ಅಪೌಷ್ಠಿಕ ಮಕ್ಕಳ ಆರೋಗ್ಯ ಸುಧಾರಣೆಗೆ ಆಯುಷ್ ಇಲಾಖೆಯಿಂದ ಉಚಿತ ಔಷಧಿ,ಕೋವಿಡ್ ಸಂಭವನೀಯ 3ನೇ ಅಲೆ ತಡೆಗಟ್ಟಲು ಜಿಲ್ಲೆಯಲ್ಲಿ ಕ್ರಮ-ಡಾ.ವಿಜಯ ಮಹಾಂತೇಶ್.

0
149

ದಾವಣಗೆರೆ,ಸೆ.6: ಕೋವಿಡ್-19 ಸೋಂಕಿನ ವಿರುದ್ಧ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧನೆ ಹಾಗೂ ಸದೃಢ ಆರೋಗ್ಯಕ್ಕಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗುವಿಗೆ ಆಯುಷ್ ಇಲಾಖೆಯಿಂದ 175 ರೂ. ಮೌಲ್ಯದ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ತಾಯಂದಿರು ಇದನ್ನು ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ 75ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ಪೋಷಣ್ ಅಭಿಯಾನ ಮಾಸಾಚರಣೆ ಹಾಗೂ ಮಾತೃವಂದನಾ ಸಪ್ತಾಹದ ಅಂಗವಾಗಿ ಆಯುಷ್ ಬಾಲ ಸಂಜೀವಿನಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಸಂಭವನೀಯ 3ನೇ ಅಲೆ ಎದುರಾದಲ್ಲಿ ಮಕ್ಕಳಿಗೆ ರಕ್ಷಣೆ ಹಾಗೂ ಚಿಕಿತ್ಸೆ ಒದಗಿಸಲು ಬೇಕಾದ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಸದೃಢತೆಗಾಗಿ ಆದ್ಯತೆ ನೀಡಲಾಗುತ್ತಿದೆ. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಆರೋಗ್ಯ ಸಮೀಕ್ಷೆ ನಡೆಸಿ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಸುಮಾರು 8 ಸಾವಿರ ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರ, ಸ್ಪಿರುಲಿನ ಚಿಕ್ಕಿ ಸೇರಿದಂತೆ ಆಯುಷ್ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ಚೂರ್ಣ ತೆಗೆದುಕೊಳ್ಳುತ್ತಿದ್ದ ಮಕ್ಕಳ ಪೈಕಿ ತೀವ್ರ ಅಪೌಷ್ಠಿಕದಲ್ಲಿದ್ದ 10 ಮಕ್ಕಳ ಆರೋಗ್ಯ ಸುಧಾರಣೆಗೊಂಡಿದ್ದು, 600 ಮಕ್ಕಳು ಸಾಮಾನ್ಯ ಹಂತಕ್ಕೆ ತಲುಪಿವೆ. ಸಿಎಸ್‍ಆರ್ ಫಂಡ್ ಅಡಿ 20 ರಿಂದ 30 ಲಕ್ಷ ರೂ. ಅನುದಾನಲ್ಲಿ ಆಯುಷ್ ಔಷಧಿಗಳ ಕಿಟ್‍ಗಳನ್ನು ತುಮಕೂರಿನಿಂದ ತರಿಸಿದ್ದು, ಪೋಷಕರು ನಿರ್ಲಕ್ಷ್ಯ ವಹಿಸದೇ ನಿರಂತರವಾಗಿ ತಮ್ಮ ಮಕ್ಕಳಿಗೆ ನೀಡಬೇಕು ಎಂದರು.
ಕೋವಿಡ್-19 ಸಂಭವನೀಯ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು ತಗುಲುವ ಸಾಧ್ಯತೆಗಳಿರುವುದರಿಂದ ಪೋಷಕರು ಮಕ್ಕಳ ಬಗೆಗೆ ಹೆಚ್ಚು ಗಮನಹರಿಸಬೇಕು. ಕೋವಿಡ್ ಅಲ್ಲದೇ ಟೈಫಾಯ್ಡ್, ಜಾಂಡೀಸ್ ನಂತಹ ಇತರೆ ವೈರಲ್ ಖಾಯಿಲೆ ಬರುತ್ತಿರುವುದರಿಂದ ಸಾಮಾನ್ಯ ಕೆಮ್ಮು, ಶೀತ, ಜ್ವರ ಬಂದರೂ ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಆಸ್ಪತ್ರೆಗಳಲ್ಲಿ ಕೋವಿಡ್ ಲೈಕ್ ಇಲ್‍ನೆಸ್ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದ ಅವರು, ಅಪೌಷ್ಠಿಕ ಮಕ್ಕಳ ತಾಯಂದಿರು ಹಾಗೂ 6 ವರ್ಷದೊಳಗಿನ ತಂದೆ ತಾಯಿ ಇಬ್ಬರಿಗೂ ಆದ್ಯತಾ ಗುಂಪುಗಳಾಗಿ ಪರಿಗಣಿಸಿ ಕೋವಿಡ್ ನಿಯಂತ್ರಣ ವ್ಯಾಕ್ಸಿನ್ ಹಾಕಲಾಗುತ್ತಿದೆ. ಇನ್ನೂ ಶೇ.15 ರಷ್ಟು ಪೋಷಕರು ಬಾಕಿ ಉಳಿದಿದ್ದು ಶೀಘ್ರದಲ್ಲಿ ಪೂರೈಸಲಾಗುವುದು ಎಂದರು.
ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಬಾಧಿತ ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್, ಮಕ್ಕಳ ಸ್ನೇಹಿ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಿಕೊಂಡಿದೆ. ಹೆಚ್ಚುವರಿ ಮಕ್ಕಳ ತಜ್ಞರು ಹಾಗೂ ಶುಶ್ರೂಷಕರಿಗೆ ತರಬೇತಿ ನೀಡಲಾಗಿದ್ದು, ತಜ್ಞರ ಸಲಹೆ ಮೇರೆಗೆ ಬೇಕಾದ ಔಷಧಿಗಳನ್ನು ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರ್‍ಗೌಡ ಮಾತನಾಡಿ, ಜಿಲ್ಲೆಯಲ್ಲಿ 180 ಸ್ಯಾಮ್ ಮಕ್ಕಳು ಹಾಗೂ 5,400 ಮ್ಯಾಮ್ ಮಕ್ಕಳು ಸೇರಿದಂತೆ ಒಟ್ಟು 5,580 ಮಕ್ಕಳಿಗೆ ಆಯುಷ್ ಇಲಾಖೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಅರವಿಂದಾಸವ ಮತ್ತು ಕೂಷ್ಮಾಂಡ ರಸಾಯನ ಔಷಧಿಗಳನ್ನು ನೀಡುತ್ತಿದ್ದು, ಇದರಿಂದ ಉತ್ತಮ ಹಸಿವು, ನಿದ್ರೆ, ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳುವುದರೊಂದಿಗೆ, ಕೋವಿಡ್ ಸೋಂಕನ್ನು ತಡೆಗಟ್ಟಬಹುದು. ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಸುಮಾರು 1 ಲಕ್ಷ ರೂ. ಅನುದಾನದಲ್ಲಿ ಅಪೌಷ್ಠಿಕ ಮಕ್ಕಳಿಗೆ ಆಯುರ್ವೇದ ಔಷಧಿ ನೀಡಲಾಗುತ್ತಿದೆ. 25 ಆರೋಗ್ಯ ವೈದ್ಯಾಧಿಕಾರಿಗಳು ತಾಲ್ಲೂಕುವಾರು ಭೇಟಿ ನೀಡಿ ಅಂಗನವಾಡಿ ವ್ಯಾಪ್ತಿಯಲ್ಲಿ ಬರುವ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಆಯುಷ್ ಔಷಧಿಗಳನ್ನು ನೀಡುತಿದ್ದಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್ ಮಾತನಾಡಿ, ಈ ಹಿಂದೆ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದರೆ ಅಂಗನವಾಡಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಈಗ ಜಿ.ಪಂ ಸಿಇಒ ಅವರ ಆಸಕ್ತಿಯಿಂದಾಗಿ 30 ಲಕ್ಷ ರೂ ಅನುದಾನ ವೆಚ್ಚದಲ್ಲಿ ಗ್ರಾಸಿಂ ಇಂಡಸ್ಟ್ರಿಯಿಂದ ಮಕ್ಕಳಿಗೆ ಚೂರ್ಣ ಹಾಗೂ ಆಯುಷ್ ಇಲಾಖೆಯಿಂದ ರೋಗನಿರೋಧಕ ಶಕ್ತಿ ಹೆಚ್ಚ್ಚಿಸುವ ಔಷಧಿಗಳನ್ನು ತರಿಸುತ್ತಿರುವುದರಿಂದ ಅಪೌಷ್ಠಿಕ ಮಕ್ಕಳ ಬೆಳವಣಿಗೆಗೆ ಹೆಚ್ಚು ಉಪಯುಕ್ತವಾಗಿದೆ ಎಂದರು.
ಕಳೆದ ತಿಂಗಳಲ್ಲಿ 400 ರಿಂದ 450 ಅಲ್ಪ ಅಪೌಷ್ಠಿಕ ಮಕ್ಕಳು ಸಾಮಾನ್ಯ ಹಂತಕ್ಕೆ ಬಂದಿವೆ. ತೂಕವು ಸುಮಾರು 300 ರಿಂದ 400 ಗ್ರಾಮ್ ಹೆಚ್ಚಾಗಿದ್ದೂ, ಕೆಲವು ಮಗುವಿನ ತೂಕ 1ಕೆ.ಜಿಯವರೆಗೂ ಹೆಚ್ಚಾಗಿರುವುದು ಕಂಡು ಬಂದಿದೆ. ಇದನ್ನು ಇನ್ನೂ 2 ತಿಂಗಳು ಮುಂದುವರೆಸಿದರೆ ಬಹುತೇಕ ಮಕ್ಕಳ ಆರೋಗ್ಯ ಗುಣಮಟ್ಟವನ್ನು ಸುಧಾರಿಸಬಹುದು. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚು ಶ್ರಮ ವಹಿಸುತ್ತಿದ್ದು ಅಪೌಷ್ಠಿಕ ಮಕ್ಕಳನ್ನು ದಿನಕ್ಕೆ ಎರಡು ಬಾರಿ ಅಂಗನವಾಡಿ ಕೇಂದ್ರಕ್ಕೆ ಕರೆಸಿ ಚೂರ್ಣ ಹಾಗೂ ಔಷಧ ನೀಡಿ ಕಳುಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಈಗ ನೀಡುತ್ತಿರುವ ಅರವಿಂದಾಸವ ಮತ್ತು ಕೂಷ್ಮಾಂಡ ರಸಾಯನ ಚೂರ್ಣವನ್ನು ಊಟಕ್ಕೂ ಮೊದಲು ಹಾಗೂ ನಂತರ ಮಕ್ಕಳಿಗೆ ನೀಡಬೇಕಾಗಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲು ಸಮಯಾವಕಾಶದ ಅಭಾವವಿದ್ದು, ಇದನ್ನು ನೇರವಾಗಿ ತಾಯಂದಿರಿಗೆ ನೀಡುತ್ತಿದ್ದೇವೆ. ಪೋಷಕರು ಇದನ್ನು ವ್ಯರ್ಥ ಮಾಡದೇ ತಮ್ಮ ಮಕ್ಕಳಿಗೆ ಸರಿಯಾದ ಸಮಯಕ್ಕೆ ನೀಡಬೇಕು ಎಂದು ತಿಳಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಪೌಷ್ಠಿಕ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರ ಪೋಷಕರಿಗೆ ಅರವಿಂದಾಸವ, ಕೂಷ್ಮಾಂಡ ರಸಾಯನ, ಚ್ಯಾವನಪಾಶ ಲೆಹ್ಯದ ಕಿಟ್ ವಿತರಣೆ ಮಾಡಲಾಯಿತು. ಹಾಗೂ ಕೋವಿಡ್-19 ಸೋಂಕು ತಡೆಗಟ್ಟಲು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಅವರ ಸದೃಢ ಆರೋಗ್ಯಕ್ಕಾಗಿ ಬೇಕಾದ ಸಲಹೆಗಳನ್ನು, ಆಯುಷ್ ಔಷಧವನ್ನು ಹೇಗೆ ಬಳಸಬೇಕು ಎಂಬ ಮಾಹಿತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ಆಯುಷ್ ವೈದ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಮತ್ತಿತ್ತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here