ಬಳ್ಳಾರಿ ಮಹಾನಗರಪಾಲಿಕೆ ನಿರ್ಲಕ್ಷತೆ ಖಂಡಿಸಿ ಎಸ್ ಯು ಸಿ ಐ ಕಮ್ಯುನಿಸ್ಟ್ ಬೃಹತ್ ಪ್ರತಿಭಟನೆ

0
71

ಬಳ್ಳಾರಿ:20:ಏ:- ಬಳ್ಳಾರಿ ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಹಾಗೂ ಮಹಾನಗರಪಾಲಿಕೆ ನಿರ್ಲಕ್ಷ್ಯತೆ ಖಂಡಿಸಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ವತಿಯಿಂದ ಬೃಹತ್ ಪ್ರತಿಭಟನಾ ಧರಣಿಯನ್ನು ಇಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಜಿಲ್ಲಾ ಸಮಿತಿಯಿಂದ ಬಳ್ಳಾರಿ ನಗರದ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಹಾಗೂ ಮಹಾನಗರಪಾಲಿಕೆ ನಿರ್ಲಕ್ಷ್ಯತೆಯನ್ನು ಖಂಡಿಸಿ ನಾರಾಯಣರಾವ್ ಪಾರ್ಕ್(ಕಾಗೆ ಪಾರ್ಕ್) ದಿಂದ ನೂರಾರು ಜನರ ಮೆರವಣಿಗೆ ಮೂಲಕ ರಾಯಲ್ ಸರ್ಕಲ್ ಮಹಾನಗರಪಾಲಿಕೆ ಮುಂದೆ ಸೇರಿ ಬೃಹತ್ ಪ್ರತಿಭಟನಾ ಧರಣಿ ಮಾಡಲಾಯಿತು.

ಈ ಪ್ರತಿಭಟನಾ ಧರಣಿ ಉದ್ದೇಶಿಸಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ರಾಧಾಕೃಷ್ಣ ಉಪಾದ್ಯ ಅವರು ಮಾತನಾಡುತ್ತಾ… ಬಳ್ಳಾರಿ ನಗರವು ಭೌಗೋಳಿಕವಾಗಿ ನಾಲ್ಕೂ ದಿಕ್ಕಿನಲ್ಲಿ ಗಣನೀಯವಾಗಿ ಬೆಳೆದಿದೆ. ಹಾಗೆ ಜನ ಸಂಖ್ಯೆ, ವಾಹನ ದಟ್ಟನೆ ಭಾರಿ ಗಾತ್ರದಲ್ಲಿ ಬೆಳೆದಿದೆ. ಆದರೆ ಇದಕ್ಕನುಗುಣವಾಗಿ ಮೂಲಭೂತ ಸೌಕರ್ಯಗಳು ಸೃಷ್ಟಿಯಾಗದೆ, ನಗರದ ನಾಗರಿಕರು ದಿನಂಪ್ರತಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಸೂಕ್ತವಾದ ರಸ್ತೆಗಳು ಹಾಗೂ ರಿಂಗ್ ರೋಡ್ (ವರ್ತುಲ ರಸ್ತೆ) ಕೊರತೆಯಿಂದಾಗಿ, ನಗರದಲ್ಲಿ ಭಾರಿ ವಾಹನಗಳ ಸಂಖ್ಯೆ ಅಧಿಕಗೊಂಡು ಧೂಳಿನ ಮಾಲಿನ್ಯ, ವಾಯು ಮಾಲಿನ್ಯ, ಟ್ರಾಫಿಕ್ ಸಮಸ್ಯೆ ವಿಪರೀತವಾಗಿದೆ. ಯೋಜನಾರಹಿತ, ಅದ್ವಾನದ ಕ್ರಮಗಳಿಂದ ಇಂದಿಗೂ ಸತ್ಯನಾರಾಯಣಪೇಟೆಯ ಕೆಳಸೇತುವೆ ಕೊಳಚೆನೀರಿನ ಸೇತುವೆಯಾಗಿದೆ. ಮಳೆ ಬಂದರೆ ಈಜುಕೊಳವಾಗುತ್ತದೆ. ಸುಧಾಕ್ರಾಸ್ ಮೇಲ್ಸೇತುವೆ (ಓವರ್ ಬ್ರಿಡ್ಜ್)ಗಾಗಿ ಹತ್ತಾರು ವರ್ಷಗಳಿಂದ ಜನ ಕಾಯುತ್ತಲೇ ಇದ್ದರೂ, ಇನ್ನೂವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. 24/7 ನೀರಿನ ಯೋಜನೆ ಅಡಿಯಲ್ಲಿ ನೂರಾರು ಕೋಟಿ ಖರ್ಚು ಮಾಡಿದ್ದರೂ, ಇದೊಂದು ನಿಷ್ಫಲವಾದ ಯೋಜನೆಯಾಗಿದ್ದು, ವಾರಕ್ಕೊಮ್ಮೆ ನೀರು ಬಂದರೆ ಬಳ್ಳಾರಿ ಜನರ ಅದೃಷ್ಟ. ಅಲ್ಲದೆ ಅನೇಕ ಕಡೆ ನಲ್ಲಿ ನೀರಿನಲ್ಲಿ ಕೊಳಚೆ ನೀರು ಮಿಶ್ರಿತವಾಗಿ ಬರುತ್ತದೆ. ವಿವಿಧ ಬಡವಾಣೆಗಳಲ್ಲಿ ಹೊರಚರಂಡಿ, ಒಳಚರಂಡಿ ನಿಯಮಿತವಾಗಿ ಸ್ವಚ್ಛಗೊಳ್ಳದೆ, ದುರಸ್ತಿಗೊಳ್ಳದೆಯಿರುವುದರಿಂದ ಅವು ದುರ್ನಾತ ಬೀರುತ್ತವೆ ಹಾಗೂ ಚರಂಡಿ ನೀರು ರಸ್ತೆಗಳಿಗೆ ಹರಿಯುವಂತಾಗುತ್ತದೆ. ಸ್ವಚ್ಛತೆಯ ಅಭಾವದಿಂದ ಮಲೇರಿಯಾ, ಡೆಂಗ್ಯೂ, ಇನ್ನಿತರ ರೋಗಗಳಿಗೆ ನಗರವು ತಾಣವಾಗಿದೆ. ಇದರ ಜೊತೆಗೆ ನಗರಕ್ಕೆ ಅಗತ್ಯವಿರುವ ಪೌರ ಕಾರ್ಮಿಕರು, ಸಿಬ್ಬಂದಿಗಳಿಲ್ಲದೆ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಮಹಾನಗರಪಾಲಿಕೆಗೆ ಜನರ ತೆರಿಗೆ ಮೂಲಕ ಹಣ ಸಾಕಷ್ಟು ಸಂಗ್ರಹವಾಗಿದ್ದರೂ, ಬಳ್ಳಾರಿ ನಗರದ ಜನತೆ ಸರಿಯಾದ ಸೌಲಭ್ಯ ಕಾಣದಂತಾಗಿದೆ. ಇಂತಹ ಸಮಸ್ಯೆಗಳ ವಿರುದ್ಧ ಬಳ್ಳಾರಿ ಜನತೆ, ನಾಗರಿಕರು, ಸಾರ್ವಜನಿಕರು ಬಿಲಿಷ್ಟ ಹೋರಾಟ ಕಟ್ಟಲು ಮುಂದಾಗಬೇಕು ಹಾಗೂ ಈ ಹೋರಾಟವನ್ನು ಮುನ್ನೆಡೆಸಲು ಎರಿಯಾಗಳಲ್ಲಿ, ಬಡವಾಣೆಗಳಲ್ಲಿ ತಮ್ಮದೆ ಆದ ಹೋರಾಟ ಸಮಿತಿಗಳು ರಚಿಸಕೊಳ್ಳಬೇಕೆಂದು ಕರೆ ನೀಡಿದರು.

ಧರಣಿಯಲ್ಲಿ ವಿವಿಧ ಬಡವಾಣೆಗಳ, ನಗರದ ಸಮಸ್ಯೆಗಳ ಕುರಿತು ಹಾಗೂ ಕೌಲ್ ಬಜರ್ – ಕಂಟ್ಮೊನ್‌ಮೆಂಟ್ ಎರಿಯಾದಲ್ಲಿರುವ ಮೂಲಬೂತ ಸಮಸ್ಯೆಗಳ ಬಗ್ಗೆ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಆರ್. ಸೋಮಶೇಖರ್ ಗೌಡ, ಎಮ್.ಎನ್. ಮಂಜುಳಾ, ಡಾ.ಎನ್.ಪ್ರಮೋದ್ ಮಾತನಾಡಿದರು.

ಪ್ರತಿಭಟನಾ ಧರಣಿ ಅಧ್ಯಕ್ಷತೆಯನ್ನು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ಎ.ದೇವದಾಸ್ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಆರ್. ಸೋಮಶೇಖರ್ ಗೌಡ, ಎಮ್.ಎನ್. ಮಂಜುಳಾ, ಇ.ಹನುಮಂತಪ್ಪ, ಎ.ಶಾಂತಾ, ಡಾ.ಎನ್. ಪ್ರಮೋದ್, ಗೋವಿಂದ್ ಮತ್ತು ಸದಸ್ಯರಾದ ಈಶ್ವರಿ.ಕೆ.ಎಮ್, ಜಗದೀಶ್ ನೇಮಕಲ್, ಗುರಳ್ಳಿ ರಾಜ, ಜೆ.ಸೌಮ್ಯ, ವಿಜಯಲಕ್ಷ್ಮಿ ದೇವತ್ಕಲ್, ರವಿಕಿರಣ್. ಜೆ.ಪಿ ಹಾಗೂ ನೂರಾರು ಪ್ರತಿಭಟನಾಕಾರರು, ಸಾರ್ವಜನಿಕರು ಭಾಗವಹಿಸಿದ್ದರು.

ವರದಿ-ಬಿ. ಮಹೇಶ್

LEAVE A REPLY

Please enter your comment!
Please enter your name here