ಹೆಚ್‍ಎಲ್‍ಸಿ ಕಾಲುವೆಗೆ ಬಾಗಿನ ಅರ್ಪಿಸಿದ ಶಾಸಕರಾದ ಸೋಮಶೇಖರ್ ರೆಡ್ಡಿ, ನಾಗೇಂದ್ರ

0
113

ಬಳ್ಳಾರಿ,ಆ.07 : ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ನಗರದ ಹೊರವಲಯದ ಅಲ್ಲಿಪುರದ ದಾರ್ ಮಿಲ್ ಹತ್ತಿರವಿರುವ ಹೆಚ್.ಎಲ್.ಸಿ ಕಾಲುವೆಗೆ ಶುಕ್ರವಾರ ಬಾಗಿನ ಅರ್ಪಿಸಿದರು.
ಬಾಗಿನ ಅರ್ಪಿಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಬೇಸಿಗೆ ಸಮಯದಲ್ಲಿ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಇಲ್ಲಿಗೆ ಸಮೀಪದ ಕುಡತಿನಿ ಬಳಿಯ ಬಳ್ಳಾರಿ ಶಾಖೋತ್ಪನ್ನ ಕೇಂದ್ರ (ಬಿಟಿಪಿಎಸ್)ದಿಂದ ಅಲ್ಲಿಪುರ ಕೆರೆಯವರೆಗೆ ನೀರು ತರಲು 130 ಕೋಟಿ ರೂ.ಗಳ ಯೋಜನೆಗೆ ಡಿಪಿಆರ್ ಸಿದ್ಧಗೊಂಡಿದೆ ಎಂದರು.

ಇನ್ನೂ ತುಂಗಭದ್ರಾ ಜಲಾಶಯದಿಂದ ನೀರು ತರುವ 1200ಕೋಟಿ ರೂ.ಗಳ ಯೋಜನೆಯನ್ನು ಸಿದ್ಧಪಡಿಸಲಾಗಿದೆ. 7.5 ಮೀಟರ್ ಅಲ್ಲಿಪುರ ಕೆರೆ ತುಂಬಿಸಿದರೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ನಗರದ ಜನತೆಗೆ ಕುಡಿಯುವ ನೀರಿನ ತೊಂದರೆಯನ್ನು ಶಾಶ್ವತವಾಗಿ ದೂರ ಮಾಡುವ ಉದ್ದೇಶದಿಂದ 24*7 ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತಂದಿದ್ದು, ಕೆಎಂಆರ್‍ಸಿ ನಿಧಿಯಿಂದ ಹಣ ಬಿಡುಗಡೆಯಾದ ತಕ್ಷಣ ಈ ಯೋಜನೆಗಳು ಜಾರಿಗೆ ಬರಲಿವೆ ಎಂದು ಅವರು ಹೇಳಿದರು.

ನಗರದ ಸಿರುಗುಪ್ಪ ಬೈಪಾಸ್ ರಸ್ತೆಯ ಕಾಮಗಾರಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ತುಂಗಾಭದ್ರಾ ಜಲಾಶಯದ ಮೂಲಕ ನೇರವಾಗಿ ನೀರು ಪೂರೈಸುವ ಕಾಮಗಾರಿ ಒಳಗೊಂಡಂತೆ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದರು.
ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಮಾತನಾಡಿ ಜಿಲ್ಲೆಯ ಜನರಿಗೆ 247 ಕುಡಿಯುವ ನೀರು ಪೂರೈಸಲು ಪಕ್ಷಾತೀತವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಈ ವಿಷಯದಲ್ಲಿ ಈಗಾಗಲೇ ಹಲವು ಬಾರಿ ಸಭೆ ಕರೆದಿದ್ದು, ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಜಿಲ್ಲೆಯ ಅಭಿವೃದ್ಧಿ ಹಾಗೂ ಜನರ ಒಳಿತಿಗಾಗಿ ಎಲ್ಲಾ ಶಾಸಕರು ಚರ್ಚಿಸಿ ಬಾಕಿ ಇರುವ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ನಗರದಲ್ಲಿ ಕುಂಟುತ್ತ ಸಾಗಿರುವ 247 ಕುಡಿಯುವ ನೀರಿನ ಯೋಜನೆ ಕುರಿತು ಪ್ರತಿಕಿಯೆ ನೀಡಿ ಈ ಯೋಜನೆ ಜಾರಿಯಾದರೆ ನಗರದ 20ಜೋನ್‍ಗಳಿಗೆ 2 ರಿಂದ 3 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ. ಗುತ್ತಿಗೆದಾರರು ಮತ್ತು ಯೋಜನೆ ಅನುಷ್ಟಾನ ಮಾಡುವ ಕೆಯುಡಿಎಫ್ ನಡುವೆ ಸಮಸ್ಯೆ ಇದೆ. ಈ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿಕೊಂಡು ಯೋಜನೆ ಅನುಷ್ಟಾನಕ್ಕೆ ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಪಾಲಿಕೆಯ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಕೆ.ಎಸ್.ಅಶೋಕ್ ಕುಮಾರ್, ಗುಡಿಗಂಟೆ ಹನುಮಂತ, ಮಲ್ಲನಗೌಡ, ಶಶಿಕಲಾ ಜಗನ್ನಾಥ, ಹನುಮಂತ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here