ಕುಶಲಕರ್ಮಿಗಳ ಉತ್ಪನ್ನಗಳನ್ನು ಅಮೆಜಾನ್ ಮೂಲಕ ರಫ್ತು ಮಾಡುವ ಸದಾವಕಾಶ ಬಳಸಿಕೊಳ್ಳಿ-ಮಹಾಂತೇಶ್ ಬೀಳಗಿ

0
132

ದಾವಣಗೆರೆ ಆ.10: ಜಿಲ್ಲೆಯಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕುಶಲಕರ್ಮಿಗಳ ಉತ್ಪನ್ನಗಳನ್ನು ಅಮೆಜಾನ್ ಪ್ಲಾಟ್‍ಫಾರಂನಲ್ಲಿ ರಫ್ತು ಮಾಡಲು ಇರುವ ಸದಾವಕಾಶವನ್ನು ಜಿಲ್ಲೆಯ ಉದ್ಯಮಿಗಳು ಹಾಗೂ ಕುಶಲಕರ್ಮಿಗಳು ಬಳಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಕೈಗಾರಿಕೆ ಇಲಾಖೆ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ಇ-ಕಾಮರ್ಸ್ ನಡಿ ರಫ್ತು ಉತ್ತೇಜಿಸುವ ನಿಟ್ಟಿನಲ್ಲಿ ಇ-ಕಾಮರ್ಸ್ ಉದ್ಯಮದ ದಿಗ್ಗಜ ಅಮೆಜಾನ್ ಗ್ಲೋಬಲ್ ಸೆಲ್ಲಿಂಗ್ ನೊಂದಿಗೆ ಕಳೆದ ಜನವರಿ 28 ರಂದು ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಂತೆ ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕುಶಲಕರ್ಮಿಗಳ ಉತ್ಪನ್ನಗಳನ್ನು ಇ-ಕಾಮರ್ಸ್ ನಡಿ ರಫ್ತು ಮಾಡಲು ವಿಪುಲ ಅವಕಾಶಗಳಿವೆ. ಸಿದ್ದ ಉಡುಪುಗಳು, ಸ್ಥಳೀಯ ಆಟಿಕೆಗಳು, ವೈದ್ಯಕೀಯ ಉಪಕರಣಗಳು, ಆಹಾರ ಸಂಸ್ಕರಣ ಉತ್ಪನ್ನಗಳು, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಉಪಕರಣಗಳು ಅಲ್ಲದೆ ಇತರೆ ಉತ್ಪನ್ನಗಳನ್ನು ಅಮೆಜಾನ್ ಪ್ಲಾಟ್‍ಫಾರಂನಲ್ಲಿ ರಫ್ತು ಮಾಡಲು ಅವಕಾಶಗಳಿವೆ. ಇಂತಹ ಸದಾವಕಾಶವನ್ನು ಜಿಲ್ಲೆಯ ಎಲ್ಲ ಕೈಗಾರಿಕೋದ್ಯಮಿಗಳು, ಕುಶಲಕರ್ಮಿಗಳು ಬಳಸಿಕೊಂಡು, ತಮ್ಮ ಉದ್ಯಮವನ್ನು ಬೆಳೆಸಿಕೊಳ್ಳಬಹುದಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ನೆರವು ಪಡೆಯಬಹುದಾಗಿದೆ. ಕೇಂದ್ರ ಕೈಗಾರಿಕಾ ಮಂತ್ರಾಲಯವು ಜೀರೋ ಎಫೆಕ್ಟೀವ್ ಅಂಡ್ ಜೀರೋ ಡಿಫೆಕ್ಟ್ ಯೋಜನೆ ಜಾರಿಗೊಳಿಸಿದ್ದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಹೆಚ್ಚಿನ ಮಟ್ಟದಲ್ಲಿ ಉಪಯೋಗಿಸಿಕೊಂಡು ಉತ್ಪಾದನೆ ಹೆಚ್ಚಿಸಿ, ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸುವುದಕ್ಕೆ ಉತ್ತೇಜನ ನೀಡಲಾಗುತ್ತಿದೆ. ಯೋಜನೆಯಡಿ ತಾಂತ್ರಿಕ ಉನ್ನತೀಕರಣಕ್ಕೆ ಸಾರ್ವಜನಿಕ ಸಂಗ್ರಹ ಪಾಲಿಸಿ ಯೋಜನೆ, ಕ್ಲಸ್ಟರ್ ಯೋಜನೆ, ಕಾಯರ್ ಉದ್ಯಮಿಗಳು, ಪ್ಯಾಕಿಂಗ್ ಇಂಡಸ್ಟ್ರೀಸ್, ಸರಕು ಸಾಗಣೆ ವೆಚ್ಚ ಇತರೆ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸವಲತ್ತು ನೀಡಲಾಗುತ್ತದೆ. ಕೈಗಾರಿಕೆ ಇಲಾಖೆಯವರು ಈ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆ ಉದ್ಯಮಿಗಳು, ಕುಶಲಕರ್ಮಿಗಳಿಗೆ ಕಾರ್ಯಗಾರವನ್ನು ಏರ್ಪಡಿಸಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ವಾರದೊಳಗೆ ಮೂಲಭೂತ ಸೌಕರ್ಯ : ಹರಿಹರ ಕೈಗಾರಿಕಾ ಪ್ರದೇಶದಲ್ಲಿ ಸೂಕ್ತ ರಸ್ತೆ, ಚರಂಡಿ ಮುಂತಾದ ಮೂಲಭೂತ ಸೌಕರ್ಯಗಳಿಲ್ಲ. ಮಳೆಗಾಲದಲ್ಲಿ ನೀರು ಕೈಗಾರಿಕಾ ಘಟಕದೊಳಗೆ ನುಗ್ಗಿ, ಉತ್ಪಾದನೆ ಹಾಗೂ ಕಚ್ಚಾ ಸಾಮಗ್ರಿಗಳು ಹಾನಿಗೀಡಾಗುತ್ತಿವೆ. ಮೂಲಭೂತ ಸೌಕರ್ಯ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಸಭೆಯಲ್ಲಿಯೂ ಈ ಬಗ್ಗೆ ಚರ್ಚಿಸಲಾಗಿತ್ತು.ಆದರೆ ಅಧಿಕಾರಿಗಳು ಟೆಂಡರ್ ಕರೆಯಲಾಗಿದೆ ಎಂದು ಹೇಳಿಕೊಂಡು ಬರುತ್ತಿದ್ದಾರೆ, ಯಾವುದೇ ಕಾಮಗಾರಿ ನಡೆಸುತ್ತಿಲ್ಲ ಎಂದು ಕೈಗಾರಿಕೋದ್ಯಮಿಗಳು ಸಭೆಯ ಗಮನಕ್ಕೆ ತಂದರು. ಆದರೆ ಸಭೆಗೆ ಹರಿಹರ ನಗರಸಭೆ ಪೌರಾಯುಕ್ತರು ಗೈರಾಗಿದ್ದರಿಂದ, ದೂರವಾಣಿ ಮೂಲಕವೇ ಅವರಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಒಂದು ವಾರದ ಒಳಗಾಗಿ ಹರಿಹರ ಕೈಗಾರಿಕಾ ಪ್ರದೇಶಕ್ಕೆ ಚರಂಡಿ, ರಸ್ತೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಸೂಚನೆ ನೀಡಿದರು.

ನೂತನ ಕೈಗಾರಿಕಾ ವಸಾಹತಿಗೆ 18 ಅರ್ಜಿ ಸ್ವೀಕಾರ:-ಸಾರಥಿ ಕುರುಬರಹಳ್ಳಿ ಕೈಗಾರಿಕಾ ವಸಾಹತುವಿನಲ್ಲಿ ಒಟ್ಟು 95 ನಿವೇಶನ ಅಭಿವೃದ್ಧಿಪಡಿಸಿದ್ದು, ಈವರೆಗೆ 26 ನಿವೇಶನ ಹಾಗೂ 05 ಮಳಿಗೆಗಳ ಹಂಚಿಕೆ ಮಾಡಲಾಗಿದೆ. ಇನ್ನೂ 57 ನಿವೇಶನಗಳು ಹಂಚಿಕೆಯಾಗದೆ ಖಾಲಿ ಇವೆ. ಇತ್ತೀಚೆಗೆ ಕರೆಯಲಾದ ಅರ್ಜಿಗೆ ಸಂಬಂಧಿಸಿದಂತೆ 18 ಅರ್ಜಿಗಳು ಸ್ವೀಕೃತಗೊಂಡಿವೆ. ಕಳೆದ ಬಾರಿ ಜರುಗಿದ ಸಮಿತಿ ಸಭೆಯಲ್ಲಿ ಸೂಚನೆ ನೀಡಿದಂತೆ, ಕೈಗಾರಿಕಾ ವಸಾಹತುವಿನಲ್ಲಿನ ನಿವೇಶನಗಳ ದರ ಪರಿಷ್ಕರಣೆ ಕುರಿತಂತೆ ಈಗಾಗಲೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೆಎಸ್‍ಎಸ್‍ಐಡಿಸಿ ಅಧಿಕಾರಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಅರ್ಹ ಅರ್ಜಿದಾರರಿಗೆ ನಿಯಮಾನುಸಾರ ನಿವೇಶನ ಹಂಚಿಕೆ ಮಾಡುವಂತೆ ಸೂಚನೆ ನೀಡಿದರು.

ಬ್ಯಾಂಕ್‍ಗಳು ಠೇವಣಿ ಒತ್ತಾಯಿಸುವಂತಿಲ್ಲ:- ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಜಿಲ್ಲೆಗೆ ಕಳೆದ ವರ್ಷ 87 ಉದ್ಯಮಕ್ಕೆ ಕೈಗಾರಿಕೆ ಇಲಾಖೆ ಮಂಜೂರಾತಿ ನೀಡಿದ್ದು, ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಈ ವರ್ಷ ಜಿಲ್ಲೆಗೆ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ 79, ಖಾದಿ ಗ್ರಾಮೋದ್ಯೋಗ ಮಂಡಳಿಗೆ 31 ಹಾಗೂ ಖಾದಿ ಆಯೋಗಕ್ಕೆ 28 ರ ಗುರಿ ನೀಡಲಾಗಿದ್ದು, ಈವರೆಗೆ ಒಟ್ಟಾರೆ 13 ಜನರಿಗೆ ಮಾತ್ರ ಸೌಲಭ್ಯ ಮಂಜೂರಾಗಿದೆ ಯೋಜನೆಯಡಿ 25 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಕಲ್ಪಿಸಲು ಅವಕಾಶವಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಕೈಗಾರಿಕೋದ್ಯಮಿಗಳ ಸಂಘದ ಪ್ರತಿನಿಧಿಗಳು, ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲು ಬ್ಯಾಂಕ್‍ಗಳು ಕೋಲ್ಯಾಟರಲ್ ಠೇವಣಿ ಇಡುವಂತೆ ಒತ್ತಾಯಿಸುತ್ತಾರೆ.ಅಲ್ಲದೆ ವಿನಾಕಾರಣ ವಿಳಂಬ ಮಾಡುತ್ತಾರೆ, ಹೀಗಾಗಿ ಬ್ಯಾಂಕ್‍ನಿಂದ ಸಾಲ ಪಡೆಯುವುದು ದುಸ್ತರವಾಗಿದೆ ಎಂದು ಆರೋಪಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಯೋಜನೆಯಡಿ ಸಾಲ ಸೌಲಭ್ಯ ಮಂಜೂರು ಮಾಡಲು ಬ್ಯಾಂಕ್‍ಗಳು ಠೇವಣಿ ಇಡುವಂತೆ ಒತ್ತಾಯಿಸುವಂತಿಲ್ಲ, ಈ ಕುರಿತು ನಿರ್ದಿಷ್ಟ ದೂರು ಬಂದಲ್ಲಿ, ಅಂತಹ ಬ್ಯಾಂಕ್‍ನವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಬ್ಯಾಂಕ್‍ಗಳಿಗೆ ಸೂಚನೆ ನೀಡಬೇಕು ಎಂದರು.

ದಾವಣಗೆರೆಯನ್ನು ವಲಯ 1 ರಲ್ಲಿ ಸೇರಿಸಲು ಪ್ರಸ್ತಾವನೆ:- ಕೈಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರ ಕೈಗಾರಿಕಾ ನೀತಿ 2020-25 ಅನ್ನು ರೂಪಿಸಿದ್ದು, ಕೈಗಾರಿಕಾ ಕ್ಷೇತ್ರದಲ್ಲಿ ಆಯಾ ತಾಲ್ಲೂಕುಗಳ ಹಿಂದುಳಿದಿರುವಿಕೆಗೆÉ ಅನುಗುಣವಾಗಿ ವಲಯ-1, 2 ಮತ್ತು 03 ಅನ್ನು ಸಿದ್ಧಪಡಿಸಿದೆ. ಇದರನ್ವಯ ಆಯಾ ತಾಲ್ಲೂಕುಗಳ ಕೈಗಾರಿಕಾ ಕ್ಷೇತ್ರಕ್ಕೆ ಅನುದಾನ ನೀಡಿಕೆ, ಸಹಾಯಧನ, ಸಬ್ಸಿಡಿ ನೀಡುವ ಮೂಲಕ ಕೈಗಾರಿಕಾ ಅಸಮತೋಲನ ನಿವಾರಣೆಗೆ ಸರ್ಕಾರ ಕಾರ್ಯತಂತ್ರ ಹಾಕಿಕೊಂಡಿದೆ. ದಾವಣಗೆರೆ ಜಿಲ್ಲೆಯಲ್ಲಿ ಚನ್ನಗಿರಿ, ಜಗಳೂರು, ಹೊನ್ನಾಳಿ ತಾಲ್ಲೂಕುಗಳನ್ನು ವಲಯ-1 ರಲ್ಲಿ ನಿಗದಿಪಡಿಸಿದ್ದು, ದಾವಣಗೆರೆ, ಹರಿಹರ ಹಾಗೂ ನ್ಯಾಮತಿ ತಾಲ್ಲೂಕುಗಳನ್ನು ವಲಯ 2 ರಲ್ಲಿರಿಸಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ ಇನ್ನೂ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಯಾಗಬೇಕಿದ್ದು, ವಲಯ 2 ರಲ್ಲಿ ನಿಗದಿಪಡಿಸಿರುವುದರಿಂದ ಬಂಡವಾಳ ಹೂಡಿಕೆಗೆ ಅನುಗುಣವಾಗಿ ಸಬ್ಸಿಡಿ, ಸಹಾಯಧನ ಕಡಿಮೆ ದೊರೆಯಲಿದೆ, ಅಲ್ಲದೆ ತೆರಿಗೆ ರಿಯಾಯಿತಿ ಕಡಿಮೆಯಾಗಲಿದ್ದು, ವಿದ್ಯುತ್ ದರದಲ್ಲೂ ಕೂಡ ನಮಗೆ ನಷ್ಟವಾಗುತ್ತದೆ. ಬೆಳಗಾವಿ, ಹುಬ್ಬಳ್ಳಿ ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರವನ್ನು ವಲಯ-1 ರಲ್ಲಿ ನಿಗದಿಪಡಿಸಲಾಗಿದ್ದರೂ, ದಾವಣಗೆರೆ ತಾಲ್ಲೂಕನ್ನು ಮಾತ್ರ ವಲಯ-2 ರಲ್ಲಿ ನಿಗದಿಮಾಡಲಾಗಿದೆ. ಹೀಗಾಗಿ ದಾವಣಗೆರೆ ತಾಲ್ಲೂಕನ್ನೂ ಕೂಡ ವಲಯ-1 ಕ್ಕೆ ಸೇರ್ಪಡೆಗೊಳಿಸಿ, ಆದೇಶ ಪರಿಷ್ಕರಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಕೈಗಾರಿಕಾ ಉದ್ಯಮಿಗಳ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಏಕಗವಾಕ್ಷಿ ಸಭೆಯಲ್ಲಿ ಕೈಗೊಂಡ ಚರ್ಚೆಯನ್ನು ಉಲ್ಲೇಖಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಸರಕು ಸಾಗಾಣಿಕೆಗೆ ರಸ್ತೆಗಳ ಅಭಿವೃದ್ಧಿ ಬೇಕಿದೆ : ಜಿಲ್ಲೆಯಿಂದ ಯೂರೋಪ್ ದೇಶಗಳಿಗೆ ಮಿಡಿ ಸೌತೆಕಾಯಿ ರಫ್ತು ಮಾಡುವ ವೆಜ್‍ಪ್ರೋ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಜಿ. ಗಿರೀಶ್ ಮಾತನಾಡಿ, ರೈತರೊಂದಿಗೆ ಒಡಂಬಡಿಕೆ ಮಾಡಿಕೊಂಡು, ಉತ್ತಮ ಗುಣಮಟ್ಟದ ಮಿಡಿ ಸೌತೆಯನ್ನು ಯೂರೋಪ್ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ಮೊದಲು ಚೆನೈ ಬಂದರು ಮೂಲಕ ಹಡಗಿನಲ್ಲಿ ಸರಬರಾಜು ಮಾಡಲಾಗುತ್ತಿತ್ತು. ಬಳಿಕ ಮಂಗಳೂರು ಬಂದರು ಮೂಲಕ ರಫ್ತು ಮಾಡಲಾಗುತ್ತಿದೆ. ಆದರೆ ಶಿಪ್ ಕಂಪನಿಗಳ ಲಾಬಿಯಿಂದಾಗಿ ಸಾಗಾಣಿಕೆ ವೆಚ್ಚ ಸುಮಾರು ಶೇ. 50 ರಷ್ಟು ಹೆಚ್ಚಾಗಿದೆ. ಇದರ ಜೊತೆಗೆ ಮಂಗಳೂರಿಗೆ ತೆರಳಲು ಮಳೆಗಾಲ ಬಂದರೆ ಸಾಕು ಸರಕು ವಾಹನಗಳ ಓಡಾಟ ಸಾಧ್ಯವಾಗುತ್ತಿಲ್ಲ, ಹುಲಿಕಲ್ ಘಾಟ್, ಶಿರಾಡಿ ಘಾಟ್ ರಸ್ತೆಗಳು ಬಂದ್ ಆಗುತ್ತಿವೆ, ಹೀಗಾಗಿ ಮಂಗಳೂರನ್ನು ಬಿಟ್ಟು ಪುನಃ ನಾವು ಚೆನ್ನೈ ನತ್ತ ಮುಖ ಮಾಡುವ ಪರಿಸ್ಥಿತಿ ಬಂದಿದೆ. ಹಡಗು ಕಂಪನಿಗಳ ಲಾಬಿಯ ಜೊತೆಗೆ ಚೆನ್ನೈ ಮೂಲಕ ಸುತ್ತಿ ಬಳಸಿ ಸರಕು ಸಾಗಿಸಬೇಕಾದ ಕಷ್ಟ ಬಂದಿದ್ದು, ಈ ರೀತಿಯಾದಲ್ಲಿ ಉದ್ಯಮಗಳು ನಡೆಯುವುದು ಹೇಗೆ, ರೈತರ ಉತ್ಪನ್ನಗಳಿಗೆ ಸರ್ಕಾರ ಉತ್ತೇಜನ ನೀಡುವುದಾಗಿ ಹೇಳುತ್ತದೆ. ಆದರೆ ಅದಕ್ಕೆ ಬೇಕಾದ ಮೂಲಭೂತ ಸೌಕರ್ಯ ದೊರೆಯುವುದು ಕಷ್ಟವಾಗುತ್ತಿದೆ. ಹೀಗಾಗಿ ಮಂಗಳೂರು ತಲುಪಲು ಇರುವ ಹೆದ್ದಾರಿಗಳನ್ನು ಬಲಪಡಿಸಿ, ಎಲ್ಲ ಕಾಲಕ್ಕೂ ಬಳಕೆಗೆ ಲಭ್ಯವಾಗುವ ರೀತಿ ಅಭಿವೃದ್ಧಿಗೊಳಿಸಬೇಕು, ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು ಎಂದರು.

ಹೊಸ ಉದ್ಯಮಗಳಿಗೆ ಅನುಮೋದನೆ:- ಚನ್ನಗಿರಿ ತಾಲ್ಲೂಕು ಕೊರಟಿಕೆರೆ ಗ್ರಾಮ ಬಳಿ ಮೆಕ್ಕೆಜೋಳ, ಅಡಿಕೆ, ಶೇಂಗಾಸಿಪ್ಪೆ ಮುಂತಾದ ಕೃಷಿ ತ್ಯಾಜ್ಯ ಬಳಸಿಕೊಂಡು ಕಾರ್ಖಾನೆಗಳಲ್ಲಿನ ಬಾಯ್ಲರ್‍ಗಳಿಗೆ ಬಳಸಲಾಗುವ ನೈಸರ್ಗಿಕ ಉರುವಲು ವಸ್ತು ತಯಾರಿಸುವ 50 ಲಕ್ಷ ರೂ. ಬಂಡವಾಳದ ಬ್ರಿಕ್ ಬರ್ನ್ ಪ್ರೈ.ಲಿ. ಉದ್ಯಮಕ್ಕೆ ಸಮಿತಿ ಸಭೆ ಅನುಮೋದನೆ ನೀಡಿತು. ಈ ಉದ್ಯಮದಿಂದ ಸುಮಾರು 300 ರೈತರಿಗೆ ಅನುಕೂಲವಾಗಲಿದ್ದು, 10 ರಿಂದ 15 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ದಾವಣಗೆರೆ ತಾಲ್ಲೂಕು ಕಂದನಕೋವಿ ಗ್ರಾಮ ಬಳಿ 1.2 ಕೋಟಿ ರೂ. ವೆಚ್ಚದಲ್ಲಿ ಸೀಡ್‍ಲಿಂಗ್ ಟ್ರೇ ತಯಾರಿಸುವ ಪಯೋನೀರ್ ಎಂಟರ್‍ಪ್ರೈಸಸ್ ಉದ್ಯಮಕಕ್ಕೂ ಸಮಿತಿ ಸಭೆ ಅನುಮೋದನೆ ನೀಡಿದ್ದು, ಸುಮಾರು 10 ಜನರಿಗೆ ಉದ್ಯೋಗ ಕಲ್ಪಿಸಬಹುದಾಗಿದೆ.

ಕೋವಿಡ್ ಎದುರಿಸಲು ನೆರವಾಗಿ:- ಸಂಭಾವ್ಯ ಕೋವಿಡ್‍ನ 3ನೇ ಅಲೆಯನ್ನು ನಿರ್ವಹಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿರುವ ಎಲ್ಲ ಕೈಗಾರಿಕೆಗಳು ತಮ್ಮ ಎಸ್‍ಆರ್ ನಿಧಿಯಿಂದ ಮಕ್ಕಳ ಐಸಿಯು ಘಟಕಗಳಿಗೆ ಮಕ್ಕಳಿಗಾಗಿ ವೆಂಟಿಲೇಟರ್, ವಿವಿಧ ಔಷಧಿಗಳು, ಅಗತ್ಯ ಉಪಕರಣಗಳ ಖರೀದಿಗೆ ನೆರವಾಗಬೇಕು. ಈ ನಿಟ್ಟಿನಲ್ಲಿ ಕೋವಿಡ್ 3ನೇ ಅಲೆಯನ್ನು ಎದುರಿಸಲು ಜಿಲ್ಲಾಡಳಿತದ ಜೊತೆ ಕೈಜೋಡಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಕೈಗಾರಿಕೋದ್ಯಮಿಗಳು, ನೆರವು ನೀಡುವ ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಹೆಚ್.ಎಸ್. ಜಯಪ್ರಕಾಶ್ ನಾರಾಯಣ್, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸುರೇಶ್, ಕೆಐಎಡಿಬಿ ಅಧಿಕಾರಿ ಶ್ರೀಧರ್ ಸೇರಿದಂತೆ ವಿವಿಧ ಕೈಗಾರಿಕೋದ್ಯಮಿಗಳು, ಚೇಂಬರ್ ಆಫ್ ಕಾಮರ್ಸ್‍ನ ಸದಸ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here