ನರೇಗಾ ಅನುಷ್ಠಾನದಲ್ಲಿ ದೇಶಕ್ಕೆ ಮಾದರಿ:ಸಚಿವ ಈಶ್ವರಪ್ಪ

0
104

ಬಳ್ಳಾರಿ,ಸೆ,12 : ನರೇಗಾ ಅಡಿಯಲ್ಲಿ ಕಳೆದ ವರ್ಷ 15 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ನರೇಗಾ ಪರಿಣಾಮಕಾರಿ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ವರ್ಷ 13 ಕೋಟಿ ಮಾನವ ದಿನಗಳ ಸೃಜನೆ ಮಾಡಲು ಗುರಿ ನಿಗದಿ ಪಡಿಸಲಾಗಿತ್ತು, ಗುರಿಗೂ ಮೀರಿ 15ಕೋಟಿ ಮಾನವ ದಿನಗಳನ್ನು ಸೃಜನೆ ಮಾಡಿ, ಇಡೀ ದೇಶದಲ್ಲಿ ಅತಿ ಹೆಚ್ಚು ಮಾನವ ದಿನಗಳ ಸೃಜನೆ ಮಾಡಿದ ರಾಜ್ಯವಾಗಿ ಕರ್ನಾಟಕ ರಾಜ್ಯ ಗುರುತಿಸಿಕೊಂಡಿದೆ. ಪ್ರಸಕ್ತ ವರ್ಷಕ್ಕೆ 13 ಕೋಟಿ ಮಾನವ ದಿನ ನಿಗದಿಪಡಿಸಿದ್ದು, ಸೆಪ್ಟೆಂಬರ್ 11ಕ್ಕೆ 9 ಕೋಟಿ ಗುರಿ ಸಾಧಿಸಿದ್ದೇವೆ, ಈ ವರ್ಷವೂ ಕೂಡ ಅತಿ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿ ದೇಶಕ್ಕೆ ಮಾದರಿಯಾಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಗಿರಿರಾಜ ಸಿಂಗ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ನರೇಗಾ ಅಡಿಯಲ್ಲಿ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ನನ್ನ ಮನವಿ ಪರಿಗಣಿಸಿ ಬಾಕಿ ಇದ್ದ 959 ಕೋಟಿ ಹಾಗೂ ಹೆಚ್ಚುವರಿಯಾಗಿ 117 ಕೋಟಿ ರೂ. ಅನುದಾನ ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

28 ಸಾವಿರ ಕೆರೆಗಳ ಜೀಣೋದ್ಧಾರ: ರಾಜ್ಯದಲ್ಲಿರುವ 28 ಸಾವಿರ ಕೆರೆಗಳನ್ನು ಮುಂದಿನ ಒಂದೂವರೆ ವರ್ಷದಲ್ಲಿ ಜೀರ್ಣೊದ್ಧಾರ ಮಾಡುವ ಗುರಿ ಇದೆ. ಈಗಾಗಲೇ ಈ ಕಾರ್ಯ ಶುರುವಾಗಿದ್ದು, ಜಿಪಂ ವ್ಯಾಪ್ತಿಯ ಕೆರೆಗಳನ್ನು ಗ್ರಾಪಂಗೆ ವಹಿಸಲಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ, ಸಂಘ ಸಂಸ್ಥೆಗಳ ನೆರವಿನೊಂದಿಗೆ ಕೆರೆಗಳ ಜೀರ್ಣೋದ್ಧಾರ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ನರೇಗಾ ಯೋಜನೆಯಡಿಯಲ್ಲಿ ಸಣ್ಣ ರೈತರು ಕೂಲಿ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಮ್ಮ ಜಮೀನಿನ ವ್ಯಾಪ್ತಿಯಲ್ಲಿ ಬದು ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಮಳೆ ನೀರಿನ ಹರಿಯವಿಕೆ ತಡೆಯುತ್ತದೆ. ಕೆರೆ, ಕಲ್ಯಾಣಿ, ಗೋ ಕಟ್ಟೆಗಳ ನಿರ್ಮಿಸಲಾಗುತ್ತಿದೆ. ಹಳೆಯ ಕಾಲದ ಬಾವಿಗಳಿಗೆ ಹೊಸ ರೂಪ ನೀಡುವ ಮೂಲಕ ಅವುಗಳ ಜೀರ್ಣೋದ್ದಾರ ಮಾಡಲಾಗುತ್ತದೆ. ಇವತ್ತಿಗೂ ಜಾಬ್ ಕಾರ್ಡ್ ನೀಡಲಾಗುತ್ತಿದೆ. ಅವ್ಯವಹಾರ ತಡೆಯುವ ಉದ್ದೇಶದಿಂದ ಕೂಲಿ ಹಣವನ್ನು ನೇರವಾಗಿ ಕೆಲಸ ಮಾಡಿದವರ ಬ್ಯಾಂಕ್ ಖಾತೆಗಳಿಗೆ 15 ದಿನದೊಳಗೆ ಜಮೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಮನೆ ಮನೆಗೆ ಗಂಗೆ: ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 2024 ರೊಳಗಾಗಿ ಮನೆ ಮನೆಗೆ ಗಂಗೆ ಎಂಬ ಧ್ಯೇಯದೊಂದಿಗೆ ಹಳ್ಳಿಗಳಲ್ಲಿ ಮನೆ ಮನೆಗೆ ಕುಡಿಯುವ ನೀರು ಒದಗಿಸಲಾಗುತ್ತದೆ. ಕೇಂದ್ರ ಸರ್ಕಾರ ಈ ಮಹತ್ವಾಕಾಂಕ್ಷಿ ಯೋಜನೆಯು ಈಗಾಗಲೇ ಕಾರ್ಯ ರೂಪಕ್ಕೆ ಬಂದಿದ್ದು, ಪ್ರತಿ ಮನೆಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತದೆ. ಇಡೀ ದೇಶದಲ್ಲಿ ಜೆಜೆಎಂ ಯೋಜನೆಯ ಕಾಮಗಾರಿಗಳು ವೇಗವಾಗಿ ಸಾಗುತ್ತಿವೆ ಎಂದು ಅವರು ತಿಳಿಸಿದರು.

ಕ್ಯಾಚ್ ರೈನ್ ಕಾರ್ಯಕ್ರಮ: ಎಲ್ಲರಿಗೂ ಉದ್ಯೋಗ ಒದಗಿಸುವುದು ಮತ್ತು ಯಾರೂ ಉಪವಾಸದಿಂದ ಇರದಂತೆ ನೋಡಿಕೊಳ್ಳುವ ದೃಷ್ಟಿಯಿಂದ ನರೇಗಾ ಕಾಮಗಾರಿಗಳನ್ನು ಎಲ್ಲಾ ಕಡೆ ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ. ಇನ್ನೂ ಹೆಚ್ಚಿನ ಜನರು ನರೇಗಾ ಕಾಮಗಾರಿಯಲ್ಲಿ ಪಾಲ್ಗೊಳ್ಳಬೇಕು ಎನ್ನುವ ಸದುದ್ದೆಶದಿಂದ ಪ್ರಧಾನ ಮಂತ್ರಿ ಕ್ಯಾಚ್ ರೈನ್ ಕಾರ್ಯಕ್ರಮವನ್ನು ನರೇಗಾ ಅಡಿಯಲ್ಲಿ ಜಾರಿಗೆ ತರಲಾಗುತ್ತಿದೆ. ಮಳೆ ನೀರು ಹರಿದು ಹೋಗದಂತೆ ತಮ್ಮ ತಮ್ಮ ಮನೆಯ ವ್ಯಾಪ್ತಿಯಲ್ಲಿ ನೀರು ಇಂಗಿಸುವಿಕೆ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲವು ಕೂಡ ಜಾಸ್ತಿಯಾಗುತ್ತದೆ ಎಂದು ಅವರು ವಿವರಿಸಿದರು.
ಹೊಸದಾಗಿ ಚುನಾಯಿತರಾದ ಗ್ರಾಪಂ ಸದಸ್ಯರಿಗೆ ಆಡಳಿತ ವ್ಯವಸ್ಥೆಯ ಕಾರ್ಯವೈಖರಿ, ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಯೋಜನೆಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದೆ. ತುಮಕೂರು, ಚಿಕ್ಕ ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತರಬೇತಿ ನಡೆದಿದ್ದು, ವಿಧಾನ ಸಭೆಯ ಅಧಿವೇಶನದ ನಂತರ ಎಲ್ಲಾ ಜಿಲ್ಲೆಗಳಲ್ಲಿ ತರಬೇತಿ ನಡೆಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here