ಕಸಾಪ ಚುನಾವಣೆ ನಡೆಯಲಿ; ವಿನೋದಾಕರಣಂ

0
385

ಬಳ್ಳಾರಿ:ಸೆ:16:- ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಪ್ರಕ್ರಿಯೆಯನ್ನು ಮುಂಬರುವ ಎರಡು ತಿಂಗಳುಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕೆಂದು ಧಾರವಾಡ ಹೈಕೋರ್ಟ್ ಪೀಠ ಇಂದು (ಸೆ.15) ನಿರ್ದೇಶನ ನೀಡಿದೆ.

ಮೇ.9 ರಂದು ನಿಗದಿಯಾಗಿದ್ದ ಕಸಾಪ ಚುನಾವಣೆಯನ್ನು ಕೋವಿಡ್ ಎರಡನೇ ಅಲೆ ತೀವ್ರಗೊಂಡ ಕಾರಣ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ನಂತರ ಸಹಕಾರ ವಲಯ, ವಿವಿಧ ಮಹಾನಗರಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕೈಗೊಂಡ ಬಳಿಕವೂ ಕಸಾಪ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವ ನಿರ್ಧಾರ ಪ್ರಕಟವಾಗಲಿಲ್ಲ.ಈ ಕುರಿತು ಬಳ್ಳಾರಿ ಜಿಲ್ಲೆಯ ಹಲವು ಕಸಾಪ ಸದಸ್ಯರುಗಳನ್ನೂ ಸೇರಿದಂತೆ ಜಿಲ್ಲೆಯ ಮತ್ತು ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಕೋರಿದ್ದರು.

ಶೇಖರಗೌಡ ಮಾಲಿ ಪಾಟೀಲ್ ರವರು ಧಾರವಾಡದ ನ್ಯಾಯವಾದಿಗಳಾದ ಶ್ರೀಹರ್ಷ ನಿಲೋಪಂತ್ ಮತ್ತು ಅವಿನಾಶ್ ಮಾಲಿಪಾಟೀಲ ಅವರ ಮೂಲಕ ಹೈಕೋರ್ಟ್ ಪೀಠಕ್ಕೂ ಒಂದು ರಿಟ್ ಅರ್ಜಿ ಸಲ್ಲಿಸಿದ್ದರು. ಶೇಖರಗೌಡ ಮಾಲಿಪಾಟೀಲ ಅವರ ಅರ್ಜಿ ಪರಿಗಣಿಸಿರುವ ಉಚ್ಛನ್ಯಾಯಾಲಯವು ಕಸಾಪ ಚುನಾವಣಾ ಪ್ರಕ್ರಿಯೆಯನ್ನು ಎರಡು ತಿಂಗಳ ಅವಧಿಯೊಳಗೆ ಪೂರ್ಣಗೊಳಿಸಲು ನ್ಯಾ.ಕೃಷ್ಣಕುಮಾರ ಅವರಿದ್ದ ಏಕ ಸದಸ್ಯ ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಉಚ್ಛನ್ಯಾಯಾಲಯದ ನಿರ್ದೇಶನದ ಪ್ರತಿಯನ್ನು ಪಡೆದ ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಚುನಾವಣಾಧಿಕಾರಿಗಳಿಗೆ ಈ ಕುರಿತು ಮತ್ತೊಮ್ಮೆ ಲಿಖಿತ ಮನವಿ ಸಲ್ಲಿಸಲಾಗುವುದು ನ್ಯಾಯಾಲಯದ ಈ ನಿರ್ದೇಶನ ಕನ್ನಡ ಕಟ್ಟುವ ಕೆಲಸಕ್ಕೆ ಬಲ ತುಂಬಿದೆ. ಅಡಳಿತ ಮಂಡಳಿಯೇ ಇಲ್ಲದೇ ಅಧಿಕಾರಿಗಳಿಂದ ಹೆಚ್ಚಿನ ಕೆಲಸಗಳು ಸದ್ಯಕ್ಕೆ ಕಸಾಪದಿಂದ ಸಾಧ್ಯವಿಲ್ಲ. ಎಂಬುದಾಗಿ ಶೇಖರಗೌಡ ಮಾಲಿ ಪಾಟೀಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಹುತೇಕ ರಾಜ್ಯದ ಎಲ್ಲಾ ಕಸಾಪ ಸದಸ್ಯರ ಹಾಗೂ ಅಭ್ಯರ್ಥಿಗಳ ಅಭಿಪ್ರಾಯವೂ ಇದೇ ಆಗಿದ್ದು, ಕೂಡಲೆ ಸರ್ಕಾರ ಚುನಾವಣೆಯ ಕ್ರಮ ಜರುಗಿಸಬೇಕೆಂದು ಉತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿ ವಿಜೇತ ಸಿ.ಎಂ.ಗಂಗಾಧರಯ್ಯ ಮತ್ತು ವೈ.ಎಂ ವೈದ್ಯನಾಥ, ರಾಮ್ ಪ್ರಸಾದ್, ವಿರೂಪಾಕ್ಷಯ್ಯ ಹಿರೇಮಠ, ವೈ.ಹನುಮಂತರೆಡ್ಡಿ, ಪದ್ಮಾವತಿ, ಹಾಗೂ ಬಳ್ಳಾರಿ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ವಿನೋದಾರವರು ಬಳ್ಳಾರಿಯಲ್ಲಿ ಇಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here