ಗಜಲ್

0
127

ನಿಂತನಿಂತಲ್ಲಿ ಗುಂಡು ಅಮಾಯಕ ಎದೆ ಸೀಳುತಿದೆ ಬದುಕಲೆಲ್ಲಿ ಓಡುವೆ
ತಾಯ್ನೆಲದ ಮೋಹ ಒಮ್ಮಿಂದೊಮ್ಮಿಗೆ ಅಳಿಯುತಿದೆ ಬದುಕಲೆಲ್ಲಿ ಓಡುವೆ

ಹೆತ್ತೊಡಲ ತಾಪವನು ಅರಿಯದ ಪಾಪಾತ್ಮರ ರಣಕೇಕೆಯ ದೃಶ್ಯವಿದು
ಮಾನವಿಯತೆಯ ಜಂಗಾಬಲವೇ ಉಡುಗುತಿದೆ ಬದುಕಲೆಲ್ಲಿ ಓಡುವೆ

ಜೀವಿಗಳ ಜೀವ ತೆಗೆಯುವ ಕಾನೂನಿಗೆ ಎಂಥಹ ಸ್ವರ್ಗದ ಕನಸಿದ್ದೀತು
ತಾಯ್ನಾಡು ದ್ವೇಷದ ಕೀಡಿಗೆ ಹೊತ್ತಿ ಉರಿಯುತಿದೆ ಬದುಕಲೆಲ್ಲಿ ಓಡುವೆ

ನಾಳೆಗಳಿಗಾಗಿ ಹಡೆದ ಸೂರ್ಯರ ಹೆಣದ ರಾಶಿಯನು ಒಟ್ಟಿರುವರು
ವರ್ತಮಾನವಿಲ್ಲದ ಭವಿತವ್ಯವೀಗ ಮಂಕಾಗುತಿದೆ ಬದುಕಲೆಲ್ಲಿ ಓಡುವೆ

ಸಹೋದರರ ನೆತ್ತರಿನಿಂದ ಬಾಳಬೇಕಾದ ನೆಲ ತೋಯಿಸಿ ನೆನೆಸಿದರು
ಸಲುಹಬೇಕಾದ ಬಾಹುಗಳ ಬಂದುಕು ಹೆಗಲೇರುತಿದೆ ಬದುಕಲೆಲ್ಲಿ ಓಡುವೆ

ವಿಶ್ವಯುದ್ಧಗಳ ಭೀಕರತೆ ಮರು ನೆನೆದವರು ಬೆಚ್ಚಿ ನಡುಗುತಿರುವರು
ವಿಶ್ವಶಾಂತಿಯ ಮಾತುಗಳು ಭೀತಿಗೆ ಶರಣಾಗುತಿದೆ ಬದುಕಲೆಲ್ಲಿ ಓಡುವೆ

ಬೇಟೆಯಾಡುವ ವನ ಮೃಗಗಳಿಗಿಂತ ಕಡೆಯಾಯ್ತುಆಧುನಿಕ ನರಬಾಳ್ವೆ
“ಚಿಜ್ಯೋತಿ”ಯ ಪ್ರಭೆಗೆ ಉನ್ಮಾದದ ಕತ್ತಲಾವರಿಸಿದೆ ಬದುಕಲೆಲ್ಲಿ ಓಡುವೆ

ಜ್ಯೋತಿ ಬಿ ದೇವಣಗಾವ.

LEAVE A REPLY

Please enter your comment!
Please enter your name here