ನೊಂದ ಮಹಿಳೆಯರಿಗೆ ಆಪ್ತಸಮಾಲೋಚನೆ-ಅಗತ್ಯ ನೆರವು ನೀಡಲು ತಹಶೀಲ್ದಾರ್ ಸೂಚನೆ.

0
131

ಶಿವಮೊಗ್ಗ, ಆಗಸ್ಟ್ 16.ಕೌಟುಂಬಿಕ ಹಿಂಸೆಯಿಂದ ನೊಂದ ಮಹಿಳೆಯರಿಗೆ ಸಂಬಂಧಿಸಿದ ಅಧಿಕಾರಿಗಳು ಆಪ್ತಸಮಾಲೋಚನೆ ನಡೆಸಿ ಅವರಿಗೆ ಅಗತ್ಯವಾದ ಕಾನೂನು ಮತ್ತು ಇತರೆ ನೆರವು ನೀಡುವ ಮೂಲಕ ಸಂರಕ್ಷಣೆ ಒದಗಿಸಬೇಕೆಂದು ತಹಶೀಲ್ದಾರ್ ಡಾ.ಎನ್.ಜೆ.ನಾಗರಾಜ್ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮ 2005 ರ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಂವಿಧಾನದ ಮೇರೆಗೆ ಖಾತರಿ ನೀಡಲಾದ ಮಹಿಳಾ ಹಕ್ಕುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು, ಸಂಘ ಸಂಸ್ಥೆಗಳು ಪರಿಣಾಮಕಾರಿಯಾಗಿ ಸಂರಕ್ಷಣೆ ನೀಡಬೇಕು ಎಂದರು.

ಹಾಗೂ ಕಾಯ್ದೆಯಡಿ ನೊಂದ ಮಹಿಳೆಯರಿಗೆ ತ್ವರಿತ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್, ಆರೋಗ್ಯ, ನ್ಯಾಯಾಲಯ ಮತ್ತು ಇತರೆ ಇಲಾಖೆಗಳ ಸಮನ್ವಯ ಸ್ಥಾಪಿಸುವ ಮೂಲಕ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.
ಕೌಟುಂಬಿಕ ದೌರ್ಜನ್ಯ ಪ್ರಕರಣಗಳಡಿ ಮುಖ್ಯವಾಗಿ ಕುಟುಂಬದ ಸದಸ್ಯರಿಗೆ ಆಪ್ತಸಮಾಲೋಚನೆ ನಡೆಸುವುದಕ್ಕೆ ಹೆಚಿನ ಮಹತ್ವ ನೀಡಬೇಕು. ಸವಿವರವಾಗಿ ಮಹಿಳೆಯ ದೌರ್ಜನ್ಯದ ಬಗ್ಗೆ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು ತ್ವರಿತ ವಿಲೇವಾರಿ ಹಾಗೂ ಶಾಶ್ವತ ಪರಿಹಾರಕ್ಕೆ ಒತ್ತು ನೀಡಬೇಕೆಂದರು.
ಜೊತೆಗೆ ಕೌಟುಂಬಿಕ ಹಿಂಸೆಯಿಂದ ಮಹಿಳೆಯರಿಗೆ ಯಾವೆಲ್ಲ ರೀತಿಯ ಸಂರಕ್ಷಣೆಗಳು ಲಭ್ಯ ಇವೆ ಎಂಬುದರ ಕುರಿತು ಹಾಗೂ ಕಾಯ್ದೆ ಮತ್ತು ನಿಯಮಗಳ ಕುರಿತು ಹೆಚ್ಚಿನ ಪ್ರಚಾರ ಮಾಡಬೇಕು. ವಿವಿಧ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಅರಿವು ಮೂಡಿಸುವ ತರಬೇತಿ ಹಮ್ಮಿಕೊಂಡು ಉತ್ತೇಜನ ನೀಡಬೇಕು. ಹಾಗೂ ಸಂರಕ್ಷಣಾಧಿಕಾರಿಗಳು ಕಾಯ್ದೆಯಡಿ ಬರುವ ಪ್ರಕರಣಗಳ ವರದಿಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ ಸೂಕ್ತ ಸಲಹೆ ಸೂಚನೆಯೊಂದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು ತಿಳಿಸಿದರು.

ಸಂರಕ್ಷಣಾಧಿಕಾರಿ ನೂತನ್ ನಾಯ್ಕ್ ಮಾತನಾಡಿ, 2021 ರ ಏಪ್ರಿಲ್ ನಿಂದ ಜುಲೈ ಇಲ್ಲಿಯವರೆಗೆ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮದಡಿ ಒಟ್ಟು 27 ಪ್ರಕರಣಗಳು ಬಂದಿದ್ದು 13 ಪ್ರಕರಣಗಳು ರಾಜೀ, ವಿಚ್ಚೇದನ ಇತರೆ ಮೂಲಕ ಇತ್ಯರ್ಥವಾಗಿವೆ. 01 ಪ್ರಕರಣ ನ್ಯಾಯಾಲಯದಲ್ಲಿದ್ದು 13 ಪ್ರಕರಣಗಳು ಆಪ್ತಸಮಾಲೋಚನೆ-ಅನುಸರಣೆ ಪ್ರಕ್ರಿಯೆಯಲ್ಲಿವೆ. ನಾವು ಕೂಡ ಆಪ್ತಸಮಾಲೋಚನೆಗೆ ಹೆಚ್ಚಿನ ಮಹತ್ವ ನೀಡಿ ಕುಟುಂಬದವರಿಗೆ ತಿಳಿ ಹೇಳುವ, ವಸ್ತುಸ್ಥಿತಿ ಅರ್ಥಮಾಡಿಸುವ ಪ್ರಯತ್ನ ಮಾಡುತ್ತೇವೆ.
ಅಗತ್ಯವಿರುವವರಿಗೆ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತೇವೆ. ತಾತ್ಕಾಲಿಕ ಆಶ್ರಯ ಅಗತ್ಯವಿರುವವರಿಗೆ ಸ್ವಾಧಾರ, ಸಾಂತ್ವನ ಕೇಂದ್ರಗಳಲ್ಲಿ ಆಶ್ರಯ ಜೊತೆಗೆ ಕಾನೂನು ಪ್ರಾಧಿಕಾರದಿಂದ ಕಾನೂನು ನೆರವು, ಸಖಿ ಯೋಜನೆಯಡಿ ಆರೋಗ್ಯ ತಪಾಸಣೆ ಇತ್ಯಾದಿ ಅಗತ್ಯ ನೆರವನ್ನು ಒದಗಿಸುತ್ತೇವೆ. ಹಾಗೂ ಪೊಲೀಸ್ ಇಲಾಖೆಗೆ ಪತ್ರೆ ಬರೆದು ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ನಮ್ಮ ಇಲಾಖೆಗೆ ಕಳುಹಿಸುವಂತೆ ತಿಳಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಸುರಭಿ ಕೇಂದ್ರದ ಯೋಜನಾ ನಿರ್ದೇಶಕಿ ರೇಖಾ.ಜಿ.ಎಂ ಮಾತನಾಡಿ, ತಮ್ಮ ಕೇಂದ್ರದಲ್ಲಿ ಪ್ರಸ್ತುತ 21 ಮಹಿಳೆಯರಿದ್ದು, ಅವರಿಗೆ ಆಶ್ರಯದೊಂದಿಗೆ ಕೆಲವು ವೃತ್ತಿಪರ ತರಬೇತಿಗಳನ್ನು ನೀಡಲಾಗುತ್ತಿದೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಸ್ವಾಧಾರ ಕೇಂದ್ರಗಳಿದ್ದು, ಇತರೆ ತಾಲ್ಲೂಕುಗಳಲ್ಲಿ ಸಾಂತ್ವನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕಾಯ್ದೆ ಕುರಿತು ಹೆಚ್ಚಿನ ಮಹಿಳೆಯರಿಗೆ ಅರಿವಿಲ್ಲ. ಆದರೆ ಮಹಿಳಾ ಸಹಾಯವಾಣಿ 181 ಕ್ಕೆ ಸಾಕಷ್ಟು ಕರೆಗಳು ಬರುತ್ತವೆ. ಅಂತಹವರನ್ನು ನಾವು ಮಹಿಳಾ ಇಲಾಖೆಯಡಿ ನೆರವು ಪಡೆಯಲು ಕಳುಹಿಸುತ್ತೇವೆ ಎಂದರು.
ಸಭೆಯಲ್ಲಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಬಿಹೆಚ್‍ಇಓ ಪ್ರತಿಮಾ, ಇತರೆ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here