ಕೋವಿಡ್ 3ನೇ ಅಲೆ ತಡೆಗಟ್ಟುವಿಕೆಗೆ ಸಂಬಂಧಿಸಿದ ಪರಿಶೀಲನಾ ಸಭೆ ಪ್ರತಿ ತಾಲೂಕಿನಲ್ಲಿ 100 ಆಕ್ಸಿಜನ್ ಸಹಿತ ಬೆಡ್ ವ್ಯವಸ್ಥೆ ಮಾಡಿಕೊಳ್ಳಲು ಸಚಿವ ಆನಂದ್ ಸಿಂಗ್ ಸೂಚನೆ

0
88

ಬಳ್ಳಾರಿ,ಆ.06: ಕೋವಿಡ್ 3ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸಂಪುಟ ದರ್ಜೆ ಸಚಿವ ಆನಂದಸಿಂಗ್ ಅವರು ಜಿಲ್ಲಾಡಳಿತ ವತಿಯಿಂದ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 100 ಆಕ್ಸಿಜನ್ ಸಹಿತ ಬೆಡ್ ವ್ಯವಸ್ಥೆ ಮಾಡಿಕೊಳ್ಳಬೇಕು. ಆಯಾ ತಾಲೂಕು ರೋಗಿಗಳಿಗೆ ಆಯಾ ತಾಲೂಕು ವ್ಯಾಪ್ತಿಯಲ್ಲಿಯೇ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಬೇಕು ಎಂದು ಸಂಪುಟ ದರ್ಜೆಯ ಸಚಿವ ಆನಂದ್ ಸಿಂಗ್ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್ ಮೂರನೇ ಅಲೆಯ ತಡೆಗಟ್ಟುವಿಕೆಗೆ ಸಂಬಂಧಿಸಿದ ಮುಂಜಾಗ್ರತಾ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ 3ನೇ ಅಲೆ ಸಂಭಾವ್ಯದ ಕುರಿತು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಒಂದು ವೇಳೆ ಮೂರನೇ ಅಲೆ ಎದುರಾದಲ್ಲಿ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಪ್ರತಿ ತಾಲೂಕು ಆಸ್ಪತ್ರೆಗಳಿಗೆ 100 ಬೆಡ್‍ಗಳ ವ್ಯವಸ್ಥೆ ಮಾಡಿಕೊಳ್ಳಿ, 15 ದಿನದಲ್ಲಿ ಇದು ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಿ ಎಂದು ಹೇಳಿದ ಅವರು ಕೋವಿಡ್ ಸಂಪೂರ್ಣವಾಗಿ ನಿಯಂತ್ರಿಸಲು ವ್ಯಾಕ್ಸಿನೇಷನ್ ಒಂದೇ ದಾರಿ. ಶೇ.80 ರಷ್ಟು ಜನ ಲಸಿಕೆ ಪಡೆಯುವುದರಿಂದ ಕೋವಿಡ್ ನಿಯಂತ್ರಿಸಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಿಪಡಿಸಿದ್ದಾರೆ. ಆದ್ದರಿಂದ ಎಲ್ಲರೂ ಲಸಿಕೆ ತೆಗೆದುಕೊಳ್ಳುವುದರ ಮೂಲಕ ಕೋವಿಡ್ 3ನೇ ಅಲೆಯನ್ನು ತಡೆಗಟ್ಟುವಲ್ಲಿ ಕೈಜೋಡಿಸಿ ಎಂದರು.
36 ಕೋವಿಡ್ ಆಸ್ಪತ್ರೆಗಳು: ಜಿಲ್ಲೆಯಲ್ಲಿ ಡೆಡಿಕೇಟೆಡ್ ಕೋವಿಡ್ ಹಾಸ್ಪಿಟಲ್ (ಡಿಸಿಹೆಚ್) ಹಾಗೂ ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್ (ಡಿಸಿಹೆಚ್‍ಸಿ)ಒಳಗೊಂಡಂತೆ ಒಟ್ಟು 36 ಕೋವಿಡ್ ಆಸ್ಪತ್ರೆಗಳಿದ್ದು, ಅವುಗಳಲ್ಲಿ 478 ಜನರಲ್ ಬೆಡ್, 2109 ಆಕ್ಸಿಜನ್ ಬೆಡ್, 117 ಐಸಿಯು ಬೆಡ್, 154 ಐಸಿಯು ಮತ್ತು ವೆಂಟಿಲೇಟರ್ ಬೆಡ್‍ಗಳನ್ನು ಒಳಗೊಂಡಂತೆ ಒಟ್ಟು 2858 ಬೆಡ್‍ಗಳು ಖಾಲಿಯಿವೆ. 40 ಕೋವಿಡ್ ಕೇರ್ ಸೆಂಟರ್ಗಳಲ್ಲಿ ಒಟ್ಟು 3170 ಬೆಡ್‍ಗಳು ಲಭ್ಯವಿವೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸಭೆಯಲ್ಲಿ ಸಚಿವರಿಗೆ ವಿವರಿಸಿದರು.
ಸಂಭಾವ್ಯ 3ನೇ ಅಲೆಗೆ ಜಿಲ್ಲಾಡಳಿತವು ಬೆಡ್, ಐಸಿಯು, ಮೆಡಿಸಿನ್ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆಕ್ಸಿಜನ್ ಫ್ಲಾಂಟ್ ಶುರುಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ವಿಮ್ಸ್, ಜಿಲ್ಲಾಸ್ಪತ್ರೆ, ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಹಡಗಲಿ, ಸಿರುಗುಪ್ಪ ಒಳಗೊಂಡಂತೆ ಎಲ್ಲಾ ತಾಲೂಕುಗಳಲ್ಲಿ ಆಕ್ಸಿಜನ್ ಫ್ಲಾಂಟ್ ಶುರುಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ನವೆಂಬರ್ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 13 ಲಕ್ಷ ಜನರು ಕೋವಿಡ್ ಮೊದಲ ಡೋಸ್ ಲಸಿಕೆ ಪಡೆಯಲಿದ್ದಾರೆ, ಇದರಲ್ಲಿ 6 ಲಕ್ಷ ಜನ ಎರಡನೇ ಡೋಸ್ ಲಸಿಕೆ ಪಡೆಯಲಿದ್ದಾರೆ ಎಂದು ಅವರು ವಿವರಿಸಿದರು.
ಒಂದು ನಿಮಿಷಕ್ಕೆ 3500 ಲೀಟರ್ ಆಕ್ಸಿಜನ್ ಉತ್ಪಾದನೆ: ವಿಮ್ಸ್‍ನಲ್ಲಿ ಒಂದು ನಿಮಿಷಕ್ಕೆ 1 ಸಾವಿರ ಲೀಟರ್ ಉತ್ಪಾದನೆಯ ಆಕ್ಸಿಜನ್ ಫ್ಲಾಂಟ್, ಜಿಲ್ಲಾಸ್ಪತ್ರೆಯಲ್ಲಿ 500 ಲೀಟರ್ ಆಕ್ಸಿಜನ್ ಉತ್ಪಾದನೆ, ನ್ಯೂ ಡೆಂಟಲ್ ಕಾಲೇಜುನಲ್ಲಿ 160 ಲೀಟರ್ ಆಕ್ಸಿಜನ್ ಉತ್ಪಾದನೆ, ಹಡಗಲಿಯಲ್ಲಿ 500 ಲೀಟರ್ ಉತ್ಪಾದನೆಯ ಆಕ್ಸಿಜನ್ ಫ್ಲಾಂಟ್, ಜಿಂದಾಲ್ ವತಿಯಿಂದ ಹಗರಿಬೊಮ್ಮಹಳ್ಳಿ, ಸಿರುಗುಪ್ಪದಲ್ಲಿ ತಲಾ 500 ಲೀಟರ್ ಉತ್ಪಾದನೆಯ ಆಕ್ಸಿಜನ್ ಫ್ಲಾಂಟ್ ಒಳಗೊಂಡಂತೆ ಜಿಲ್ಲೆಯಲ್ಲಿ ಒಂದು ನಿಮಿಷಕ್ಕೆ 3500 ಲೀಟರ್ ಆಕ್ಸಿಜನ್ ಉತ್ಪಾದನೆ ಕ್ರಮಕೈಗೊಳ್ಳಲಾಗಿದೆ.
ಬಾಲ ಚೈತನ್ಯಕ್ಕೆ ಶಾಸಕರ ಮೆಚ್ಚುಗೆ: ಜಿಪಂ ವತಿಯಿಂದ ಬಳ್ಳಾರಿ ಜಿಲ್ಲೆಯಲ್ಲಿ ರೂಪಿಸಿದ ಬಾಲಚೈತನ್ಯ ಯೋಜನೆಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಸಂಡೂರು ಶಾಸಕ ತುಕಾರಾಂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಯೋಜನೆಯನ್ನು ಹೀಗೆ ಮುಂದುವರೆಸುವಂತೆ ಸಲಹೆ ನೀಡಿದರು.
ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದವರಿಗೆ ಪರಿಹಾರ ವಿತರಿಸುವ ಕಾರ್ಯ ನಡೆಯಲಿ. ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸಚಿವ ಆನಂದಸಿಂಗ್ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಂಡೂರು ಶಾಸಕ ಇ.ತುಕಾರಾಂ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಸಿರುಗುಪ್ಪ ಶಾಸಕ ಸೋಮಲಿಂಗಪ್ಪ ಅವರು ಮಾತನಾಡಿದರು.
ಕೋವಿಡ್ ಹಾಗೂ ಇನ್ನೀತರ ವಿಷಯಗಳ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಜಿಪಂ ಸಿಇಓ ನಂದಿನಿ ಕೆ.ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಸಹಾಯಕ ಆಯುಕ್ತರಾದ ಆಕಾಶ್ ಶಂಕರ್, ಡಿಹೆಚ್‍ಒ ಡಾ.ಹೆಚ್.ಎಲ್.ಜನಾರ್ಧನ್, ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here