ಅಗ್ನಿ ಮುಂಜಾಗ್ರತಾ ಅರಿವಿಗಾಗಿ ಅಣುಕು ಪ್ರದರ್ಶನ,ಜಿಲ್ಲಾಡಳಿತ ಭವನ ಆವರಣದಲ್ಲಿ ಬೆಂಕಿ ನಂದಿಸಿ ಪ್ರದರ್ಶನಕ್ಕೆ ಚಾಲನೆ ನೀಡಿದ ಡಿಸಿ ಮಹಾಂತೇಶ್ ಬೀಳಗಿ.

0
138

ದಾವಣಗೆರೆ, ಸೆ.30:ಭಾರತ ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಆಯೋಜಿಸಿದ ಅಗ್ನಿ ಮುಂಜಾಗ್ರತಾ ಅರಿವು ಕುರಿತ ಅಣುಕು ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಭವನದ ಆವರಣದಲ್ಲಿ ಬೆಂಕಿ ನಂದಿಸುವ ಮೂಲಕ ಚಾಲನೆ ನೀಡಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದಾಗ ಆಗುವ ದುರ್ಘಟನೆ ಹಾಗೂ ಅಪಾಯ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ನೇತೃತ್ವದ ತಂಡವು ಅಣುಕು ಪ್ರದರ್ಶನದ ಮೂಲಕ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗೆ ಜಾಗೃತಿ ಮೂಡಿಸಿತು. ಪೇಪರ್‍ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಸಂದರ್ಭ, ಪೆಟ್ರೋಲ್, ಡೀಸೆಲ್ ಅಥವಾ ವಿವಿಧ ಬಗೆಯ ಆಯಿಲ್‍ನಿಂದ ಸಂಭವಿಸಬಹುದಾದ ಅಗ್ನಿ ಆಕಸ್ಮಿಕ ಸಂದರ್ಭದಲ್ಲಿ ಬೆಂಕಿ ನಂದಿಸಲು, ಜೀವಹಾನಿ ತಡೆಗಟ್ಟಲು ಹಾಗೂ ದುರ್ಘಟನೆ ಮತ್ತು ಸಂಭವನೀಯ ಅಪಾಯವನ್ನು ತಡೆಗಟ್ಟಲು ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅಣುಕು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಖುದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ಪಾಲ್ಗೊಂಡು ಅಣುಕು ಪ್ರದರ್ಶನಕ್ಕೆ ಚಾಲನೆ ನೀಡಿದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ಅವರು, ಅಗ್ನಿ ಅವಘಡಗಳ ಸಂದರ್ಭದಲ್ಲಿ ಅಗ್ನಿಶಾಮಕ ಇಲಾಖೆಯಿಂದ ಕೈಗೊಳ್ಳುವ ಕ್ರಮಗಳು ಹಾಗೂ ಇಲಾಖೆ ಬಳಸುವ ಉಪಕರಣಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅಧಿಕಾರಿ, ಸಿಬ್ಬಂದಿಗಳಿಗೆ ಪರಿಚಯ ಮಾಡಿಕೊಟ್ಟರು. ಜಿಲ್ಲೆಯ ಎಲ್ಲ ಇಲಾಖೆಗಳಿಗೆ ಸಂಬಂಧಿಸಿದ ಹಾಸ್ಟೆಲ್‍ನ ಅಡುಗೆ ಸಿಬ್ಬಂದಿಗಳಿಗೆ ಅಗ್ನಿ ಅವಘಡಗಳನ್ನು ತಡೆಗಟ್ಟುವ ಕುರಿತಂತೆ ಆಯಾ ತಾಲ್ಲೂಕುಗಳಲ್ಲಿಯೇ ಅಗ್ನಿಶಾಮಕ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸೂಚನೆ ನೀಡಿದರು.

ಇದಕ್ಕೂ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಅಗ್ನಿಶಾಮಕ ಇಲಾಖೆಯಿಂದ ಪಿಪಿಟಿ ಮೂಲಕ ಅಧಿಕಾರಿ, ಸಿಬ್ಬಂದಿಗಳಿಗೆ ಅಗ್ನಿ ಅವಘಡಗಳು ಉಂಟಾಗದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ಅರಿವು ಮೂಡಿಸಿದರು. ಪ್ರತಿ ವರ್ಷ ಇಲಾಖೆಯಿಂದ ಶಾಲೆ ಮಕ್ಕಳಿಗೆ ಅಗ್ನಿ ಅವಘಡ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲಾಗುತ್ತಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಕಳೆದೆರಡು ವರ್ಷಗಳಿಂದ ಶಾಲೆಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲು ಸಾಧ್ಯವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ವಿವಿಧೆಡೆ ಅಗ್ನಿ ಅವಘಡಗಳಿಂದ ಪ್ರಾಣಹಾನಿಯಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿರುವುದನ್ನು ಗಮನಿಸಿದಾಗ, ಅಗ್ನಿ ಅವಘಡಗಳು ಸಂಭವಿಸಲು ಸಾರ್ವಜನಿಕರ ಕೆಲವೊಂದು ನಿರ್ಲಕ್ಷ್ಯಗಳು ಕಾರಣವಾಗಿವೆ ಎಂಬುದನ್ನು ನಾವು ಗಮನಿಸಬಹುದಾಗಿದೆ. ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಅಗ್ನಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಗ್ನಿಶಾಮಕ ಇಲಾಖೆಯಿಂದ ಮಾಹಿತಿ, ತರಬೇತಿಯನ್ನು ಪಡೆದುಕೊಳ್ಳಬೇಕು. ಅಗ್ನಿ ಅವಘಡಗಳ ಸಂದರ್ಭದಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದ್ದು, ತುರ್ತು ಸಂದರ್ಭದಲ್ಲಿ 112, ಹತ್ತಿರದ ಅಗ್ನಿಶಾಮಕ ಠಾಣೆ, ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಬೇಕು. ಅಗ್ನಿ ಅವಘಡಗಳಲ್ಲಿ ಬೆಂಕಿಗಿಂತಲೂ ಹೊಗೆಯೇ ಹೆಚ್ಚು ಅಪಾಯಕಾರಿಯಾಗಿದ್ದು, ಹೊಗೆಯಿಂದಲೇ ಜನರು ಬೇಗ ಉಸಿರುಗಟ್ಟಿ ಸಾಯುವ ಸಂಭವ ಹೆಚ್ಚಿರುತ್ತದೆ. ಬೆಂಕಿ ಆಕಸ್ಮಿಕ ಸಮಯದಲ್ಲಿ ಎಚ್ಚರಿಕೆಯ ಕರೆ ಗಂಟೆಯನ್ನು ಬಾರಿಸಲು ಮುಂದಾಗಬೇಕು. (Fire Alarm, Bell). ಕಟ್ಟಡದಿಂದ ಹೊರಬರಲು ಹತ್ತಿರದಲ್ಲಿರುವ ನಿರ್ಗಮನ ದಾರಿಯನ್ನು ಬಳಸಬೇಕು. ಕಟ್ಟಡದಿಂದ ಹೊರಬರಲು ಇರುವ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡುವಂತಿರಬಾರದು. ಭಯದಿಂದ ಓಡದೇ ಶಾಂತಿಯಿಂದ ವೇಗ ನಡಿಗೆಯಲ್ಲಿ ಹೊರ ಬರಲು ಯತ್ನಿಸಬೇಕು. ತುರ್ತು ಸಂದರ್ಭಗಳಲ್ಲಿ ಮೆಟ್ಟಿಲುಗಳನ್ನು ಬಳಸಬೇಕೆ ಹೊರತು, ಲಿಪ್ಟ್‍ಗಳನ್ನು ಉಪಯೋಗಿಸಬಾರದು. ತುರ್ತು ಸಂದರ್ಭಗಳಲ್ಲಿ ಸುಗಮವಾಗಿ ಹೊರ ಹೋಗುವ ನಿರ್ಗಮನ ಹಾದಿಯನ್ನು ಮುಚ್ಚಿಡಬಾರದು. ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಉರಿಯುವ ವಸ್ತುಗಳನ್ನು ಶೇಖರಣೆ ಮಾಡಬಾರದು. ಅಗ್ನಿನಂದಕಗಳನ್ನು (Fire Extinguisher) ಸುಸ್ಥಿತಿಯಲ್ಲಿಡಬೇಕು, ಅಲ್ಲದೆ ಉಪಯೋಗಿಸುವ ರೀತಿಯನ್ನು ತಿಳಿದುಕೊಂಡಿರಬೇಕು. ಅಡುಗೆ ಅನಿಲ ಗ್ಯಾಸ್ ವಿತರಕರಿಂದ ಗ್ಯಾಸ್ ಸಿಲಿಂಡರ್ ಪಡೆಯುವಾಗ ವಾಷರ್ ಇರುವುದರ ಬಗ್ಗೆ ಖಚಿತ ಪಡೆಸಿಕೊಳ್ಳಬೇಕು. ಸಿಲಿಂಡರ್‍ನ ಅವಧಿಯನ್ನು ಪರಿಶೀಲಿಸಿ ಪಡೆದುಕೊಳ್ಳಬೇಕು. ಸ್ಟೌವ್‍ನ್ನು ನೆಲದ ಮೇಲೆ ಇಟ್ಟು ಅಡುಗೆ ಮಾಡಬಾರದು, ಉತ್ತಮವಾದ ಗಾಳಿ ಬೆಳಕು ಇರುವ ಕಡೆ ಸಿಲಿಂಡರ್ ಬಳಸಬೇಕು. ಸುಲಭವಾಗಿ ಬೆಂಕಿ ಹತ್ತುವ ಸಾಮಾಗ್ರಿಗಳನ್ನು ಅಡುಗೆ ಮನೆಯಲ್ಲಿ ಇಡಬಾರದು, ಸಿಲಿಂಡರ್ ಮೇಲೆ ಬಿಸಿ ನೀರನ್ನು ಹಾಕಬಾರದು, ಸಿಲಿಂಡರ್‍ನ್ನು ಓರೆಯಾಗಿ ಅಥವಾ ತಲೆ ಕೆಳ ಮಾಡಿ ಇಡಬಾರದು. ಪ್ರತಿ ಎರಡು ವರ್ಷಕ್ಕೊಮ್ಮೆ ರೆಗ್ಯುಲೇಟರ್‍ಗೆ ಬಳಸುವ ಹೋಸ್ ಪೈಪ್ ತಪ್ಪದೆ ಬದಲಾಯಿಸಬೇಕು. ಮನೆಯಿಂದ ಆಚೆ ಅಥವಾ ಊರಿಗೆ ಹೋಗುವ ಸಂದರ್ಭಗಳಲ್ಲಿ ರೆಗ್ಯುಲೇಟರ್ ಆಫ್ ಮಾಡಿಯೇ ತೆರಳಬೇಕು. ಗ್ಯಾಸ್ ಗೀಸರ್ ಬಳಸುವವರು, ಸ್ನಾನಕ್ಕೆ ಬೇಕಿರುವ ಬಿಸಿ ನೀರು ಸಂಗ್ರಹಿಸಿದ ಬಳಿಕವೇ ಬಾತ್‍ರೂಂ ಬಾಗಿಲು ಹಾಕಿಕೊಳ್ಳಬೇಕು, ಅಲ್ಲದೆ ಬಾತ್‍ರೂಂ ನಲ್ಲಿ ಸಾಕಷ್ಟು ಗಾಳಿಯಾಡುವಂತೆ ಕಿಟಕಿ ವ್ಯವಸ್ಥೆ ಮಾಡಿಕೊಂಡಿರಬೇಕು ಎಂದರು.

ಅಗ್ನಿಶಾಮಕ ಇಲಾಖೆ ಏರ್ಪಡಿಸಿದ ಅಣುಕು ಪ್ರದರ್ಶನ ಕಾರ್ಯದಲ್ಲಿ ಇಲಾಖೆಯ ಸಿಬ್ಬಂದಿಗಳಾದ ರಾಜೇಶ್, ಅಶೋಕ್, ಮಂಜುನಾಥ, ರವಿನಾಯ್ಕ, ಚಂದ್ರಶೇಖರ, ವಿಜಯ್ ಪಾಲ್ಗೊಂಡಿದ್ದರು. ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾಡಳಿತ ಭವನದಲ್ಲಿರುವ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here