ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ, ಸಮಗ್ರ ಕ್ರಿಯಾ ಯೋಜನೆ ಸಿದ್ದಪಡಿಸಿ ಕಾರ್ಯಾರಂಭ ಮಾಡುವಂತೆ ಡಿಸಿ ಸೂಚನೆ.

0
117

ಶಿವಮೊಗ್ಗ, ಆಗಸ್ಟ್ 18 : ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 2020-21 ನೇ ಸಾಲಿಗೆ ಆಯ್ಕೆಯಾದ ಗ್ರಾಮಗಳಲ್ಲಿ ಆಗಬೇಕಿರುವ ಅಭಿವೃದ್ದಿ ಕಾಮಗಾರಿಗಳ ಕುರಿತು ಸರ್ವೇ ಕಾರ್ಯ ನಡೆಸುವುದರೊಂದಿಗೆ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಅನುಮೋದನೆ ಪಡೆದು ಈ ವರ್ಷವೇ ಕೆಲಸ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣದಲ್ಲಿ ಇಂದು ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಅನುಷ್ಟಾನ ಸಂಬಂಧ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪಿಎಂಎಜಿವೈ ಯೋಜನೆಯಡಿ ಆಯ್ಕೆಯಾದ ಗ್ರಾಮಗಳಲ್ಲಿ ಅವಶ್ಯಕತೆ ಇರುವ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದು ಕೆಲಸ ಆರಂಭಿಸಿ ಮುಂದಿನ ಆರ್ಥಿಕ ವರ್ಷದಲ್ಲಿ ಪೂರ್ಣಗೊಳ್ಳುವಂತೆ ಕ್ರಮ ವಹಿಸಬೇಕೆಂದು ತಿಳಿಸಿದರು.
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಮಂತ್ರಾಲಯ ಇಲಾಖೆಯ ವತಿಯಿಂದ ಅನುಷ್ಟಾನಗೊಳಿಸುತ್ತಿರುವ ಕೇಂದ್ರ ಪುರಸ್ಕøತ ಯೋಜನೆಯಾದ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಎಸ್‍ಸಿ/ಎಸ್‍ಟಿ ಜನಸಂಖ್ಯೆ ಹೆಚ್ಚಿರುವ ಗ್ರಾಮಗಳನ್ನು ಆಯ್ಕೆ ಮಾಡಿ ಅಲ್ಲಿ ಸಮಗ್ರ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಬೇಕಿದ್ದು, ಈ ಯೋಜನೆಯಡಿ ಆಯ್ಕೆಯಾದ ಪ್ರತಿ ಗ್ರಾಮಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ರೂ.40 ಲಕ್ಷಗಳನ್ನು ಅಭಿವೃದ್ದಿ ಕಾಮಗಾರಿಗಾಗಿ ಹಾಗೂ ರೂ.60 ಸಾವಿರವನ್ನು ಆಡಳಿತಾತ್ಮಕ ವೆಚ್ಚಕ್ಕಾಗಿ ನೀಡಲಾಗುವುದು. ಬಿಡುಗಡೆ ಮಾಡಲಾದ ಅನುದಾನಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವು ಇನ್ನಿತರೆ ಕೇಂದ್ರ ಪುರಸ್ಕøತ ಯೋಜನೆಗಳು/ರಾಜ್ಯ ಯೋಜನೆಗಳಡಿ 3 ರಿಂದ 4 ಪಟ್ಟು ಅನುದಾನವನ್ನು(ಗ್ಯಾಪ್ ಫಿಲ್ಲಿಂಗ್ ಫಂಡ್) ಒದಗಿಸಿಕೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿರುತ್ತದೆ.
2020-21 ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯಡಿ ಜಿಲ್ಲೆಯ 33 ಗ್ರಾಮಗಳನ್ನು ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ 01 ಗ್ರಾಮ ಈ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಮೂಲಭೂತ ಸೌಕರ್ಯ ಅಭಿವೃದ್ದಿ, ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಶಾಲೆ ಮತ್ತು ಅಂಗನವಾಡಿಗಳ ಶೌಚಾಲಯ ಕಟ್ಟಡ ನಿರ್ಮಾಣ ಅಥವಾ ರಿಪೇರಿ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ರಸ್ತೆಗಳ ನಿರ್ಮಾಣ ಹಾಗೂ ಸೋಲಾರ್ ದೀಪ ಮತ್ತು ಬೀದಿ ದೀಪ ಅಳವಡಿಕೆ ಈ ಆರು ಕಾಮಗಾರಿಗಳಿಗೆ ಆದ್ಯತೆ ನೀಡಿ, ಈ ಕುರಿತು ಗ್ರಾಮಗಳಲ್ಲಿ ಸರ್ವೇ ಕಾರ್ಯ ನಡೆಸಿ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷತೆಯ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆಯಬೇಕು. ನಂತರ ಜಿಲ್ಲಾ ಮಟ್ಟದ ಕನ್ವರ್ಜೆನ್ಸ್ ಸಮಿತಿ(ಡಿಎಲ್‍ಸಿಸಿ) ಅನುಮೋದನೆ ಪಡೆದು ಕಾರ್ಯಾರಂಭ ಮಾಡುವಂತೆ ತಿಳಿಸಿದರು.
ಮುಂದಿನ ಸಭೆಯನ್ನು ಇನ್ನು 7 ರಿಂದ 10 ದಿನಗಳ ಒಳಗೆ ಕರೆಯಲಿದ್ದು ಆ ಸಭೆಯಲ್ಲಿಯೇ ಈ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಗುವುದು. ಆದ್ದರಿಂದ ಒಂದು ವಾರದೊಳಗೆ ಸರ್ವೇ ಜೊತೆ ಜೊತೆಗೇ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿಕೊಂಡು ತರುವಂತೆ ಪಿಡಿಓ ಮತ್ತು ಇತರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ 2019-20 ನೇ ಸಾಲಿಗೆ ಆಯ್ಕೆಯಾದ ಗ್ರಾಮಗಳಲ್ಲಿ ನಿಗದಿತ ಗುರಿಗೆ ಅನುಸಾರ ಪ್ರಗತಿ ಆಗಿಲ್ಲ. ಈ ಬಗ್ಗೆ ಹೆಚ್ಚಿನ ಒತ್ತು ನೀಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಮತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಪಿಎಂಎಜಿವೈಯ ಮತ್ತು ಇತರೆ ಕೇಂದ್ರ ಅಥವಾ ರಾಜ್ಯ ಪುರಸ್ಕøತ ಯೋಜನೆಯಡಿ ಗ್ಯಾಪ್ ಫಿಲ್ಲಿಂಗ್ ಅನುದಾನ ಬಳಸಿಕೊಂಡು 40:30 ಅನುಪಾತದಲ್ಲಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ದಪಡಿಸಲು ಸೂಚಿಸಿದ ಅವರು ಕೆಲ ಕಾಮಗಾರಿಗಳನ್ನು ಕನ್ವರ್ಜೆನ್ಸ್ ಇಲ್ಲದೆಯೂ ಪಿಎಂಎಜಿವೈ ಒಂದರಿಂದಲೇ ಕೈಗೊಳ್ಳಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಓ ಎಂ.ಎಲ್.ವೈಶಾಲಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ತಾಲ್ಲೂಕು ಮಟ್ಟದಲ್ಲಿ ತಂಡ ರಚಿಸಿ ಗ್ರಾಮಗಳಲ್ಲಿ ಸರ್ವೇ ಕಾರ್ಯ ಮಾಡುವಂತೆ ಸೂಚಿಸಿ, ಯಾವುದಾದರೂ ಗ್ರಾಮದ ಮಾದರಿ ಕ್ರಿಯಾ ಯೋಜನೆಯನ್ನು ತೆಗೆದುಕೊಂಡು ಇದರ ಆಧಾರದಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಅಜ್ಜಪ್ಪ ಹೆಚ್.ಇ, 2018-19 ನೇ ಸಾಲಿನಿಂದ 2020-21 ನೇ ಸಾಲಿನವರೆಗಿನ ಪ್ರಗತಿ ವರದಿಯನ್ನು ಸಭೆಗೆ ನೀಡಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಸಣ್ಣ ನೀರಾವರಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು, ಪಿಡಿಓ ಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here