ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಬಳಸಿ ಕಡಿಮೆ ವೆಚ್ಚದಲ್ಲಿ ಸುಧಾರಿತ ಕೃಷಿ ಮಾಡಿ ಆದಾಯ ಹೆಚ್ಚಿಸಿಕೊಳ್ಳಲು ರೈತರು ಶ್ರಮಿಸಬೇಕು : ಶಾಸಕ ಅಮೃತ ದೇಸಾಯಿ

0
88

ಧಾರವಾಡ.ಆ.02: ರೈತರ ಕೃಷಿ ಉತ್ಪನ್ನಗಳನ್ನು ದ್ವಿಗುಣಗೊಳಿಸಿ ಆದಾಯ ಹೆಚ್ಚಿಸಲು ರಾಜ್ಯ ಸರ್ಕಾರವು ರೈತರಿಗೆ ಕೃಷಿ ಕಾರ್ಯಗಳಿಗಾಗಿ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಉಪಕರಣಗಳು ಲಭಿಸುವಂತೆ ಸೇವಾ ಕೇಂದ್ರಗಳನ್ನು ಪ್ರತಿ ಹೋಬಳಿ ಮಟ್ಟದಲ್ಲಿ ಸ್ಥಾಪಿಸಲು ಕ್ರಮ ಕೈಗೊಂಡಿದ್ದು, ರೈತರು ಸದುಪಯೋಗ ಮಾಡಿಕೊಳ್ಳಬೇಕೆಂದು ಶಾಸಕ ಅಮೃತ ದೇಸಾಯಿ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಗರಗ ಗ್ರಾಮದಲ್ಲಿ 2021-2022 ನೇ ಸಾಲಿನ ಗರಗ ಹೋಬಳಿ ಮಟ್ಟದ ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ರೈತ ಸೇವಾ ಕೇಂದ್ರವನ್ನು ಉದ್ಘಾಟಿಸಿ,ಮಾತನಾಡಿದರು.

ಗರಗ ಗ್ರಾಮದಲ್ಲಿ ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ರೈತ ಸೇವಾ ಕೇಂದವನ್ನು ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಠಾಪಿಸಲಾಗಿದ್ದು, ಇದರಲ್ಲಿ 70 ಲಕ್ಷ ಸರ್ಕಾರದ ವತಿಯಿಂದ ಹಾಗು 30 ಲಕ್ಷ ರೂಗಳನ್ನು ಚಿತ್ರದುರ್ಗದ ವರ್ಷ ಅಸೋಸಿಯೇಟ್ಸ ಸಹಭಾಗಿತ್ವದಲ್ಲಿ ಹೂಡಿಕೆ ಮಾಡಲಾಗಿದೆ. ಬಾಡಿಗೆ ಆಧಾರಿತ ಯಂತ್ರೋಪಕರಣಗಳ ರೈತ ಸೇವಾ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಲು ಮತ್ತು ಕೃಷಿ ಆಧಾಯವನ್ನು ದ್ವಿಗುಣಗೊಳಿಸಲು ರೈತರಿಗೆ ತಿಳಿಸಿದರು.

ಬಾಡಿಗೆ ಆಧಾರಿತ ಯಂತ್ರೋಪಕರಣಗಳ ರೈತ ಸೇವಾ ಕೇಂದ್ರದಲ್ಲಿ ವಿವಿಧ 44 ಕೃಷಿ ಯಂತ್ರೋಪಕರಣಗಳನ್ನು ಇಡಲಾಗಿದ್ದು, ಅದರಲ್ಲಿ ಮುಖ್ಯವಾಗಿ ಬಹು ಬೆಳೆ ಒಕ್ಕಣಿ ಯಂತ್ರ, ರೋಟೋವೇಟರ್, ಬಿತ್ತನೆ ಕೂರಿಗೆ, ಕಸ ತೆಗೆಯುವ ಯಂತ್ರ, ನೇಗಿಲು, ಕುಂಟೆ, 4 ಟ್ರಾಕ್ಟರ್‍ಗಳನ್ನು ಇಡಲಾಗಿದೆ. ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿವಿದ ಸೌಲತ್ತುಗಳನ್ನು ಪಡೆಯಲು ರೈತರಿಗೆ ಶಾಸಕರು ವಿನಂತಿಸಿದರು.

ಧಾರವಾಡ ತಾಲೂಕಿನ ತುಪ್ಪರಿಹಳ್ಳದ ನೀರಾವರಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿರುವುದಾಗಿ ಹೇಳಿದ ಅವರು ಶೀಘ್ರದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದೆಂದು ಶಾಸಕ ಅಮೃತ ದೇಸಾಯಿ ಹೇಳಿದರು.

ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೆಶಕ ರಾಜಶೇಖರ ಬಿಜಾಪುರ ಅವರು ಮಾತನಾಡಿ, ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರದ ಪ್ರಮುಖ ಉದ್ದೇಶ, ಕಾರ್ಯವೈಖರಿ, ಸೇವಾ ಕೇಂದ್ರದಿಂದ ಆಗುವ ಉಪಯೋಗಗಳು ಕುರಿತು ಮಾಹಿತಿ ನೀಡಿದರು. ಮತ್ತು ಸೇವಾ ಕೇಂದ್ರದ ಸದುಪಯೋಗ ಪಡೆದುಕೊಳ್ಳುಲು ರೈತರಿಗೆ ಮಾಹಿತಿ ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಸಿ.ಜಿ. ಮೇತ್ರಿ ಅವರು ಮಾತನಾಡಿ, ಬಾಡಿಗೆ ಆಧಾರಿತ ಯಂತ್ರೋಪಕರಣಗಳ ರೈತ ಸೇವಾ ಕೇಂದ್ರವು ರೈತರಿಗೆ ರಿಯಾಯಿತಿ ದರದಲ್ಲಿ ನೀಡುವ ಸೇವೆಗಳ ಬಗ್ಗೆ ಹಾಗೂ ಸೇವಾ ಕೇಂದ್ರದಲ್ಲಿ ಲಭ್ಯವಿರುವ ಕೃಷಿ ಉಪಕರಣಗಳ ಕುರಿತು ರೈತರಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಗರಗ ಗ್ರಾಮದಲ್ಲಿ ಹೊಸದಾಗಿ ಸ್ಠಾಪಿಸಿದ ಶ್ರೀ ಗುರುಮಡಿವಾಳೇಶ್ವರ ರೈತ ಉತ್ಪಾದಕ ಸಂಘದ ಕಂಪನಿಗೆ ಸರ್ಕಾರಿ ಸಹಾಯಧನ ರೂ,5.00 ಲಕ್ಷ ಗಳ ಚೆಕ್ಕನ್ನು ಸಂಸ್ಥೆಯ ಅಧ್ಯಕ್ಷ ಅಶೋಕ ದೇಸಾಯಿ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಎಸ್.ಸಿ,ಎಸ್.ಟಿ ಫಲಾನುಭವಿಗಳಿಗೆ ರಿಯಾಯತಿ ದರದಲ್ಲಿ ಕೊಡುವ ತಾಡಪತ್ರಿಗಳನ್ನು ಹಾಗೂ ಸ್ಪೇಯರ್‍ಗಳನ್ನು ಶಾಸಕರು ವಿತರಿಸಿದರು.

ಗರಗ ಗ್ರಾಮ ಪಂಚಾಯತ ಅಧ್ಯಕ್ಷೆ ಲಕ್ಷ್ಮೀ ನಾಗಪ್ಪ ಕಾಶಿದಾರ, ಪಾಲುದಾರ ಸಂಸ್ಠೆಯಾದ ಚಿತ್ರದುರ್ಗದ ವರ್ಷ ಅಸೋಸಿಯೇಟ್ಸ ಪ್ರತಿನಿಧಿ ನಾಗಾರೆಡ್ಡಿ, ರೈತ ಪ್ರಮುಖರಾದ ಬಸವರಾಜ ಜೀವಣ್ಣವರ, ಮಹೇಶ ಯಲಿಗಾರ, ಕೃಷಿ ಇಲಾಖೆಯ ಅಧಿಕಾರಿಗಳು, ಗರಗ ಹೋಬಳಿಯ ವಿವಿಧ ಗ್ರಾಮಗಳ ರೈತರು, ವಿವಿಧ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗರಗ ಹೋಬಳಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸೋಮಲಿಂಗಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here