ ಜಾಸ್ತಿ ಅಂತ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿತು.
ಇದೇ ರೀತಿ 1992 ರಲ್ಲಿ ಬಂಗಾರಪ್ಪ ಅವರನ್ನು ಪದಚ್ಯುತಗೊಳಿಸಲು ಪ್ರಧಾನಿ ಪಿ.ವಿ.ನರಸಿಂಹರಾವ್ ನಿರ್ಧರಿಸಿದಾಗ ಭವಿಷ್ಯದ ನಾಯಕನ ರೇಸಿನಲ್ಲಿ ಎಸ್.ಎಂ.ಕೃಷ್ಣ ಮುಂದಿದ್ದರು.ಅರ್ಥಾತ್,ಶಾಸಕಾಂಗ ಪಕ್ಷದಲ್ಲಿ ಅವರಿಗೆ ಹೆಚ್ಚಿನ ಬೆಂಬಲವಿತ್ತು.
ಆದರೆ ಕೊನೆಯ ಕ್ಷಣದಲ್ಲಿ ದಿಲ್ಲಿಯಿಂದ ಬಂದ ಲಕೋಟೆ ವೀರಪ್ಪ ಮೊಯ್ಲಿಯವರ ನೆತ್ತಿಯ ಮೇಲೆ ಕಿರೀಟ ಸೆಟ್ಲಾಗುವಂತೆ ಮಾಡಿತು.
ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ.ಶಾಸಕಾಂಗ ಪಕ್ಷದಲ್ಲಿ ಯಾರಿಗೆ ಹೆಚ್ಚು ಬೆಂಬಲ ಇದೆಯೋ?ಅವರಿಗೆ‌ ಪಟ್ಟ ಕಟ್ಟಲೇಬೇಕು.
ಆ ದೃಷ್ಟಿಯಿಂದ ಲೆಕ್ಕ ಹಾಕಿದರೆ ಸಿದ್ಧರಾಮಯ್ಯ ಅವರ ಹಿಂದೆ ಹೆಚ್ಚು ಶಾಸಕರು ನಿಲ್ಲುವ ಸಾಧ್ಯತೆ ಜಾಸ್ತಿ.
ಹೀಗಿರುವಾಗ ಕಾಂಗ್ರೆಸ್ ವರಿಷ್ಟರು ಸಿದ್ಧರಾಮಯ್ಯ ಬದಲು ಡಿಕೆಶಿಗೆ ಪಟ್ಟ ಕಟ್ಟಲು ಮುಂದಾದರೆ ತಿರುಗಿ ಬೀಳಲು‌ ಸಿದ್ಧರಾಮಯ್ಯ ಹಿಂಜರಿಯುವುದಿಲ್ಲ.
ಇದು ಹೈಕಮಾಂಡ್ ವರಿಷ್ಟರಿಗೂ ಗೊತ್ತು.ಹೀಗಾಗಿ ಶಾಸಕಾಂಗ ಪಕ್ಷದಲ್ಲಿ ನಿಮ್ಮ ಬಲ ಹೆಚ್ಚಿರುವಂತೆ ನೋಡಿಕೊಳ್ಳಿ ಅಂತ ಡಿಕೆಶಿಗೆ ಸೂಚನೆ ಕೊಡದೆ ಅವರಿಗೂ ಬೇರೆ ದಾರಿ ಇಲ್ಲ.
ಇದು ಗೊತ್ತಿರುವುದರಿಂದಲೇ ಡಿಕೆಶಿ ಇದ್ದಕ್ಕಿದ್ದಂತೆ ಒಕ್ಕಲಿಗ ಪಾಳೇಪಟ್ಟಿನ ಮುಂದೆ ನಿಂತು ಅಲವತ್ತುಕೊಂಡಿದ್ದಾರೆ.
ಎಸ್.ಎಂ.ಕೃಷ್ಣ ಅವರ ನಂತರ ಒಕ್ಕಲಿಗರಿಗೆ ಸಿಎಂ ಆಗುವ ಅವಕಾಶ ಬಂದಿದೆ.ಹೀಗಾಗಿ ನನಗೆ ನಿಮ್ಮ ಬೆಂಬಲವಿರಲಿ ಎಂಬ ಅವರ ಕೂಗಿಗೆ ಇದೇ ಕಾರಣ.
ಆದರೆ ಅವರ ಈ ಕೂಗು ಕಾಂಗ್ರೆಸ್ ಪಕ್ಷಕ್ಕೆ‌ ಲಾಭವಾಗುವುದಕ್ಕಿಂತ ಹೆಚ್ಚಾಗಿ ಜೆಡಿಎಸ್ ಗೆ ಅನುಕೂಲ ಒದಗಿಸಿಕೊಡುವ ಲಕ್ಷಣ ಜಾಸ್ತಿ.
ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ನಲ್ಲಿ ಸಿದ್ಧರಾಮಯ್ಯ ಶಕ್ತಿ ಹೆಚ್ಚಿರುವುದರಿಂದ ಸಿಎಂ ಹುದ್ದೆಯ ರೇಸಿನಲ್ಲಿ ಅವರೇ ಮುಂದಿರುತ್ತಾರೆ.
ಹೀಗಾಗಿ ಡಿಕೆಶಿ ಮಾತು ಕೇಳಿ ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಲ್ಲುವುದೆಂದರೆ ಸಿದ್ದರಾಮಯ್ಯ ಅವರಿಗೆ ಪಟ್ಟ ಕಟ್ಟಲು ನೆರವು ನೀಡುವುದೆಂದೇ ಅರ್ಥ.
ಹಾಗೆ ಸಿದ್ಧರಾಮಯ್ಯ ಅವರಿಗೆ ಪಟ್ಟ ಕಟ್ಟಲು ನೆರವು ನೀಡುವುದಕ್ಕಿಂತ ಜೆಡಿಎಸ್ ಪಕ್ಷದ ಜತೆ ಸಾಲಿಡ್ಡಾಗಿ ನಿಂತು ತಮ್ಮ ಸಮುದಾಯದ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಹುದ್ದೆಗೇರುವಂತೆ ನೋಡಿಕೊಳ್ಳುವುದೇ ಬೆಸ್ಟು ಅಂತ ಬಹುಸಂಖ್ಯಾತ ಒಕ್ಕಲಿಗರು ಭಾವಿಸುತ್ತಾರೆ.
ಅಂದ ಹಾಗೆ ಸಮುದಾಯಗಳು ಹೀಗೆ ಯೋಚಿಸುವುದು ಹೊಸತೇನಲ್ಲ.2008 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದರು.
ಅವತ್ತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ರಾಜ್ಯ‌ಕ್ಕೆ ಮೊದಲ ದಲಿತ ಸಿಎಂ ಬರುತ್ತಾರೆ ಅಂತ ಆ ಸಮುದಾಯ ನಿರ್ಧರಿಸಿತು.
ಇದೇ ಕಾರಣಕ್ಕಾಗಿ ದಲಿತ ವರ್ಗದ ಎಡಗೈ-ಬಲಗೈ ಸಮುದಾಯಗಳು ಒಗ್ಗೂಡುವ ಪ್ರಕ್ರಿಯೆ ಆರಂಭವಾಯಿತು.
ಆದರೆ ಇದು ಜಾರಿಯಲ್ಲಿರುವಾಗಲೇ‌ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಪ್ರಚಾರದ ಕಣಕ್ಕಿಳಿದುಬಿಟ್ಟರು.
ಅವರ ಪ್ರಚಾರದ ರಭಸ ಎಡಗೈ ಸಮುದಾಯದಲ್ಲಿ ಒಂದು ಶಂಕೆ ಮೂಡಿಸಿತು.
ದಲಿತ ಸಿಎಂ ಬರಲಿ ಎಂಬ ಕಾರಣಕ್ಕಾಗಿ ನಾವು ಕಾಂಗ್ರೆಸ್ಸಿಗೆ‌ ಮತ ಹಾಕುತ್ತೇವೆ.ಆದರೆ ಮತ ಪಡೆಯುವವರೆಗೆ ಸುಮ್ಮನಿರುವ ಕಾಂಗ್ರೆಸ್‌ ಹೈಕಮಾಂಡ್ ನಂತರ ಬಣ್ಣ ಬದಲಿಸುತ್ತದೆ.
ಎಷ್ಟೇ ಆದರೂ‌ ಹೈಕಮಾಂಡ್ ವರಿಷ್ಟರಿಗೆ ಎಸ್.ಎಂ.ಕೃಷ್ಣ ಎಂದರೆ ಇಷ್ಟ.ಹೀಗಾಗಿ ಕಾಂಗ್ರೆಸ್ಸಿಗೆ‌ ಮತ ಕೊಡುವುದು ಎಂದರೆ ನಷ್ಟ ಮಾಡಿಕೊಂಡಂತೆ ಎಂಬುದು ದಲಿತ ಮತಬ್ಯಾಂಕ್ ನ ಲೆಕ್ಕಾಚಾರವಾಗಿತ್ತು.
ಪರಿಣಾಮ?2008 ರ ವಿಧಾನಸಭಾ ಚುನಾವಣೆಯಲ್ಲಿ ದಲಿತ ಮತದಾರರು ಒಂದುಗೂಡಲಿಲ್ಲ.ಖರ್ಗೆ ಸಿಎಂ ಆಗುವ ಕನಸು ಈಡೇರಲಿಲ್ಲ.
ಈಗ ಡಿಕೆಶಿ ಕೂಗಿನ ಎಫೆಕ್ಟು ಕೂಡಾ ಹೀಗೇ ಇರುತ್ತದೆ.ಅದು ಡಿಕೆಶಿಗೆ ವರವಾಗುವುದಕ್ಕಿಂತ ಹೆಚ್ಚಾಗಿ ಜೆಡಿಎಸ್ ಪಕ್ಷಕ್ಕೆ ಲಾಭವಾಗುತ್ತದೆ.
ಇಂತಹ ಲಾಭ ಅದಕ್ಕೆ ಅಧಿಕಾರದ ಮಾರ್ಗವನ್ನು ಹತ್ತಿರಗೊಳಿಸಲಿದೆ.
ಅಂದ ಹಾಗೆ ಹಳೆ‌ಮೈಸೂರು ಭಾಗದಲ್ಲಿ ಪಡೆಯುವ ಗಣನೀಯ ಸ್ಥಾನಗಳೊಂದಿಗೆ ಉತ್ತರ ಕರ್ನಾಟಕ,,ಮಲೆನಾಡು ಭಾಗಗಳಲ್ಲಿ ಹೆಚ್ಚುವರಿ ಗಳಿಕೆ ಮಾಡಿಕೊಳ್ಳುವುದು ಜೆಡಿಎಸ್ ಲೆಕ್ಕಾಚಾರ.
ಈ ಲೆಕ್ಕಾಚಾರಕ್ಕೆ ಡಿಕೆಶಿ‌ ಪುಷ್ಟಿ ನೀಡಿದ್ದಾರೆ.ಒಕ್ಕಲಿಗ ಪಾಳೇಪಟ್ಟು ವಿಸ್ಮೃತಿಗೆ
ಒಳಗಾಗುವಂತೆ ಮಾಡಿದ್ದಾರೆ.
ಇದೇ ರೀತಿ ಎಸ್.ಎಂ.ಕೃಷ್ಣ ಅವರ ನಂತರ ಒಕ್ಕಲಿಗರಿಗೆ ಸಿಎಂ ಆಗುವ ಅವಕಾಶ ಬಂದಿದೆ ಅಂತ ಡಿಕೆಶಿ ಹೇಳಿರುವುದೇನಿದೆ?ಅದು ವಾಸ್ತವದಿಂದ ದೂರವಿದೆ.
ಯಾಕೆಂದರೆ 1999 ರಲ್ಲಿ ಎಸ್.ಎಂ.ಕೃಷ್ಣ ಕೆಪಿಸಿಸಿ ಅಧ್ಯಕ್ಷರಾದ ಕಾಲದಲ್ಲಿ ಬಲಿಷ್ಟ ಲಿಂಗಾಯತ ವರ್ಗ ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟದ ಜತೆ ನಿಂತಿತ್ತು.
ಈ ಪರಿಸ್ಥಿತಿಯೇ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಕಡೆ ವಾಲಲು ಒಕ್ಕಲಿಗ‌ ಮತದಾರರಿಗೆ ಪ್ರೇರಣೆಯಾಗಿತ್ತು.
ಇನ್ನು ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ಅವರ ಬೆನ್ನಿಗೆ ಅಹಿಂದ ಸಮುದಾಯಗಳು ದೊಡ್ಡ ಮಟ್ಟದಲ್ಲಿ ನಿಂತಿದ್ದವು.
ವಾಸ್ತವವಾಗಿ ಆಗಿನ್ನೂ ದಲಿತ ಸಮುದಾಯದ ಎಡಗೈ-ಬಲಗೈ ಮತಗಳು ಬೇರೆ ಬೇರೆ ನೆಲೆಗಳಲ್ಲಿ ನಿಂತಿರಲಿಲ್ಲ.
ಒಳಮೀಸಲಾತಿಯ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರೂ ಎಡಗೈ ಮತದಾರರಿಗೆ ಕಾಂಗ್ರೆಸ್ ಗೆ ಪರ್ಯಾಯವಾದ ಶಕ್ತಿ. ಕಂಡಿರಲಿಲ್ಲ.
ಬಿಜೆಪಿಯನ್ನು ಕಾಂಗ್ರೆಸ್ ಗೆ ಪರ್ಯಾಯವಾದ ಶಕ್ತಿ ಎಂದು ಅದು ಗುರುತಿಸುವ ಕಾಲಕ್ಕೆ 2004 ರ ವಿಧಾನಸಭಾ ಚುನಾವಣೆ ಎದುರಾಗಿತ್ತು.
ಇನ್ನು ಒಕ್ಕಲಿಗ
ನಾಯಕರಾದ ದೇವೇಗೌಡರ ಬಲ‌ ಆ ಸಂದರ್ಭದಲ್ಲಿ ಕುಗ್ಗಿ ಹೋಗಿತ್ತು.
ಅವತ್ತು ಇಬ್ಬಾಗವಾದ ಜನತಾದಳದ ಒಂದು ತುಂಡು ಸಂಯುಕ್ತಜನತಾದಳದ ಹೆಸರಿನಲ್ಲಿ ಬಿಜೆಪಿಯ‌ ಜತೆ ಕೈಗೂಡಿಸಿದರೆ,ಮತ್ತೊಂದು ತುಂಡು‌ ಜಾತ್ಯಾತೀತ‌ ಜನತಾದಳದ ಹೆಸರಿನಲ್ಲಿ‌ ದೇವೇಗೌಡರ ಹಿಂದಿತ್ತು.
ಹೀಗಾಗಿ ಅವತ್ತು ದೇವೇಗೌಡರ ನೇತೃತ್ವದ ಜೆಡಿಎಸ್ ಜತೆ ನಿಲ್ಲುವುದಕ್ಕಿಂತ‌ ಕೃಷ್ಣ ನೇತೃತ್ವದ ಕಾಂಗ್ರೆಸ್ ಜತೆ ನಿಲ್ಲುವುದು ಬಹುಸಂಖ್ಯಾತ ಒಕ್ಕಲಿಗರಿಗೆ ಅಪ್ಯಾಯಮಾನವಾಯಿತು.
ಆದರೆ ಈಗ ದೇವೇಗೌಡರ ನೇತೃತ್ವದ ಜೆಡಿಎಸ್ ಬಲಿಷ್ಟವಾಗಿಯೇ ಇದೆ.
ಇಂತಹ ಪರಿಸ್ಥಿತಿಯಲ್ಲಿ ಡಿಕೆಶಿ ಹಾಕಿದ ಕೂಗು ಒಕ್ಕಲಿಗರ ಮೇಲೆ ಪ್ರಭಾವ ಬೀರುವುದು ಕಷ್ಟ.
ಬದಲಿಗೆ ಜೆಡಿಎಸ್ ಜತೆ ನಿಲ್ಲುವುದೇ ಬೆಟರ್ರು ಎಂಬ ಭಾವನೆಯನ್ನು ಅವರಲ್ಲಿ ಬಿತ್ತುವ ಲಕ್ಷಣಗಳು ಜಾಸ್ತಿ.
ಅದೇ ರೀತಿ ಕೃಷ್ಣ ಅವರ ಬೆನ್ನಿಗೆ ನಿಂತಿದ್ದ ಅಹಿಂದ ವರ್ಗಗಳು ಈಗ ಮುಂಚಿನ ಐಕ್ಯತೆಯಿಂದಿಲ್ಲ.
ಈಗ ಉಳಿದಿರುವ ಅಹಿಂದ ಮತ ಬ್ಯಾಂಕು ಸಿದ್ಧರಾಮಯ್ಯ ಅವರ ಬೆನ್ನಿಗೆ ನಿಂತಿದೆ.
ಹೀಗಾಗಿ ಕೃಷ್ಣ ಸಿಎಂ ಆದ
ಕಾಲಘಟ್ಟಕ್ಕೂ,ಈಗಿನ‌ ಕಾಲ ಘಟ್ಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಒಕ್ಕಲಿಗ ಪಾಳೇಪಟ್ಟಿನ ಮುಂದೆ ನಿಂತು ಡಿಕೆಶಿ ಹಾಕಿದ ಕೂಗು ಕುಮಾರಸ್ವಾಮಿ ಅವರಿಗೆ ಖುಷಿ ತಂದಿದ್ದಕ್ಕೆ ಇದು ಮುಖ್ಯ ಕಾರಣ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here